ಅಧ್ಯಾತ್ಮಿಕ ಸಾಧನೆಗಾಗಿ ಜಗತ್ತಿನೊಡನೆ ನಾವು ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆಯೇ, ಪರ್ವತಗಳೂ, ಕಣಿವೆಗಳು, ಝರಿ, ನದಿ, ಸಮುದ್ರಗಳೂ ಮತ್ತು ಸಮಸ್ತ ಪ್ರಕೃತಿ ನಮ್ಮ ಸಂಕಲ್ಪದ ದನಿಯನ್ನು ಪ್ರತಿಧ್ವನಿಸಲು ಶುರು ಮಾಡುತ್ತವೆ ~ ಡೆಂಗ್ ಮಿಂಗ್-ದಾವೋ | ಅನುವಾದ : ಚಿದಂಬರ ನರೇಂದ್ರ
ಇದು ಆರಂಭದ ಘಳಿಗೆ,
ಎಲ್ಲ ಶುಭ ಶಕುನಗಳು
ನಮ್ಮನ್ನು ಸ್ವಾಗತಿಸಲು ಸಿದ್ಧವಾಗಿವೆ.
~
ಆರಂಭದಲ್ಲಿ ಎಲ್ಲವೂ ಆಶಾದಾಯಕ. ಒಂದು ಹೊಸ ಶುರುವಾತಿಗೆ ನಾವು ಸರ್ವ ಸನ್ನದ್ಧರಾಗಿರಾಗುತ್ತಿದ್ದೇವೆ. ಅದ್ಭುತ ಪ್ರಯಾಣಕ್ಕೆ ನಾವು ಸಿದ್ಧರಾಗುತ್ತಿರುವ ಈ ಮೊದಲ ಘಳಿಗೆಯಲ್ಲಿಯೇ ಕೈ ಕೈ ಹಿಡಿದುಕೊಂಡು ನಿಂತಿವೆ, ನಮ್ಮ ಆಶಾವಾದ, ನಮ್ಮ ನಂಬಿಕೆ, ನಮ್ಮ ಸಂಕಲ್ಪ, ಮತ್ತು ನಮ್ಮ ಮುಗ್ಧತೆ.
ಆರಂಭಕ್ಕೆ ಬಹು ಮುಖ್ಯವಾಗಿ ಬೇಕಾದದ್ದು ಸಂಕಲ್ಪ. ಪ್ರತಿ ದಿನ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಗಟ್ಟಿ ನಿರ್ಧಾರ. ಹೊರಗಿನ ಸಂಗತಿಗಳೂ ಘಟನಾವಳಿಗಳೂ ಅನವಶ್ಯಕ. ನಮ್ಮ ಒಳದನಿಯ ಜೊತೆ ಮಾತ್ರ ನಮ್ಮ ಗೆಳೆತನವನ್ನು ಖಾತ್ರಿ ಮಾಡಿಕೊಳ್ಳಬೇಕಾದ ಸಂದರ್ಭವಿದು. ಏಕಾಂಗಿಯಾಗಿಯೇ, ಎಲ್ಲ ಮುಖವಾಡಗಳನ್ನು ಕಳಚಿ ದಾರಿಗಿಳಿದಾಗ ಮಾತ್ರ ಬದುಕಿನ ಎಲ್ಲ ಕಟು/ಮಧುರ ವಾಸ್ತವಗಳ ಜೊತೆ ಸಂಧಾನ ಸಾಧ್ಯ. ಆದ್ದರಿಂದಲೇ, ನಮ್ಮನ್ನು ನಾವು ಸ್ವಯಂ ತಯಾರುಮಾಡಿಕೊಳ್ಳಬೇಕಿದೆ, ಬದುಕಿನ ಅಪ್ಪಟ ಅಧ್ಯಾತ್ಮಿಕ ಸತ್ವವನ್ನು ಅನುಭವಿಸಲು, ನಮ್ಮನ್ನು ನಾವು ತಕ್ಕುದಾದ ಸಾಧನವಾಗಿ ಬದಲಾಯಿಸಿಕೊಳ್ಳಬೇಕಿದೆ.
ನಾವು ಗಟ್ಟಿ ಮನಸ್ಸು ಮಾಡಿದ ಕ್ಷಣದಲ್ಲಿಯೇ ಜಗತ್ತು, ನಮ್ಮ ಈ ನಿರ್ಧಾರವನ್ನು ಕಾರ್ಯಗತಗೊಳಿಸುವ ಸಲುವಾಗಿ ತಾನೂ ಕಂಕಣ ತೊಟ್ಟು ಸಿದ್ಧವಾಗುತ್ತದೆ. ಶುಭ ಶಕುನಗಳು ಮೂಢ ನಂಬಿಕೆಗಳಲ್ಲ, ಬದಲಾಗಿ ನಮ್ಮ ಧೃಢ ನಿರ್ಧಾರವನ್ನು ತಾನು ಅನುಮೋದಿಸಿರುವ ಬಗ್ಗೆ ಜಗತ್ತು, ನಮಗೆ ಖಚಿತಪಡಿಸುವ ಬಗೆ. “ ಕೆಹತೇ ಹೈ ಕಿಸೀ ಚೀಜ್ ಕೋ ಅಗರ್ ಶಿದ್ದತ್ ಸೇ ಚಾಹೋ, ತೋ ಸಾರೀ ಕಾಯ್’ನಾತ್ ಉಸೆ ತುಮ್ಸೆ ಮಿಲಾನೇ ಕಿ ಕೋಶಿಶ್ ಮೇ ಲಗ್ ಜಾತೀ ಹೈ” ಅನ್ನೋ ಪ್ರಸಿದ್ಘ ಮಾತು ನಿಮಗೆ ನೆನಪಿರಬಹುದು.
ಅಧ್ಯಾತ್ಮಿಕ ಸಾಧನೆಗಾಗಿ ಜಗತ್ತಿನೊಡನೆ ನಾವು ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆಯೇ, ಪರ್ವತಗಳೂ, ಕಣಿವೆಗಳು, ಝರಿ, ನದಿ, ಸಮುದ್ರಗಳೂ ಮತ್ತು ಸಮಸ್ತ ಪ್ರಕೃತಿ ನಮ್ಮ ಸಂಕಲ್ಪದ ದನಿಯನ್ನು ಪ್ರತಿಧ್ವನಿಸಲು ಶುರು ಮಾಡುತ್ತವೆ.