ಹೆಣ್ಣು : ಸಂಪೂರ್ಣ ವಿಕಸಿತ ಪರಿಪೂರ್ಣ ಸೃಷ್ಟಿ

ಹುಟ್ಟಿನಿಂದ ಸಾವಿನತನಕ ಪುರುಷ ಭಾವನಾತ್ಮಕವಾಗಿ ಹೆಣ್ಣನ್ನು ವಿಪರೀತ ಅವಲಂಬಿಸಿರುತ್ತಾನೆ. ಪುರುಷರು ಬಾಲ್ಯದಲ್ಲಿ ತಾಯಿಯನ್ನು, ಯೌವನದಲ್ಲಿ ಪತ್ನಿಯನ್ನು, ವೃದ್ಧಾಪ್ಯದಲ್ಲಿ ಮಕ್ಕಳನ್ನು (ಮಾನಸಿಕವಾಗಿ ಹೆಣ್ಣುಮಕ್ಕಳನ್ನು) ಅವಲಂಬಿಸಿರುತ್ತಾರೆ. ಈ ಅವಲಂಬನೆ ಶುದ್ಧ ಭಾವನಾತ್ಮಕವಾದದ್ದು. ~ ಗಾಯತ್ರಿ  | ಇಂದು (ಮಾ.8) ವಿಶ್ವ ಮಹಿಳಾ ದಿನ

ಕ್ತಿ ಇಲ್ಲದೆ ಚಲನೆ ಇಲ್ಲ. ಜಗತ್ತು ನಡೆಯುತ್ತಿರುವುದೇ ಅಗೋಚರ ಶಕ್ತಿಯ ಆಧಾರದ ಮೇಲೆ. ಸೃಷ್ಟಿ ಮೂಲವಾದ ಈ ಶಕ್ತಿಯು ಅದನ್ನು ಪೋಷಿಸುವ, ಸುಸ್ಥಿಯಲ್ಲಿಡುವ ಹೊಣೆಗಳನ್ನು ಮಾತ್ರವಲ್ಲ, ಕಾಲಕಾಲಕ್ಕೆ ಲಯಗೊಳಿಸಿ ಪುನರ್‍ ಸೃಷ್ಟಿಯನ್ನೂ ಮಾಡುತ್ತದೆ. ಈ ಸೃಷ್ಟಿ ಕ್ರಿಯೆ ನಡೆಯುವ ಬ್ರಹ್ಮಾಂಡವನ್ನು (ಕಾಸ್ಮಿಕ್ ವೂಂಬ್) ಆದಿ ಶಕ್ತಿಯ ಗರ್ಭವೆಂದು ಹೇಳಲಾಗುತ್ತದೆ. ಮತ್ತು ಈ ಆದಿಶಕ್ತಿಯನ್ನು ಹೆಣ್ಣಿನ ರೂಪದಲ್ಲಿ ಪರಿಭಾವಿಸಲಾಗುತ್ತದೆ.

ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ದೇವತೆಗಳ ಆರಾಧನೆ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ನಮ್ಮ ಜನಪದಗಳು ಗ್ರಾಮದೇವತೆಯ ರೂಪದಲ್ಲಿ ಮಾತೃಶಕ್ತಿಯನ್ನು ಪೂಜಿಸುತ್ತವೆ. ನವರಾತ್ರಿಯ ಸಂದರ್ಭದಲ್ಲಿ ಶಕ್ತಿ ಆರಾಧನೆಯ ವೈಭವದ ಉತ್ತುಂಗವನ್ನು ನಾವು ಕಾಣಬಹುದು.
ನಮ್ಮ ಪ್ರಾಚೀನ ಸಾಹಿತ್ಯಗಳು `ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾಃ’ ಎಂದು ಹೇಳಿವೆ. ಇದರರ್ಥ, ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲ್ಪಡುತ್ತಾರೋ (ಪೂಜ್ಯ ಭಾವನೆಯಿಂದ ಕಾಣಲ್ಪಡುತ್ತಾರೋ) ಅಲ್ಲಿ ದೇವತೆಗಳು ನಲಿಯುತ್ತಾರೆ ಎಂದು. ಆದರೆ ಇದು ಕೇವಲ ತೋರುಗಾಣಿಕೆಯ ಮಾತಾಗಬಾರದು. ಕಾರ್ಯರೂಪಕ್ಕೆ ಬರಬೇಕು. ಹೆಣ್ಣು ಸಮಾನವಾಗಿ, ಸ್ವತಂತ್ರವಾಗಿ ಇರುವ ವಾತಾವರಣ ಸಹಜವಾಗಿ ಇರುವಂತಾಗಬೇಕು. 

ಪಾತ್ರವೈವಿಧ್ಯದಲ್ಲಿದೆ ಸೌಂದರ್ಯ
ಹೆಣ್ಣಿನ ಸೌಂದರ್ಯ ಇರುವುದು ಆಕೆ ತಳೆಯುವ ಪಾತ್ರ ವೈವಿಧ್ಯದಲ್ಲಿ. ಸಂಬಂಧದ ಯಾವುದೇ ಅಂಕಿತದಲ್ಲಿಯಾದರೂ ಆಕೆ ಪ್ರತಿಯೊಬ್ಬರಿಗೂ ಸಂಪೂರ್ಣ ನ್ಯಾಯ ಸಲ್ಲಿಸುತ್ತಾಳೆ. ಇದು ಮೂಲ ಸ್ತ್ರೈಣ ಗುಣ. ಹೆಣ್ಣಿನ ಈ ಸಾಧ್ಯತೆ ಹುಟ್ಟಿಸುವ ಬೆರಗೇ ಆಕೆಯ ಹೆಚ್ಚುಗಾರಿಕೆ. ಕೌಟುಂಬಿಕ ಸ್ತರದಲ್ಲಿ ಎಲ್ಲವನ್ನು ಸರಿದೂಗಿಸುವ ಆಕೆಯ ಶಕ್ತಿ, ಜಗಜ್ಜನನಿಯ ಜಗತ್‍ನಿರ್ವಹಣಾ ಶಕ್ತಿಯ ಅಂಶಭಾಗವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ನಡುವಿನ ಹೆಣ್ಣುಗಳು ಆದಿ ಶಕ್ತಿಯ ವ್ಯಕ್ತ ರೂಪಗಳು. ಆದ್ದರಿಂದಲೇ ಹೆಣ್ಣು ಏಕಕಾಲಕ್ಕೆ ಅಷ್ಟೊಂದು ನಿಗೂಢವೂ ಸೂಕ್ಷ್ಮವೂ ರೂಕ್ಷವೂ ಆಗಿ ತೋರುವುದು. (ಲಲಿತಾ ಸಹಸ್ರನಾಮದಲ್ಲಿ ಸ್ಥೂಲ – ಸೂಕ್ಷ್ಮ – ಮಹಾರೌದ್ರೀ ಎಂದು ಹೇಳಿರುವುದು ಇದನ್ನೇ). ವಿಶ್ವಸೃಷ್ಟಿಯ ರಹಸ್ಯ ಆದಿಶಕ್ತಿಯ ಗರ್ಭದಲ್ಲಿ ಅಡಗಿರುವಂತೆ, ಜೀವಸೃಷ್ಟಿಯ ರಹಸ್ಯ ಎಲ್ಲ ಜಾತಿಯ ಜಂತುಗಳ ಸ್ತ್ರೀಗರ್ಭದಲ್ಲಿ ಅಡಗಿದೆ. ವಿಜ್ಞಾನ ಅದೆಷ್ಟೇ ಹಂತಗಳಲ್ಲಿ ಭ್ರೂಣದ ಬೆಳವಣಿಗೆಯನ್ನು ತೋರಿಸಿದರೂ ಸೃಷ್ಟಿ ನಿರಂತರತೆಗೆ ಜೀವವೂಡುವ ವಿದ್ಯೆ ಗರ್ಭಕ್ಕಷ್ಟೆ ಗೊತ್ತು. ಪ್ರನಾಳದಲ್ಲಿ ಭ್ರೂಣ ಮೊಳೆಸಿದರೂ ಅದು ಬೆಳೆದು ಜನ್ಮ ತಳೆಯಲು ಹೆಣ್ಣಿನೊಡಲೇ ಬೇಕು.

ಹಾಗೆಂದು ಹೆಣ್ಣಿಗೆ ತಾಯ್ತನವಷ್ಟೇ ಗುರುತಲ್ಲ. ಆಕೆ ಸೃಜನಶೀಲತೆ, ದುಡಿಮೆ, ಆಡಳಿತ, ಕ್ರೀಡೆ – ಹೀಗೆ ಎಲ್ಲ ವಲಯಗಳಲ್ಲೂ ತನ್ನ ಛಾಪು ಹೊಂದಿದ್ದಾಳೆ. ಸಮಾಜ ಇದನ್ನು ಗುರುತಿಸಿ, ಈ ನಿಟ್ಟಿನಲ್ಲಿಯೂ ಸ್ತ್ರೀಯರನ್ನು ಪರಿಗಣಿಸಬೇಕು. 

ಮನುಷ್ಯ ಜೀವಿಗಳಲ್ಲಿ ಹೆಣ್ಣಿನೊಂದಿಗಿನ ಭಾವನಾತ್ಮಕ ಬೆಸುಗೆ ಅತ್ಯಂತ ಹೆಚ್ಚಿನದು. ಉಳಿದ ಪ್ರಾಣಿಗಳಲ್ಲೂ ಇದನ್ನು ನೋಡಬಹುದಾದರೂ ಅಭಿವ್ಯಕ್ತಿಯ ಅವಕಾಶ ಇರುವುದರಿಂದ ಇದು ಎದ್ದು ತೋರುತ್ತದೆ. ಹುಟ್ಟಿನಿಂದ ಸಾವಿನತನಕ ಪುರುಷ ಭಾವನಾತ್ಮಕವಾಗಿ ಹೆಣ್ಣನ್ನು ವಿಪರೀತ ಅವಲಂಬಿಸಿರುತ್ತಾನೆ. ಪುರುಷರು ಬಾಲ್ಯದಲ್ಲಿ ತಾಯಿಯನ್ನು, ಯೌವನದಲ್ಲಿ ಪತ್ನಿಯನ್ನು, ವೃದ್ಧಾಪ್ಯದಲ್ಲಿ ಮಕ್ಕಳನ್ನು (ಮಾನಸಿಕವಾಗಿ ಹೆಣ್ಣುಮಕ್ಕಳನ್ನು) ಅವಲಂಬಿಸಿರುತ್ತಾರೆ. ಈ ಅವಲಂಬನೆ ಆರ್ಥಿಕ ಅಥವಾ ರಕ್ಷಣಾ ಸಂಗತಿಗಳಿಗಾಗಿ ಅಲ್ಲ. ಶುದ್ಧ ಭಾವನಾತ್ಮಕವಾದದ್ದು.

ತನ್ನ ಜೀವನದಲ್ಲಿ ಒಬ್ಬ ಹೆಣ್ಣನ್ನು, ಹೆಣ್ಣಿನ ಪ್ರೇಮವನ್ನು ಹೊಂದಿರದ ಗಂಡು ಅತ್ಯಂತ ನೀರಸ ಬದುಕನ್ನು ನಡೆಸುತ್ತಾನೆ. ಅದು ಪತ್ನಿ ಅಥವಾ ಪ್ರೇಯಸಿಯೇ ಆಗಿರಬೇಕೆಂದಿಲ್ಲ. ಯಾವ ಪಾತ್ರದಲ್ಲಾದರೂ ಸರಿ, ಹೆಣ್ಣಿನ ಸಾಂಗತ್ಯ, ಗಂಡಿನ ಆಂತರ್ಯದಲ್ಲಿ ಮಾರ್ದವವನ್ನು, ಕೋಮಲತೆಯನ್ನು ತುಂಬುತ್ತದೆ. ಪ್ರೇಮಿಕೆಯ ರೂಪದಲ್ಲಂತೂ ಹೆಣ್ಣಿನ ಸಾಂಗತ್ಯ ಒಂದು ಅನುಭಾವ ರಸ. ಅದರಿಂದ ದೂರವಿದ್ದರೆ ಮಾತ್ರ ಅದು ವೈರಾಗ್ಯ, ಸನ್ಯಾಸ.

ಪ್ರಾಚೀನ ಹಿಂದೂ ಶಾಸ್ತ್ರಗಳಲ್ಲಿ ಹೆಣ್ಣಿಗೆ ಸನ್ಯಾಸ ನೀಡುವ ಪದ್ಧತಿ ಇರಲಿಲ್ಲ. ಸ್ತ್ರೀ ಸಹವಾಸದಿಂದ – ಪ್ರಭೆಯಿಂದ ದೂರವಿರುವುದು ಕೂಡ ವೈರಾಗ್ಯದ ನಿಯಮವಾಗಿದ್ದು, ಸ್ತ್ರೀ ಹೇಗೆ ತಾನೆ ತನ್ನ ಅಸ್ತಿತ್ವದಿಂದ, ಜೀವಸಹಜ ರಸ ಗುಣದಿಂದ ದೂರವಿರಬಲ್ಲಳು? ಬಹುಶಃ ಈ ಕಾರಣದಿಂದಲೇ ಹೆಣ್ಣುಮಕ್ಕಳಿಗೆ ಸನ್ಯಾಸ ನೀಡುವ ಬಗ್ಗೆ ಯೋಚನೆಯನ್ನೇ ನಮ್ಮ ಪೂರ್ವಜರು ಮಾಡಿರಲಿಕ್ಕಿಲ್ಲ. ಮುಂದೆ ಬುದ್ಧ ಆಧ್ಯಾತ್ಮಿಕ ಸಾಧನೆಯಲ್ಲಿ ಸಮಾನತೆ ತರಲಿಕ್ಕಾಗಿ ಈ ಪದ್ಧತಿ ಪರಿಚಯಿಸಿದ. ಅದೇ ಕಾಲಕ್ಕೆ ಜೈನ ಮತದಲ್ಲೂ ಸಾಧ್ವಿಯರ ದೀಕ್ಷೆ ವ್ಯಾಪಕಗೊಳ್ಳತೊಡಗಿತು. ಆಧುನಿಕ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲೂ ಸನ್ಯಾಸಿನೀ ಪರಂಪರೆಯನ್ನು ಜನಪ್ರಿಯಗೊಳಿಸಿದರು.

ಪರಿಪೂರ್ಣತೆ
ಸ್ತೀಶಕ್ತಿ ಸ್ತುತಿಯ ಉತ್ತುಂಗವನ್ನು ಕೇಳಬೇಕೆಂದರೆ ಲಲಿತಾ ಸಹಸ್ರನಾಮ ಹಾಗೂ ಸೌಂದರ್ಯ ಲಹರಿಗಳನ್ನು ಓದಬೇಕು. ಹಿಂದೂ ಧರ್ಮದ ಮುಖ್ಯ ಮೂರು ದೇವತೆಗಳು ಪ್ರತ್ಯೇಕವಾಗಿ ಮೂರು ಜವಾಬ್ದಾರಿಗಳಿಗೆ ಭಾಜನರಾಗಿದ್ದಾರೆ. ಆದರೆ ಜಗಜ್ಜನನಿಯೆಂದು ಕರೆಯಲ್ಪಡುವ ಆದಿಶಕ್ತಿಯು ಸೃಷ್ಟಿ – ಸ್ಥಿತಿ – ಲಯಕಾರ್ಯಗಳನ್ನು ತಾನೊಬ್ಬಳೆ ನಡೆಸುತ್ತಾಳೆ! ಈಕೆಯ ನಗೆ ಮಾತ್ರದಿಂದ ಸೃಷ್ಟಿಯೂ ಕೋಪದ ಹೂಂಕಾರದಿಂದ ಪ್ರಳಯವೂ ಉಂಟಾಗುತ್ತದೆ ಎಂದು ಭಕ್ತ ಕವಿಗಳು ಬಣ್ಣಿಸುತ್ತಾರೆ. ಇಂತಹ ಬಣ್ಣನೆಗಳಿಗೇನಿದ್ದರೂ ಸ್ತ್ರೀದೇವತೆಯಷ್ಟೆ ಭಾಜನಳಾಗಬಲ್ಲಳು! (ಲೌಕಿಕ ನೆಲೆಯಲ್ಲೂ ಹೆಣ್ಣಿನ ನಗುವಿಂದ ಜೀವನೋತ್ಸಾಹ, ಕೋಪದಿಂದ ಮರಣ ತಾಪ ಎಂದು ಹಾಡಿದ್ದಾರೆ ಕವಿಗಳು).

ಮಾನವ ಜೀವಜಾತಿಯ ಹೆಣ್ಣನ್ನು ಅತ್ಯುನ್ನತ ಪರಿಪೂರ್ಣ ಸೃಷ್ಟಿ ಎನ್ನಲಾಗುತ್ತದೆ. ಆದಿ ಶಕ್ತಿಯನ್ನು ಹೆಣ್ಣು ಎನ್ನುವುದೂ ಆ ಶಕ್ತಿಯ ಪರಿಪೂರ್ಣತೆಯ ಕಾರಣದಿಂದಲೇ. ಹೆಣ್ಣಿನ ಬಾಹ್ಯ ರೂಪ, ಸೌಷ್ಟವದ ಪ್ರಶ್ನೆ ಇಲ್ಲಿ ಉದಿಸುವುದಿಲ್ಲ. ಕೆನ್ನಾಲಗೆ ಹೊರಚಾಚಿ, ಅರೆನಗ್ನಳಾಗಿ, ರುಂಡ ಮಾಲೆ ಧರಿಸಿದ ಕಾಳೀ ಚಿತ್ರವನ್ನು ಪ್ರೇಮ ಭಕ್ತಿಗಳಿಂದ ಪೂಜಿಸುವುದಿಲ್ಲವೆ? ಇದರ ಹಿಂದೆಯೂ ಆಕೆ ಜಗಜ್ಜನನಿಯೆಂಬ ಭಾವವೇ ಮುಖ್ಯವಾಗಿರುತ್ತದೆ. ಈ ಭಾವನೆಗಳು ಕೇವಲ ಪೂಜಾರಾಧನೆಗೆ, ಅವಲಂಬನೆಗಳಿಗೆ ಸೀಮಿತವಾಗದೆ, ಶಕ್ತಿ ಸ್ವರೂಪವಾದ ಸ್ತ್ರೀ ಸಂಕುಲವನ್ನು ಗೌರವದಿಂದ ನಡೆಸಿಕೊಳ್ಳುವ ಮೂಲಕ ಅಭಿವ್ಯಕ್ತವಾಗಬೇಕು. ಆಗಷ್ಟೆ ಹೆಣ್ಣಿಗೆ ಸಂಬಂಧಿಸಿದ ಯಾವುದೇ ಆಚರಣೆಯು ಸಾರ್ಥಕಗೊಳ್ಳುವುದು. 

Leave a Reply