ಕೂಡಿಟ್ಟ ಹಣ, ಕಟ್ಟಿದ ಜೇನು ಯಾವತ್ತೂ ಪರರ ಪಾಲು : ಸುಭಾಷಿತ

ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |
ಪಶ್ಯೇಹ ಮಧುಕರೀಣಾಂ ಸಂಚಿತಮರ್ಥಃ ಹರಂತ್ಯನ್ಯೇ || ಪಂಚತಂತ್ರ ||
“ಹಣವನ್ನು ದಾನ ಮಾಡಬೇಕು, ಅನುಭವಿಸಲೂಬೇಕು. ಸುಮ್ಮನೆ ಕೂಡಿಡಬಾರದು. ಜೇನು ಹುಳುಗಳು ಹಗಲಿರುಳು ಶ್ರಮಿಸಿ ಕೂಡಿಟ್ಟ ಜೇನನ್ನು ಇತರರು ಅಪಹರಿಸುತ್ತಾರೆ ನೋಡಿ, ಹಾಗೇ ಇದೂ ಪಲರ ಪಾಲಾಗುವುದು!” ಅನ್ನುತ್ತದೆ ಪಂಚತಂತ್ರ.


ಣವನ್ನು ಸಂಗ್ರಹಿಸಿ ಇಡಬಾರದು ಅನ್ನುವುದು ಎಲ್ಲಾ ಕಾಲದಲ್ಲಿಯೂ ಗುರುಸ್ಥಾನದಲ್ಲಿ ನಿಂತವರು ಹೇಳುತ್ತಲೇ ಬಂದಿರುವ ಮಾತು. ನಮ್ಮ ಪ್ರಾಚೀನ ಕಥೆಗಳು, ಬೋಧಪ್ರದ ಸಾಹಿತ್ಯ ಕೂಡ ಇದನ್ನು ಮೇಲಿಂದ ಮೇಲೆ ಹೇಳುತ್ತಲೇ ಬಂದಿವೆ. ಆದರೂ ನಮಗೆ ಹಣವನ್ನು ಕೂಡಿಡುವುದರಲ್ಲಿ ಆಸಕ್ತಿ.
ಹಣವನ್ನು ಕೂಡಿಡದೆ ಹೋದರೆ ಆಪತ್ಕಾಲದಲ್ಲಿ ಏನು ಮಾಡಬೇಕು ಅನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಾರೆ. ಆಪತ್ತು ನಿರ್ವಹಣೆಯ ಅಗತ್ಯಕ್ಕೆ ನಾವು ಉಳಿತಾಯ ಮಾಡಬೇಕು ನಿಜ. ಅಂತಹ ಸನ್ನಿವೇಶಕ್ಕೆ ಎಷ್ಟು ಮೊತ್ತ ಬೇಕಾಗುತ್ತದೆ ಅನ್ನುವುದು ಸಾಮಾನ್ಯ ಜ್ಞಾನ. ಅದೂ ಅಲ್ಲದೆ, ಉಳಿತಾಯಕ್ಕೂ ಕೂಡಿಡುವುದಕ್ಕೂ ವ್ಯತ್ಯಾಸವಿದೆ. ಉಳಿತಾಯವು ಬೀಜವನ್ನು ಬಿತ್ತಿದಂತೆ. ಕೂಡಿಟ್ಟ ಹಣ, ಅದೇ ಬೀಜವನ್ನು ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿಟ್ಟಂತೆ. ನೀವೇ ಯೋಚಿಸಿ. ಯಾವುದರಿಂದ ಹೆಚ್ಚು ಪ್ರಯೋಜನ?
ಆದ್ದರಿಂದ, ನಮ್ಮ ದುಡಿಮೆಯನ್ನು ಸರಿಯಾದ ದಾರಿಯಲ್ಲಿ ವಿನಿಯೋಗಿಸೋಣ. ಉಳಿತಾಯವೂ ವಿನಿಯೋಗವೇ. ಆದರೆ ಸಂಗ್ರಹಿಸಿ ಇಡುವುದು ಈ ವ್ಯಾಪ್ತಿಗೆ ಬರುವುದಿಲ್ಲ. ಸಂಗ್ರಹಿಸಿಟ್ಟ ಹಣ ಯಾವಾಗಲೂ ನಮ್ಮನ್ನು ರಕ್ಷಣೆಯ ಆತಂಕದಲ್ಲಿಡುತ್ತದೆ. ನಮ್ಮನ್ನು ಸ್ವಾರ್ಥಿಗಳನ್ನಾಗಿಯೂ ಲೋಭಿಗಳನ್ನಾಗಿಯೂ ಮಾಡುತ್ತದೆ.
ದುಡಿದ ಹಣ ಗಳಿಸಿದ ನಂತರವೂ ನೀವು ಅಶಾಂತಿಯಿಂದ ಇರಲುಬಯಸುತ್ತೀರೋ, ನೆಮ್ಮದಿಯಿಂದ ಇರುವುದನ್ನು? ಆಯ್ಕೆ ನಿಮ್ಮದು.

Leave a Reply