ನಿನ್ನೊಳಗೊಂದು ಪವಿತ್ರ ತಾಣವಿದೆ: Sufi corner

ಮೂಲ : ಜೆಬುನ್ನಿಸಾ (ಮಕ್’ಫಿ) | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ


ನೋಡಿಲ್ಲಿ!
ನನ್ನ ಅಲೆಮಾರಿ ಪಾದಗಳು ಬಿರಿಬಿದ್ದು
ರಕ್ತದ ಹನಿ ತೊಟ್ಟಿಕ್ಕುತ್ತಿವೆ,
ಆ ಹನಿಹನಿಯಲ್ಲೂ ಹೂಘಮಲು ಸೂಸಿ
ಸುತ್ತ ಹರಡುತ್ತಿದೆ,
ಮತ್ತು
ಪ್ರತಿ ಗಾಯದ ಗೀರು
ಗುಲಾಬಿಯಾಗಿ ಅರಳುತ್ತಿದೆ!
ಓ ಮಖ್’ಫಿ,
ಕಾಬಾದ ಕಾವಲುಗಾರ ನಿನಗೆ ಬಾಗಿಲು ಮುಚ್ಚಿದರೆ
ದೂರಬೇಡ:
ಪ್ರಿಯತಮನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಲು
ನಿನ್ನೊಳಗೊಂದು ಪವಿತ್ರ ತಾಣವಿದೆ.
ಅಲ್ಲಿ ನಿನ್ನ ಹೃದಯ
ಕಾಬಾದ ಕಮಾನಿಗಿಂತ ಸುಂದರವಾಗಿ
ಬಾಗಿ ನಿಂತಿದೆ,
ಅವನ ಸ್ವಾಗತಕ್ಕೆ.

Leave a Reply