ಹೋಳಿ ಅಂದರೆ ಅದು ಬಣ್ಣಗಳ ಹಬ್ಬ. ಇಂದು ಮಿಕ್ಕೆಲ್ಲ ಕಥೆ ಹಾಗೂ ಆಚರಣೆಗಳು ಹಿಂದೆ ಸರಿದು ಉಳಿದುಕೊಂಡಿರುವುದು ಬಣ್ಣಗಳ ಹೋಳಿಯೇ. ಫಾಲ್ಗುಣ ಹುಣ್ಣಿಮೆಯ ದಿನ ಬಣ್ಣಗಳ ಓಕುಳಿಯಾಡುವ ಪದ್ಧತಿ ಶುರುವಾಗಿದ್ದು ವ್ರಜಭೂಮಿಯಲ್ಲಿ, ಕೃಷ್ಣನ ಕಾಲದಲ್ಲಿ ಎನ್ನಲಾಗುತ್ತದೆ ~ ಗಾಯತ್ರಿ
ಫಾಲ್ಗುಣ ಮಾಸ, ಚಳಿಗಾಲ ಕಳೆದು ಬೇಸಿಗೆ ಕಾಲಿಡುವ ಕಾಲ. ಎಲೆಗಳನ್ನೆಲ್ಲ ಕಳಚಿಕೊಂಡು ಬೆತ್ತಲಾದ ಮರಗಿಡಗಳು ಚಿಗುರುವುದಕ್ಕೆ ಮುನ್ನುಡಿ ಇಲ್ಲಿಂದಲೇ. ಒಣಗಿ ಕಳಾಹೀನವಾದ ಪ್ರಕೃತಿ ರಂಗು ತುಂಬಿಕೊಳ್ಳುವುದೂ ಈ ಅವಧಿಯಲ್ಲೇ. ಈ ಬದಲಾವಣೆಯ ಪರ್ವವನ್ನು ಸಂಭ್ರಮದಿಂದ ಸ್ವಾಗತಿಸಲು ತುಂಬು ಹುಣ್ಣಿಮೆಗಿಂತ ಬೇರೆ ದಿನ ಬೇಕೇ? ಹಾಗೆಂದೇ ಫಾಲ್ಗುಣ ಶುದ್ಧ ಹುಣ್ಣಿಮೆಯ ದಿನ ನಮಗೆ ಹಬ್ಬ.
ಹೋಳಿ ಹಬ್ಬದ ಕಥೆಗಳು ಅನೇಕ. ಹಿರಣ್ಯಕಷಿಪುವಿನ ತಂಗಿ ಹೋಲಿಕಾ, ಆತನಿಂದ ತನ್ನ ಸೋದರಳಿಯ ಬೆಂಕಿಯಲ್ಲಿ ಸುಟ್ಟುಹೋಗುವುದನ್ನು ತಪ್ಪಿಸಿದಳೆಂದು ಅವಳ ಸ್ಮರಣೆಯಲ್ಲಿ ಉತ್ಸವ ಆಚರಿಸಲಾಗುತ್ತದೆ ಅನ್ನುವುದು ಅಂತಹ ಕಥೆಗಳಲ್ಲಿ ಒಂದು. ಹಾಗೆಂದೇ ಹಬ್ಬಕ್ಕೆ ‘ಹೋಳಿ’ ಎಂಬ ಹೆಸರಿದೆ. ಈ ದಿನದಂದು ಹುಲ್ಲು, ಬೆರಣಿಗಳಿಂದ ಬೆಂಕಿ ಹೊತ್ತಿಸೋದು ಹೋಳಿಕಾಳ ಸ್ಮರಣೆಗಾಗಿಯೇ.
ಕಾಮ ದಹನ ಹೋಳಿ ಹಬ್ಬದ ಮತ್ತೊಂದು ಮುಖ್ಯ ಆಚರಣೆ. ಈ ಹಬ್ಬ ಬರುವುದು ಶಿವರಾತ್ರಿ ಕಳೆದ ಹದಿನೈದನೇ ದಿನಕ್ಕೆ. ತಪೋನಿರತ ಶಿವನ ಮೇಲೆ ಪಂಚಬಾಣ ಹೂಡಿ ಪ್ರಚೋದಿಸಲು ಪ್ರಯತ್ನಿಸುತ್ತಾನೆ ಕಾಮ. ಇದಕ್ಕೆ ಲೋಕಕಲ್ಯಾಣದ ಕಾರಣವೂ ಇರುತ್ತದೆ. ಆದರೆ ಶಿವ ಕಾಮನನ್ನು ಹಣೆಗಣ್ಣೂ ತೆರೆದು ಸುಟ್ಟುಹಾಕುತ್ತಾನೆ. ಆಗ ಕಾಮನ ಹೆಂಡತಿ ರತೀ ದೇವಿ ಶಿವನನ್ನು ಪ್ರಾರ್ಥಿಸಿ ಕಾಮನ ಅಸ್ತಿತ್ವವನ್ನಾದರೂ ಉಳಿಸೆಂದು ಬೇಡುತ್ತಾಳೆ. ಶಿವ ಅನುಗ್ರಹಿಸುತ್ತಾನೆ. ಈ ಘಟನೆಯ ಸ್ಮರಣಾರ್ಥ ಫಾಲ್ಗುಣ ಹುಣ್ಣಿಮೆಯನ್ನು ಕಾಮನ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ.
ಈ ಎಲ್ಲಕ್ಕಿಂತ ಮುಖ್ಯವಾಗಿ ಹೋಳಿ ಅಂದರೆ ಅದು ಬಣ್ಣಗಳ ಹಬ್ಬ. ಇಂದು ಮಿಕ್ಕೆಲ್ಲ ಕಥೆ ಹಾಗೂ ಆಚರಣೆಗಳು ಹಿಂದೆ ಸರಿದು ಉಳಿದುಕೊಂಡಿರುವುದು ಬಣ್ಣಗಳ ಹೋಳಿಯೇ. ಫಾಲ್ಗುಣ ಹುಣ್ಣಿಮೆಯ ದಿನ ಬಣ್ಣಗಳ ಓಕುಳಿಯಾಡುವ ಪದ್ಧತಿ ಶುರುವಾಗಿದ್ದು ವ್ರಜಭೂಮಿಯಲ್ಲಿ, ಕೃಷ್ಣನ ಕಾಲದಲ್ಲಿ ಎನ್ನಲಾಗುತ್ತದೆ.
ಕೃಷ್ಣ ನೀಲವರ್ಣದ ಸುಂದರಾಂಗ. ಅವನಿಗೆ ರಾಧೆಯ ಬಿಳುಪಿನ ಮೇಲೆ ಅಸಹನೆ. ಯಶೋದೆಯ ಬಳಿ ಯಾವಾಗಲೂ “ನಾನು ಕರಿಯ, ರಾಧೆ ಮಾತ್ರ ಯಾಕೆ ಬಿಳಿ?” ಎಂದು ತಲೆ ತಿನ್ನುವನು. ಯಶೋದೆ ಒಂದು ದಿನ ಅವನನ್ನು ಸಮಾಧಾನ ಪಡಿಸುತ್ತಾ, “ರಾಧೆ ಬಿಳಿ ಅಂತ ತಾನೆ ನಿನಗೆ ಬೇಜಾರು? ನಿನಗ್ಯಾವುದಿಷ್ಟವೋ ಆ ಬಣ್ಣವನ್ನು ಅವಳಿಗೆ ಹಚ್ಚು, ಹೋಗು….” ಅನ್ನುವಳು. ತುಂಟ ಕೃಷ್ಣ ಗೋಪಬಾಲರ ಜೊತೆಗೂಡಿ ಬಣ್ಣಗಳ ಪಿಚಕಾರಿ ಹಿಡಿದುಕೊಂಡು ರಾಧೆಯ ಮೇಲೆ ಗುಲಾಲು ಬಣ್ಣವನ್ನು ಎರಚುವನು. ಗೋಪಿಯರ ತುಂಟತನವೇನು ಕಡಿಮೆಯೇ? ಅವರೂ ಕೃಷ್ಣನ ಮೇಲೂ ಗೋಪಬಾಲರ ಮೇಲೂ ಬಣ್ಣ ಎರಚುವರು. ಅವರ ಈ ಲೀಲಾವಿನೋದ ನಡೆದ ದಿನ ಫಾಲ್ಗುಣ ಹುಣ್ಣಿಮೆ. ಅಂದಿನಿಂದ ಆ ದಿನ ಬಣ್ಣಗಳ ಓಕುಳಿಯ ಹಬ್ಬವಾಗಿ ಚಾಲ್ತಿಗೆ ಬಂದಿತು.
ಹೋಳಿಯ ಕಥೆಗಳಲ್ಲಿ ಕೃಷ್ಣನ ಲೀಲೆಯೇ ಹೆಚ್ಚು ಆಪ್ತ ಮತ್ತು ಸುಂದರ. ಅಲ್ಲಿ ಪ್ರೇಮ, ತುಂಟತನ, ಮೋಜು, ಎಲ್ಲದರ ಹದ ಮಿಲನವಿದೆ. ಇಂದಿನ ಹೋಳಿಯೂ ಹಾಗೆಯೇ. ಅಗ್ಗದ, ಕೃತಕ ರಾಸಾಯನಿಕ ಬೆರೆಸದ, ಹೆಚ್ಚು ನೀರನ್ನು ಬೇಡದ ಬಣ್ಣಗಳ ಓಕುಳಿಯ ಹೋಳಿ ನಮ್ಮ ಏಕತಾನದ ಬದುಕಿಗೆ ಹುಮ್ಮಸ್ಸು ತುಂಬುವುದು. ಮತ್ತು ಅದರ ನೆನಪು ಹುಣ್ಣಿಮೆಯಂತೆ ಮತ್ತಷ್ಟು ದಿನಗಳ ಹುರುಪಿಗೆ ಬೆಳಕಾಗುವುದು.
ಕೆಲವೆಡೆ ಇಂದು ಹೋಳಿ ಹಬ್ಬ ಆಚರಿಸಲಾಗುತ್ತಿದೆ. ತನ್ನಿಮಿತ್ತ ಈ ಲೇಖನ…