ಬದುಕಿನ ನಾಲ್ಕು ಪರಮ ಸಂಗತಿಗಳು: ಚಾಣಕ್ಯ ನೀತಿ

ಕ್ಷಾಂತಿ ತುಲ್ಯಂ ತಪೋ ಸಂತೋಷಾನ್ನ ಸುಖಮ್ ಪರಮ್ | ನಾಸ್ತಿ ತೃಷ್ಣಾಪರೋ ವ್ಯಾಧಿರ್ನ ಚ ಧರ್ಮೋ ದಯಾಪರಃ || ಚಾಣಕ್ಯ ನೀತಿ 1307||

ಅರ್ಥ: ಕ್ಷಮೆಗಿಂತ ದೊಡ್ಡ ತಪಸ್ಸು ಇಲ್ಲ. ಸಂತೋಷಕ್ಕಿಂತ ದೊಡ್ಡ ಸುಖವಿಲ್ಲ. ಆಸೆಗಿಂತ ದೊಡ್ಡ ರೋಗವಿಲ್ಲ, ದಯೆಗಿಂತ ದೊಡ್ಡ ಧರ್ಮವಿಲ್ಲ.

ತಾತ್ಪರ್ಯ: ಯಾರನ್ನಾದರೂ ಕ್ಷಮಿಸಲು, ಕ್ಷಮಿಸುವ ವ್ಯಕ್ತಿ ಅಹಂಕಾರವನ್ನು ಬಿಟ್ಟುಕೊಡಬೇಕಾಗುತ್ತದೆ. ದ್ವೇಷ, ಲೋಭ, ಮೋಹಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಆದ್ದರಿಂದ ಕ್ಷಮಿಸುವುದು ಅಂದರೆ ಅದೊಂದು ತಪಸ್ಸು.

ಸಂತೋಷವಿಲ್ಲದೆ ಎಷ್ಟು ಸಂಪತ್ತು, ಎಂಥಾ ಸುಪ್ಪತ್ತಿಗೆಯೂ ಸುಖ ನೀಡಲಾರದು. ಆದ್ದರಿಂದ ಸಂತೋಷವೇ ಎಲ್ಲಕ್ಕಿಂತ ದೊಡ್ಡ ಸುಖ.

ಆಸೆ (ದುರಾಸೆ), ಒಂದು ವಸ್ತು ಅಥವಾ ವ್ಯಕ್ತಿಯನ್ನು ಪಡೆಯುವ ಹಂಬಲದಲ್ಲಿ ನಮ್ಮನ್ನು ತೊಡಗಿಸಿ, ನಮ್ಮ ಪ್ರತಿ ಕ್ಷಣದ ಇರುವಿಕೆಯನ್ನು ತಿಂದು ಹಾಕುತ್ತದೆ. ಬಯಕೆ ಬೇಗುದಿಯಲ್ಲಿ ನಾವು ನಿಷ್ಕ್ರಿಯರಾಗುತ್ತ ಹೋಗುತ್ತೇವೆ. ಆದ್ದರಿಂದ ಇದೊಂದು ದೊಡ್ಡ ರೋಗ.

ಇನ್ನು ದಯೆ, ಅದುವೇ ಧರ್ಮ. ಅದು ಅತ್ಯುನ್ನತ ಧರ್ಮ. ದಯೆ ಇಲ್ಲದ ಯಾವುದೂ ಧರ್ಮವಾಗಲೂ ಸಾಧ್ಯವೇ ಇಲ್ಲ.

ಇದು ಚಾಣಕ್ಯನ ನುಡಿಗಳು.

Leave a Reply