ಗಣಿತ ಮತ್ತು ಅಧ್ಯಾತ್ಮದ ಕಲಿಕೆ : ಸ್ವಾಮಿ ರಾಮತೀರ್ಥರ ವಿಚಾರ ಧಾರೆ

ಗಣಿತವನ್ನಾಗಲೀ ಅಧ್ಯಾತ್ಮವನ್ನಾಗಲೀ ಸರಳೀಕರಿಸಲು ಬರುವುದಿಲ್ಲ, ಈ ವಿಷಯವನ್ನು ಕಲಿಯಲು ಶ್ರದ್ಧೆ
ಜೊತೆಯಲ್ಲಿಮತ್ತೆ ಮತ್ತೆ ಮನನ ಮಾಡುವುದೇ ರಾಜಮಾರ್ಗ ಎನ್ನುತ್ತಾರೆ ಸ್ವಾಮಿ ರಾಮತೀರ್ಥ.

ಅಧ್ಯಾತ್ಮಕ್ಕೆ ಹತ್ತು ಹಲವು ಆಯಾಮಗಳಿದ್ದು ಈ ವಿವರಣೆಗಾಗಿ ಅದನ್ನು ವೇದ – ವೇದಾಂತಕ್ಕೆ ಸೀಮಿತಗೊಳಿಸಿಕೊಳುತ್ತೇನೆ. ಬಹು ಸ್ಥೂಲವಾಗಿ ಹೇಳುವುದಾದರೆ, ಜೀವಿಗು ಹಾಗೂ ಜಗತ್ತಿಗು ಇರುವ ಪರಸ್ಪರ ಸಂಬಂಧವನ್ನು ವಿಶ್ಲೇಷಿಸಿ, ತಮ್ಮ ತಮ್ಮ ಒಳಿತಿಗಾಗಿ ಹೇಗೆ ಒಂದಕ್ಕೊಂದು ಪೂರಕವಾಗಿ ಜೀವನಧರ್ಮವನ್ನು ಆಚರಿಸಬೇಕೆನ್ನುವುದನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಅಧ್ಯಾತ್ಮ ಹೊರಟಿರಬಹುದು. ಇಲ್ಲಿ ವೇದವ್ಯಾಸರಿಂದ ಸುವ್ಯವಸ್ಥಿತಗೊಳಿಸಲ್ಪಟ್ಟ ವೇದ ರಾಶಿಯನ್ನು ಆಧರಿಸಿ ಜೀವನಧರ್ಮದ ವ್ಯಾಖ್ಯಾನವನ್ನು. ನೀಡಲಾಗಿದೆ.

ವೇದವನ್ನು ಅಪೌರುಷೇಯವೆಂದು ಮತ್ತು ಸ್ವಯಂಸಿದ್ಧವೆಂದು ಒಪ್ಪಿಕೊಂಡು ತರ್ಕಬದ್ಧವಾಗಿ ಅಭಿಪ್ರಾಯಗಳನ್ನು ಮಂಡಿಸಲಾಗುತ್ತದೆ. ತರ್ಕಶಾಸ್ತ್ರವು ವಾದವನ್ನು ಪುಷ್ಟೀಕರಿಸಲು ಉಪಯೋಗಿಸುವ ಹಲವು ಉಪಾಯಗಳನ್ನು ಒಳಗೊಂಡು ಬಹಳ ವಿಸ್ತಾರವಾಗಿ ಬೆಳೆದಿದೆ.
ಅಧ್ಯಾತ್ಮ ಮತ್ತು ಗಣಿತ, ಈ ಎರಡೂ ವಿಷಯಗಳು ಮನಸ್ಸಿನ ಲೋಕದ ವ್ಯಾಪಾರಗಳು. ಈ ಎರಡು ವಿಷಯಗಳಲ್ಲೂ ಶುದ್ಧಶಾಸ್ತ್ರೀಯ ಮತ್ತು ಅನ್ವಯಿಕ ಎಂಬ ಮುಖಗಳನ್ನು ಗುರುತಿಸಬಹುದು. ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಭಾಷೆ
ಗಣಿತವಾದರೆ, ಜೀವನಧರ್ಮದ ಪರಿಭಾಷೆ ಅಧ್ಯಾತ್ಮವೆಂದು ಪರಿಗಣಿಸಬಹುದು. ಅಧ್ಯಾತ್ಮದಲ್ಲಿರುವ ಅಪೌರುಷೇಯ, ಸ್ವಯಂಸಿದ್ಧ ಸಾಕ್ಷಾತ್ಕಾರ ಮುಂತಾದ ಪರಿಕಲ್ಪನೆಗಳು ಗಣಿತದಲ್ಲೂ ಕಾಣಬರುತ್ತವೆ. ಈ ವಿಷಯಗಳಿಗೆ ಸಂವಾದಿಯಾದ ಪರಿಕಲ್ಪನೆಗಳು ಗಣಿತದಲ್ಲೂ ಕಾಣಬರುತ್ತವೆ.

ಗಣಿತದಲ್ಲೂ ಹಲವು ಪ್ರಕಾರಗಳಿದ್ದು ಅದರಲ್ಲಿ ಜ್ಯಾಮಿತಿಯನ್ನು ನಮ್ಮ ಉದ್ದೇಶಕ್ಕಾಗಿ ಗಮನಿಸೋಣ. ತನ್ನ ಸಮಯದಲ್ಲಿ ಲಭ್ಯವಿದ್ದ ಜ್ಯಾಮಿತಿಯ ಜ್ಞಾನರಾಶಿಯನ್ನು ವ್ಯವಸ್ಥಿಗೊಳಿಸಿ ಅದನ್ನು ಸಾಮಾನ್ಯರು ಉಪಯೋಗಿಸಬಹುದಾದ ಸ್ಥಿತಿಗೆ ತಂದಿದ್ದು ಯೂಕ್ಲಿಡ್‌ನ ಹಿರಿಮೆ. ಈ ಉದ್ದೇಶಕ್ಕಾಗಿ ಯೂಕ್ಲಿಡ್‌ ಐದು ಹೇಳಿಕೆಗಳನ್ನು (Axioms of Euclid) ಸ್ವಯಂಸಿದ್ಧವೆಂದು, ಅವುಗಳಿಗೆ ಬೇರೆ ಪ್ರಮಾಣ ಬೇಕಿಲ್ಲವೆಂದು ತಿಳಿಸಿ ಅವುಗಳ ಆಧಾರದ ಮೇಲೆ ತರ್ಕಬದ್ಧವಾಗಿ ಅಲ್ಲಿಯವರೆಗೆ ಗೊತ್ತಿದ್ದ ಜ್ಯಾಮಿತಿಯ ಫಲಿತಾಂಶಗಳನ್ನು ಪ್ರಮಾಣೀಕರಿಸಿ ತೋರಿಸುತ್ತಾನೆ.

ಈ ಸ್ವಯಂಸಿದ್ಧ ಹೇಳಿಕೆಗಳು ಅಪೌರುಷೇಯವೆಂದು ಹೇಳಬಹುದು; ಮುಂದುವರೆದು, ಯೂಕ್ಲಿಡ್‌ನನ್ನು ಒಬ್ಬ ಮಂತ್ರ ದ್ರಷ್ಟಾರನೆಂದು ತಿಳಿಯಬಹುದು. ಸ್ವರೂಪದಲ್ಲಿ, ಗಣಿತದಲ್ಲಿ ಉಪಯೋಗಿಸುವ ತರ್ಕಶಾಸ್ತ್ರ ಭಾರತೀಯ ತರ್ಕಶಾಸ್ತ್ರಕ್ಕಿಂತ ಬೇರೆಯಲ್ಲ.
ಇನ್ನು ಸಾಕ್ಷಾತ್ಕಾರ. ನಾವು ಜೀವನದಲ್ಲಿ ಅನುಸರಿಸಬೇಕಾದ ಒಂದು ಆಚರಣೆಯ ಮೂಲ ಉದ್ದೇಶ ಮತ್ತು ಸ್ವರೂಪ ನಮಗೆ ಆರಂಭದಲ್ಲಿ ಗೊತ್ತಾಗದಿರಬಹುದು. ಅದನ್ನು ಶ್ರದ್ಧೆಯಿಂದ ಆಚರಿಸಿ, ಅದರ ಬಗ್ಗೆ ಆಳವಾಗಿ ಓದಿ, ಮನನ ಮಾಡಿದರೆ ಕಾಲಕ್ರಮೇಣ ಆ ಉದ್ದೇಶ ಮತ್ತು ಸ್ವರೂಪಗಳು ನಮ್ಮ ಅರಿವಿಗೆ ಮೂಡುವುದನ್ನು ಸಾಕ್ಷಾತ್ಕಾರವೆನ್ನಬಹುದು.

ಅದೇ ರೀತಿಯಲ್ಲಿ ಗಣಿತದಲ್ಲೂ ಸಹ. ಉದಾಹರಣೆಗೆ ಜ್ಯಾಮಿತಿಯಲ್ಲಿ ಪೈಥಾಗೊರಸ್‌ನ ಪ್ರಮೇಯ. ಈ ಪ್ರಮೇಯದ ಹೇಳಿಕೆ ಅಷ್ಟೇನು ಕಠಿಣವಲ್ಲದ ಅರ್ಥವಾಗಿ ಅದನ್ನು ನಮಗೆ ಅಗತ್ಯವಿದ್ದ ಹಾಗೆ ಬಳಸಲು ಬರುತ್ತದೆ. ಆದರೆ, ಅದರ ಪ್ರಮಾಣ ಅಷ್ಟು ಸುಲಭದಲ್ಲಿ ನಮಗೆ ಸಿಗದು. ಹಲವು ಬಾರಿ ಅದನ್ನು ಅಭ್ಯಾಸ ಮಾಡಿದ ನಂತರ ಅದು ನಮ್ಮ ಅರಿವಿನ ಪ್ರಚಂಚಕ್ಕೆ ಪ್ರವೇಶಿಸುತ್ತದೆ. ಇದನ್ನೇ ಆ ಪ್ರಮಾಣದ ಸಾಕ್ವಾತ್ಕಾರವೆನ್ನಬಹುದು.

ಸಾಕ್ಷಾತ್ಕಾರವನ್ನು ಮಾಡಿಕೊಳ್ಳುವ ಬಗ್ಗೆ ಒಂದು ದೃಷ್ಟಾಂತ ನೋಡೋಣ.
ಪರಿವೀಕ್ಷಣೆಯನ್ನು ಕಲಿಯುವ ಆಸಕ್ತಿಯಿಂದ ವಿದ್ಯಾರ್ಥಿಯೊಬ್ಬ ತಜ್ಞನೊಂದಿಗೆ ವೀಕ್ಷಣೆಗಾಗಿ ವನಪ್ರದೇಶಕ್ಕೆ ತೆರಳುತ್ತಾನೆ. ಹಕ್ಕಿಯೊಂದರ ಕೂಗನ್ನು ಕೇಳಿದ ತಜ್ಞನು, ತತ್‌ಕ್ಷಣವೇ ಆ ದಿಕ್ಕಿನಲ್ಲಿ ನೋಡುತ್ತಾ ಮರವೊಂದರ ಮೇಲೆ ಕುಳಿತ ಹಕ್ಕಿಯನ್ನು ಗುರುತಿಸಿ ವಿದ್ಯಾರ್ಥಿಗೆ ತೋರಿಸುತ್ತಾನೆ. ತಜ್ಞನಿಗೆ, ನೋಡಿದ ಕೂಡಲೇ ಕಂಡ ಹಕ್ಕಿ ಅಷ್ಟು ಸುಲಭವಾಗಿ ವಿದ್ಯಾರ್ಥಿಗೆ ಗೋಚರವಾಗುವುದಿಲ್ಲ. ತಜ್ಞನು ಹಕ್ಕಿ ಕುಳಿತಿರುವ ಜಾಗದ ಬಗ್ಗೆ ಎಷ್ಟೇ ಸೂಚನೆ ನೀಡಿದರೂ, ವಿದ್ಯಾರ್ಥಿ ಅದರ ದರ್ಶನ ಪಡೆಯಲು ಬಹಳ ಧ್ಯಾನಿಸಿ ನೋಡಬೇಕು. ತಜ್ಞ ಎಷ್ಟೇ ವಿವರಣೆಗಳನ್ನು ನೀಡಿದರೂ ಸಾಕ್ಷಾತ್ಕಾರವನ್ನು ವಿದ್ಯಾರ್ಥಿ ಸ್ವಾನುಭವದಿಂದಲೇ ಪಡೆಯಬೇಕು.

ಈ ಸಂದರ್ಭದಲ್ಲಿ ತೈತೀರಿಯೋಪನಿಷತ್ತಿನ ಭೃಗುವಲ್ಲಿಯನ್ನು ನೆನೆಪಿಗೆ ತಂದುಕೊಳ್ಳಬಹುದು. ವರುಣನ ಮಗನಾದ ಭೃಗುವು ತಂದೆಯನ್ನು ಬ್ರಹ್ಮಜ್ಞಾನಾರ್ಜನೆಗೆಂದು ಆಶ್ರಯಿಸುತ್ತಾನೆ. ವರುಣನು ಬ್ರಹ್ಮನ ಲಕ್ಷಣಗಳನ್ನು ತಿಳಿಸಿ ಅದನ್ನು ತಪಸ್ಸಿನ ಮೂಲಕ ಅರಿತುಕೊಳ್ಳಲು ಹೇಳಿ ಕಳಿಸುತ್ತಾನೆ. ಭೃಗುವು ಬ್ರಹ್ಮ ಇದೇ ಇರಬಹುದು ಎಂದು ಗ್ರಹಿಸಿ ಮರಳಿ ಬಂದಾಗಲೆಲ್ಲ ವರುಣನ ಸೂಚನೆ ಮತ್ತೆ ತಪಸ್ಸು ಮಾಡು ಅಂತಷ್ಟೆ. ಭೃಗು ಹಂತಹಂತವಾಗಿ ಅರಿವಿನ ಮೆಟ್ಟಿಲುಗಳನ್ನು ಏರುವುದಕ್ಕೆ ವರುಣನು ಹೆಚ್ಚು ವಿವರಣೆಗಳನ್ನು ನೀಡದೆಯೇ ಸಹಾಯ ಮಾಡುತ್ತಾನೆ.

ಹಾಗೆಯೇ ಗಣಿತವನ್ನಾಗಲಿ, ಅಧ್ಯಾತ್ಮವನ್ನಾಗಲಿ ಸರಳೀಕರಿಸಲು ಬರುವುದಿಲ್ಲ ಈ ವಿಷಯವನ್ನು ಕಲಿಯಲು ಶ್ರದ್ಧೆ ಜೊತೆಯಲ್ಲಿ ಮತ್ತೆ ಮತ್ತೆ ಮನನ ಮಾಡುವುದೇ ರಾಜಮಾರ್ಗ. ವಿದ್ಯಾರ್ಥಿಗೆ ಕಲಿಯಲು ಶ್ರದ್ಧೆ ಇದ್ದು ಅವನು ಮುನ್ನಡೆಯುತ್ತಿರಬೇಕು. ಗುರುವಿನ ಮಾರ್ಗದರ್ಶನ ಅವನ ದಾರಿ ಸರಿಯಾದ ದಿಕ್ಕಿನಲ್ಲಿದೆಯೇ ಎಂದು ಹೇಳುವುದಷ್ಟೆ. ಇದು ಶಿಕ್ಷಣದ ಅತ್ಯುನ್ನತ ಸ್ತರ, ಹಾಗು ಜ್ಞಾನಪ್ರಪಂಚ ವಿಸ್ತಾರವಾಗುವುದು ಇಂತಹ ಸುಸಂಧಿಯಲ್ಲಿ. ಮುಖ್ಯವಾಗಿ ಗಣಿತ ಮತ್ತು ಅಧ್ಯಾತ್ಮಗಳೆರಡೂ ಇಂಥಾ ಸ್ವಯಂ ಅರಿವಿನಿಂದ ದಕ್ಕಿಸಿಕೊಳ್ಳಬೇಕಾದ ಸಂಗತಿಗಳೇ ಆಗಿವೆ.

Leave a Reply