ಪ್ರೇಮ, ಬೇಟೆಯಾಡಲೇಬೇಕಾದಂಥ ವ್ಯಾಘ್ರ! : ಸೂಫಿ ನಜತ್ ಒಝ್ಕಾಯ

ಮೂಲ : ನಜತ್ ಒಝ್ಕಾಯ | ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರೇಮ,
ಹುಲಿಯ ಅವತಾರ.
ಅಪರೂಪದ ಬೆಕ್ಕು , ಚೆಲುವಿನ ಬನಿ,
ಚರ್ಮದ ಕೆಳಗೆ ಹುರಿಗಟ್ಟಿರುವ
ಸ್ನಾಯುಗಳ ಮಾಯಗಾರ.
ಬದುಕು-ಸಾವಿನ ತಕ್ಕಡಿಯ
ತನ್ನ ನಿಷ್ಠುರ ದವಡೆಯಲ್ಲಿ ಸರಿದೂಗಿಸುವ
ಗಂಭೀರ ವ್ಯಾಪಾರಿ.

ಪ್ರೇಮ ಊಹಾತೀತ,
ಇನ್ನೇನು ಜಾಡು ಸಿಕ್ಕಿತು ಎನ್ನುವಾಗಲೇ
ಹೆಜ್ಜೆ ಅಳಿಸಿ ಹಾಕಿಬಿಡುವ ಚತುರ ಚೋರ
ಕಾಯುವ ನಾಟಕವಾಡುವ ವೇಷಧಾರಿ,
ಕೊಲ್ಲಲು ಹಾರುವ ತನಕ
ಸದ್ದು ಮಾಡದೇ ಸುಮ್ಮನಿದ್ದುಬಿಡುವ ತಂತ್ರಗಾರ,
ಎಂಥ ಕಾಡಿನ ಗರ್ಭದಲ್ಲೂ
ಬೇಟೆಯ ವಾಸನೆ
ಕ್ಷಣಮಾತ್ರದಲ್ಲಿ ಪತ್ತೆಹಚ್ಚಿಬಿಡುವ ಚಾಣಾಕ್ಷ ಗೂಢಚಾರ.

ಸ್ವರ್ಗ, ನರಕ ಎರಡರಲ್ಲೂ
ಪ್ರೇಮದ್ದೇ ಸರ್ಕಾರ.
ಬಿಸಿ ಉಸಿರಿನಿಂದ ಜೀವ ತುಂಬುತ್ತದೆಯಾದರೂ
Gರ್ಜಿಸಿಯೇ ಅಸ್ತಿತ್ವ ಘೋಷಣೆ
ಹರಿತ ಉಗುರುಗಳ ನಡುವೆಯೇ ಲಲ್ಲೆವಾತು.

ಪ್ರೇಮ, ಭಯಂಕರ.
ಎಂಥ ಧೈರ್ಯಶಾಲಿಗಳೂ
ಒಂದರೆಘಳಿಗೆ ಬೆಚ್ಚಿ ಬೀಳುತ್ತಾರೆ.

ನನ್ನ ಮಾತು ಕೇಳಿ
ಈಗಲೇ ಮನೆಗೆ ಹೋಗಿ
ಆಯುಧಗಳನ್ನು ಹರಿತ ಮಾಡಿಟ್ಟುಕೊಳ್ಳಿ
ಇದು ಬೇಟೆಯಾಡಲೇ ಬೇಕಾದಂಥ ವ್ಯಾಘ್ರ.

Leave a Reply