ಗುರುವಿನ ಅಗತ್ಯವಿದೆಯೇ? : ರಮಣರ ಜೊತೆ ಮಾತುಕಥೆ

“ಆತ್ಮ ಸಾಕ್ಷಾತ್ಕಾರ ಪಡೆಯಲು ಗುರುವಿನ ಅಗತ್ಯವಿದೆಯೇ?” ಎಂಬ ಬಗ್ಗೆ ಶ್ರೀಮತಿ ಪಿಗೆಟ್ ಮತ್ತು ಶಿಷ್ಯರ ಜೊತೆ ರಮಣ ಮಹರ್ಷಿಗಳು ನಡೆಸಿದ ಸಂವಾದ ಇಲ್ಲಿದೆ ಆಕರ: ಶ್ರೀ ರಮಣರ ಜೊತೆ ಮಾತುಕತೆ; ಮುನಗಾಲ ವೆಂಕಟರಾಮಯ್ಯ

ಮಹರ್ಷಿ: ಗುರುವಿನ ಉಪದೇಶ,ಉಪನ್ಯಾಸ, ಧ್ಯಾನ ಇತ್ಯಾದಿಗಳಿಗಿಂತ ಗುರುಕೃಪೆ ಸಾಕ್ಷಾತ್ಕಾರಕ್ಕೆ ತುಂಬಾ ಅಗತ್ಯ. ಅದೇ ಮೂಲಭೂತಕಾರಣ , ಉಳಿದವೆಲ್ಲ ಸಾಕ್ಷಾತ್ಕಾರಕ್ಕೆ ಸಹಕಾರಿಗಳು ಅಷ್ಟೇ.
ಶಿಷ್ಯ : ಸಾಕ್ಷಾತ್ಕಾರಕ್ಕೆ ಇರುವ ಅಡೆತಡೆಗಳು ಯಾವುವು?
: ಮನಸ್ಸಿನ ಅಭ್ಯಾಸಗಳು ಎಂದರೆ ವಾಸನೆಗಳು.
ಶಿ : ವಾಸನೆಗಳನ್ನು ಪರಿಹರಿಸಿಕೊಳ್ಳುವುದು ಹೇಗೆ?
: ಆತ್ಮಜ್ಞಾನದಿಂದ.
ಶಿ : ಎಂದರೆ ಇದೊಂದು ವಿಷವೃತ್ತವೇ ಆಯಿತು.
: ಅಂತಹ ಕಷ್ಟಗಳನ್ನು ತಂದೊಡ್ಡುವುದು ಜೀವದ ಅಹಂಕಾರ. ದ್ವಂದ್ವ ವಿರೋಧಾಭಾಸಗಳಿಂದ ಸಂಕಟಪಡುವುದು ಈ ಅಹಂಕಾರವೇ. ಈ ಪ್ರಶ್ನೆಗಳನ್ನು ಕೇಳುತ್ತಿರುವವನು ಯಾರು ಎಂದು ಹುಡುಕುತ್ತಾ ಹೋಗು. ಆತ್ಮಜ್ಞಾನ ಸಿದ್ಧಿಸುತ್ತದೆ.
ಶಿ : ಸಾಕ್ಷಾತ್ಕಾರಕ್ಕೆ ಸಹಕಾರಿಗಳು ಯಾವುವು?
: ಶಾಸ್ತ್ರ್ರಗಳ ಹಾಗೂ ಆತ್ಮಜ್ಞಾನಿಗಳ ಉಪದೇಶ.
ಶಿ : ಅಂತಹ ಉಪದೇಶಗಳು ಚರ್ಚೆ, ಉಪನ್ಯಾಸ, ಧ್ಯಾನ ಮುಂತಾದ ರೂಪಗಳಲ್ಲಿರಬಹುದೆ?
: ಹೌದು, ಇದೆಲ್ಲ ಅನುಷಂಗಿಕ ಸಹಕಾರಿಗಳು. ಗುರುಕೃಪೆಯೇ ಮೂಲಭೂತವಾದದ್ದು.
ಶಿ : ಅದು ದೊರೆಯಲು ಎಷ್ಟು ಕಾಲ ಹಿಡಿಯಬಹುದು?
: ಅದನ್ನು ತಿಳಿಯಲು ನಿನಗೇಕೆಆಸೆ?
ಶಿ : ನನಗೆ ಭರವಸೆ ದೊರೆಯುವುದಕ್ಕಾಗಿ.
ಮ : ಅಂತಹ ಅಪೇಕ್ಷೆಯೂ ಒಂದು ಆತಂಕವೇ. ಆತ್ಮವು ಸದಾ ಇರುವಂತಹದು, ಅದಿಲ್ಲದೆ ಬೇರೆ ಏನೂ ಇಲ್ಲ .ಆತ್ಮನಿಷ್ಠನಾಗು- ಈ ಎಲ್ಲ ಅಪೇಕ್ಷೆ, ಸಂದೇಹಗಳು ಮಾಯವಾಗುತ್ತವೆ. ಅಂತಹ ಆತ್ಮವು ಜಾಗೃತ್ ಸ್ವಪ್ನ ಸುಷುಪ್ತಿಗಳಲ್ಲಿ ಸಾಕ್ಷೀರೂಪದಲ್ಲಿರುತ್ತದೆ. ಈ ಎಲ್ಲ ಅವಸ್ಥೆಗಳೂ ಅಹಂಕಾರಕ್ಕೆ ಸಂಬಂಧಪಟ್ಟವು. ಆತ್ಮವು ಈ ಅಹಂ ಅನ್ನೂ ದಾಟಿಹೋಗುವಂತಹದು. ನಿದ್ರೆಯಲ್ಲಿ ನೀನು ಇರಲಿಲ್ಲವೇ? ಆಗ ನೀನು ನಿದ್ರಿಸುತ್ತಿದ್ದೇನೆ ಎಂದು ತಿಳಿದಿದ್ದೆಯಾ? ಅಥವಾ ಪ್ರಪಂಚವೇ ನಿನ್ನಪಾಲಿಗೆ ಇರಲಿಲ್ಲವೋ? ಜಾಗೃತ್ ಸ್ಥಿತಿಯಲ್ಲಿ ಮಾತ್ರ ನಿದ್ರೆಯ ಅನುಭವವನ್ನು ನೀನು ವರ್ಣಿಸಬಲ್ಲೆ ಆದುದರಿಂದ ಪ್ರಜ್ಞೆಎಂಬುದು ಜಾಗೃತ್‌ಸ್ಥಿತಿಯಲ್ಲೂ ನಿದ್ರೆಯಲ್ಲೂ ಬೆಳಗುತ್ತಲೇ ಇದೆ-ಒಂದೇ ಆಗಿದೆ. ಈ ಪ್ರಜ್ಞೆ ಏನೆಂಬುದನ್ನು ನೀನು ತಿಳಿದಲ್ಲಿ ಮೂರೂ ಅವಸ್ಥೆಗಳಲ್ಲಿ ಅದು ಸಾಕ್ಷೀಭೂತವಾಗಿದೆ ಎಂಬುದನ್ನು ತಿಳಿಯುವೆ. ನಿದ್ರೆಯಲ್ಲೂ ಎಚ್ಚರದಲ್ಲೂ ಜಾಗೃತವಾಗಿರುವ ಈ ಪ್ರಜ್ಞೆಯನ್ನು ಶೋಧಿಸಬೇಕು.

Leave a Reply