ಮೂಲ: ಖಲೀಲ್ ಜಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ
- ಮೌಲ್ಯಗಳು
ಒಮ್ಮೆ ಒಬ್ಬ ಮನುಷ್ಯನಿಗೆ ಹೊಲದಲ್ಲಿ ತೆಗ್ಗು ತೋಡುತ್ತಿರುವಾಗ ಒಂದು ಅದ್ಭುತ ಅಮೃತಶಿಲೆಯ ಸುಂದರಿಯ ವಿಗ್ರಹ ಸಿಕ್ಕಿತು. ಆ ಮನುಷ್ಯ ವಿಗ್ರಹವನ್ನು ಊರಿನ ಪ್ರಸಿದ್ಧ ಕಲಾ ಸಂಗ್ರಹಕಾರನ ಅಂಗಡಿ ಕೊಂಡೊಯ್ದು, ಬಹು ದೊಡ್ಡ ಬೆಲೆಗೆ ವಿಗ್ರಹವನ್ನು ಸಂಗ್ರಹಕಾರನಿಗೆ ಮಾರಾಟ ಮಾಡಿದ.
ಭಾರಿ ಮೊತ್ತದೊಂದಿಗೆ ಮನೆಗೆ ವಾಪಸ್ಸು ಹೊರಟಿದ್ದ ಮನುಷ್ಯ ವಿಗ್ರಹವನ್ನು ಕೊಂಡ ಸಂಗ್ರಹಕಾರನ ಬಗ್ಗೆ ವಿಚಾರ ಮಾಡುತ್ತ ಮನಸ್ಸಿನಲ್ಲಿಯೇ ಅಂದುಕೊಂಡ, “ ಈ ಹಣದಿಂದ ಎಷ್ಟೊಂದು ಅದ್ಭುತವಾಗಿ ಬದುಕಬಹುದು? ನೂರಾರು ವರ್ಷ ನೆಲದಲ್ಲಿ ಕನಸುಗಳಿಲ್ಲದ ಹೆಣದಂತೆ ಹುಗಿದು ಹೋಗಿದ್ದ ಆ ವಿಗ್ರಹಕ್ಕೆ ಯಾರಾದರೂ ಇಷ್ಟೊಂದು ಹಣ ಕೊಡುತ್ತಾರಾ? “
ಇತ್ತ ಅಂಗಡಿಯಲ್ಲಿ ಆ ಕಲಾ ಸಂಗ್ರಹಕಾರ ವಿಗ್ರಹವನ್ನು ಕಣ್ತುಂಬಿಕೊಂಡು ನೋಡುತ್ತ ತನ್ನೊಳಗೆ ಮಾತನಾಡಿಕೊಂಡ,
“ ಎಷ್ಟೊಂದು ಸೌಂದರ್ಯ, ಎಂಥಾ ಬದುಕು! ಯಾವ ಆತ್ಮ ಇಂಥ ಸುಂದರ ಕನಸು ಕಂಡಿತ್ತು? ಸಾವಿರ ವರ್ಷಗಳ ಸಿಹಿ ನಿದ್ದೆಯಿಂದ ಈಗ ತಾನೆ ಎದ್ದು ಕಣ್ಬಿಟ್ಟಿರುವ ತಾಜಾ ಚೆಲುವು ಇದು. ಯಾವ ಮನುಷ್ಯ, ಹೇಗೆ ತಾನೆ ಇಂಥ ಅಪರೂಪವನ್ನು ಕನಸುಗಳಿಲ್ಲದ ಸತ್ತ ಹಣಕ್ಕಾಗಿ ಮಾರುತ್ತಾನೆ? “
2. ದೊರೆ ಕುಡುಕನಾಗಿದ್ದರೆ……
ಒಮ್ಮೆ ಊರಿನ ಹಿರಿಯರೆಲ್ಲ ರಾಜ್ಯದ ದೊರೆಯ ಎದುರು ಹಾಜರಾಗಿ, ತಮ್ಮ ಶಹರದ ಜನರ ಕೈಗೆ ವೈನ್ ಮತ್ತು ಇನ್ನಿತರ ಮಾದಕ ವಸ್ತುಗಳು ಸಿಗದಂತೆ ಆದೇಶ ಹೊರಡಿಸಬೇಕೆಂದು ಬಿನ್ನಹ ಮಾಡಿಕೊಂಡರು.
ಹಿರಿಯರ ಮಾತು ಕೇಳಿಸಿಕೊಂಡ ದೊರೆ ಜೋರಾಗಿ ನಗುತ್ತ ಸಭೆಯಿಂದ ಎದ್ದು ಹೋದ.
ಊರ ಹಿರಿಯರು ನಿರಾಶೆಯಿಂದ ರಾಜ ದರ್ಬಾರಿನಿಂದ ಹೊರ ಬಂದರು.
ಅರಮನೆಯ ಬಾಗಿಲಲ್ಲಿ ಊರಿನಲ್ಲಿ ಹೆಸರುವಾಸಿಯಾಗಿದ್ದ ಒಬ್ಬ ತಿಳುವಳಿಕೆಯ ಮನುಷ್ಯ ಅವರಿಗೆ ಎದುರಾದ. ಜೋಲು ಮುಖ ಹಾಕಿಕೊಂಡಿದ್ದ ಹಿರಿಯರ ಬೇಡಿಕೆನ್ನೂ, ಅದಕ್ಕೆ ದೊರೆಯ ಪ್ರತಿಕ್ರಿಯೆಯನ್ನು ತಿಳಿದುಕೊಂಡು , ಅವರನ್ನು ಕುರಿತು ನುಡಿದ “ ನಿಮ್ಮ ಬಗ್ಗೆ ನನಗೆ ಕರುಣೆ ಗೆಳೆಯರೆ! ಅಕಸ್ಮಾತ್ ನಿಮ್ಮ ದೊರೆಯೇನಾದರೂ ಕುಡಿತದಿಂದ ಮತ್ತನಾಗಿದ್ದರೆ, ನಿಮ್ಮ ಅಹವಾಲಿಗೆ ಒಪ್ಪಿಗೆ ನೀಡುತ್ತಿದ್ದ.