ಸಮಯ ವ್ಯರ್ಥ ಮಾಡದಿರೋಣ : ಈ ದಿನದ ಸುಭಾಷಿತ

“ಸಕಲ ಐಶ್ವರ್ಯಗಳನ್ನು ಕೊಟ್ಟರೂ ನಾವು ಒಂದು ಕ್ಷಣವನ್ನು ಕೂಡಾ ಮರಳಿ ಪಡೆಯಲಾರೆವು. ಆದ್ದರಿಂದ, ಸಮಯವನ್ನು ವೃಥಾ ವ್ಯಯ ಮಾಡುವುದು ದೊಡ್ಡ ಪ್ರಮಾದವೇ ಸರಿ” ಅನ್ನುತ್ತದೆ ಸುಭಾಷಿತ.


ಆಯುಶಃ ಕ್ಷಣ ಏಕೋಪಿ ಸರ್ವರತ್ನೈರ್ನ ಲಭ್ಯತೇ
ನೀಯತೇ ಸ ವೃಥಾ ಯೇನ ಪ್ರಮಾದಃ ಸುಮಹಾನಹೋ || ಸುಭಾಷಿತ ||
ಸಕಲ ಐಶ್ವರ್ಯಗಳನ್ನು ಕೊಟ್ಟರೂ ನಾವು ಒಂದು ಕ್ಷಣವನ್ನು ಕೂಡಾ ಮರಳಿ ಪಡೆಯಲಾರೆವು. ಆದ್ದರಿಂದ, ಸಮಯವನ್ನು ವೃಥಾ ವ್ಯಯ ಮಾಡುವುದು ದೊಡ್ಡ ಪ್ರಮಾದವೇ ಸರಿ.
ಪ್ರಾಚೀನ ಸಾಹಿತ್ಯದಿಂದ ಹಿಡಿದು, ಆಧುನಿಕ ವ್ಯಕ್ತಿತ್ವ ವಿಕಸನ ತರಗತಿಗಳ ವರೆಗೆ ಪ್ರತಿಯೊಂದು ಬೋಧನೆಯಲ್ಲೂ ಸಮಯದ ಮಹತ್ವದ ಬಗ್ಗೆ ತಿಳಿಸಲಾಗಿದೆ. ಸಮಯ ಒಮ್ಮುಖ ಹರಿವು ಇರುವಂಥದ್ದು. ಅದು ಮರಳಿ ಬರುವುದಿಲ್ಲ. ಅದರ ಹರಿವಿನ ಜೊತೆ ಘಟಿಸುವ ಯಾವ ಸಂಗತಿಯೂ ಪುನರಾವರ್ತನೆಯಾಗುವುದಿಲ್ಲ. ಹೇಗೆ ಸಂದುಹೋದ ಕಾಲವನ್ನು ಮತ್ತೆ ಹಿಡಿಯಲಾಗುವುದಿಲ್ಲವೋ, ಹಾಗೆಯೇ ಸಂದುಹೋದ ಘಟನೆಯನ್ನು ತಿದ್ದಲು ಸಾಧ್ಯವಿಲ್ಲ. ಆದ್ದರಿಂದಲೇ ಸಕಲೈಶ್ವರ್ಯ ಕೊಟ್ಟರೂ ಒಂದು ಕ್ಷಣವನ್ನೂ ಮರಳಿ ಪಡೆಯಲಾರೆವು ಎನ್ನುತ್ತದೆ ಸುಭಾಷಿತ.
ಈ ಕಾಲದ ನಾವು ನಮ್ಮ ದಿನದ ಬಹುಪಾಲು ಸಮಯವನ್ನು ನೋಡುವುದಕ್ಕೆ ಬಳಸುತ್ತೇವೆ. ಮೊಬೈಲ್, ಟೀವಿ – ಕಂಪ್ಯೂಟರ್ ಪರದೆಗಳ ಮೇಲೆ ಸದಾ ನಮ್ಮ ಕಣ್ಣು ನೆಟ್ಟಿರುತ್ತದೆ. ಈ ಸಂದರ್ಭದಲ್ಲಿ ಕೆಲಸ ನಡೆಯುತ್ತಿದ್ದರೆ ಅಲ್ಲೊಂದು ಪ್ರಯೋಜನವಿರುತ್ತದೆ. ಆದರೆ ನಾವು ನೋಟಕ್ಕೆ ವ್ಯಯಿಸುವ ಈ ಸಮಯ ಅನುತ್ಪಾದಕವಾಗಿರುತ್ತದೆ. ಮಾತ್ರವಲ್ಲ, ಅನಗತ್ಯ ಸಂಗತಿಗಳ ಕಶ್ಮಲವನ್ನು ನಮ್ಮ ಮನಸ್ಸಿನ ಕೊಳಕ್ಕೆ ತಂದು ಸುರಿಯುತ್ತದೆ. ಆದ್ದರಿಂದ ನಾವು ನಮ್ಮ ಸಮಯವನ್ನು ಸಾರ್ಥಕವಾಗಿ ಕಳೆಯುವತ್ತ ಗಮನ ಹರಿಸಬೇಕು.
ಈ ಕಾಲಮಾನದಲ್ಲಿ ಟೀವಿ, ಕಂಪ್ಯೂಟರ್ ಅಥವಾ ಮೊಬೈಲ್ ನೋಡುವುದನ್ನು ಅವಾಯ್ಡ್ ಮಾಡಿ ಎಂದರೆ ಅದನ್ನು ನಡೆಸುವುದು ಕಷ್ಟ. ಈ ಕಾಲದ ಮನರಂಜನೆ, ಕಾಲಹರಣ ಅಥವಾ ಹವ್ಯಾಸ ಈ ವಿದ್ಯುನ್ಮಾನ ಉಪಕರಣಗಳೊಂದಿಗೆ ಹೊಂದಿಕೊಂಡಿದೆ. ಆದರೆ, ಈ ಪರಿಕರಗಳಲ್ಲೇ ಉತ್ತಮವಾದ, ನಮ್ಮ ಅರಿವು ಹೆಚ್ಚಿಸುವಂಥ, ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುವಂಥ ಸಂಗತಿಗಳನ್ನು ನೋಡಲು ಸಾಧ್ಯವಿದೆ. ಈ ಮಾರ್ಗವನ್ನು ನಮ್ಮದಾಗಿಸಿಕೊಂಡರೆ, ನಾವು ಕಾಲಕ್ಕೆ ತಕ್ಕಂತೆ ನಡೆಯುತ್ತಲೂ ನಮ್ಮ ಸಮಯ ವ್ಯರ್ಥವಾಗದಂತೆ ತಡೆಯಬಹುದು. ಸಮಯದ ಸದುಪಯೋಗ ಮಾಡಿಕೊಳ್ಳಬಹುದು.
ಇದು ನಮಗೆ ತಿಳಿದಿರುವ ವಿಷಯವೇ ಆದರೂ ಪ್ರತಿ ದಿನ ಬೆಳಗಿನಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅಗತ್ಯವಿದೆ. ಹೀಗೆ ನೆನಪಿಸಿಕೊಂಡು, ಸಾಧ್ಯವಾದಷ್ಟೂ ಅನುಸರಿಸಲು ಪ್ರಯತ್ನಿಸಿದರೆ, ಮುಂದೊಮ್ಮೆ ನಮ್ಮ ಹವ್ಯಾಸಗಳು ಸುಧಾರಿಸಿ, ನಮ್ಮ ಮನಸ್ಸೂ ಕೇವಲ ಉಪಯುಕ್ತ ಸಂಗತಿಗಳಲ್ಲಿ ರುಚಿ ಕಾಣತೊಡಗುವುದು.
ಆದ್ದರಿಂದ “ಆಯುಶಃ ಕ್ಷಣ ಏಕೋಪಿ ಸರ್ವರತ್ನೈರ್ನ ಲಭ್ಯತೇ” – “ಅಷ್ಟೈಶ್ವರ್ಯ ಕೊಟ್ಟರೂ ಕಾಲದ ಒಂದು ಕ್ಷಣವೂ ಮರಳಿಬರುವುದಿಲ್ಲ” ಎಂದು ಪ್ರತಿ ಬೆಳಗ್ಗೆ ಎದ್ದಕೂಡಲೇ ಬಾಯಿಪಾಠದಂತೆ ನೆನೆಸಿಕೊಳ್ಳಿ!

Leave a Reply