ರೂಮಿ ಹೇಳಿದ ಕಥೆ : Tea time story

ಜಲಾಲುದ್ದಿನ್ ರೂಮಿಯ ‘ಮಸ್ನವಿ’ ಇಂದ


ಪುಡಿಗಳ್ಳ ಬೆಳಗಿನಿಂದ ಬಹಳ ಖುಷಿಯಾಗಿದ್ದ. ಅವನು ಹಾವಾಡಿಗನ ಬುಟ್ಟಿಯಿಂದ ಭಾರೀ ಹಾವೊಂದನ್ನು ಕದ್ದು ತಂದಿದ್ದು, ತನ್ನ ನಸೀಬು ಖುಲಾಯಿತೆಂದು ಸಂಭ್ರಮ ಪಡುತ್ತಿದ್ದ.

ಅದು, ಹಾವಾಡಿಗ ಹಿಡಿದ ಮೊದಲ ಹಾವಾಗಿತ್ತು. ಅದರ ವಿಷವೆಷ್ಟಿದೆ? ಅದೆಷ್ಟು ತೀಕ್ಷ್ಣ? ಯಾವುದೂ ಅವನಿಗೆ ಗೊತ್ತಿಲ್ಲ. ಖುದ್ದು ಹಾವಾಡಿಗನಿಗೂ ಅದರ ಮಾಹಿತಿ ಇರಲಿಲ್ಲ.
ಅತ್ತ ಕಳ್ಳ ಖುಷಿಯಾಗಿದ್ದರೆ, ಇತ್ತ ಹಾವಾಡಿಗ ದುಃಖಿಸುತ್ತಿದ್ದ. ಅದೊಂದು ಉದ್ದನೆಯ, ಭಾರೀ ಗಾತ್ರದ ಹಾವಾಗಿತ್ತು. ಅದನ್ನು ಮಾರಿದರೆ ಒಳ್ಳೆಯ ಮೊತ್ತವೇ ಸಿಗುತ್ತಿತ್ತು. ಎಂಥಾ ಮಾಲು ಕದ್ದುಹೋಯಿತೆಂದು ಅವನು ಸಂಕಟಪಡುತ್ತಿದ್ದ.
ಹಾವಾಡಿಗ, ದಿನವಿಡೀ ದೇವರನ್ನು ಪ್ರಾರ್ಥಿಸುತ್ತಲೇ ಕಳೆದ. ಹೇಗಾದರೂ ಸರಿ, ಆ ಕಳ್ಳ ಒಂದು ಸಲ ಸಿಕ್ಕರೆ ಸಾಕು ಎಂದು ಬೇಡಿಕೊಳ್ಳುತ್ತಿದ್ದ. ರಾತ್ರಿಯಾಗುತ್ತ ಬಂದರೂ, ಎಲ್ಲಿ ಹುಡುಕಿದರೂ ಕಳ್ಳನ ಪತ್ತೆಯಾಗಲಿಲ್ಲ.
ಚಿಂತೆಯಲ್ಲೇ ಮಲಗಿ, ಮರುದಿನ ಎದ್ದು ಬೀದಿ ಬೀದಿ ಅಲೆಯುತ್ತಾ ಹಾವನ್ನು ಹುಡುಕಲು ಹೊರಟ. ಸಂತೆ ಬೀದಿಯ ಮಗ್ಗುಲಲ್ಲಿ ಏನೋ ಕಾಲಿಗೆ ತೊಡರಿದಂತಾಯ್ತು.
ನೋಡಿದರೆ, ಅದು ಅವನೇ ಪುಡಿಗಳ್ಳ!!
ಅವನ ಕಾಲಿನ ಬಳಿ ಹಾವು ಕಚ್ಚಿದ ಗುರುತೂ, ಮಣ್ಣಿನ ಮೇಲೆ ಹಾವು ಹರಿದುಹೋದ ಗುರುತೂ ಮೂಡಿದ್ದವು.
ಹಾವಾಡಿಗನಿಗೆ ಎಲ್ಲ ವಿಷಯ ತಿಳಿದುಹೋಯಿತು.
“ನೆನ್ನೆ ಇಡೀ ನಾನು ಭಗವಂತನಲ್ಲಿ ಕಳ್ಳ ಸಿಗುವಂತೆ ಮಾಡು, ನನ್ನ ನಷ್ಟ ತುಂಬಿಕೊಡು ಎಂದು ಕೇಳಿದೆ. ಭಗವಂತ ಅದನ್ನು ನಡೆಸಿಕೊಡಲಿಲ್ಲ. ಆದರೆ, ಅದಕ್ಕಿಂತ ದೊಡ್ಡ ಉಡುಗೊರೆಯನ್ನೇ ಕೊಟ್ಟ! ಹಾವನ್ನು ಕಳೆದು, ನನ್ನ ಜೀವವನ್ನು ನನಗೆ ಮರಳಿಸಿದ!!” ಎಂದು ಯೋಚಿಸುತ್ತಾ, ಮುಗಿಲೆಡೆಗೆ ಕೈಯೆತ್ತಿ ಧನ್ಯವಾದ ಸೂಚಿಸಿದ.
(ಜಲಾಲುದ್ದಿನ್ ರೂಮಿಯ ‘ಮಸ್ನವಿ’ ಇಂದ |ಸಂಗ್ರಹ ಮತ್ತು ಅನುವಾದ : ಅಲಾವಿಕಾ )

Leave a Reply