ಯೂಜಿ ಜೊತೆ ಮಾತುಕಥೆ #2

‘ಯುಜಿ’ ಎಂದೇ ದೇಶವಿದೇಶಗಳಲ್ಲಿ ಖ್ಯಾತಿ ಪಡೆದಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿಯವರೊಂದಿಗೆ ಅವರ ಅನುಯಾಯಿಗಳು/ಆಸಕ್ತರು ನಡೆಸಿ ಮಾತುಕತೆಯ ತುಣುಕುಗಳು ಇಲ್ಲಿವೆ. ಅರಳಿಬಳಗದ ಚಿದಂಬರ ನರೇಂದ್ರ ಈ ಸಂವಾದಗಳನ್ನು ಕನ್ನಡಕ್ಕೆ ತಂದಿದ್ದಾರೆ….

ಪ್ರಶ್ನೆ : ಜಗತ್ತಿನಲ್ಲಿ ಮಾನವ ಜನಾಂಗ ಸೃಷ್ಟಿಯಾಗಿರೋದು ಒಂದು ಘನವಾದ ಉದ್ದೇಶಕ್ಕಾಗಿ ಎಂದು ಹಿಂದಿನ ಚಿಂತಕರು, ತತ್ವಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ, ಈ ಬಗ್ಗೆ ನೀವು ಏನು ಹೇಳುತ್ತೀರಿ?

ಯುಜಿ : ಬದುಕಿನ ಅರ್ಥದ ಬಗ್ಗೆ ನಾನು ಹೇಳುವುದು ಮುಖ್ಯವಲ್ಲ, ನೀವು ಏನು ಹೇಳುತ್ತೀರಿ? ಹಿಂದಿನ ಚಿಂತಕರ ಮಾತು ನಿಜವೋ ಸುಳ್ಳೋ ಯಾರಿಗೆ ಏನು ಉಪಯೋಗ? ಈ ಬಗ್ಗೆ ತಿಳಿದುಕೊಳ್ಳಲು ನೀವೆನಾದರೂ ಸ್ವಂತ ಪ್ರಯತ್ನ ಮಾಡಿದ್ದೀರಾ? ನನ್ನ ಪ್ರಕಾರ ಅಂಥ ಯಾವ ಘನ ಉದ್ದೇಶವೂ ಮನುಷ್ಯ ಬದುಕಿಗೆ ಇಲ್ಲ, ಅಕಸ್ಮಾತ್ ಇದ್ದರೂ ಅದನ್ನು ತಿಳಿದುಕೊಳ್ಳುವ ಯಾವ ಸಾಧನವೂ ಇಲ್ಲ.
ಮಾನವ ಬದುಕಿಗೆ ಒಂದು ಮಹಾನ್ ಉದ್ದೇಶವಿದೆ ಎಂದು ತಲೆ ತಲಾಂತರದಿಂದ ನಮ್ಮನ್ನು ನಂಬಿಸಲಾಗಿದೆ ಮತ್ತು ಈ ನಂಬಿಕೆಯೇ ಮಾನವ ಜನಾಂಗದ ಅಪಾರ ದುಃಖಕ್ಕೆ ಕಾರಣವಾಗಿದೆ. ಸೃಷ್ಟಿಯಲ್ಲಿನ ಎಲ್ಲ ಪ್ರಾಣಿ ಪಕ್ಷಿಗಳಿಗಿಂತ, ಜೀವ ಜಂತುಗಳಿಗಿಂತ ಹಿರಿದಾದ ಜವಾಬ್ದಾರಿ ಮನುಷ್ಯನದು ಮತ್ತು ಬಾಕಿ ಇಡೀ ಪ್ರಕೃತಿ ಮನುಷ್ಯನ ಉಪಯೋಗಕ್ಕಾಗಿ ಎನ್ನುವ ಶಿಕ್ಷಣವೇ ನಮ್ಮ ಇಂದಿನ ಎಲ್ಲ ಪರಿಸರದ ಸಮಸ್ಯೆಗಳಿಗೆ ಕಾರಣವಾಗಿದೆ.

ನಾವು ಈಗ ನಮ್ಮನ್ನು ವಿಸ್ಫೋಟಗೊಳಿಸಿಕೊಳ್ಳುವ ಹಂತಕ್ಕೆ ಬಂದು ತಲುಪಿದ್ದೇವೆ. ಭೂಮಿ ಅಪಾಯದಲ್ಲಿ ಇಲ್ಲ, ನಾವು ಅಪಾಯದಲ್ಲಿದ್ದೇವೆ. ಭೂಮಿಯ ಪರಿಸರವನ್ನ ನಾವು ಎಷ್ಟು ಹಾಳುಮಾಡಿದರೂ ಸಹಿಸುವ ಶಕ್ತಿ ಭೂಮಿಗಿದೆ. ಇಡೀ ಮಾನವ ಜನಾಂಗವೇ ನಾಶವಾದರೂ ಈ ಮನುಷ್ಯ ದೇಹಗಳನ್ನು ಏನು ಮಾಡಬೇಕೆಂಬುದು, ಈ ದೇಹಗಳನ್ನ ಪುನರ್ ಬಳಿಕೆ ಮಾಡಿ ಜಗತ್ತಿನ ಶಕ್ತಿ ಸಮತೋಲನವನ್ನ ಹೇಗೆ ಕಾಪಾಡಿಕೊಳ್ಳಬೇಕೆಂಬುದು ಭೂಮಿಗೆ ಚೆನ್ನಾಗಿ ಗೊತ್ತು. ತನ್ನ ಶಕ್ತಿ ಸಮತೋಲನವನ್ನ ಕಾಯ್ದುಕೊಳ್ಳುವಲ್ಲಿ ಮಾತ್ರ ಭೂಮಿಗೆ ಆಸಕ್ತಿ. ಆದ್ದರಿಂದಲೇ ಭೂಮಿಯ ಮೇಲಿನ ಯಾವ ಜೀವಿಗಿಂತಲೂ, ಯಾವ ವಸ್ತುವಿಗಿಂತಲೂ ಒಂದು ಗುಲಗಂಜಿಯಷ್ಟೂ ಹೆಚ್ಚಿನ ಮಹತ್ವವೂ ನಮಗಿಲ್ಲ. ನಮ್ಮ ಸುತ್ತ ಹಾರಾಡುವ ನೊಣ, ರಕ್ತ ಹೀರುವ ಸೊಳ್ಳೆ, ಸುತ್ತ ಓಡಾಡುವ ಇರುವೆಗಿಂತಲೂ ಮಹತ್ವದ ಬದುಕಿನ ಉದ್ದೇಶ ಮನುಷ್ಯನಿಗಿಲ್ಲ. ನಾನು ಹೀಗೆಲ್ಲ ಹೇಳಬಹುದು ಆದರೆ ನಿಮ್ಮ ತಿಳುವಳಿಕೆ ಏನು? ಅದು ಮುಖ್ಯ. ಬದುಕಿನ ಉದ್ದೇಶದ ಬಗ್ಗೆ ನಿಜವಾಗಿಯೂ ನಮಗೆ ಗೊತ್ತಿಲ್ಲ, ಗೊತ್ತಾಗುವ ಸಾಧ್ಯತೆಯೂ ಇಲ್ಲ. ಈ ಭೂಮಿ ಸೃಷ್ಟಿಯಾಗಿದ್ದು ಬಿಗ್ ಬ್ಯಾಂಗ್ ಕಾರಣವಾಗಿಯಾ, ಎಲ್ಲಿಯದೋ ಹೈಡ್ರೋಜನ್ ಕಣಗಳಿಂದಾಗಿಯಾ ಅಥವಾ ಭಗವಂತ ಸೃಷ್ಟಿ ಮಾಡಿದನಾ ? ಈ ಬಗ್ಗೆ ವಿಜ್ಞಾನಿಗಳು ಮಾತನಾಡಲಿ ಬಿಡಿ, ಕಾಲ ಕಾಲಕ್ಕೆ ಬದಲಾಗುತ್ತಿರುವ ಅವರ ಮಾತುಗಳನ್ನ ನಾವು ಕೇಳುತ್ತಲೇ ಬಂದಿದ್ದೆವೆ. ಇವರು ಕಂಡುಕೊಂಡ ಉತ್ತರಗಳಿಂದ , ಇವರು ಗಳಿಸಿಕೊಂಡಿರುವ ನೋಬೆಲ್ ಪ್ರೈಜ್ ಗಳಿಂದ ಪ್ರಶ್ನೆ ಬಗೆಹರಿದಿದೆಯೇ? ನಿಜವಾಗಿಯೂ ಬದುಕುತ್ತಿರುವ ಯಾವ ಜೀವಿಯೂ, ಬದುಕಿನ ಅರ್ಥದ ಬಗ್ಗೆ, ಬದುಕಿನ ಉದ್ದೇಶದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವ ಸುಮ್ಮನ್ ಬದುಕುತ್ತ ಹೋಗುತ್ತಾನೆ.

ಪ್ರಶ್ನೆ : ಮನುಷ್ಯ ತನ್ನ ಬದುಕಿಗೆ ಉದ್ದೇಶವನ್ನು ಹೊಂದುವುದು ತಪ್ಪೆ ?

ಯುಜಿ : ಉಡುವ, ಉಣ್ಣುವ, ಇರುವ ಮತ್ತು ಬದುಕಿನ ಐಷಾರಾಮದ ಸಮಸ್ಯೆಗಳನ್ನು ಬಗೆಹರಿಸಿಕೊಂಡಿರುವ ಮನುಷ್ಯನಲ್ಲಿ ಈ ಪ್ರಶ್ನೆ ಧಿಢೀರ್ ನೇ ಉದ್ಭವವಾಗುತ್ತದೆ. ಇಷ್ಟೆನಾ ಬದುಕು? ಇದಕ್ಕಿಂತ ಬದುಕಿನ ಅರ್ಥ ಬೇರೆ ಇದೆಯೇ? ಇವರು ಹೀಗೆ ಪ್ರಶ್ನೆ ಮಾಡುವುದೇ ತಡ ಒಂದು ಇಡೀ ವ್ಯಾಪಾರಿ ವಲಯ ಅಧ್ಯಾತ್ಮದ ಹೆಸರಲ್ಲಿ ಇವರ ಸುಲಿಗೆಗೆ ತಯಾರಾಗುತ್ತದೆ ಮತ್ತು ಮನುಷ್ಯನ ಬದುಕು ಮಾಫಿಯಾ ಒಂದರ ಸುಳಿಗೆ ಸಿಕ್ಕಿಹಾಕಿಕೊಳ್ಳುತ್ತದೆ.

Leave a Reply