ಘೋಷಣೆ ನಮ್ಮದು, ಆಚರಣೆ ಅವರದು… ! : ಭಾರತ vs ಜಗತ್ತು

ಇನ್ನಾದರೂ ನಾವು ನಮ್ಮ ಪೂರ್ವಜರು ನೀಡಿದ ದಿವ್ಯಬೋಧನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುವ ಪಣ ತೊಡೋಣ. ನಮ್ಮ ನಮ್ಮ ವೈಯಕ್ತಿಕ ನೆಲೆಯಲ್ಲಿ ಈಗಾಗಲೇ ಮಾಡುತ್ತಿದ್ದರೆ, ಇತರರನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸೋಣ. ಆಗದೇ? 

ಈ ಕೆಳಗಿನ ಮಾಹಿತಿಯನ್ನು ಪೂರ್ವಾಗ್ರಹವಿಲ್ಲದೆ ಓದಬೇಕಾಗಿ ವಿನಂತಿ. ನಮ್ಮ ಭವ್ಯ ಭಾರತದ ವೇದ – ವೇದಾಂತ, ಜನಪದ – ಬುಡಕಟ್ಟು ಕಾವ್ಯಗಳೆಲ್ಲದರಲ್ಲೂ ಗಾಢವಾದ ತಿಳಿವು ಹುದುಗಿದೆ, ನೈತಿಕ ಪ್ರಜ್ಞೆ ಇದೆ, ತತ್ತ್ವ ಚಿಂತನೆಯಿದೆ. ಪ್ರತಿಯೊಂದು ಸಂದರ್ಭದಲ್ಲೂ ಅವುಗಳಿಂದ ಒಂದು ಶ್ಲೋಕವನ್ನೋ ಸುಭಾಷಿತವನ್ನೋ ಹೆಕ್ಕಿ ತೆಗೆದು ನಾವು “ನಮ್ಮವರು ಎಂದೋ ಇದನ್ನು ಹೇಳಿಹೋಗಿದ್ದಾರೆ” ಅನ್ನುತ್ತೇವೆ. ಆದರೆ ಆಚರಣೆಯಲ್ಲಿ ಜಾಗತಿಕವಾಗಿ ನಾವು ಯಾವ ಸ್ಥಾನದಲ್ಲಿದ್ದೇವೆ? ಕೆಳಗೆ ನೀಡಲಾಗಿದೆ, ನೋಡಿ. ಈ ಪಟ್ಟಿಯನ್ನು ನಾವು “ಸುಳ್ಳು” ಅಥವಾ “ಪಕ್ಷಪಾತಿ” ಎಂದು ಜರಿದುಬಿಟ್ಟರೆ ಎಚ್ಚೆತ್ತುಕೊಳ್ಳುವ ಮತ್ತೊಂದು ಅವಕಾಶ ಕಳೆದುಕೊಳ್ಳುತ್ತೇವಷ್ಟೆ.

ಇನ್ನಾದರೂ ನಾವು ನಮ್ಮ ಪೂರ್ವಜರು ನೀಡಿದ ದಿವ್ಯಬೋಧನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುವ ಪಣ ತೊಡೋಣ. ನಮ್ಮ ನಮ್ಮ ವೈಯಕ್ತಿಕ ನೆಲೆಯಲ್ಲಿ ಈಗಾಗಲೇ ಮಾಡುತ್ತಿದ್ದರೆ, ಇತರರನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸೋಣ. ಆಗದೇ? 

ಮಾತೃದೇವೋಭವ, ಪಿತೃದೇವೋಭವ ಎಂದು ಹೇಳಿದ ದೇಶ ಭಾರತ ದೇಶ. ಆದರೆ ಅದನ್ನು ಆಚರಿಸುತ್ತಿರುವ ದೇಶ ಆಸ್ಟ್ರೇಲಿಯಾ. (ಮಕ್ಕಳು ತಂದೆತಾಯಿಯನ್ನು ಗೌರವಿಸುವುದರಲ್ಲಿ ಮೊದಲ ಸ್ಥಾನ ಆಸ್ಟ್ರೇಲಿಯಾದು)

ಆಚಾರ್ಯ ದೇವೋಭವ ಎಂದು ಹೇಳಿದ ದೇಶ ಭಾರತ…ಆದರೆ ಅದನ್ನು ಆಚರಿಸುವುದು ಚೀನಾ. (ಗುರುವನ್ನು ಗೌರವಿಸುವುದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ)

ಯತ್ರ ನಾರ್ಯಸ್ತು ಪೂಜ್ಯನ್ತೇ… ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುವುದು ನಾರ್ವೆ. (ಮಹಿಳೆಯರಿಗೆ ಭದ್ರತೆ ಮತ್ತು ಗೌರವ ಕೊಡುವುದರಲ್ಲಿ ನಾರ್ವೆಯದು ಮೊದಲ ಸ್ಥಾನ)

ಹಿರಿಯರಿಗೆ, ವೃದ್ಧರಿಗೆ ಸಾಷ್ಟಾಂಗವೆರಗಿ ನಮಸ್ಕರಿಸುವ ಮೂಲಕ ಗೌರವಿಸಬೇಕು. ವಿನಯದಿಂದ ನಡೆದುಕೊಳ್ಳಬೇಕು  ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುವುದು ಐಸ್‌ಲ್ಯಾಂಡ್. (ಈ ವಿಚಾರದಲ್ಲಿ ಮೊದಲ ಸ್ಥಾನ ಐಸ್‌ಲ್ಯಾಂಡ್‍ದು)

ಸತ್ಯಮೇವ ಜಯತೇ ಎಂದು ಹೇಳಿದ ದೇಶ ಭಾರತ. ಆದರೆ ಅದನ್ನು ಆಚರಿಸುವುದು ಯುಕೆ. (ಪ್ರಾಮಾಣಿಕವಾಗಿ ಮೊದಲ ಸ್ಥಾನ ಯುನೈಟೆಡ್ ಕಿಂಗ್‍ಡಂದೇ)

ಕಷ್ಟೇಫಲಿ, ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ದಕ್ಷಣ ಕೊರಿಯಾ. (ಹಾರ್ಡ್‌ವರ್ಕ್‌ನಲ್ಲಿ ಮೊದಲ ಸ್ಥಾನ ದಕ್ಷಿಣ ಕೊರಿಯಾದು)

ಸರ್ವೇ ಸನ್ತು ನಿರಾಮಯಾಃ ಎಂದು ಜಗತ್ತಿಗೆ ಶಾಂತಿ ಕೋರಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು, ಮತ್ತೊಮ್ಮೆ ನಾರ್ವೆ. (ಪ್ರಶಾಂತತೆಯಲ್ಲಿ ನಾರ್ವೆಯದು ಮೊದಲ ಸ್ಥಾನ)

ಕರ್ಮಣ್ಯೇ ವಾಧಿಕಾರಸ್ತೇ ಎಂದು ಕರ್ತವ್ಯ ಪ್ರಜ್ಞೆಯನ್ನು ಬೋಧಿಸಿದ  ದೇಶ ಭಾರತ. ಆದರೆ ಅದನ್ನು ಆಚರಿಸುತ್ತಿರುವುದು ಜಪಾನ್. (ಕರ್ತವ್ಯ ನಿರ್ವಹಣೆಯಲ್ಲಿ  ಜಪಾನ್‌ದು ಮೊದಲ ಸ್ಥಾನ)

ಆರ್ಥಿಕತೆ, ಯುದ್ಧ ನೀತಿ, ನ್ಯಾಯದಾನ, ಕರ ನಿರ್ವಹಣೆ ಮೊದಲಾದ ಎಷ್ಟೋ ನೀತಿ ನಿಯಮಗಳನ್ನು ಸಾವಿರಾರು ವರ್ಷಗಳ ಹಿಂದೆ ಬರೆದಿಟ್ಟ ದೇಶ ಭಾರತ. ಆದರೆ ಆಚರಿಸುತ್ತಿರುವುದು ಸಿಂಗಾಪುರ . (ನಿಯಮಪಾಲನೆಯ ಶಿಸ್ತಿನಲ್ಲಿ ಮೊದಲ ಸ್ಥಾನದಲ್ಲಿ ಸಿಂಗಾಪುರ ಇದೆ)

ವಿದ್ವಾನ್ ಸರ್ವತ್ರ ಪೂಜ್ಯತೇ ಎನ್ನುವ ಮೂಲಕ ವಿದ್ಯೆಯ ಮಹತ್ವ ಎತ್ತಿಹಿಡಿದ ದೇಶ ಭಾರತ. ಆದರೆ ಅದನ್ನು ಎತ್ತಿಹಿಡಿದ ದೇಶ ಫಿನ್‍ಲ್ಯಾಂಡ್. (ಶಿಕ್ಷಣ, ಮೌಲ್ಯಗಳ ವಿಚಾರದಲ್ಲಿ ಫಿನ್‍ಲ್ಯಾಂಡ್ ಮೊದಲ ಸ್ಥಾನದಲ್ಲಿದೆ)

ಬೇರೆ ದೇಶಗಳು ಮುಂಚೂಣಿಯಲ್ಲಿ ಇರಬಾರದು ಎಂದಲ್ಲ. ಅಥವಾ, ಅವರು ಭಾರತದ ಬೋಧವಾಕ್ಯಗಳನ್ನು ಅರಿತುಕೊಂಡು ಅವೆಲ್ಲವನ್ನು ಸಾಧಿಸಿದ್ದಾವೆ ಎಂದೂ ಅಲ್ಲ. ಹಾಗೆಯೇ, ಮೇಲೆ ಹೇಳಿದ ಯಾವುದೂ ಸ್ಪರ್ಧೆಯ ಸಂಗತಿಗಳೂ ಅಲ್ಲ. ಸಹಜವಾಗಿ ದೇಶಕಾಲಗಳಾಚೆ ನಾವೆಲ್ಲರೂ ರೂಢಿಸಿಕೊಳ್ಳಬೇಕಾದ ಮೌಲ್ಯಗಳವು. ಆದ್ದರಿಂದ, ನಮ್ಮ ಅರಿವಿನ ಖಜಾನೆಯಲ್ಲಿ ಭದ್ರವಾಗಿರುವ ಈ ನುಡಿಮುತ್ತುಗಳನ್ನು ಪ್ರಾಯೋಗಿಕವಾಗಿ ಬಳಸೋಣ. ಇದೇ ನಾವು ನಮ್ಮ ಪರಂಪರೆಗೆ ಮತ್ತು ದೇಶಕ್ಕೆ ನೀಡುವ ಬಹಳ ದೊಡ್ಡ ಉಡುಗೊರೆ.

(ಅರಳಿಮರ ಓದುಗರೊಬ್ಬರು ಕಳುಹಿಸಿದ ಮಾಹಿತಿಯನ್ನು ಅವರ ಅನುಮತಿ ಪಡೆದು, fact check ಮಾಡಿ ಲೇಖನ ರೂಪದಲ್ಲಿ ಪ್ರಕಟಿಸಲಾಗಿದೆ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.