ಧಾರ್ಮಿಕರಾಗಿರುವುದೆಂದರೆ ಪ್ರಶ್ನೆಗಳನ್ನು ಕೇಳದೆ ಇರುವುದಲ್ಲ…

ರಸ್ತೆಯಲ್ಲಿ ಬುದ್ಧ ಕಂಡರೆ ಅವನನ್ನು ಕೊಂದುಬಿಡಿ ಎಂಬುದಾಗಲೀ, ರಾಮಕೃಷ್ಣರು ಕಾಳಿಯನ್ನೇ ಸಂಹರಿಸಿದ್ದನ್ನಾಗಲೀ ಅಕ್ಷರಾರ್ಥದಲ್ಲಿ ಗ್ರಹಿಸಿ ನಾವು ಮತ್ತಷ್ಟು ಗೊಂದಲಕ್ಕೆ ಸಿಕ್ಕಿಬೀಳುವ ಅಗತ್ಯವಿಲ್ಲ. ಇವುಗಳನ್ನು ರೂಪಕಗಳ ಮಟ್ಟದಲ್ಲಿ ಗ್ರಹಿಸಬೇಕು ~ ಅಚಿಂತ್ಯ ಚೈತನ್ಯ

ಧಾರ್ಮಿಕ ನಂಬಿಕೆಗಳು ಪ್ರಶ್ನಿಸುವುದಕ್ಕೆ, ಅಧ್ಯಯನ ನಡೆಸುವುದಕ್ಕೆ ಅಡ್ಡಿಯಾಗಿವೆ ಎಂದು ಭಾವಿಸಲಾಗುತ್ತದೆ. ಹಾಗೆ ನೋಡಿದರೆ ಧಾರ್ಮಿಕರಾಗಿರುವುದು ಪ್ರಶ್ನಿಸುವುದಕ್ಕೆ ಒಂದು ಅಡ್ಡಿಯಲ್ಲ. ಭಗವದ್ಗೀತೆಯ ಉದ್ದಕ್ಕೂ ಇದು ಸ್ಪಷ್ಟವಾಗಿದೆ. ಒಬ್ಪ ಆಸ್ತಿಕನಾಗಿದ್ದೂ ಯಾವ ಮಟ್ಟದ ಪ್ರಶ್ನೆಗಳನ್ನು ಕೇಳಬಹುದು ಎಂಬುದಕ್ಕೆ ಅರ್ಜುನ ಎತ್ತುವ ಪ್ರಶ್ನೆಗಳೇ ಸಾಕ್ಷಿ. ಈ ಕ್ಷಣವೇ ಅರ್ಜುನ ಯುದ್ಧರಂಗವನ್ನು ಬಿಟ್ಟು ತೆರಳಬಹುದು ಎಂದು ನಮಗನ್ನಿಸುತ್ತಲೇ ಇರುವಂತೆ ಆತ ಪ್ರಶ್ನೆಗಳನ್ನು ಕೇಳುತ್ತಾನೆ. ಈ ಪ್ರಶ್ನೆ ಕೇಳುವಿಕೆಯನ್ನು ಪ್ರೋತ್ಸಾಹಿಸುತ್ತಲೇ ಪ್ರಶ್ನೆಗಳಿಗೆ ಉತ್ತರ ನೀಡುವ ಕೆಲಸವನ್ನು ಶ್ರೀಕೃಷ್ಣ ಪರಮಾತ್ಮ ಮಾಡುತ್ತಾನೆ. ನಚೀಕೇತನೂ ಅಷ್ಟೇ. ಯಮನ ಮುಂದೆ ತನ್ನ ಪ್ರಶ್ನೆಗಳನ್ನಿಟ್ಟು `ನೀನು ತಿಳಿದು ನನಗೆ ಹೇಳು’ ಎಂದು ಬಿಡುತ್ತಾನೆ.

ವಿಷಯ ಹೀಗಿರುವಾಗ ಆಸ್ತಿಕನಾಗಿರುವವನು ಇಲ್ಲವೇ ಧಾರ್ಮಿಕನಾಗಿರುವವನೊಬ್ಬ ಪ್ರಶ್ನೆಗಳನ್ನು ಕೇಳದೇ ಭಕ್ತಿಯಲ್ಲಿ ಮುಳುಗಿ ಹೋಗಿಬಿಡಬೇಕು ಎಂದವರಾರು? ಈ ಪ್ರಶ್ನೆಯನ್ನು ಯಾರೂ ಯಾವಾಗಲೂ ಕೇಳಿಕೊಂಡಿಲ್ಲ. ಇಂಥದ್ದೊಂದು ಪ್ರಶ್ನೆಯನ್ನು ಕೇಳಿಕೊಂಡಿದ್ದರೆ ಸಮಸ್ಯೆ ಆ ಕ್ಷಣವೇ ಪರಿಹಾರವಾಗಿಬಿಡುತ್ತದೆ. ಈ ಬಗೆಯಲ್ಲಿ ಪ್ರಶ್ನಿಸುವುದಕ್ಕೆ ಅತಿ ಮುಖ್ಯವಾಗಿ ಬೇಕಿರುವ ಗುಣವೊಂದಿದೆ. ನಾವು ಪ್ರಶ್ನಿಸಬೇಕಾದ ವಿಷಯದ ಜತೆಗೆ ಪ್ರಶ್ನಿಸುವ ಹೊತ್ತಿನಲ್ಲಾದರೂ ನಮ್ಮ ಸಂಬಂಧವನ್ನು ಪೂರ್ಣವಾಗಿ ಕಡಿದುಕೊಂಡು ಚಿಂತಿಸುವುದು. ಹೀಗೆ ಚಿಂತಿಸಲಿಲ್ಲವಾದರೆ ನಮಗೆ ಪ್ರಶ್ನೆಗಳೇ ಹುಟ್ಟುವುದಿಲ್ಲ.

ಝೆನ್‌ ಗುರುಗಳು ಹೇಳುವ ಕೋನ್‌ ಒಂದಿದೆ. ಅದರಂತೆ `ನಿನಗೆ ದಾರಿಯಲ್ಲೆಲ್ಲಾದರೂ ಬುದ್ಧ ಕಂಡರೆ ಅವನನ್ನು ಕೊಂದು ಬಿಡು’. ಈ ಒಗಟಿನಂಥ ಹೇಳಿಕೆಗೆ ಹಲವು ಗುರುಗಳು ಹಲವು ವ್ಯಾಖ್ಯಾನಗಳನ್ನು ಕೊಟ್ಟಿದ್ದಾರೆ. ಆದರೆ ಎಲ್ಲರೂ ಸಂಬಂಧಗಳನ್ನು ಕಡಿದುಕೊಂಡು ಸ್ವತಂತ್ರವಾಗಿ ಚಿಂತಿಸುವ ವಿಧಾನವೊಂದನ್ನು ಹೇಳುತ್ತಿದೆ ಎಂಬುದನ್ನು ಒಪ್ಪುತ್ತಾರೆ.

ಈ ರೀತಿಯ ಸ್ವತಂತ್ರ ಚಿಂತನೆಯನ್ನು ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಪ್ರೇರೇಪಿಸಿದವರು ಅವರ ಗುರುಗಳಾದ ತೋತಾಪುರಿ. ಶ್ರೀ ರಾಮಕೃಷ್ಣ ಯಾವ ಕ್ಷಣದಲ್ಲಿ ಬೇಕಾದರೂ ಸಮಾಧಿ ಸ್ಥಿತಿಯನ್ನು ತಲುಪಿ ಕಾಳೀ ಮಾತೆಯನ್ನು ಕಾಣುತ್ತಿದ್ದರು. ಕಾಳಿ ಮಾತೆಯ ಮೇಲಿದ್ದ ಅವರ ಅಪಾರವಾದ ಪ್ರೀತಿಯೇ ರಾಮಕೃಷ್ಣರನ್ನು ಸಾಧನೆಯ ಉತ್ತುಂಗ ತಲುಪದಂತೆ ತಡೆದಿತ್ತು. ಈ ಬಂಧವನ್ನು ಕಿತ್ತು ಹಾಕಬೇಕೆಂದು ತೀರ್ಮಾನಿಸಿದ ತೋತಾಪುರಿ ಒಂದು ರಾಮಕೃಷ್ಣರಿಗೆ `ಕಾಳಿ ಮಾತೆಯ ಕೈಯಲ್ಲಿರುವ ಖಡ್ಗವನ್ನು ತೆಗೆದುಕೊಂಡು ಆಕೆಯ ತಲೆಯನ್ನು ಕತ್ತರಿಸಿಬಿಡು’ ಎಂದು ಆದೇಶಿಸಿದರು. ರಾಮಕೃಷ್ಣರ ಜಂಘಾಬಲವೇ ಉಡುಗಿ ಹೋಯಿತು. ಆದರೂ ಅವರು ಗುರುವಿನ ಅಣತಿಯನ್ನು ಪಾಲಿಸಿದರು. ರಾಮಕೃಷ್ಣರು ನಿಜ ಅರ್ಥದಲ್ಲಿ ಪರಮಹಂಸರಾದರು.

ರಸ್ತೆಯಲ್ಲಿ ಬುದ್ಧ ಕಂಡರೆ ಅವನನ್ನು ಕೊಂದುಬಿಡಿ ಎಂಬುದಾಗಲೀ, ರಾಮಕೃಷ್ಣರು ಕಾಳಿಯನ್ನೇ ಸಂಹರಿಸಿದ್ದನ್ನಾಗಲೀ ಅಕ್ಷರಾರ್ಥದಲ್ಲಿ ಗ್ರಹಿಸಿ ನಾವು ಮತ್ತಷ್ಟು ಗೊಂದಲಕ್ಕೆ ಸಿಕ್ಕಿಬೀಳುವ ಅಗತ್ಯವಿಲ್ಲ. ಇವುಗಳನ್ನು ರೂಪಕಗಳ ಮಟ್ಟದಲ್ಲಿ ಗ್ರಹಿಸಬೇಕು. ಸಂಬಂಧವನ್ನು ಕಡಿದುಕೊಳ್ಳುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸುವ ಒಂದು ವಿಧಾನವನ್ನು ದೃಷ್ಟಾಂತವೊಂದರ ಮೂಲಕ ಹೇಳಿರುವುದು ರಾಮಕೃಷ್ಣರು ಕಾಳಿಯನ್ನೇ ಸಂಹರಿಸುವ ಕತೆಯಲ್ಲಿದೆ. ಹಾಗೆಯೇ ಬುದ್ಧನನ್ನು ಕೊಂದು ಬಿಡು ಎನ್ನುವಲ್ಲಿ ಹಾಗೆಲ್ಲಾ ರಸ್ತೆಯಲ್ಲಿ ಸಿಕ್ಕಿದವನನ್ನೂ ಬುದ್ಧನೆಂದು ನಂಬಿ ಬಿಡಬೇಡ ಎಂಬ ಎಚ್ಚರವನ್ನು ಹೇಳುತ್ತಲೇ ಬುದ್ಧನನ್ನೂ ಪ್ರಶ್ನಿಸು ಎಂದು ಹೇಳುತ್ತಿದೆ.

ಈ ಪ್ರಶ್ನಿಸುವ ಪರಂಪರೆಯನ್ನು ತಂದೆಯ ಜತೆಯೇ ಯುದ್ಧ ಮಾಡುವ ಲವ-ಕುಶರು, ಬಬ್ರುವಾಹನರೂ ಎತ್ತಿ ಹಿಡಿದಿದ್ದಾರೆ. ಇವರು ತಮಗರಿವಿಲ್ಲದೆಯೇ ತಮ್ಮ ಅಪ್ಪನ ಜತೆ ಕಾದಿದರೆ ಪ್ರಹ್ಲಾದ ತನ್ನ ತಂದೆಯನ್ನು ಅರಿವಿದ್ದೇ ಎದುರಿಸಿದ. ತನ್ನ ತಂದೆಯ ನಂಬಿಕೆಗಳನ್ನು ಪ್ರಶ್ನಿಸುತ್ತಾ ಅವನ ಮೋಕ್ಷಕ್ಕೆ ಕಾರಣನಾದ.

ಹಾಗಾಗಿ ಪ್ರಶ್ನಿಸುವುದು ಕೇವಲ ಉದ್ಧಟತನವಲ್ಲ. ಬುದ್ಧನಾಗುವ ಹಾದಿಯ ಒಂದು ಹೆಜ್ಜೆಯೂ ಹೌದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.