ಸದ್ಗುರುವೆಂದರೆ ಯಾರು? ಯಾವ ಲಿಂಗ ಕುಲ ಜಾತಿಗೆ ಸೇರಿದವರು?

ಈ ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ, ಸದ್ಗುರು ನಿರ್ದಿಷ್ಟ ವ್ಯಕ್ತಿಯೇ ಆಗಿರಬೇಕಿಲ್ಲ. ಅಥವಾ ಅದು ಚರ – ಜೀವವೇ ಆಗಿರಬೇಕಾಗಿಯೂ ಇಲ್ಲ. ಒಂದು ಜಡ ವಸ್ತುವೂ ನಮಗೆ ಗುರುವಾಗಬಲ್ಲದು, ಸದ್ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲದು.   ಹಾಗೆಯೇ  ನಿರ್ದಿಷ್ಟ ಜಾತಿಗೆ, ಕುಲಕ್ಕೆ, ಲಿಂಗಕ್ಕೆ, ವಯಸ್ಸಿಗೆ ಸೇರಿದವರೇ ಸದ್ಗುರುವಾಗುತ್ತಾರೆ/ ಆಗಬೇಕು ಎಂದೇನೂ ಇಲ್ಲ.

ಸದ್ಗುರುವನ್ನು ಸಾಮಾನ್ಯ ಮನುಷ್ಯನೆಂದು ತಿಳಿಯಬಾರದು. “ಪರಬ್ರಹ್ಮವೇ ಸದ್ಗುರು ರೂಪದಿಂದ ತೋರುತ್ತಿದೆ” ಎಂದು ಭಾವಿಸಬೇಕು.

ಯಸ್ಯಾಂತರ್ನಾದಿಮಧ್ಯಂ ನ ಹಿ ಕರಚರಣಂ ನಾಮಗೋತ್ರಂ ನ ಸೂತ್ರಂನೋ ಜಾತಿರ್ನೈವ ವರ್ಣೋ ನ ಭವತಿ ಪುರುಷೋ ನೋ ನಪುಂಸಂ ನ ಚ ಸ್ತ್ರೀಃ ನಾಕಾರಂ ನೋ ವಿಕಾರಂ ನ ಹಿ ಜನಿಮರಣಂ ನಾಸ್ತಿ ಪುಣ್ಯಂ ನ ಪಾಪಂನೋ ತತ್ತ್ವಂ ತತ್ತ್ವಮೇಕಂ ಸಹಜಸಮರಸಂ “ಸದ್ಗುರುಂ” ತಂ ನಮಾಮಿ॥

ಸದ್ಗುರುಸ್ವರೂಪವನ್ನು ಈ ಶ್ಲೋಕದಲ್ಲಿ ಅತ್ಯಂತ ಸಮರ್ಪಕವಾಗಿ ವರ್ಣಿಸಲಾಗಿದೆ. ಈ ಶ್ಲೋಕದಲ್ಲಿ ಹೇಳಿರುವಂತೆ,

ಸದ್ಗುರುವಿಗೆ ಆದಿ ಮಧ್ಯ ಅಂತಗಳೇ ಇರುವುದಿಲ್ಲ

ಸದ್ಗುರುವಿಗೆ ದೇಹ, ಇಂದ್ರಿಯ, ಮನಸ್ಸು ಬುದ್ಧಿಗಳಿರುವುದಿಲ್ಲ

ಹೆಸರಾಗಲೀ ಕುಲಗೋತ್ರಗಳಾಗಲೀ ಶಾಖಾಸೂತ್ರಗಳಾಗಲೀ ಇಲ್ಲ.

ಜಾತಿ ವರ್ಣ ಆಶ್ರಮಗಳಾವುದೂ ಸದ್ಗುರುವಿಗೆ ಇಲ್ಲ.

ಸದ್ಗುರುವು ಗಂಡೂ ಅಲ್ಲ, ಹೆಣ್ಣೂ ಅಲ್ಲ, ನಪುಂಸಕರೂ ಅಲ್ಲ.

ಸದ್ಗುರುವಿಗೆ ಆಕಾರವಿಕಾರಗಳಾಗಲೀ ಬಣ್ಣಗಳಾಗಲೀ ಇಲ್ಲ.

ಸದ್ಗುರುವಿಗೆ ಹುಟ್ಟು, ಮುಪ್ಪು, ರೋಗ, ಮರಣಗಳಾವುವೂ ಇಲ್ಲ.

ಸದ್ಗುರುವು ಪುಣ್ಯಪಾಪಗಳೆಂಬ ಬಂಧನವನ್ನು ಮೀರಿರುತ್ತಾನೆ.

ಸದ್ಗುರುವು ಮನುಷ್ಯನೂ ಅಲ್ಲ ದೇವತೆಯೂ ಅಲ್ಲ ಅಸುರನೂ ಅಲ್ಲ.

ಸಹಜ ಸಮರಸವಾದ ಪರಿಪೂರ್ಣವಾದ ಪರಬ್ರಹ್ಮವೇ ಸದ್ಗುರು.

ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ಪರಬ್ರಹ್ಮವೇ ನಮ್ಮ ಪಾಲಿಗೆ ಸದ್ಗುರು ರೂಪದಿಂದ ತೋರುತ್ತಿದೆ ಎಂದು ನಾವು ಭಾವಿಸಬೇಕು.

ಈ ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ ಸದ್ಗುರು ನಿರ್ದಿಷ್ಟ ವ್ಯಕ್ತಿಯೇ ಆಗಿರಬೇಕಿಲ್ಲ. ಅಥವಾ ಅದು ಚರ – ಜೀವವೇ ಆಗಿರಬೇಕಾಗಿಯೂ ಇಲ್ಲ. ಒಂದು ಜಡ ವಸ್ತುವೂ ನಮಗೆ ಗುರುವಾಗಬಲ್ಲದು, ಸದ್ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲದು.   ಹಾಗೆಯೇ ನಿರ್ದಿಷ್ಟ ಜಾತಿಗೆ, ಕುಲಕ್ಕೆ, ಲಿಂಗಕ್ಕೆ, ವಯಸ್ಸಿಗೆ ಸೇರಿದವರೇ ಸದ್ಗುರುವಾಗುತ್ತಾರೆ/ ಆಗಬೇಕು ಎಂದೇನೂ ಇಲ್ಲ.

ಈ ಸನಾತನ ಶ್ಲೋಕದಲ್ಲಿ ಗಂಡು ಮತ್ತು ಹೆಣ್ಣಿನ ಜೊತೆ ನಂಪುಸಕಲಿಂಗವನ್ನೂ ಸೇರಿಸಿ ಸರ್ವ ಸಮಾನತೆ   ತೋರಿರುವ ಅಂಶ ಆಸಕ್ತಿಕರವಾಗಿದೆ. ಈ ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ತೃತೀಯ ಲಿಂಗಿಗಳು ಎಂದು ಯಾರನ್ನು ಗುರುತಿಸುತ್ತೀವೋ, ಆ ಲಿಂಗವನ್ನು ಸಮಾನ ಸ್ತರದಲ್ಲಿ ಇರಿಸಿರುವುದು ನಮಗೆ ದೊಡ್ಡ ಪಾಠ. ಹಾಗೆಯೇ  ಕುಲ ಗೋತ್ರ ಜಾತಿ ವರ್ಣಾಶ್ರಮಗಳಿಲ್ಲ ಅನ್ನುವ ಮೂಲಕ ಆಧುನಿಕರ ಜಾತಿ ಮತೀಯ ಅತಿರೇಕಗಳಿಗೆ  ನಮ್ಮ ಸನಾತನರು ಸರಿಯಾದ ಮದ್ದನ್ನೇ ಅರೆದಿದ್ದಾರೆ. ಒಟ್ಟಾರೆಯಾಗಿ ಈ  ಶ್ಲೋಕದ ಅರ್ಥ ಇಷ್ಟೇ, ಸದ್ಗುರು “ಪರಬ್ರಹ್ಮವಲ್ಲದೆ ಮತ್ತೇನೂ ಅಲ್ಲ’. ಇದು ಪರಬ್ರಹ್ಮವೇ ಸದ್ಗುರು ಎಂದೂ ಸದ್ಗುರುವೇ ಪರಬ್ರಹ್ಮ ಎಂದೂ ಎರಡೂ ಬಗೆಯ ವ್ಯಾಖ್ಯಾನ ನೀಡಿ ಅದ್ಭುತವಾದ ಹೊಳಹನ್ನು ನೀಡುತ್ತಿದೆ.

Leave a Reply