ಮನಸ್ಸಿಗೆ ಬೀಗ ಹಾಕಿಕೊಂಡು ಗಪ್ಪನೆ ಕುಳಿತರೆ ಯಾವ ಸಂತೋಷವೂ ಬೀಗ ಮುರಿದು ನಿಮ್ಮೊಳಗೆ ಪ್ರವೇಶಿಸಲು ಸಾಧ್ಯವಿಲ್ಲ. ನೀವು ನಿಮ್ಮ ಬೀಗ ತೆರೆಯುವುದನ್ನು ಬಿಟ್ಟು, ಕೀಲಿ ಹುಡುಕಿಕೊಳ್ಳುವುದನ್ನು ಬಿಟ್ಟು, ಸಂತೋಷ ನನ್ನನ್ನು ಪ್ರವೇಶಿಸುತ್ತಿಲ್ಲ, ನಾನು ನತದೃಷ್ಟೆ/ನತದೃಷ್ಟ ಎಂದು ಗೋಳಾಡಿದರೆ ಏನು ಬಂತು? | ಅಲಾವಿಕಾ
ನಮ್ಮನ್ನು ಯಾತನೆಗೆ ಒಳಪಡಿಸುವ ಸಂಗತಿಗಳು ಯಾವುವು? – ಈ ಪ್ರಶ್ನೆಗೆ ಸಾಮಾನ್ಯ ಉತ್ತರ “ಸಂಪತ್ತು ಮತ್ತು ಪ್ರೇಮ”. ಇದು ಪೂರ್ಣ ನಿಜವಲ್ಲ. ಇದನ್ನು ನಾವು ಹೇಳಬೇಕಾದ್ದು ಹೀಗೆ; “ನಾವು ಸಂಪತ್ತು ಮತ್ತು ಪ್ರೇಮದ ಕಾರಣದಿಂದ ಯಾತನೆಯನ್ನು ಬರ ಮಾಡಿಕೊಳ್ಳುತ್ತೇವೆ” ಎಂದು. ಏಕೆಂದರೆ ಹಣವಾಗಲೀ ಪ್ರೇಮವಾಗಲೀ ತಾವಾಗಿಯೇ ನಮಗೆ ಯಾತನೆ ನೀಡುವುದಿಲ್ಲ. ನಮ್ಮನ್ನು ನೋಯುವಂತೆ ಮಾಡುವುದು ನಮ್ಮ ಮೂರ್ಖತನ. ನಾವು ಒದ್ದಾಡುವುದು, ಚಡಪಡಿಸುವುದು, ನಿರಾಶರಾಗುವುದು, ಎಲ್ಲವೂ ನಮ್ಮ ಮೂರ್ಖತನದ ಕಾರಣದಿಂದಲೇ ಹೊರತು ಸಂಪತ್ತಾಗಲೀ ಪ್ರೇಮವಾಗಲೀ ಅದಕ್ಕೆ ಹೊಣೆಯಲ್ಲ. ಕೆಡುಕು ಹೊರಗೆ ಎಲ್ಲಿಂದಲೋ ಬರುವುದಿಲ್ಲ. ಹೊರಗಿನ ಯಾವುದೋ ಸಂಗತಿ ನಮ್ಮನ್ನು ಯಾತನೆಗೆ ಗುರಿ ಮಾಡುವುದಿಲ್ಲ. ನಾವು ಅನುಭವಿಸುವ ಪ್ರತಿಯೊಂದು ಸುಖ ದುಃಖಕ್ಕೂ ನಾವೇ ಕಾರಣವಾಗಿರುತ್ತೇವೆ. ಇದನ್ನು ಅರಿತ ಮರುಕ್ಷಣ ನಾವು ಅದರಿಂದ ಹೊರಗೆಬರುತ್ತೇವೆ.
ಕೆಡುಕರ ನಾನು ಹುಡುಕುತ ಹೊರಟೆ, ಕೆಡುಕರಾರು ಸಿಗಲಿಲ್ಲ.
ನನ್ನಯ ಮನವನು ನಾನೆ ನೋಡೆ, ನನಗಿಂತ ಕೆಡುಕರಿಲ್ಲ
ಅನ್ನುತ್ತಾನೆ ಕಬೀರ.
ನಾವು ನಮ್ಮೊಳಗೆ ಅವಿತಿರುವ ಕೇಡಿಯನ್ನು ಭದ್ರವಾಗಿ ಕಾಪಾಡಿಕೊಂಡು ಹೊರಗೆ ದೊಣ್ಣೆ ಹಿಡಿದು ಅಲೆಯುತ್ತೇವೆ. ಧ್ಯಾನ, ದಾನಾದಿ ಪುಣ್ಯ ಕಾರ್ಯ, ದೇವಸ್ಥಾನ ಪ್ರದಕ್ಷಿಣೆ, ಪೂಜೆ – ಪುನಸ್ಕಾರ ಎಂದು ಏನೆಲ್ಲ ಮಾಡುತ್ತೇವೆ. ಕೆಡುಕು ಅಳಿಯಲಿ, ನಮಗೆ ಒಳಿತಾಗಲಿ ಎಂದು ಎಷ್ಟೆಲ್ಲ ಹರಕೆ ಕಟ್ಟಿಕೊಳ್ಳುತ್ತೇವೆ. ಒಳಗಿನ ಕೇಡಿ ಸುರಕ್ಷಿತವಾಗಿರುವಷ್ಟು ಕಾಲ ನಮಗೆ ಒಳಿತಾಗುವುದಾದರೂ ಎಲ್ಲಿಂದ? ಅದನ್ನು ನಾವು ಯೋಚಿಸುವುದೇ ಇಲ್ಲ.
ಸಂಪತ್ತು ವಾಸ್ತವದಲ್ಲಿ ನಮ್ಮೊಳಗಿನ ನೆಮ್ಮದಿಯನ್ನು ಕಾಯ್ದಿರಿಸುವ ಸಂಗತಿ. ಆದರೆ ನಾವು ಅದೇ ಸಂಪತ್ತಿನಿಂದ ನಮ್ಮೊಳಗಿನ ಕೆಡುಕನ್ನು ಉದ್ದೀಪಿಸಿಕೊಳ್ಳುತ್ತೇವೆ. ಸಮಸ್ಯೆ ಶುರುವಾಗುವುದೇ ಅಲ್ಲಿಂದ. ಸಂಪತ್ತು ನಮಗೆ ಜೀವನದ ಮೂಲಭೂತ ಅಗತ್ಯಗಳನ್ನು ಪೂರೈಸುತ್ತದೆ. ಅನ್ನಾಹಾರ, ಆರೋಗ್ಯ ಮತ್ತು ಆಶ್ರಯ ನೀಡುತ್ತದೆ. ನಮ್ಮ ನೆಮ್ಮದಿಗೆ ಇಷ್ಟು ಸಾಕು. ಆದರೆ ನಾವು ಸಂಪತ್ತನ್ನು ನಮ್ಮ ಪ್ರತಿಷ್ಠೆಯ ಪ್ರದರ್ಶನಕ್ಕೆ, ಇನ್ಯಾರದೋ ಜೊತೆಗಿನ ಸ್ಪರ್ಧೆಗೆ, ಮತ್ತೊಬ್ಬರ ಮೇಲಿನ ಜಿದ್ದಿಗೆ ಬಳಸತೊಡಗುತ್ತೇವೆ. ಇದು ಸಂಪತ್ತಿನ ದೋಷವಲ್ಲ. ಸಂಪತ್ತನ್ನು ಆ ಮಾರ್ಗದಲ್ಲಿ ಬಳಸುವ ನಮ್ಮೊಳಗಿನ ಕೇಡಿಯ ದೋಷ. ಈ ಕೇಡಿಯನ್ನು ಮಟ್ಟಹಾಕದೆ ಸಂಪತ್ತನ್ನು ವಿಷವೆಂದು ದೂಷಿಸುವುದು ಕೇವಲ ಪಲಾಯನವಾದವಷ್ಟೇ.
ಹಾಗೇ ಪ್ರೇಮ ಕೂಡಾ. ಪ್ರೇಮ ಯಾವುದೇ ಜೀವಿಯ ಮೂಲಗುಣ. ಪಂಚಭೂತಗಳಿಂದ ದೇಹ ತಯಾರಾಗುವಂತೆಯೇ ಮನಸ್ಸು ಶಾಂತಿ, ಆನಂದ ಮತ್ತು ಪ್ರೇಮದಿಂದ ತಯಾರಾಗಿದೆ. ಪ್ರೇಮ ನಮ್ಮೊಳಗೇ ಇದೆ. ಅದರ ಅಭಿವ್ಯಕ್ತಿಗೆ ಒಂದು ಮಾಧ್ಯಮ ಬೇಕಾಗಿ, ನಾವು ನಮಗೆ ಇಷ್ಟವಾಗುವ ವ್ಯಕ್ತಿಯನ್ನು ಹುಡುಕಿಕೊಳ್ಳುತ್ತೇವೆ ಮತ್ತು ಅವರ ಮೂಲಕ, ಅವರನ್ನು ಪ್ರೀತಿಸುವ ಮೂಲಕ ನಮ್ಮ ಪ್ರೇಮವನ್ನು ವ್ಯಕ್ತಗೊಳಿಸುತ್ತೇವೆ. ಅಕಸ್ಮಾತ್ ಆ ವ್ಯಕ್ತಿ ದೂರವಾದಲ್ಲಿ – ಅದಕ್ಕೆ ಕಾರಣಗಳೇನೇ ಇರಬಹುದು; ಆ ವ್ಯಕ್ತಿ ನಮ್ಮ ಪ್ರೇಮಕ್ಕೆ ಸ್ಪಂದಿಸದೆಹೋದಲ್ಲಿ ನಾವು ನಿರಾಶೆಗೊಳ್ಳುತ್ತೇವೆ. ಮತ್ತು ಪ್ರೇಮ ಅತ್ಯಂತ ಯಾತನಾದಾಯಿ ಸಂಗತಿ ಎಂದು ದೂರುತ್ತೇವೆ.
ನಾವು ಪ್ರೇಮದ ಅಭಿವ್ಯಕ್ತಿಗೆ ಮತ್ತೊಬ್ಬರನ್ನು ಆಶ್ರಯಿಸುವ ಬದಲು ನಮ್ಮನ್ನೇ ಆಶ್ರಯಿಸುವುದನ್ನು ಕಲಿಯಬೇಕು. ನಮ್ಮನ್ನು ನಾವು ಪ್ರೀತಿಸಿಕೊಳ್ಳಲು ಕಲಿತರೆ, ಪ್ರೇಮವನ್ನು ಮತ್ತೊಬ್ಬರ ಮೇಲೆ ‘ಹೇರುವುದು’ ಮತ್ತು ಅದರ ಕಷ್ಟ – ಸುಖಗಳಿಗೆ ಅವರನ್ನು ಹೊಣೆಗಾರರಾಗಿಸಿ ಕೊರಗುವುದು ತಪ್ಪುತ್ತದೆ. ಹಾಗೆಯೇ ಪ್ರೇಮವನ್ನು ದೂರುವುದು ಕೂಡಾ.
ನಮಗೆ ಖುಷಿಯಾಗಿರಲು ಹೆಚ್ಚೇನೂ ಬೇಕಿಲ್ಲ. ಒಂದೊಳ್ಳೆ ಊಟ, ರುಚಿಯಾದ ಚಾಟ್ಸ್, ಚೆಂದದ ಸಿನೆಮಾ, ಉತ್ತಮ ಪುಸ್ತಕ ಇವು ನಮ್ಮನ್ನು ಖುಷಿಪಡಿಸಬಲ್ಲವು. ಅವೆಲ್ಲದರಿಂದ ನಾವು ಸಂತೋಷಪಡಬಲ್ಲೆವು ಅನ್ನುವ ನಮ್ಮ ನಿರ್ಧಾರದಿಂದ ಇದು ಸಾಧ್ಯವಾಗುತ್ತದೆ. “ಇಲ್ಲ, ನಾನು ಖುಷಿ ಪಡಲಾರೆ” ಎಂದು ಮನಸ್ಸಿಗೆ ಬೀಗ ಹಾಕಿಕೊಂಡು ಗಪ್ಪನೆ ಕುಳಿತರೆ ಯಾವುದೂ ಬೀಗ ಮುರಿದು ನಿಮ್ಮೊಳಗೆ ಪ್ರವೇಶಿಸಲು ಸಾಧ್ಯವಿಲ್ಲ. ನೀವು ನಿಮ್ಮ ಬೀಗ ತೆರೆಯುವುದನ್ನು ಬಿಟ್ಟು, ಕೀಲಿ ಹುಡುಕಿಕೊಳ್ಳುವುದನ್ನು ಬಿಟ್ಟು, ಸಂತೋಷ ನನ್ನನ್ನು ಪ್ರವೇಶಿಸುತ್ತಿಲ್ಲ, ನಾನು ನತದೃಷ್ಟೆ/ನತದೃಷ್ಟ ಎಂದು ಗೋಳಾಡಿದರೆ ಏನು ಬಂತು?
ಹೋಲಿಕೆಯಿಂದ, ಸ್ಪರ್ಧೆಯಿಂದ, ಪೊಸೆಸಿವ್’ನೆಸ್ ಇಂದ, ಹಪಾಹಪಿಯಿಂದ ಏನೆಲ್ಲ ಸಮಸ್ಯೆಗಳಾಗುತ್ತವೆ ಅನ್ನುವುದನ್ನು ಕಥೆಯ ಮೂಲಕ, ಕಾವ್ಯದ ಮೂಲಕ, ಸುತ್ತಮುತ್ತಲಿನ ಬದುಕಿನ ಮೂಲಕ ನೋಡುತ್ತಲೇ ಬಂದಿದ್ದೇವೆ, ನಮಗೆ ಇವೆಲ್ಲ ತಿಳಿವು ಹೊಸತೇನೂ ಅಲ್ಲ. ಆದರೂ ನಾವು ಅವುಗಳಲ್ಲಿ ಸಿಲುಕಿ ಯಾತನೆ ಪಡುವುದು ನಿಂತಿಲ್ಲ. ಇದಕ್ಕೆ ಕಾರಣ, ಆ ಅರಿವು ನಮ್ಮೊಳಗನ್ನು ಪ್ರವೇಶಿಸಿ, ಭದ್ರವಾಗಿ ಕುಳಿತಿರುವ ಕೇಡಿಯನ್ನು ಹೊಡೆದೋಡಿಸದೆ ಇರುವುದು. ಅದು ಯಾವ ತಿಳಿವಿನ ಬೆಳಕೂ ಅಂತರಂಗ ಹೊಕ್ಕಲು ಅವಕಾಶವನ್ನೇ ಕೊಡುವುದಿಲ್ಲ. ಇದು ನಮ್ಮ ಮೂರ್ಖತನವಷ್ಟೇ.
ಆದ್ದರಿಂದ, ಯಾತನೆಗೆ ಕಾರಣವಾಗಿರುವ ಆ ಬೀಗ ತೆರೆಯಿರಿ. ಮೂರ್ಖರಷ್ಟೇ ಯಾತನೆಪಡುವರು ಅನ್ನುವ ಕಹಿ ಸತ್ಯವನ್ನು ಅರ್ಥ ಮಾಡಿಕೊಳ್ಳಿ. ಬುದ್ಧಿವಂತರಾಗಿ ಮತ್ತು ಸಂತೋಷದಿಂದಿರಿ. ಸಾಧ್ಯವಿಲ್ಲ ಅನ್ನುವುದಾದರೆ, ಅದು ನಿಮ್ಮದೇ ಆಯ್ಕೆ. ಮೂರ್ಖರಾಗಿಯೇ ಉಳಿಯಿರಿ ಮತ್ತು ಯಾತನೆ ಪಡುತ್ತಲೇ ಇರಿ!