ವಿನಯವಂತಿಕೆ ಇದ್ದರೆ ಎಲ್ಲವೂ ದಕ್ಕುವುದು : ಸುಭಾಷಿತ

ವಿನಯವಿಲ್ಲದ, ಅಹಂಕಾರಿ ಅಥವಾ ದರ್ಪವನ್ನು ಹೊಂದಿರುವ ಜನರು ಎಷ್ಟೇ ಐಶ್ವರ್ಯ, ಆರೋಗ್ಯ, ವಿದ್ಯಾವಂತರಾದರೂ ಅವರಿಗೆ ಬೆಲೆ ಇರುವುದಿಲ್ಲ…. | ಸುಭಾಷಿತ ಭಾಂಡಾಗಾರ

ದಕ್ಷಃ ಶ್ರಿಯಮಧಿಗಚ್ಛತಿ
ಪಥ್ಯಾಶೀ ಕಲ್ಯತಾಂ ಸುಖಮರೋಗೀ |
ಉದ್ಯುಕ್ತೋ ವಿದ್ಯಾಂತಂ
ಧರ್ಮಾರ್ಥಯಶಾಂಸಿ ಚ ವಿನೀತಃ ||
“ದಕ್ಷತೆಯನ್ನು ಹೊಂದಿರುವವರು ಐಶ್ವರ್ಯವನ್ನು ಹೊಂದುವರು. ಪಥ್ಯಾಹಾರವನ್ನು ಉಣ್ಣುವವರು ಆರೋಗ್ಯವನ್ನು ಹೊಂದುವರು. ಪರಿಶ್ರಮದಿಂದ ಅಭ್ಯಾಸ ಮಾಡುವವರು ವಿದ್ಯೆಯನ್ನು ಹೊಂದುವರು. ವಿನಯಶೀಲರಾದವರು ಧರ್ಮ, ಅರ್ಥ (ಸಂಪತ್ತು), ಯಶಸ್ಸುಗಳೆಲ್ಲವನ್ನೂ ಹೊಂದುವರು” ಎನ್ನುತ್ತದೆ ಸುಭಾಷಿತ ಭಾಂಡಾಗಾರ. ಈ ಸುಭಾಷಿತದ ರಚನೆಕಾರ ರವಿಗುಪ್ತನೆಂಬ ಸಂಸ್ಕೃತ ಕವಿ.

ಐಶ್ವರ್ಯ ಸುಮ್ಮನೆ ಒಲಿದುಬರುವುದಿಲ್ಲ. ಶಿಸ್ತು, ಸಾಮರ್ಥ್ಯಗಳಿಂದ ದುಡಿಮೆ ಮಾಡಿದರಷ್ಟೆ ಅದು ಒಲಿಯುವುದು. ದಕ್ಷತೆಯಿಂದ ಕೆಲಸ ಮಾಡಿದರಷ್ಟೆ ನಮ್ಮಲ್ಲಿ ಹಣ ಬಂದು ಸೇರುವುದು.
ಇನ್ನು ಪಥ್ಯಾಹಾರದ ವಿಷಯಕ್ಕೆ ಪ್ರತ್ಯೇಕ ವಿವರಣೆ ಬೇಕಿಲ್ಲ. “ಊಟ ಬಲ್ಲವರಿಗೆ ರೋಗವಿಲ್ಲ” ಎಂದು ನಮ್ಮ ಗಾದೆಗಳೂ ಹೇಳುತ್ತವೆ. ಸುಭಾಷಿತದ ಎರಡನೆ ಸಾಲು ಪ್ರತಿಪಾದಿಸುತ್ತಿರುವುದು ಅದನ್ನೇ.

ಅಧ್ಯಯನ, ಅಭ್ಯಾಸ ನಡೆಸುವ ಉತ್ಸುಕತೆ ಇಲ್ಲದೆ ಹೋದರೆ ವಿದ್ಯೆ ಒಲಿಯುವುದಿಲ್ಲ. ವಿದ್ಯೆ ಒಲಿಯುವುದೆಂದರೆ ಅಂಕ ಗಳಿಕೆಯಲ್ಲಿ ಹೆಚ್ಚಳವಲ್ಲ. ನೆನಪಿನ ಶಕ್ತಿ ಇರುವ ಯಾರೇ ಆದರೂ ಅಂಕಗಳನ್ನು ಪಡೆದುಬಿಡಬಹುದು. ಆದರೆ ವಿದ್ಯೆಯನ್ನು ಹೃದ್ಗತ ಮಾಡಿಕೊಳ್ಳಲು, ಅದನ್ನು ನಿಜಾರ್ಥದಲ್ಲಿ ಹೊಂದಲು ಅಭ್ಯಾಸ ಅತ್ಯವಶ್ಯವಾಗಿದೆ.
ಮತ್ತು ಮೇಲಿನ ಎಲ್ಲವೂ ನಮಗೆ ದಕ್ಕಬೇಕೆಂದರೆ, ನಮ್ಮ ಜೊತೆ ಉಳಿಯಬೇಕೆಂದರೆ, ನಮ್ಮಲ್ಲಿ ವಿನಯವಂತಿಕೆ ಇರಬೇಕು. ವಿನಯವಿಲ್ಲದ, ಅಹಂಕಾರಿ ಅಥವಾ ದರ್ಪವನ್ನು ಹೊಂದಿರುವ ಜನರು ಎಷ್ಟೇ ಐಶ್ವರ್ಯ, ಆರೋಗ್ಯ, ವಿದ್ಯಾವಂತರಾದರೂ ಅವರಿಗೆ ಬೆಲೆ ಇರುವುದಿಲ್ಲ.

Leave a Reply