ಮೂಲ: ಹಫೀಜ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ನಾನು ಮಾತ್ರ ತಾಯಿಯಾಗಿಲ್ಲ
ನೀನೂ ಅಪ್ಪನಾಗಿದ್ದೀಯ ಭಗವಂತ
ಅದು ನಿನಗೆ ಒಂದು ರಾತ್ರಿಯ
ವಿನೋದವಾಗಿರಬಹುದು
ನನಗಲ್ಲ.
ನನ್ನ ಸುಂದರ ದೇಹದಿಂದ
ಉಕ್ಕುತ್ತಿರುವ ಪ್ರೀತಿಯ ಧಾರೆ
ನಿನಗಿನ್ನು ಬೇಡವಾಗಿರಬಹುದು,
ಆದರೆ ನನ್ನ ಹೃದಯವನ್ನು
ಮುಗ್ಧ ಹಸುಳೆಯಾಗಿಸಿದ್ದೀಯಲ್ಲ
ಅದರ ಹೊಣೆಯನ್ನಾದರೂ
ವಹಿಸಿಕೋ.
ನೀನು ನನ್ನ ಆತ್ಮಕ್ಕೆ ಪ್ರಾಣ ತುಂಬಿದಾಗಲೇ
ನನ್ನ ವಾರಸುದಾರನಿಗೆ ಜವಾಬ್ದಾರನಾದೆ.
ಈ ಅನಾಥ ಕಂದನೊಂದಿಗಿನ
ನಿನ್ನ ಮಲತಾಯಿ ಧೋರಣೆಯ ಬಗ್ಗೆ
ಎಲ್ಲ ಪ್ರವಾದಿಗಳಿಗೆ ದೂರುಕೊಡಬೇಕೆಂದು
ತೀರ್ಮಾನಿಸಿದ್ದೆ ನಿನ್ನೆ ರಾತ್ರಿ.
ಆಮೇಲೆ ನನಗೆ ನೆನಪಾಯಿತು
ಪ್ರೀತಿಯ ವ್ಯವಹಾರದಲ್ಲಿ
ಅವರೂ ನಿನ್ನಿಂದ ಸಾಕಷ್ಟು ವಂಚಿತರೇ.
ಅವರಿಗೆ ನಿನ್ನ ಬಗ್ಗೆ
ನನಗಿಂತ ಚೆನ್ನಾಗಿ ಗೊತ್ತು.
ನಾನಿನ್ನೇನು ಮಾಡಲಿ?