‘ಮಹಿಳೆಯರಿಗೆ ಪ್ರತ್ಯೇಕ ಸಂದೇಶವೇಕೆ?’ : ಸ್ವಾಮಿ ವಿವೇಕಾನಂದ

“ಭಾರತದ ಮಹಿಳೆಯರಿಗೆ ನಿಮ್ಮ ಸಂದೇಶವೇನು?” ಎಂಬ ಪ್ರಶ್ನೆಗೆ ಸ್ವಾಮೀಜಿ, “ಮಹಿಳೆಯರಿಗೆ ಪ್ರತ್ಯೇಕವಾಗಿ ಹೇಳುವಂತದೇನೂ ಇಲ್ಲ. ಪುರುಷರಿಗೆ ಏನು ಹೇಳುತ್ತಾ ಬಂದಿದ್ದೇನೋ, ಅದು ಮಹಿಳೆಯರಿಗೂ ಅನ್ವಯಿಸುತ್ತದೆ. ಸಬಲರಾಗಿ, ಶ್ರದ್ಧೆ ಇರಲಿ, ಲಜ್ಜೆ ಪಡಬೇಕಿಲ್ಲ, ಧೀರರಾಗಿ” ಅಂದಿದ್ದರು ~ ಸಾ.ಹಿರಣ್ಮಯಿ

viveka

ಭಾರತ ವೈರುಧ್ಯಗಳ ಸಂಗಮ. ಒಂದು ತುದಿಯಲ್ಲಿ ‘ಅಹಂ ಬ್ರಹ್ಮಾಸ್ಮಿ’, ‘ತತ್ವಮಸಿ’ ಮೊದಲಾದ ಉನ್ನತ ಆಧ್ಯಾತ್ಮಿಕ ಚಿಂತನೆಗಳು, ಇನ್ನೊಂದು ತುದಿಯಲ್ಲಿ ಅಸ್ಪೃಶ್ಯತೆಯ ಆಚರಣೆ. ಹಾಗೆಯೇ ಒಂದೆಡೆ ಹೆಣ್ಣನ್ನು ಮಾತೆ, ದೇವಿ ಎಂದು ಪೂಜಿಸುವುದು, ಮತ್ತೊಂದೆಡೆ ಅವಳಿಗೆ ಸಹಜ ಬದುಕನ್ನು ನಿರಾಕರಿಸುವುದು. ಸ್ವಾಮಿ ವಿವೇಕಾನಂದರು ಈ ಎರಡರ ಬಗ್ಗೆಯೂ ಬಹಳ ಚಿಂತಿತರಾಗಿದ್ದರು. ಮೇಲಿಂದ ಮೇಲೆ ಅಸ್ಪೃಶ್ಯತೆ ಆಚರಣೆ ಮತ್ತು ಸ್ತ್ರೀಯರ ಹಕ್ಕುಗಳ ಬಗ್ಗೆ ಅವರು ಮಾತಾಡುತ್ತಿದ್ದುದು ಕೃತಿಶ್ರೇಣಿಯಲ್ಲಿ ದಾಖಲಾಗಿದೆ.

ಇತ್ತೀಚಿನ ದಿನಗಳಲ್ಲಿ ಧರ್ಮ ರಕ್ಷಣೆಯ ಮಾಡುತ್ತೇವೆ ಎನ್ನುವವರು ಮಹಿಳೆಯರ ಬಗ್ಗೆ ಆಡುವ ಮಾತುಗಳು, ನಿಂದನೆಗೆ ಬಳಸುವ ಪದಗಳು, ಇವನ್ನೆಲ್ಲ ನೋಡುವಾಗ, ಸ್ವಾಮಿ ವಿವೇಕಾನಂದರ ಕೆಲವು ಹೇಳಿಕೆಗಳು ನೆನಪಾಗುತ್ತವೆ. ಭಾರತದ ಅವನತಿಯ ಹಂತಗಳನ್ನು, ಕಾರಣಗಳನ್ನು ಆಳವಾಗಿ ವಿಶ್ಲೇಷಿಸುತ್ತ ವಿವೇಕಾನಂದರು, “ಭಾರತ ಏಕೆ ಈ ದುಃಸ್ಥಿತಿಗೆ ಇಳಿದಿದೆ ಗೊತ್ತೆ? ಇಲ್ಲಿ ಶಕ್ತಿಯನ್ನು (ಮಹಿಳೆಯನ್ನು) ಅವಮಾನಿಸಲಾಗುತ್ತಿದೆ” ಎಂದು ಗುಡುಗಿದ್ದರು.  

ಉನ್ನತ ಆದರ್ಶಗಳನ್ನು ಹೇಳುತ್ತಲೇ, ಹೆಣ್ಣನ್ನು ಕೇವಲ ಭೋಗದ ಬೊಂಬೆಯಂತೆ, ಸೇವೆ ಮಾಡುವ ಯಂತ್ರದಂತೆ ಕಾಣುತ್ತ ಬಂದ ಮನಸ್ಥಿತಿಗೆ ಸ್ವಾಮೀಜಿ ನೊಂದಿದ್ದರು. ಒಂದು ಕಾಲಘಟ್ಟದಲ್ಲಿ, ಯುದ್ಧಗಳು, ಆಕ್ರಮಣಗಳೇ ಮೊದಲಾದ ಕಾರಣಗಳಿಂದ ಸ್ತ್ರೀಯರನ್ನು ‘ಅಕ್ಷರಶಃ ರಕ್ಷಿಸುವ’ ಸ್ಥಿತಿ ಒದಗಿ ಬಂದಿತ್ತು. ಆದರೆ, ಕಾಲ ತಿಳಿಯಾದ ಮೇಲೆ ಪುರುಷರ ಸ್ಥಿತಿಗತಿಗಳು ಮೂಲರೂಪಕ್ಕೆ ಮರಳಿದರೂ ಮಹಿಳೆಯರ ಸಹಜ ಬದುಕನ್ನು ನಿರ್ಬಂಧಿಸುವ  ರೂಢಿ ಬೆಳೆಯಿತು. ಈ ಕುರಿತು ಸ್ವಾಮೀಜಿ, “ಆಯಾ ಕಾಲಘಟ್ಟದ ಸನ್ನಿವೇಶಗಳಿಂದಾಗಿ, ಶತಮಾನಗಟ್ಟಲೆ ಸ್ತ್ರೀಯರನ್ನು ರಕ್ಷಿಸುವ ಅಗತ್ಯ ಉಂಟಾಗಿದ್ದು ನಿಜ. ಅದರಿಂದಾಗಿ ಆಕೆಯನ್ನು ಅಬಲೆಯಿಂದು ಕೀಳಾಗಿ ಕಾಣಬೇಕಿಲ್ಲ. ಆಕೆ ಯಾವತ್ತೂ ದುರ್ಬಲಳಲ್ಲ” ಎಂದು ಹೇಳಿದ್ದರು.

ಸ್ತ್ರೀಶಕ್ತಿಯ ಪುನರುತ್ಥಾನಕ್ಕಾಗಿ ಏನು ಮಾಡಬೇಕೆಂದು ಕೇಳಿದಾಗ ಸ್ವಾಮೀಜಿ ಹೇಳುತ್ತಾರೆ, “ಮಹಿಳೆಯರಿಗೆ ವಿದ್ಯೆ ನೀಡಿ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರು ತಮ್ಮ ರಕ್ಷಣೆ ತಾವು ಮಾಡಿಕೊಳ್ಳುತ್ತಾರೆ” ಎಂದು. ತಾವು ಹೆಣ್ಣಿಗೆ ಸಹಾಯ ಮಾಡುವ ಮೂಲಕ ಅವಳನ್ನು ಉದ್ಧಾರ ಮಾಡಿಬಿಡುತ್ತೇವೆ ಎಂದು ಭಾವಿಸುವವರಿಗೆ ಸ್ವಾಮೀಜಿ ಹೇಳಿದ್ದು ಒಂದೇ ಮಾತು, “Hands off!” – “ದೂರವಿರಿ!”

“ಮಹಿಳೆಯರು ತಮ್ಮ ಸಮಸ್ಯೆಯನ್ನು ತಾವೇ ಬಿಡಿಸಿಕೊಳ್ಳಲು ಸಮರ್ಥರಾಗಿರಬೇಕು. ಯಾರೂ ಅವರಿಗಾಗಿ ಅದನ್ನು ಮಾಡಕೂಡದು. ಜಗತ್ತಿನ ಇತರ ದೇಶಗಳಲ್ಲಿ ಹೇಗೋ, ಹಾಗೇ ಭಾರತದ ಮಹಿಳೆಯರೂ ತಮ್ಮ ಸಮಸ್ಯೆಯನ್ನು ತಾವೇ ಪರಿಹರಿಸಿಕೊಳ್ಳಲು ಸಕ್ಷಮರಿದ್ದಾರೆ” ಎಂದು ಸ್ಪಷ್ಟವಾಗಿ ಹೇಳಿದ್ದರು ಸ್ವಾಮೀಜಿ.

“ಭಾರತದ ಮಹಿಳೆಯರಿಗೆ ನಿಮ್ಮ ಸಂದೇಶವೇನು?” ಎಂಬ ಪ್ರಶ್ನೆಗೆ ಸ್ವಾಮೀಜಿ, “ಮಹಿಳೆಯರಿಗೆ ಪ್ರತ್ಯೇಕವಾಗಿ ಹೇಳುವಂತದೇನೂ ಇಲ್ಲ. ಪುರುಷರಿಗೆ ಏನು ಹೇಳುತ್ತಾ ಬಂದಿದ್ದೇನೋ, ಅದು ಮಹಿಳೆಯರಿಗೂ ಅನ್ವಯಿಸುತ್ತದೆ. ಸಬಲರಾಗಿ, ಶ್ರದ್ಧೆ ಇರಲಿ, ಲಜ್ಜೆ ಪಡಬೇಕಿಲ್ಲ, ಧೀರರಾಗಿ” ಅಂದಿದ್ದರು.

ಇನ್ನು, ಇದಕ್ಕಿಂತ ಸ್ಪಷ್ಟ ಸಂದೇಶ ನಮಗೆ ಬೇರೆ ಬೇಕೆ?

 

Leave a Reply