ಒಂದು ಫಾರ್ಸಿ ದೃಷ್ಟಾಂತ ಕಥೆ : Tea time story

ಒಬ್ಬ ಕುರುಡ ಮತ್ತು ವ್ಯಾಪಾರಿಯ ಕಥೆ | ಸಂಗ್ರಹ ಮತ್ತು ಅನುವಾದ: ಅಲಾವಿಕಾ


ಬ್ಬ ಕುರುಡ ಮತ್ತು ಒಬ್ಬ ವ್ಯಾಪಾರಿ ಮರುಭೂಮಿಯಲ್ಲಿ ಪ್ರಯಾಣಿಸುತ್ತಿದ್ದರು. ಹಾದಿಯಲ್ಲಿ ಪರಸ್ಪರ ಪರಿಚಿತರಾಗಿ, ಒಳ್ಳೆಯ ಗೆಳೆಯರೂ ಆಗಿಬಿಟ್ಟರು. ಆಮೇಲೆ ಆ ವ್ಯಾಪಾರಿಯೇ ಕುರುಡನ ಜವಾಬ್ದಾರಿ ತೆಗೆದುಕೊಂಡು, ಇಬ್ಬರೂ ಪ್ರಯಾಣ ಮುಂದುವರೆಸಿದರು.

ಈ ಪ್ರಯಾಣದಲ್ಲಿ ಅವರ ಗೆಳೆತನ ಗಾಢವಾಗುತ್ತಾ ಹೋಯಿತು.
ಅವರಿನ್ನೂ ತಾವು ತಲುಪಬೇಕಾದ ಸ್ಥಳ ತಲುಪಿರಲಿಲ್ಲ. ದಾರಿಯಲ್ಲಿ ಅವರಿಬ್ಬರೂ ಒಂದು ಕಡೆ ಮಲಗಿದ್ದರು. ಮುಂಜಾನೆ ಕುರುಡನಿಗೆ ಮೊದಲು ಎಚ್ಚರವಾಯಿತು. ಅವನು ತಡಕಾಡುತ್ತಲೇ ತನ್ನ ಊರುಗೋಲನ್ನು ಹುಡುಕಲಾರಂಭಿಸಿದ.

ರಾತ್ರಿಯ ವೇಳೆ ಮರುಭೂಮಿಯಲ್ಲಿ ವಿಪರೀತ ಚಳಿ ಇರುತ್ತದೆ. ಈ ಚಳಿಗೆ ಒಂದು ಹಾವು ಮರಗಟ್ಟಿ ಸೆಟೆದುಕೊಂಡು ಮಲಗಿತ್ತು. ಕುರುಡನು ಅದನ್ನೇ ಊರುಗೋಲು ಎಂದು ಭಾವಿಸಿ ಕೈಗೆತ್ತಿಕೊಂಡ. ನನ್ನ ಕೋಲು ನನಗೆ ಸಿಗದಿದ್ದರೂ ದೇವರ ದಯದಿಂದ ಅದಕ್ಕಿಂತಲೂ ಉತ್ತಮವಾದ, ನುಣುಪಾದ, ಸುಂದರವಾದ ಕೋಲು ಸಿಕ್ಕಿತಲ್ಲ ಎನ್ನುತ್ತ ಅದನ್ನು ಮತ್ತೆ ಮತ್ತೆ ಮುಟ್ಟಿ ಆನಂದಿಸತೊಡಗಿದ.
ಆಮೇಲೆ ತನ್ನ ಗೆಳೆಯನನ್ನು ಆ ಕೋಲಿನ ತುದಿಯಿಂದಲೇ ತಿವಿಯುತ್ತ ಎಬ್ಬಿಸಲಾರಂಭಿಸಿದ.


ನಿದ್ರೆಯಿಂದ ಎಚ್ಚೆತ್ತ ಆ ಗೆಳೆಯ ಗಾಬರಿಯಿಂದ, “ಇದೇನು ನೀನು ಕೈಯಲ್ಲಿ ಹಿಡಿದಿರೋದು!? ಮೊದಲು ಎಸಿ ಇದನ್ನು. ಇದು ಹಾವು. ಇದರಿಂದ ಪ್ರಾಣಕ್ಕೆ ಸಂಚಕಾರ ಬಂದೀತು” ಅಂತ ಕೂಗಿದ.
ಆಗ ಕುರುಡ, “ಇಂತಹ ಸುಂದರವಾದ ಕೋಲನ್ನು ಹಾವೆಂದು ಹೇಳುತ್ತಿದ್ದೀಯಲ್ಲ! ನಿನಗೆಲ್ಲೋ ಭ್ರಮೆ. ನಾನು ಕುರುಡನಿರಬಹುದು ಆದರೆ ತಿಳಿಗೇಡಿಯಲ್ಲ. ಸುಮ್ಮನೆ ತಮಾಷೆ ಮಾಡಬೇಡ” ಅಂದುಬಿಟ್ಟ.

ವ್ಯಾಪಾರಿ ಗೆಳೆಯ ಎಷ್ಟು ಥರದಲ್ಲಿ ಬಿಡಿಸಿ ಹೇಳಿದರೂ ಕುರುಡ ಕೇಳಲಿಲ್ಲ. ಬದಲಿಗೆ, “ನನಗೇ ಬುದ್ಧಿ ಹೇಳಲು ಬರುತ್ತಿದ್ದಾನೆ. ಮೊದಲೇ ವ್ಯಾಪಾರಿ. ಅವನಿಗೆಲ್ಲೋ ಈ ಕೋಲು ಲಾಭದಾಯಕವಾಗಿ ಕಂಡಿರಬೇಕು. ನನ್ನಿಂದ ಲಪಟಾಯಿಸಲು ಹೇಳುತ್ತಿದ್ದಾನೆ” ಎಂದೆಲ್ಲ ಯೋಚಿಸಿದ. ಅವನ ಮೇಲೆ ಸಿಡಿಮಿಡಿಗೊಂಡು, “ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ” ಅನ್ನುತ್ತಾ ಮುಂದೆ ಹೊರಟುಬಿಟ್ಟ.
ವ್ಯಾಪಾರಿಗೆ ಬೇಸರವಾದರೂ “ಹಣೆಬರಹ” ಅಂದುಕೊಂಡು ತನ್ನ ದಾರಿ ಹಿಡಿದ.

ಸ್ವಲ್ಪ ಹೊತ್ತಿನಲ್ಲೇ ಬಿಸಲು ಏರತೊಡಗಿತು. ಚಳಿಗೆ ಸೆಟೆದುಕೊಂಡಿದ್ದ ಹಾವೂ ಚೈತನ್ಯ ತುಂಬಿಕೊಂಡು ಮೊದಲಿನಂತಾಯಿತು. ಕಣ್ಣು ಬಿಡುತ್ತಲೇ, “ಇವನ್ಯಾರೋ ನನ್ನ ಹಿಡಿದುಕೊಂಡಿದ್ದಾನಲ್ಲ!” ಅಂತ ಗಾಬರಿಯಾಗಿ ಕುರುಡನಿಗೆ ಕಚ್ಚಿಯೂಬಿಟ್ಟಿತು.
ಹಾವಿನ ವಿಷವೇರಿ ಕುರುಡ, ದಾರಿಯಲ್ಲೇ ಸತ್ತುಹೋದ.

Leave a Reply