ಮೊದಲು ನಿನ್ನ ಬಗ್ಗೆ ಆಲೋಚಿಸು, ಅನಂತರ ಮತ್ತೊಂದರ ತಂಟೆಗೆ ಹೋಗು! : ಅಧ್ಯಾತ್ಮ ಡೈರಿ

ಮೂಲತಃ ಪ್ರಾಚೀನ ಹೇಳುವುದೂ ಇದನ್ನೇ. ಝೆನ್ ತಾವೋ ಸೂಫಿ ಎಂದೆಲ್ಲ ಸುತ್ತಾಡಿ ಬಂದು ವಚನಗಳ ಪುಟ ತೆರೆದರೆ ಬಸವಣ್ಣನೂ ಅವೆಲ್ಲ ಹೇಳಿದ್ದನ್ನೆ ಹೇಳುತ್ತಾರೆ, “ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ಲೋಕದ ಡೊಂಕ ನೀವೇಕೆ ತಿದ್ದುವಿರಿ!?” | ಅಲಾವಿಕಾ

ನಮಗೆ ಏನು ಬೇಡವೆಂದು ಗೊತ್ತಿದೆ. ಆದರೆ ಏನು ಬೇಕೋ ಅದನ್ನು ಬೇರೆ ಯಾರಾದರೂ ಕೊಡಲೆಂದು ಕಾಯುತ್ತ ಕೂತಿದ್ದೇವೆ. ಆದ್ದರಿಂದಲೇ ನಾವು ವೈಯಕ್ತಿಕದಿಂದ ಹಿಡಿದು ರಾಷ್ಟ್ರೀಯ ಬದುಕಿನವರೆಗೆ ವಿಫಲವಾಗುತ್ತ ಸಾಗಿದ್ದೇವೆ.
ಕುಟುಂಬ, ಸಮಾಜದ ಮೂಲಘಟಕ ಅನ್ನೋದು ನಮಗೆ ಗೊತ್ತಿದೆ. ಈಗಿನ ದಿನಗಳಲ್ಲಿ ವ್ಯಕ್ತಿಯೇ ಸಮಾಜದ ಮೂಲಘಟಕವಾಗಿದ್ದಾನೆ/ಳೆ. ಪ್ರತಿಯೊಂದೂ ವೈಯಕ್ತಿಕ ನೆಲೆಯಲ್ಲಿ ನೋಡಲ್ಪಡುವ ಮತ್ತು ತೀರ್ಮಾನಿಸಲ್ಪಡುವ ಕಾಲದಲ್ಲಿ ನಾವಿದ್ದೇವೆ. ಈ ಕಾಲಧರ್ಮಕ್ಕೆ ಇದು ಹೀಗೇ ಇರಬೇಕಿದೆ ಬಹುಶಃ. ಮೂಲತಃ ಪ್ರಾಚೀನ ಹೇಳುವುದೂ ಇದನ್ನೇ. “ನೀನು ಚೆನ್ನಾಗಿರು, ನಿನ್ನ ಜಗತ್ತು ಚೆನ್ನಾಗಿರುತ್ತದೆ. ಖಾಲಿ ಪಾತ್ರೆಯಿಂದ ನೀನು ಯಾರಿಗೆ ತಾನೆ ಏನನ್ನಾದರೂ ಕೊಡಲು ಸಾಧ್ಯ!?” ಝೆನ್ ತಾವೋ ಸೂಫಿ ಎಂದೆಲ್ಲ ಸುತ್ತಾಡಿ ಬಂದು ವಚನಗಳ ಪುಟ ತೆರೆದರೆ ಬಸವಣ್ಣನೂ ಅವೆಲ್ಲ ಹೇಳಿದ್ದನ್ನೆ ಹೇಳುತ್ತಾರೆ, “ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ಲೋಕದ ಡೊಂಕ ನೀವೇಕೆ ತಿದ್ದುವಿರಿ!?”
ನಮಗೇನು ಬೇಕು? ವೈಯಕ್ತಿಕವಾಗಿ ಶಾಂತಿ, ನೆಮ್ಮದಿ. ಸಾಮಾಜಿಕವಾಗಿ ಸಮಾನತೆ, ಸಹಿಷ್ಣುತೆ. ರಾಜಕೀಯವಾಗಿ ಸುಭಿಕ್ಷ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ರಾಷ್ಟ್ರದ ಗುರುತಲ್ಲಿ ಗೌರವ… ಅಷ್ಟೇ ಅಲ್ಲವೆ?
ನಮಗೆ ಶಾಂತಿ ಯಾವಾಗ ಸಿಗುವುದು? ದುರಾಸೆ ತೊರೆದಾಗ. ಸ್ಪರ್ಧೆ ಬಿಟ್ಟು ಪ್ರಗತಿಯತ್ತ ಗಮನ ನೆಟ್ಟಾಗ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ರೋಗ ರುಜಿನಗಳನ್ನು ದೂರವಿಟ್ಟಾಗ. ಸಂಪನ್ಮೂಲಗಳನ್ನು ಮಿತವಾಗಿ ಬಳಸುತ್ತಾ ಮುಂದಿನ ಪೀಳಿಗೆಗೆ ಕಾಯ್ದಿರಿಸುವ ಕೆಲಸ ಮಾಡಿದಾಗ. ಎಲ್ಲಕ್ಕಿಂತ ಮುಖ್ಯವಾಗಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಂಗ್ರಹ ಮತ್ತು ಉಳಿತಾಯ ಮಾಡುವಾಗ. ಮಿನಿಮಲಿಸ್ಟ್ ಬದುಕನ್ನು ಬಾಳುವಾಗ. ಇವೆಲ್ಲ ನಮಗೆ ಶಾಂತಿ ನೆಮ್ಮದಿಗಳನ್ನು ನೀಡುವ ಅಂಶಗಳು.
ಬಸವಣ್ಣನವರಾಗಲೀ ಇನ್ನಾರೇ ಆಗಲಿ, ‘ಮೊದಲು ನಿನ್ನ ಬಗ್ಗೆ ಆಲೋಚಿಸು, ಅನಂತರ ಮತ್ತೊಂದರ ತಂಟೆಗೆ ಹೋಗು’ ಅನ್ನುವಾಗ ಅವರು ಸ್ವಾರ್ಥವನ್ನು ಬೋಧಿಸುವುದಿಲ್ಲ. ಅವರು ನಾವೆಷ್ಟು ಸತ್ವಶಾಲಿಗಳಾಗಿರಬೇಕು ಅನ್ನುವುದನ್ನು ಹೇಳುತ್ತಿದ್ದಾರೆ. ನಾವೇ ಟೊಳ್ಳಾಗಿದ್ದರೆ, ನಾವೇ ಕರ್ತವ್ಯಭ್ರಷ್ಟರೂ ಸಾಮಾಜಿಕ ಪ್ರಜ್ಞೆ ಇಲ್ಲದವರೂ ಆಗಿದ್ದರೆ, ಮತ್ತೊಬ್ಬರನ್ನು ಪ್ರಶ್ನಿಸುವ ಅಥವಾ ಪ್ರತಿಭಟಿಸುವ ನೈತಿಕತೆ ನಮ್ಮಲ್ಲಿ ಇರುತ್ತದೆಯೇ?
ನಾವು ನಮ್ಮ ಸಂಸ್ಕೃತಿಯ ಬಗ್ಗೆ ಮಾತಾಡುತ್ತೇವೆ ಮತ್ತು ಅದನ್ನು ಯಾರುಯಾರೋ ಕಾಪಾಡಬೇಕೆಂದು ಬಯಸುತ್ತೇವೆ. ಅಥವಾ ಇನ್ಯಾರೋ ಹಾಳು ಮಾಡುತ್ತಿದ್ದಾರೆಂದು ಆರೋಪ ಹೊರಿಸುತ್ತೇವೆ, ಅದಕ್ಕೆ ಮುನ್ನ ನಾವು ನಮ್ಮದು ಅಂದುಕೊಂಡಿರುವ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನಾದರೂ ಮಾಡಿದ್ದೇವೆಯೇ? ಅಥವಾ ನಾವು ಸಂಸ್ಕೃತಿಯ ವಿರುದ್ಧ ಮಾತಾಡುತ್ತೇವೆ. ಆಗಲೂ ನಮಗೆ ಸಂಸ್ಕೃತಿ ನಿರಂತರ ಹರಿಯುತ್ತಲೇ ಇರುವ ನೀರು ಅನ್ನುವ ಎಚ್ಚರ ಇರುವುದಿಲ್ಲ.
ಸಂಸ್ಕೃತಿ ನದಿಯ ಪಾತ್ರವಲ್ಲ, ಅದೊಂದು ನದಿ. ನದೀಪಾತ್ರವನ್ನು ದೇಶ ಅಂದುಕೊಂಡರೆ, ಸಂಸ್ಕೃತಿ ಅದರೊಳಗೆ ಹರಿಯುವ ನೀರು. ಅದು ಸಹಜವಾಗಿ ಬತ್ತುತ್ತದೆ, ನೆರೆಯುತ್ತದೆ, ಸೇರುತ್ತದೆ, ಸೇರಿಸಿಕೊಳ್ಳುತ್ತದೆ… ಏನೇ ಮಾಡಿದರೂ ಪ್ರತಿ ಕ್ಷಣವೂ ಅದರ ಪ್ರತಿ ಕಣವೂ ಹೊಸತಾಗಿಯೇ ಇರುತ್ತದೆ. ಆದರೂ ಅದು ತನ್ನ ಮೂಲ ಗುರುತನ್ನು ಉಳಿಸಿಕೊಂಡಿರುತ್ತದೆ. ನಾವು ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕಿರುವುದು ಹೀಗೆ. ಅದಕ್ಕೆ ಬದಲು ಸಂಸ್ಕೃತಿಯನ್ನು ಉಳಿಸುತ್ತೇವೆಂದು ಯಾವುದೋ ಸಾಂದರ್ಭಿಕ ಹೇಳಿಕೆ – ನಡವಳಿಕೆಗೆ ಚೌಕಟ್ಟು ಹಾಕಿ ಆಚರಣೆಗೆ ತರುವುದು, ನದಿಯನ್ನು ಉಳಿಸುತ್ತೇವೆಂದು ಬಾಟಲಿಗೆ ಹಾಕಿಡುವಷ್ಟೇ ಮೂರ್ಖತನ!
ಇತಿಹಾಸದಲ್ಲಿ ಆಗಿಹೋದವರು ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ಮತ್ತು ಸಾಂದರ್ಭಿಕವಾಗಿ ಏನನ್ನೋ ಮಾಡಿ ಹೋಗಿರುತ್ತಾರೆ ಅಥವಾ ಹೇಳಿಹೋಗಿರುತ್ತಾರೆ. ಆ ಪ್ರತಿಯೊಂದರಲ್ಲೂ ವಿವೇಕವನ್ನು ಹುಡುಕಿಕೊಂಡು ಅನುಸರಿಸಬೇಕಿರುವುದು ನಮ್ಮ ಸಾಮಾನ್ಯಜ್ಞಾನ ಅಲ್ಲವೆ?
ನಮಗೆ ಅಂತಿಮವಾಗಿ ಬೇಕಿರುವುದೇನು? ಸುಖ ಮತ್ತು ಶಾಂತಿ. ಯಾವ ದಾರಿಯಲ್ಲಿ ನಡೆದರೆ ಅದು ಸಿಗುತ್ತದೆ ಎಂದು ಆಲೋಚಿಸುವ ಪರಿಜ್ಞಾನ ನಮಗೆ ಬೇಡವೆ? ಸದಾ ಮತ್ತೊಬ್ಬರ ಮೇಲೆ ಕತ್ತಿ ಮಸೆಯುವುದರಿಂದ ನಮಗೆ ಶಾಂತಿ ಸಿಗುತ್ತದೆಯೇ? ಎಲ್ಲರೂ ನಮ್ಮ ನಂಬಿಕೆಯನ್ನೆ ಅನುಸರಿಸಬೇಕು ಅನ್ನುವ ದಬ್ಬಾಳಿಕೆ ಶಾಂತಿ ನೀಡುತ್ತದೆಯೇ? ನನ್ನ ಸಿದ್ಧಾಂತವೇ ಸರಿ ಅನ್ನುವ ರೋಷಾವೇಷ ಶಾಂತಿ ನೀಡುತ್ತದೆಯೇ? ಸದಾ ಮತ್ತೊಬ್ಬರ ತಪ್ಪುಗಳನ್ನೇ ಎತ್ತಿ ಆಡುತ್ತಿದ್ದರೆ ಶಾಂತಿ ಸಿಗುತ್ತದೆಯೇ?
ಮತ್ತೊಂದು ನಂಬಿಕೆ / ಸಿದ್ಧಾಂತ/ ಧರ್ಮದವರು ನಮಗಿಂತ ಹೆಚ್ಚು ಸಂಖ್ಯೆಯಲ್ಲಿದ್ದಾರೆಂದು / ಸಂಖ್ಯೆಯಲ್ಲಿ ಹೆಚ್ಚುತ್ತಿದ್ದಾರೆಂದು ಅತ್ತಲೇ ಗಮನ ನೆಟ್ಟು ಹಲ್ಲು ಕಡಿಯುವಷ್ಟೂ ಕಾಲ ನಾವು ನಮ್ಮ ನಂಬಿಕೆ / ಸಿದ್ಧಾಂತ / ಧರ್ಮದಿಂದ ದೂರವಾಗಿರುತ್ತೇವೆ. ಈ ಮೂಲಕ ನಾವು ಯಾವುದನ್ನು ನಮ್ಮದೆಂದುಕೊಂಡಿದ್ದೇವೋ ಅದರ ಸಂಖ್ಯಾಬಲದಲ್ಲಿ ಒಂದನ್ನು ಕಳೆಯುತ್ತೇವೆ ಹೊರತು ಮತ್ಯಾವ ಪ್ರಯೋಜನವೂ ಆಗುವುದಿಲ್ಲ. ನಾವು ನಮ್ಮ ನಂಬಿಕೆಯನ್ನು ಪ್ರಜ್ಞಾಪೂರ್ವಕವಾಗಿ ಆಚರಿಸುತ್ತಿರುವಷ್ಟೂ ಕಾಲ ನಾವೊಬ್ಬರೇ ನೂರು – ಸಾವಿರದ ವ್ಯಕ್ತಿತ್ವಕ್ಕೆ ಸಮನಾಗುತ್ತೇವೆ ಅನ್ನುವ ಅಲ್ಪ ಅರಿವೂ ನಮಗೆ ಮೂಡುವುದಿಲ್ಲ.
ಜಗತ್ತಿನಲ್ಲಿ ಬದಲಾವಣೆಗಳು ಸಾಂಘಿಕ ಯತ್ನಗಳಿಂದಲೇ ಆಗಿರುವುದು ನಿಜ. ಆದರೆ ಆ ಎಲ್ಲವನ್ನೂ ಮುನ್ನಡೆಸಿದ್ದು ಸಾವಿರಕ್ಕೆ ಸಮನಿರುವ ಒಬ್ಬ ನಾಯಕ / ನಾಯಕಿಯ ಪ್ರಜ್ಞೆ. ನಮ್ಮ ಶ್ರದ್ದೆಯ ಬಲದಿಂದ ಅಂತಹಾ ವಿಶಾಲ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಛಲ ನಮಗೇಕೆ ಮೂಡುವುದೇ ಇಲ್ಲ? ಅಥವಾ ಅದನ್ನು ಸಾಧಿಸುವ ಯೋಗ್ಯತೆ ಇಲ್ಲವೆನ್ನುವ ಹತಾಶೆಯೇ ನಮ್ಮನ್ನು ದ್ವೇಷಕ್ಕೆ ದೂಡುತ್ತದೆಯೇ? ಇದನ್ನು ನಾವು ನಮ್ಮೊಳಗೆ ಹಣಕಿ ನೋಡಿಕೊಳ್ಳಬೇಕು.
ನಮ್ಮಲ್ಲಿ ಬಹುತೇಕರು ಇಂದು ರಾಜಕೀಯದ ಭಾಗವಾಗಿದ್ದೇವೆ ಮತ್ತು ಸಿದ್ಧಾಂತಗಳ ಮೂಲಕ ಗುರುತಿಸಿಕೊಳ್ಳತೊಡಗಿದ್ದೇವೆ. ಇದು ಒಳ್ಳೆಯದೋ ಕೆಡುಕೋ ಅನ್ನುವುದನ್ನು ಚರಿತ್ರೆಯ ಮುಂದಿನ ಪುಟಗಳಷ್ಟೆ ಹೇಳಬಲ್ಲವು. ನಮ್ಮ ನಮ್ಮ ಪಕ್ಷ – ಸಿದ್ಧಾಂತಗಳು ಯಾವುದೋ ಒಂದರ ಪರವಾಗಿರಲಿ ಅಥವಾ ವಿರೋಧವಾಗಿರಲಿ; ಅದು ನಮ್ಮ ಆಯ್ಕೆ. ಆದರೆ ಪರ ವಹಿಸುವಾಗ ನಾವು ಆ ಸಿದ್ಧಾಂತಕ್ಕೆ ಯಾವ ಹೆಸರಿಡಲಾಗಿದೆಯೋ ಅದರ ಅಂತಃಸತ್ವವನ್ನು ಅರಿತಿದ್ದೇವೆಯೇ, ಅದನ್ನು ಅನುಷ್ಠಾನಕ್ಕೆ ತಂದುಕೊಂಡಿದ್ದೇವೆಯೇ, ಈಗಿನ ನಡೆಗಳು ಅದಕ್ಕೆ ಪೂರಕವಾಗಿವೆಯೇ ಅಥವಾ ವಿರುದ್ಧವಾಗಿವೆಯೇ ಅನ್ನುವ ಅವಲೋಕನ ಮಾಡಿಕೊಳ್ಳಬೇಕು. ಹಾಗೆಯೇ ಯಾವುದೋ ಒಂದನ್ನು ವಿರೋಧಿಸುವ ಸಿದ್ಧಾಂತ ನಮ್ಮದಾಗಿದ್ದಲ್ಲಿ, ಆ ವಿರೋಧ ಯಾವ ಕಾರಣಗಳಿಗಾಗಿ ಇದೆಯೋ ಆ ಕಾರಣಗಳನ್ನು ನಾವು ಅದೆಷ್ಟರ ಮಟ್ಟಿಗೆ ಅಡ್ರೆಸ್ ಮಾಡಿದ್ದೇವೆ, ಅದರ ಆಶಯಗಳನ್ನು ನೆರವೇರಿಸಿದ್ದೇವೆ, ಹೊರಗೆ ಮಾತಾಡುವಷ್ಟು ನಾವು ವೈಯಕ್ತಿಕ ನೆಲೆಯಲ್ಲಿ ವಿಶಾಲ ಹೃದಯಿಗಳಾಗಿದ್ದೇವೆಯೇ ಅನ್ನುವುದನ್ನು ಪ್ರಾಮಾಣಿಕವಾಗಿ ನೋಡಿಕೊಳ್ಳಬೇಕು.
ಇದನ್ನು ಮಾಡದೆಹೋದರೆ ನಮ್ಮ ಪರವಹಿಸುವಿಕೆಯೂ ವ್ಯರ್ಥ, ವಿರೋಧವೂ ವ್ಯರ್ಥ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.