ಅಲ್ಲಮನೆಂಬ ಬಯಲ ಬೆಳಕು ಮತ್ತು ತಮಂಧದ ಮಾಯೆ

ಅಲ್ಲಮನ ಅಂತರಂಗದ ನಿಗೂಢತೆಯನ್ನು ಕಂಡು ಕಂಗೆಟ್ಟ ಮಾಯೆ, ತನ್ನ ನಿಗೂಢತೆಗೆ ತಮಂಧ ಮೂಲವಾದರೆ, ಅಲ್ಲಮನ ನಿಗೂಢತೆಯ ಮೂಲ ಬಯಲ ಬೆಳಗಿನ ಮಹಾಪೂರವೆಂಬುದನ್ನು ಅರಿಯುತ್ತಾಳೆ. ಇನ್ನು ಇವನೆದುರು ತನ್ನ ಆಟ ನಡೆಯುವುದಿಲ್ಲ ಎಂದು ಮನಗಂಡು ಬಂದ ದಾರಿ ಹಿಡಿಯುತ್ತಾಳೆ  |  ಗಾಯತ್ರಿ

ಲ್ಲಮ ಬಯಲಿನಂಥ ಮಹಾಶರಣ. ಆತನಿಗೆ ಬೇಲಿಯೇ ಇರಲಿಲ್ಲ, ಎಲ್ಲೆಗಳೂ. ಅಲ್ಲಮ ಯಾವುದೇ ಆಚಾರಕ್ಕೆ, ಕಟ್ಟುಪಾಡಿಗೆ ಒಳಗಾದವನಲ್ಲ. ವೈಚಾರಿಕ ಆಧ್ಯಾತ್ಮಿಕತೆಯ ಶರಣಕೂಟವನ್ನೂ ವಿಮರ್ಶೆಗೊಳಪಡಿಸಿ, ಟೀಕಿಸಿ, ತಿದ್ದಿ  ಘನಗೊಳಿಸಿದವನು ಅಲ್ಲಮ. ಆದ್ದರಿಂದಲೇ ಆತನಿಗೆ `ಪ್ರಭು ದೇವರು’ ಎಂಬ ಗೌರವ.

ಅಲ್ಲಮನು `ಪ್ರಭು’ವಾಗಿದ್ದು ಎಲ್ಲವನ್ನೂ ಜಯಿಸಿಕೊಂಡೇ. ಅದು ಆತನಿಗೆ ವಂಶಪಾರಂಪರ್ಯ ಅಭಿದಾನವಲ್ಲ. ಅವನು ಭೌತಿಕ ಜಗತ್ತಿನ ಒಡೆಯನೂ ಆಗಿರಲಿಲ್ಲ. ಅಲ್ಲಮ ಸೋಲಿಸಿದ್ದು ಸೂಕ್ಷ್ಮ ಜಗತ್ತಿನ ಕ್ಷೋಭೆಗಳನ್ನು. ಅಲ್ಲಮ ಗೆದ್ದಿದ್ದು ಮಾಯೆಯನ್ನು. ಹಾಗೆಂದೇ ಅವನು ಪ್ರಭುವಾದ. ಮಾಯೆಯನ್ನು ಜಯಿಸಿದವನು ಜಗವನ್ನೆ ಜಯಿಸಿದಂತೆ. ಹಾಗೆಂದೇ ಆತ ಪ್ರಭುದೇವರಾದ.

ಕಥೆಗಳೆರಡು….

ಅಲ್ಲಮ ಪ್ರಭು ಒಬ್ಬ ನಿಗೂಢ ಅನುಭಾವಿ. ಈತನ ನಿಜಕಥನ ಇದಮಿತ್ಥಂ ಎಂದು ಬಲ್ಲವರಿಲ್ಲ. ಅಲ್ಲಮನ ಜೀವನ ಚರಿತ್ರೆ ಬರೆದ ಚಾಮರಸ ಒಂದು ರೀತಿಯಿಂದ ಬರೆದರೆ, ಹರಿಹರ ಕವಿ ಮತ್ತೊಂದೇ ರೀತಿಯಲ್ಲಿ ಬರೆದಿದ್ದಾನೆ. ಈ ಇಬ್ಬರು ಕಟ್ಟಿಕೊಟ್ಟಿರುವ ಕಥನಗಳಲ್ಲಿ ಇರುವ ಸಾಮ್ಯತೆ ಅತ್ಯಲ್ಪ. ಚಾಮರಸ ಅಲ್ಲಮ ಮತ್ತು ಮಾಯೆಯ ವೃತ್ತಾಂತ ಬರೆಯುವಾಗ ಪಾರ್ವತಿಯ ತಾಮಸ ಛಾಯೆಯಾದ ಮಾಯೆಯು ದೇವಿಯ ಅಣತಿಯಂತೆ ಅಲ್ಲಮನನ್ನು ಸೋಲಿಸಲು ಬಂದು ತಾನೇ ಸೋತುಹೋದಳು ಎಂದು ಬರೆಯುತ್ತಾನೆ. ಈ ಕುರಿತು ಸವಿಸ್ತಾರವಾದ ಸಂಭಾಷಣೆಯನ್ನೂ ಹೆಣೆದಿದ್ದಾನೆ. ಆದರೆ ಹರಿಹರ ಕವಿಯು ಅಲ್ಲಮ – ಕಾಮಲತೆ (ಮಾಯಾ ದೇವಿ)ಯರು ಪರಸ್ಪರ ಪ್ರೇಮಿಸಿದ್ದರೆಂದೂ ಕಾಮಲತೆಯು ಅನಾರೋಗ್ಯದಿಂದ ಮೃತಳಾಗುತ್ತಾಳೆಂದೂ ಅನಂತರವಷ್ಟೆ ಜಗದ ತಾತ್ಕಾಲಿಕತೆ ಅರಿಯುವ ಅಲ್ಲಮ ವಿರಾಗಿಯಾಗುತ್ತಾನೆಂದೂ ಬರೆಯುತ್ತಾನೆ.

ಅದೇನೇ ಇದ್ದರೂ ಅಲ್ಲಮನು ಮಾಯೆಗೆ ಇದಿರಾಗಿ ನಿಂತು ಆಕೆಯ ಸವಾಲುಗಳಿಗೆಲ್ಲ ಸೂಕ್ತ ಉತ್ತರ ನೀಡುತ್ತ ಹೋಗುತ್ತಾನೆ ಮತ್ತು ಮಾಯೆಯನ್ನು ಮಣಿಸುತ್ತಾನೆ ಎನ್ನುವ ಕಥನವೇ ಹೆಚ್ಚು ಪ್ರಚಾರದಲ್ಲಿದೆ. ಇದು ಅಲ್ಲಮನ ಅನಂತರದ ವಚನಗಳಿಗೆ, ನಿಲುವಿಗೆ, ವೈಚಾರಿಕತೆಗೆ ಹಾಗೂ ನಡವಳಿಕೆಗೆ ಪೂರಕವಾಗಿರುವುದರಿಂದ ಹೆಚ್ಚು ಸಮಂಜಸವಾಗಿ ತೋರುತ್ತದೆ. ಏಕೆಂದರೆ ತನ್ನ ವಚನಗಳಲ್ಲಿ ಅಲ್ಲಮ ಬಹುತೇಕವಾಗಿ ಮಾಯೆಯನ್ನು ಕಟುವಾಗಿ ವಿಮರ್ಶಿಸುತ್ತಾನೆ.

ಮಾಯೆಯಾವುಟ ಮಣಿಸಿದವನು…

`ದೇವ ದೇವಿಯರನೆಲ್ಲ ಹೊಡೆತಂದಿತ್ತು ಮಾಯೆ’ ಎನ್ನುವ ಅಲ್ಲಮ, ಅದು ದೇವತೆಗಳಾದಿಯಾಗಿ ಯಾರನ್ನೂ ಬಿಡದ ಮುಸುಕು, ನಿಜ ಶರಣರಷ್ಟೆ ಅದನ್ನು ಮೀರಬಲ್ಲರು ಎಂದೂ ಸೂಚಿಸುತ್ತಾನೆ. ಆತನು ಮಾಯೆಯನ್ನು ಕುರಿತು

ನರನಲ್ಲ , ಸುರನಲ್ಲ , ಭ್ರಾಂತನಲ್ಲ ಶರಣನು ;

ಲಿಂಗ ಸನ್ನಿಹಿತ ಅಪಾರ ಮಹಿಮನು

ಸುರಾಸುರರೆಲ್ಲ ನಿಮ್ಮ ವರದಲ್ಲಿ ಸಿಲುಕಿದರು !

ಸರಸದೊಳಗಲ್ಲ ಹೊರಗಲ್ಲ  ಕೇಳು ಭಾವ

– ಎಂದು ಹೇಳುತ್ತಾ, ನರಸುರಭ್ರಾಂತರನ್ನೆಲ್ಲ ಕಾಡಿದರೂ ಮಾಯೆಯು ಶರಣನ್ನು ಮೋಡಿಗೆ ಒಳಪಡಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾನೆ.

ಇಲ್ಲಿ ಶರಣ ಎಂದರೆ ಯಾವುದೋ ನಿರ್ದಿಷ್ಟ ಸಮೂಹವಲ್ಲ. ಸಿದ್ಧಾಂತವಲ್ಲ. ಭಕ್ತಗಣವೂ ಅಲ್ಲ. ಶರಣ ಎಂದರೆ ತನ್ನನ್ನು ತಾನು ಅರಿತು, ತನ್ನೊಳಗೂ ಇರುವ ಪರಮಸತ್ಯಕ್ಕೆ ಶರಣುಗೊಂಡವ ಎಂದು. ಯಾರು ತನ್ನೊಳಗೂ ಇರುವ, ಇಡಿಯ ವಿಶ್ವವನ್ನೆ ವ್ಯಾಪಿಸಿರುವ ಸತ್ಯವನ್ನು ಅರಿತು ಅದಕ್ಕೆ ಶರಣಾಗುತ್ತಾರೋ ಅವರನ್ನು ಆ ಸತ್ಯವು ರಕ್ಷಿಸುತ್ತದೆ. ಆದ ಕಾರಣ ಅಂಥವರು ಮಾಯೆಯ ಜಾಲಕ್ಕೆ ಅಂಜಬೇಕಿಲ್ಲ. ಆದರೆ ಮಿಥ್ಯಾಹಂಕಾರದ ಜೊತೆ ಗುರುತಿಸಿಕೊಂಡವರು ನರ – ಸುರ ಯಾರೇ ಆಗಿದ್ದರೂ ಭ್ರಾಂತಿಗೊಳಗಾಗಿ ಸತ್ಯವನ್ನು ಗುರುತಿಸಲಾಗದೆ ಹೋಗುತ್ತಾರೆ ಹಾಗೂ ಮಾಯೆಯ ಜಾಲಕ್ಕೆ ಸಿಕ್ಕಿಬೀಳುತ್ತಾರೆ ಎನ್ನುವುದು ಅಲ್ಲಮನ ಮಾತಿನ ತಾತ್ಪರ್ಯ.

ಬಳ್ಳಿಗಾವೆಯ ದೇಗುಲದಲ್ಲಿ ಮದ್ದಳೆ ಬಾರಿಸುತ್ತಿದ್ದ ಅಲ್ಲಮನನ್ನು ಕಂಡು ಮಾಯೆ ಮೋಹಗೊಳ್ಳುತ್ತಾಳೆ. ತನ್ನನ್ನು ಸ್ವೀಕರಿಸೆಂದು ದುಂಬಾಲು ಬೀಳುತ್ತಾಳೆ. ಆಗ ಅಲ್ಲಮ ತನ್ನ ವಿರಕ್ತಿಯನ್ನು ಮನದಟ್ಟುಮಾಡಿಸುತ್ತಾ ಅವಳ ಕೋರಿಕೆಯನ್ನು ನಿರಾಕರಿಸುತ್ತಾನೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಮಾಯೆ ಆತನನ್ನು ಪರಿಪರಿಯಾಗಿ ಕಾಡಲು ಬೇಡಲು ಶುರುವಿಡುತ್ತಾಳೆ. ಆತನೊಂದಿಗೆ ವಾಗ್ವಾದಕ್ಕಿಳಿದು ಮಾತಿನಲ್ಲಿ ಮಣಿಸಿ ಗೆಲ್ಲಲು ಯತ್ನಿಸುತ್ತಾಳೆ. ಆದರೆ ಅಲ್ಲಮ ಅವಳ ಎಲ್ಲ ಯತ್ನವನ್ನೂ ಹುಸಿಗೊಳಿಸಿಬಿಡುತ್ತಾನೆ. `ಮೋಡಿಕಾರ ಆಟದಲ್ಲಿ ತೋರುವ ಸುಳ್ಳು ನಾಣ್ಯದಂತೆ ಪ್ರಪಂಚವು ಕೆಲಕಾಲ ನಿಜವೆಂದು ತೋರಿಬಂದರೂ ,ಕೊನೆಗೆ ಏನೂ ಉಳಿಯದಂತೆ ಮಾಯವಾಗುತ್ತದೆ. ಮಾಯವಾಗುವುದೇ ಮಾಯೆಯ ಸ್ವಭಾವ! ಈ ಸಂಸಾರವೊಂದು ಮಾಯೆಯ ಸಂತೆ. ಅಲ್ಲಿ ಹೆಂಡಿರು, ಮಕ್ಕಳು ಧನ, ಧಾನ್ಯ ಮುಂತಾದ ಸಕಲ ಸಾಮಾನುಗಳು ಕಣ್ಣಿಗೆ ಬಲು ಚೆಂದವಾಗಿ ಕಂಡರೂ ಕಟ್ಟಕಡೆಯಲ್ಲಿ ಕೈಬಿಟ್ಟು ಮಾಯವಾಗುವವು. ಈ ಸಂಸಾರವೆಂಬ ಮಾಯದ ಸಂತೆಯಲ್ಲಿ ತೋರುವ ಸುಳ್ಳು ರಚನೆಗೆ ಹುಚ್ಚರು ಮಾತ್ರ ಮನಸೋಲುವರು. ಬಲ್ಲವರು ಈ ಆಟದ ರಂಜನೆಗೆ ಎಂದೂ ಮರಳಾಗುವುದಿಲ್ಲ.’ ಎಂಬ ದಿಟ್ಟ ಉತ್ತರ ನೀಡಿ ಆಕೆಯನ್ನು ನಿವಾರಿಸಿಕೊಳ್ಳುತ್ತಾನೆ.

ಈ ಪ್ರಕರಣದ ಅನಂತರ ಅಲ್ಲಮ ತನ್ನೂರಿನಿಂದ ಹೊರಟು ಅಡವಿ ಸೇರಿ ತಪೋನಿರತನಾಗಿ ಆತ್ಮತತ್ತ್ವವನ್ನು ಅರಿಯುತ್ತಾನೆ. ಆತನಿಗೆ ಅನಿಮಿಷಯ್ಯ ಎಂಬ ಗುರುವಿನ ಮಾರ್ಗದರ್ಶನವೂ ದಕ್ಕುತ್ತದೆ. ಅಲ್ಲಿಂದ ಅಲೆಮಾರಿಯಾಗಿ ಹೊರಡುವ ಅಲ್ಲಮ ಕಲ್ಯಾಣವನ್ನು ತಲುಪಿಕೊಳ್ಳುತ್ತಾನೆ. ಅಲ್ಲಿನ ಶರಣ ಸಮೂಹಕ್ಕೆ, ಅನುಭವ ಮಂಟಪಕ್ಕೆ ಮಾರ್ಗದರ್ಶಕನಾಗಿ, ಆಧಾರವಾಗಿ ನಿಲ್ಲುತ್ತಾನೆ. ಕಲ್ಯಾಣ ಕ್ರಾಂತಿಯ ಪರಿಣಾಮವಾಗಿ ಶರಣ ಸಂಕುಲ ಬಹುತೇಕ ನಾಶವಾಗಿ ಹೋಗುತ್ತದೆ. ಈ ಕುರಿತು ಬಸವಣ್ಣನವರ ಬಳಿ ಅಲ್ಲಮ `ಮಾಯೆ ಆವುಟ ಹೂಡಿ ಎಲ್ಲವನ್ನೂ ನಾಶ ಮಾಡುವುದು. ಆ ಮಹಾಪತನದ ಬೂದಿಯ ಮೇಲೆ ಮತ್ತೊಂದು ಮಹಾ ಸಾಮ್ರಾಜ್ಯದ ನಿರ್ಮಾಣವಾಗುವುದು’ ಎಂದು ಮುನ್ನುಡಿದಿರುತ್ತಾನೆ.

ಈ ಎಲ್ಲ ವಿನಾಶದ ನಂತರ ಅಲ್ಲಿ ಉಳಿಯುವುದು ಅಲ್ಲಮನೊಬ್ಬನೆ. ಈ ಸಂದರ್ಭದಲ್ಲಿ ಮತ್ತೆ ಅವನನ್ನು ಬೆಂಬೆತ್ತಿ ಬರುವ ಮಾಯೆ ಆ ಹಿಂದಿನ ತನ್ನ ತಿರಸ್ಕಾರದ ಸೇಡು ತೀರಿಸಿಕೊಳ್ಳಲೋ ಎಂಬಂತೆ ಅಲ್ಲಮನನ್ನು ಕೆಣಕುತ್ತಾಳೆ. `ಗೆದ್ದವರು ಯಾರು ಅಲ್ಲಮ?‘ ಎಂದು ವಾದಕ್ಕೆಳೆಯುತ್ತಾಳೆ.

`ನೀನಂತೂ ಅಲ್ಲ , ನಿನ್ನ ಸ್ಥಿತಿಯನ್ನು ಕಂಡು ನನಗೆ ಕನಿಕರ ಉಂಟಾಗುತ್ತಿದೆ. ನೀನು ಏನು ಹೇಳಲು ಬಯಸುತ್ತಿರುವೆಯೆಂಬುದನ್ನು ನಾನು ಬಲ್ಲೆ . ನಿನ್ನ ಮನಸ್ಸಿನ ತುಂಬ ತುಂಬಿಕೊಂಡಿರುವುದು ಕಲ್ಯಾಣದ ಪತನ , ಕಲಚುರ್ಯರ ಅಸ್ತಮಾನ ಅಷ್ಟೇ ತಾನೆ? ಈ ಜಗತ್ತು ಹುಟ್ಟಿದ ಮೇಲೆ ಬಾಳಿದ, ಬೆಳಗಿದ, ಅವಸಾನ ಕಂಡ, ಜನ ಜೀವನಗಳೆಷ್ಟು? ನಾಗರಿಕತೆಗಳೆಷ್ಟು? ಸಾಮ್ರಾಜ್ಯಗಳೆಷ್ಟು? ಸಂಸ್ಕೃತಿಗಳೆಷ್ಟು? ಎಲ್ಲದರ ಹಿಂದೆಯೂ ಇದ್ದುದು ನಿನ್ನದೇ ಆವುಟ. ಈಗ ಆ ಎಲ್ಲವನ್ನೂ ಮರೆತವಳಂತೆ ಕಲ್ಯಾಣವನ್ನು ಮಾತ್ರ ಮುಂದೊಡ್ಡುತ್ತಾ ನನ್ನೊಡನೆ ಸೆಣಸುವ ಹುಚ್ಚು ನಿನಗೇಕೆ ?‘ ಎಂದು ಅಲ್ಲಮ ಮರು ಪ್ರಶ್ನಿಸುತ್ತಾನೆ. 

ಆದರೆ ಗೆಲ್ಲುವ ಹಟ ಹಿಡಿದ ಮಾಯೆ, `ಜಗತ್ತಿನ ಪ್ರಶ್ನೆ ಬೇಡ, ಜಗತ್ತು ಯಾವುದನ್ನೂ ಪ್ರಶ್ನಿಸಲಿಲ್ಲ ! ಪ್ರವಾಹದಲ್ಲಿ ಬಿದ್ದ ಮರದಂತೆ ಕೊಂಡೊಯ್ದತ್ತ ಪಯಣಿಸುವ ಅಸ್ವತಂತ್ರ ಪಯಣ ಅದರದ್ದು ! ಹುಟ್ಟಿದ ಅನಂತ ಜೀವಿಗಳಲ್ಲಿ ಸೆಣಸುವವರ ಸಂಖ್ಯೆ ವಿರಳ. ಅಂಥ ವಿರಳ ಪಂಕ್ತಿಯವರು ಅನೇಕ ಶತಮಾನಗಳಿಗೊಬ್ಬರು  ಜನ್ಮ ತಳೆಯುತ್ತಾರೆ. ನೀನು ಅಂಥವರಲ್ಲೊಬ್ಬ. ಆದ್ದರಿಂದಲೇ ನಿನ್ನೊಡನೆ ಸೆಣಸುವ ಬಯಕೆ ನನಗೆ‘ ಅನ್ನುತ್ತಾಳೆ. 

`ಸೆಣಸು ಎಲ್ಲಿದೆ ಮಾಯೆ? ಕೇವಲ ಕಲ್ಯಾಣ ಮಾತ್ರವಲ್ಲ , ಈ ಜಗತ್ತು ಇದರ ಆಧಾರವಾಗಿರುವ ಈ ತಾರಾಮಂಡಲ ಎಲ್ಲ ಕಳಚಿ ಬಿದ್ದರೂ, ಅಗಣಿತ ಅನಂತ ಸಹಸ್ರ ಕೋಟಿ ಲೀಲಾಜಗತ್ತುಗಳನ್ನು ಹೊಂದಿರುವ ಮೂಲ ಪ್ರಕೃತಿಗೆ ಯಾವ ಧಕ್ಕೆ? ಈ ತೋರಿಕೆಯ ವಿಶ್ವಂಭರ ಚದುರಂಗದಾಟದಲ್ಲಿ ಸೆಣಸೂ ಇಲ್ಲ , ಸೋಲೂ ಇಲ್ಲ , ಗೆಲುವು ಮೊದಲೇ ಇಲ್ಲ . ಮೂಲ ಪ್ರಕೃತಿಗೆ ನಾಶವೂ ಇಲ್ಲ ನಷ್ಟವೂ ಇಲ್ಲ ಎಂಬುದು ನಿನಗೂ ಗೊತ್ತು, ನನಗೂ ಗೊತ್ತು.‘ ಅನ್ನುತ್ತಾನೆ ಅಲ್ಲಮ.

ಅಲ್ಲಮನ ಮಾತಿನಿಂದ ಮಾಯೆಗೆ ಅಚ್ಚರಿಯೇ ಆಗುತ್ತದೆ. ಹಾಗಾದರೆ ಯಾರಿಗೂ ಯಾವುದರಿಂದಲೂ ಲಾಭವಾಗಲೀ ನಷ್ಟವಾಗಲೀ ಇಲ್ಲವಾದಮೇಲೆ ಕಲ್ಯಾಣದಲ್ಲಿ ನಡೆಸಿದ ಸುಧಾರಣೆಗಳು, ಅನುಭವ ಮಂಟಪ – ಗೋಷ್ಠಿಗಳು, ಸಾಧನೆ, ವಿರಕ್ತಿ ಎಲ್ಲಕ್ಕೂ ಅರ್ಥವೇನು ಹಾಗಾದರೆ! ಪ್ರಭುದೇವನ ಮಾತುಗಳಿಂದ ಆವೇಶ ತಗ್ಗುತ್ತಾ ಹೋಗುವ ಮಾಯೆ ತನ್ನ ಕುತೂಹಲವನ್ನು ಹೊರಗೆಡವುತ್ತಾಳೆ. `ಹಾಗಾದರೆ ನಿನ್ನ ಕೈಂಕರ್ಯಗಳ ಗತಿ ಏನು? ಈವರಗಿನ ಮಾನವ ಪ್ರಯೋಗಗಳ ಗತಿ, ಮಾನವ ಜ್ಞಾನಪರಿಧಿಯ ಸ್ಥಿತಿ – ಇವೆಲ್ಲ ಏನು?‘ ಎಂದು ಪ್ರಶ್ನಿಸುತ್ತಾಳೆ.

ಅವಳ ಪ್ರಶ್ನೆಗೆ ಸಾವಧಾನವಾಗಿಯೇ ಉತ್ತರಿಸುವ ಅಲ್ಲಮ, `ಯಾವುದು ಕೈಂಕರ್ಯ? ಯಾವುದು ವ್ಯರ್ಥ? ಇಡೀ ಜಗತ್ತೇ ಕೈಂಕರ್ಯ! ಇಡೀ ಜಗತ್ತೇ ವ್ಯರ್ಥ! ನೀನೂ ನಾನೂ ಎಲ್ಲ , ಎಲ್ಲವೂ ವ್ಯರ್ಥ. ಈ ವ್ಯರ್ಥಾಲಾಪದ ಮೂಲ ವಾಹಿನಿ ನೀನೇ ! ನೀನೇ ವ್ಯರ್ಥ !  ಕೇವಲ ಛಾಯೆಯಾದ ಮಾಯೆಯೇ ಮೂಜಗವನ್ನು ಕಂಗೆಡಿಸುವಳಾದರೆ  ಛಾಯೆಗೆ ಮೂಲವಾದ ಬೆಳಗಿನ ಬೆಳಗು,  ಬರಿಯ ಬಯಲಿನ ಬೆಳಗಾಗಿ ಹೊಳೆಯತೊಡಗಿದರೆ ಇನ್ನೆಲ್ಲಿಯ ಮಾಯೆ?  ಮಾಯೆಯ ಗೆಲುವು ಎನ್ನುವುದು ಬರಿಯ ಭ್ರಾಂತಿ ‘ ಎನ್ನುತ್ತಾನೆ. ಮತ್ತೂ ಮುಂದುವರಿದು, `ಯಾವುದು ಕೇವಲ ಜ್ಞಾನ ಮಾತ್ರವೇ ಆಗಿದೆಯೋ ಅದು ಬೆಳಗು; ಮಹಾಬೆಳಗು. ಸ್ವಾರ್ಥಮೂಲದಿಂದ ಕೂಡಿದ್ದರೆ  ಅದು ಕಾರ್ಕೋಟಕ ಕತ್ತಲು. ಸುಧಾರಣೆ ಮಾನವಾನುಕಂಪದಿಂದ ಕೂಡಿ, ವೈಯುಕ್ತಿಕ ಕ್ಷಣಿಕ ಹಿತಾಸಕ್ತಿರಹಿತವಾಗಿದ್ದರೆ ಅದು ಅಮೃತ; ಕೇವಲ ತನ್ನ ಬಾಳು ಹಿತವಾಗಲೆಂಬ ಸ್ವಾರ್ಥದ ಮಾಯೆಯಿಂದ ಮನಸ್ಸು ಹೆಣೆಯುವ ವಂಚನೆಯ ಜಾಲವಾಗಿದ್ದರದು ವಿಷ. ವಿವರಿಸಲಾಗದ ಸತ್ಯವನ್ನು, ಅರಿಯಲಾಗದ ತತ್ತ್ವವನ್ನು ಪಿತ್ರಾರ್ಜಿತ ಆಸ್ತಿಯಂತೆ ಪರಿಭಾವಿಸಿ ಮುಗ್ಧರ ಮನಸ್ಸಿನ ಜೊತೆ ಆಟವಾಡುವ ವಿಕೃತ ಮನಸ್ಸುಗಳ  ಕೈವಾಡವಷ್ಟೆ ಅದು. ಅದು ಸತ್ಯವಲ್ಲ , ಕೇವಲ ಅಂಧಕಾರ. ಅಲ್ಲೆಲ್ಲಾ ನಿನ್ನದೇ ಆಟ. ನಿನ್ನದೇ ಪೊಳ್ಳು ಅಟ್ಟಹಾಸ‘ ಎನ್ನುತ್ತಾನೆ.

ಅಲ್ಲಮನ ಅಂತರಂಗದ ನಿಗೂಢತೆಯನ್ನು ಕಂಡು ಕಂಗೆಟ್ಟ ಮಾಯೆ, ತನಗೆ ತಮಂಧ ಮೂಲವಾದರೆ, ಅಲ್ಲಮನ ಮೂಲ ಬಯಲ ಬೆಳಗಿನ ಮಹಾಪೂರವೆಂಬುದನ್ನು ಅರಿಯುತ್ತಾಳೆ. ಇನ್ನು ಇವನೆದುರು ತನ್ನ ಆಟ ನಡೆಯುವುದಿಲ್ಲ ಎಂದು ಮನಗಂಡು ಬಂದ ದಾರಿ ಹಿಡಿಯುತ್ತಾಳೆ.

ಅಲ್ಲಮ ಮತ್ತೆ ತನ್ನ ಮಹಾಮೌನದ ಶೂನ್ಯ ನಿರಾಲಂಬ ಸ್ಥಿತಿಗೇರಿ ಉರಿಯುಂಡ ಕರ್ಪೂರದಂತೆ ಮಹಾಬೆಳಕಿನ ಬಯಲಾಗಿ ಉಳಿಯುತ್ತಾನೆ. ಇಂದಿಗೂ ಸಾಧಕರ, ಅನುಭಾವಿಗಳ ಕಂದೀಲಾಗಿ ಉಳಿದಿದ್ದಾನೆ ಕೂಡಾ.

ನಾಳೆ (ಮಾರ್ಚ್ 24) ಅಲ್ಲಮಪ್ರಭು ಜಯಂತಿ

 

3 Comments

  1. ಗೌರವಾನ್ವಿತ ಸಂಪಾದಕರಿಗೆ ನಮಸ್ಕಾರಗಳು. ನಾನು ಅರಳಿಮರ’ದ ನಿಯಮಿತ ಓದುಗ. ಈ ಲೇಖನದಿಂದ ಅಲ್ಲಮ ಪ್ರಭು ಬಗ್ಗೆ ವ್ಯಾಪಕವಾಗಿ ಓದಲು ಪ್ರೇರಣೆಯಾಯಿತು. ಆಪ್ತವಾಗಿದೆ ಬರೆಹ. ಧನ್ಯವಾದಗಳು.

  2. ಅಲ್ಲಮರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಇಲ್ಲಿ ಅವರನ್ನು ಬಹುವಚನದಲ್ಲಿ ಸಂಭೋಧಿಸಿದ್ದರೆ ಇನ್ನೂ ಉತ್ತಮವಾಗಿರುತಿತ್ತು. ಅಂತಹ ಗುರು ‘ ಗಳ ಬಗ್ಗೆ ತಿಳಿಯುವದರೊಂದಿಗೆ, ಭಕ್ತಿಯ ಸಮರ್ಪಣೆಯು ಆಗುವಂತಾಗುತ್ತದೆ…..

Leave a Reply