ಎಲ್ಲ ಮೋಡಗಳೂ ಮಳೆಗರಿಯುವುದಿಲ್ಲ : ಬೆಳಗಿನ ಹೊಳಹು

ಉತ್ತಮರು, ಧನಿಕರು, ಶಕ್ತರು ಇದ್ದಾರೆ ಎಂದ ಮಾತ್ರಕ್ಕೆ ಅವರಿಂದ ಸಹಾಯ ಅಪೇಕ್ಷಿಸುತ್ತೇವೆ. ಅವರಲ್ಲಿ ಅರ್ಹತೆ ಇದ್ದ ಮಾತ್ರಕ್ಕೆ ಅವರು ನಮಗೆ ಏನಾದರೂ ನೀಡಬೇಕೆಂದಿಲ್ಲ; ಹಾಗೂ ನಾವು ಕೂಡಾ ಅವರನ್ನು ಬೇಡಬೇಕೆಂದಿಲ್ಲ…. | ಸದುಕ್ತಿ ಕರ್ಣಾಮೃತ

ರೇ ರೇ ಚಾತಕ ಸಾವಧಾನಮನಸಾ ಮಿತ್ರ ಕ್ಷಣಂ ಶ್ರೂಯತಾ-
ಮಂಭೋದಾ ಬಹವೋ ವಸಂತಿ ಗಗನೇ ಸರ್ವೇSಪಿನೇತಾದೃಶಾಃ |
ಕೇಚಿದ್ವೃಷ್ಟಿಭಿರಾರ್ದ್ರಯಂತಿ ಧರಣೀಂ ಗರ್ಜಂತಿ ಕೇಚಿದ್ವೃಥಾ
ಯಂ ಯಂ ಪಶ್ಯತಿ ತಸ್ಯ ತಸ್ಯ ಪುರತೋ ಮಾ ಬ್ರೂಹಿ ದೀನಂ ವಚಃ  || ಸದುಕ್ತಿ ಕರ್ಣಾಮೃತ ||

cataka-1

ಅರ್ಥ: ಎಲೈ ಚಾತಕ! ಒಂದು ಕ್ಷಣ ನನ್ನ ಮಾತನ್ನು ಆಲಿಸಿ ಕೇಳು. ಆಕಾಶದಲ್ಲಿ ನೂರಾರು ಮೋಡಗಳೇನೋ ಇವೆ. ಆದರೆ ಅವೆಲ್ಲವೂ ಒಂದೇ ತೆರನಲ್ಲ. ಕೆಲವು ಮಳೆ ಸುರಿಸಿ ಭೂಮಿಯನ್ನು ತಣ್ಣಗೆ ಮಾಡುತ್ತವೆ. ಮಿಕ್ಕವುಗಳು ಬರಿಯ ಗರ್ಜನೆಯನ್ನು ಮಾತ್ರ ಮಾಡುತ್ತವೆ. ಆದುದರಿಂದ ಕಂಡ ಕಂಡ ಮೋಡಗಳ ಮುಂದೆಲ್ಲಾ ನಿಂತು ದೀನವಾಕ್ಯಗಳನ್ನು ಆಡಬೇಡ.

ಚಾತಕ ಪಕ್ಷಿ ಆಕಾಶದಿಂದ ನೇರವಾಗಿ ಬಂದು ಬೀಳುವ ನೀರಹನಿಗಳನ್ನು ಬಿಟ್ಟರೆ ಬೇರೆ ನೀರನ್ನು ಕುಡಿಯುವುದಿಲ್ಲ. ಆದ್ದರಿಂದ ಅದು ಸದಾ ಮೋಡಗಳಿಗೆ ಕಾಯುತ್ತಾ ಮುಗಿಲಿಗೆ ಮುಖ ಮಾಡಿ ಕುಳಿತಿರುತ್ತದೆ.
ಇಂಥಾ ಚಾತಕ ಪಕ್ಷಿಗೆ, “ಮೋಡಗಳಲ್ಲಿ ಎಲ್ಲವೂ ಮಳೆ ಸುರಿಸುವುದಿಲ್ಲ. ನಾವು ಕಾಣುವ ಪ್ರತಿಯೊಬ್ಬ ಧನಿಕನೂ ದಾನಿಯಲ್ಲ. ನಾವು ನೋಡುವ ಪ್ರತಿಯೊಬ್ಬ ಶಕ್ತನೂ ಉದಾರಿಯಲ್ಲ. ಆದ್ದರಿಂದ ಸುಮ್ಮನೆ ಅವುಗಳನ್ನು ಬೇಡಲುಹೋಗಬೇಡ” ಎಂದು ಗೆಳೆಯನೊಬ್ಬ ಸಲಹೆ ನೀಡುತ್ತಾನೆ.

ನಾವಾದರೂ ಹೀಗೆಯೇ. ಉತ್ತಮರು, ಧನಿಕರು, ಶಕ್ತರು ಇದ್ದಾರೆ ಎಂದ ಮಾತ್ರಕ್ಕೆ ಅವರಿಂದ ಸಹಾಯ ಅಪೇಕ್ಷಿಸುತ್ತೇವೆ. ಅವರಲ್ಲಿ ಅರ್ಹತೆ ಇದ್ದ ಮಾತ್ರಕ್ಕೆ ಅವರು ನಮಗೆ ಏನಾದರೂ ನೀಡಬೇಕೆಂದಿಲ್ಲ; ಹಾಗೂ ನಾವು ಕೂಡಾ ಅವರನ್ನು ಬೇಡಬೇಕೆಂದಿಲ್ಲ. ನಮ್ಮ ನಮ್ಮ ಕೆಲಸ ಮಾಡಿಕೊಂಡು ಹೋಗುವುದೇ ಸರಿಯಾದ ಮಾರ್ಗ.

(ಆಕರ : ಸುಭಾಷಿತ ಸಂಗ್ರಹಗಳು | ಎಂ.ಪಿ.ಲಕ್ಷ್ಮೀನೃಸಿಂಹ ಶಾಸ್ತ್ರಿ)

Leave a Reply