ಮನುಷ್ಯನನ್ನು ದೇವರಿಂದ ಕಾಪಾಡಬೇಕೆಂದರೆ ದೈವ ವಿರೋಧಿಯಾಗುವುದಲ್ಲ, ನಾಸ್ತಿಕನಾಗುವುದಲ್ಲ : ಯುಜಿ ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ಪ್ರಶ್ನೆ : ನೀವು ಆಗಾಗ ಹೇಳುತ್ತೀರಿ ನಮ್ಮನ್ನ ದೇವರು ಮಾತ್ರ ಕಾಪಾಡಬಹುದೆಂದು, ಹಾಗಾದರೆ ದೇವರ ಬಗ್ಗೆ ನಿಮ್ಮ ಪರಿಕಲ್ಪನೆ ಏನು ?
ಯೂಜಿ : ಇಲ್ಲ ಇಲ್ಲ, ಅದು ನಾನು ಮಾತಾಡುವ ರೀತಿ ಮಾತ್ರ (ನಗು). ನಿಜವಾಗಿ ನೋಡಿದರೆ ಮನುಷ್ಯನನ್ನು ದೇವರಿಂದ ಕಾಪಾಡಬೇಕು, ಅದು ಈಗ ಆಗಬೇಕಾಗಿರುವ ಅತ್ಯಂತ ಅವಶ್ಯಕ ಕೆಲಸ. ನಾನು ‘ದೇವರು’ ಪದ ಬಳಸುವಾಗ ನೀವು ಅರ್ಥೈಸುವಂತೆ ‘ದೇವರು’ ಪದ ಬಳಸುವುದಿಲ್ಲ. ನನ್ನ ಪ್ರಕಾರ ದೇವರು ಎಂದರೆ ಕೇವಲ ದೇವರು ಮಾತ್ರ ಅಲ್ಲ ದೇವರು ಕಾರಣನಾಗಿರುವ ಎಲ್ಲವೂ… ಕರ್ಮ, ಪುನರ್ಜನ್ಮ, ಸಾವಿನ ನಂತರದ ಬದುಕು ಮುಂತಾಗಿ, ನಾವು ಯಾವುದನ್ನ ಭಾರತದ ಪರಂಪರೆ ಎನ್ನುತ್ತೇವೆಯೋ ಅದೆಲ್ಲವೂ. ಕೇವಲ ಜನರನ್ನ ಮಾತ್ರ ಅಲ್ಲ; ಇಡೀ ದೇಶವನ್ನೇ ಈ ಪರಂಪರೆಯಿಂದ ಕಾಪಾಡಬೇಕು ( ಆದರೆ ಕ್ರಾಂತಿಯಿಂದಲ್ಲ, ಕಮ್ಯುನಿಸ್ಟ್ ದೇಶಗಳಲ್ಲಿ ಮಾಡಿದಂತಲ್ಲ …ಅದು ಸರಿ ದಾರಿ ಅಲ್ಲ. ನನಗೆ ಗೊತ್ತಿಲ್ಲ ಈ ವಿಷಯವೇ ತುಂಬ ಇಕ್ಕಟ್ಟಿನದು) ಇಲ್ಲವಾದರೆ ಜನರಿಗೆ ವೈಯಕ್ತಿಕವಾಗಿ ಮತ್ತು ದೇಶಕ್ಕೆ ಸಮಗ್ರವಾಗಿ ಯಾವ ಭರವಸೆ ಇಲ್ಲ.
ಮನುಷ್ಯನನ್ನು ದೇವರಿಂದ ಕಾಪಾಡಬೇಕೆಂದರೆ ದೈವ ವಿರೋಧಿಯಾಗುವುದಲ್ಲ, ನಾಸ್ತಿಕನಾಗುವುದಲ್ಲ. ನನಗೆ, ಈ ಆಸ್ತಿಕ, ನಾಸ್ತಿಕ ಮತ್ತು ಇವರಿಬ್ಬರ ನಡುವೆ ಇರುವ ಅಗ್ನಾಸ್ಟಿಕ್ ( ದೇವರ ಬಗ್ಗೆ ಖಚಿತ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲದವನು) ಎಲ್ಲರೂ ಒಂದೇ ದೋಣಿಯ ಪ್ರಯಾಣಿಕರು.
ವೈಯಕ್ತಿಕವಾಗಿ ನನಗೆ, ಮನುಷ್ಯನ ಹೊರಗೆ ಯಾವ ಶಕ್ತಿಯೂ ಇಲ್ಲ, ಮನುಷ್ಯನಿಗೆ ಒದಗಬಲ್ಲ ಎಲ್ಲ ಶಕ್ತಿಯೂ ಅವನ ಒಳಗಿನಿಂದಲೇ ಹುಟ್ಟಿಕೊಳ್ಳುವಂಥದು. ಹಾಗಿರುವಾಗ ಮನುಷ್ಯನ ಹೊರಗೆ ಯಾವುದೋ ಒಂದು ಶಕ್ತಿಯನ್ನ ಕಲ್ಪಿಸಿಕೊಂಡು ಅದಕ್ಕೆ ಸಂಕೇತಗಳನ್ನು ಗಂಟುಹಾಕಿ ಆರಾಧನೆ ಮಾಡುವಲ್ಲಿ ಯಾವ ಅರ್ಥವಿದೆ? ಆದ್ದರಿಂದಲೇ ನಾನು ಮೇಲಿಂದ ಮೇಲೆ ಒತ್ತಿ ಹೇಳುವುದು,
“ ದೇವರು ಮನುಷ್ಯನಿಗೆ ಅಪ್ರಸ್ತುತ”, ಹಾಗೆಂದ ಮಾತ್ರಕ್ಕೆ ದೇವಸ್ಥಾನಗಳನ್ನು ಒಡೆಯುವುದು, ಧಾರ್ಮಿಕ ಗ್ರಂಥಗಳನ್ನು ಹರಿಯುವುದು, ಬೆಂಕಿಗೆ ಹಾಕುವುದು ಎಲ್ಲ ದಡ್ಡತನ, ಹಾಸ್ಯಾಸ್ಪದ ಏಕೆಂದರೆ ಇವು ಜಾಗಮಾಡಿಕೊಂಡಿರುವುದು ಮನುಷ್ಯನ ಒಳಗೆ ಹೊರಗಲ್ಲ. ಇಂಥ ಸಾಂಕೇತಿಕತೆಯಿಂದ ಭಾವನಗಳನ್ನು ಉದ್ರೇಕಿಸಬಹುದೇ ಹೊರತು ಮನಸ್ಸುಗಳು ಪೂರ್ಣವಾಗಿ ಬದಲಾಗುವುದು ಬಹಳ ಸೀಮಿತ.
ಹೌದು ಮನುಷ್ಯನಿಗೆ ದೇವರು ಅಪ್ರಸ್ತುತ, ಅವನು ನಿರ್ಭರನಾಗಬೇಕಿರುವುದು ತನ್ನೊಳಗಿನ ಸಂಪನ್ಮೂಲಗಳ ಮೇಲೆ. ನಾವು ಯಾವುದನ್ನ ಪರಂಪರೆ ಎನ್ನುತ್ತೇವೆಯೋ ಆ ಪರಂಪರೆ ಈ ಮನುಷ್ಯನನ್ನು ನಿರ್ಮಿಸಿದೆ, ಎಲ್ಲ ತತ್ವಜ್ಞಾನ, ಹಿಂದಿನ ಮನುಷ್ಯ ಚಿಂತಿಸಿದ ಎಲ್ಲವೂ ಈ ಮನುಷ್ಯನ ಭಾಗವಾಗಿದೆ, ಈ ಎಲ್ಲವೂ ಹೊಸದಾಗಿ ಅಭಿವ್ಯಕ್ತವಾಗಬೇಕು ಆಗ ಮಾತ್ರ ಮನುಷ್ಯನ ಬೆಳವಣಿಗೆ. ಹಾಗಾಗದೇ ಹೋದಾಗ ಮತ್ತದೇ ಸಂಕಟಗಳು, ಆತಂಕಗಳು.