ಟ್ರಾಯ್ ಯುದ್ಧ ಮತ್ತು ಟ್ರೋಜನ್ ಕುದುರೆ : ಮಕ್ಕಳಿಗೊಂದು ಗ್ರೀಕ್ ಕಥೆ

ಟ್ರಾಯ್ ಮತ್ತು ಗ್ರೀಕ್ ನಡುವೆ ನಡೆದ ಯುದ್ಧ ಪುರಾಣೇತಿಹಾಸಗಳಲ್ಲಿ ಟ್ರೋಜನ್ ಯುದ್ಧ ಎಂದೇ ಹೆಸರಾಗಿದೆ. ಈ ಯುದ್ಧದ ಮುಕ್ತಾಯ ಹಂತದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಯುದ್ಧವನ್ನು ಗೆಲ್ಲಿಸಿದ್ದು ಟ್ರೋಜನ್ ಕುದುರೆ.

ಸಂಗ್ರಹ ಮತ್ತು ಅನುವಾದ : ಚೇತನಾ


ತ್ತು ವರ್ಷಗಳಷ್ಟು ದೀರ್ಘ ಕಾಲ ಕಾದಾಡಿದರೂ ಗ್ರೀಕರಿಗೆ ಟ್ರಾಯ್ ಅನ್ನು ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ಹತಾಶರಾದ ಅವರು ವಂಚನೆಯಿಂದಲಾದರೂ ಸರಿ, ಯುದ್ಧವನ್ನು ಗೆಲ್ಲಲೇಬೇಕು ಎಂದು ತೀರ್ಮಾನಸಿದರು. ಅದಕ್ಕಾಗಿ ಒಂದು ಉಪಾಯ ಹೂಡಿದರು. ಅದರಂತೆ, ಭಾರೀ ಗಾತ್ರದ ಮರದ ಕುದುರೆಯೊಂದನ್ನು ತಯಾರಿಸಿದರು. ಅದರೊಳಗೆ ಆಯ್ದ ನೂರಾರು ಗ್ರೀಕ್ ವೀರರನ್ನು ಅಡಗಿಸಿದರು. ಬಾಕಿಯವರು ಟ್ರಾಯ್ ಕೋಟೆಗೆ ಬೆನ್ನು ಹಾಕಿ ಸಮುದ್ರದ ಕಡೆ ಸಾಗಿದರು.
ಟ್ರಾಯ್ ವೀರರು ಗ್ರೀಕರು ಸೋಲೊಪ್ಪಿಕೊಂಡು ಮರಳುತ್ತಿದ್ದಾರೆ ಎಂದು ಭಾವಿಸಿದರು. ನಗರದಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಕೋಟೆಯ ಹೊರಗಿದ್ದ ಭಾರೀ ಗಾತ್ರದ ಮರದ ಕುದುರೆಯನ್ನು ತಮ್ಮಗೆಲುವಿಗೆ ಸಿಕ್ಕ ಬಹುಮಾನವೆಂದು ಕುಣಿದಾಡಿದರು. ಅದನ್ನು ರಥದಂತೆ ಎಳೆದು ಒಳಗೆ ತಂದರು. ಗೆಲುವಿನ ಗುಂಗಿನಲ್ಲಿ ಮತ್ತರಾಗಿ ನೆಮ್ಮದಿಯ ನಿದ್ರೆಗೆ ಜಾರಿದರು.
ಟ್ರಾಯ್ ನಗರ ಗಾಢ ನಿದ್ರೆಯಲ್ಲಿ ತೊಡಗಿರುವಾಗ ಮರದ ಕುದುರೆಯಿಂದ ಒಬ್ಬೊಬ್ಬರೇ ಗ್ರೀಕ್ ವೀರರು ಹೊರಗೆ ಬಂದರು. ಟ್ರಾಯ್ ಸೈನಿಕರನ್ನು ಒಬ್ಬೊಬ್ಬರಾಗಿ ಕೊಂದು ಮುಗಿಸಿದರು. ಬೆಳಗಾಗುವ ವೇಳೆಗೆ ಟ್ರಾಯ್ ನಗರ ಸಾವಿರಾರು ವೀರರನ್ನು ಕಳೆದುಕೊಂಡು ಅನಾಥವಾಗಿತ್ತು. ಅಷ್ಟೇ ಅಲ್ಲ, ಗ್ರೀಕರು ಟ್ರಾಯ್ ನಗರದ ಆಸ್ತಿಪಾಸ್ತಿಯ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಇಡಿಯ ನಗರವನ್ನು ವಿರೂಪಗೊಳಿಸಿದ್ದರು.
ಭಾರೀ ಪ್ರಮಾಣದ ವೀರರನ್ನು, ಆಸ್ತಿಪಾಸ್ತಿಯನ್ನು ಕಳೆದುಕೊಂಡ ಟ್ರಾಯ್ ನಗರಕ್ಕೆ ಈಗ ಗ್ರೀಕರ ಮೇಲೇರಿ ಪ್ರತೀಕಾರ ತೀರಿಸಿಕೊಳ್ಳುವ ಶಕ್ತಿ ಇರಲಿಲ್ಲ. ಗ್ರೀಕರು ತಮ್ಮ ಗೆಲುವನ್ನು ಘೋಷಿಸಿಕೊಂಡರು.
ಟ್ರೋಜನ್ ಯುದ್ಧದಲ್ಲಿ ಹೀಗೆ ನಿರುಪದ್ರವಿಯಾಗಿ ಕಾಣಿಸಿಕೊಂಡು ಭಾರೀ ಅನಾಹುತವನ್ನೆ ಸೃಷ್ಟಿಸಿದ ಕುದುರೆ ಮುಂದಿನ ದಿನಗಳಲ್ಲಿ ‘ಟ್ರೋಜನ್ ಕುದುರೆ’ ಎಂದೇ ಹೆಸರಾಯಿತು. ಇಂದಿಗೂ ಇದು ಒಂದು ನುಡಿಗಟ್ಟಾಗಿ ಚಾಲ್ತಿಯಲ್ಲಿದೆ.

Leave a Reply