ವಿಪಸ್ಸನ : ಬುದ್ಧ ಗುರು ಬೋಧಿಸಿದ ಅದ್ಭುತ ಧ್ಯಾನ

ಒಂದೆಡೆ ನಮ್ಮ ದೇಹವಿದೆ, ಮತ್ತೊಂದೆಡೆ ನಮ್ಮ ಪ್ರಜ್ಞೆ ಅಥವಾ ಚೇತನ. ಈ ಎರಡನ್ನೂ ಬೆಸೆಯುವುದು ನಡುವೆ ಇರುವ ಶ್ವಾಸ. ಶ್ವಾಸ ಇರುವಷ್ಟೂ ಕಾಲ ನಮ್ಮ ದೇಹವು ಪ್ರಜ್ಞೆಯೊಡನೆ, ಚೇತನದೊಡನೆ ಬೆಸೆದುಕೊಂಡಿರುತ್ತದೆ. ಆದ್ದರಿಂದ ಶ್ವಾಸವನ್ನು ಸ್ವಸ್ಥವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ವಿಪಸ್ಸನ ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಸಾಧನ ~ ಚಿತ್ಕಲಾ

ವಿಪಸ್ಸನ ಅದ್ಭುತವಾದ ಧ್ಯಾನವಿಧಾನಗಳಲ್ಲೊಂದು. ಅತ್ಯಂತ ಸರಳವೂ ಸುಲಭವೂ ಆದ ಈ ಧ್ಯಾನ ವಿಧಾನ ಮನಸ್ಸನ್ನು ಶಾಂತವೂ ಆನಂದಮಯವೂ ಆಗಿರಿಸುತ್ತದೆ. ಈ ಕಾರಣದಿಂದಲೇ ಕಳೆದ ಜೂನ್ ತಿಂಗಳಲ್ಲಿ ನಡೆದ ಬೌದ್ಧ ಸಮ್ಮೇಳನದಲ್ಲಿ ‘ವಿಪಸ್ಸನ ಧ್ಯಾನ’ವನ್ನು ಸಾರ್ವತ್ರಿಕಗೊಳಿಸುವ ಭೇಡಿಕೆ ಮುಂದಿಡಬೇಕು ಎಂಬ ನಿರ್ಣಯ ಮಂಡಿಸಲಾಗಿತ್ತು. ಶಾಲಾ ಹಂತದಲ್ಲಿಯೇ ಇದರ ಅಭ್ಯಾಸ ಮಾಡಿಸಬೇಕು ಎಂದು ಬೌದ್ಧ ಬಿಕ್ಖುಗಳು ಪ್ರತಿಪಾದಿಸಿದ್ದರು.

ವಿಪಸ್ಸನ ಆನಾಪಾನಸತಿಯ ಮುಖ್ಯ ಭಾಗ. ಬುದ್ಧಗುರುವು ಎರಡೂವರೆ ಸಾವಿರ ವರ್ಷಗಳ ಹಿಂದೆ ಆನಾಪಾನಸತಿಯನ್ನು ಬೋಧಿಸಿದನು ಎನ್ನಲಾಗಿದೆ. ಇದೊಂದು ಪಾಳಿ ಭಾಷೆಯ ಪದ. ‘ಆನ’ ಎಂದರೆ ‘ಉಚ್ಛಾ ಸ’. ‘ಅಪಾನ’ಎಂದರೆ ‘ನಿಶ್ವಾಸ’. ಮತ್ತು ‘ಸತಿ’ ಎಂದರೆ ‘ಕೂಡಿಕೊಂಡಿರುವುದು’. ಉಚ್ವಾಸ – ನಿಶ್ವಾಸಗಳಿಂದ ಕೂಡಿದ ಧ್ಯಾನ ಪದ್ಧತಿಯೇ ಆನಾಪಾನಸತಿ. ಸರಳವಾಗಿ ಇದನ್ನು ‘ಉಸಿರಾಟವನ್ನು ಗಮನಿಸುವ ಪ್ರಕ್ರಿಯೆ’ ಎನ್ನಬಹುದು. ಪ್ರಾಣ ಅಡಗಿರುವುದೇ ಶ್ವಾಸದಲ್ಲಿ. ಆದ್ದರಿಂದ ಶ್ವಾಸದ ಮೇಲೆ ಗಮನವಿಡುವ ಈ ಧ್ಯಾನ ಪದ್ಧತಿಯೇ ಅತ್ಯಂತ ಸಮಂಜಸ ಧ್ಯಾನ ಪದ್ಧತಿ ಎಂಬುದು ಬಹುತೇಕರ ಅಭಿಪ್ರಾಯ.  

ವಿಪಸ್ಸನವು ಆನಾಪಾನಸತಿಯ ಮುಖ್ಯ ಭಾಗ. ‘ವಿಪಸ್ಸನ’ ಎಂದರೆ ಶ್ವಾಸದಿಂದ ಪ್ರಾರಂಭವಾಗಿ ಮೂರನೆಯ ಕಣ್ಣನ್ನು (ಜ್ಞಾನದ ಕಣ್ಣನ್ನು) ತಲುಪುವ ಪ್ರಕ್ರಿಯೆ. ಪಸ್ಸನ ಎಂದರೆ, ಪಾಳೀ ಭಾಷೆಯಲ್ಲಿ ನೋಡುವುದು ಎಂದರ್ಥ. ವಿಪಸ್ಸನ ಎಂದರೆ, ವೀಶೇಷವಾಗಿ ನೋಡುವುದು ಎಂದಾಗುತ್ತದೆ. ಇದನ್ನು ಎರಡು ಬಗೆಯಲ್ಲಿ ಅರ್ಥೈಸಬಹುದು. ಮೊದಲನೆಯದಾಗಿ, ಉಸಿರಾಟವನ್ನು ವಿಶೇಷವಾಗಿ ನೋಡುವುದು (ಗಮನಿಸುವುದು) ಎಂದಾಗಿಯೂ; ಎರಡನೆಯದಾಗಿ, ಮೂರನೆಯ ಕಣ್ಣನ್ನು ತೆರೆದು, ಆ ಮೂಲಕ ನೋಡುವುದು (ಇಲ್ಲಿ ನೋಟವೇ ವೀಶೇಷ).

ಒಂದೆಡೆ ನಮ್ಮ ದೇಹವಿದೆ, ಮತ್ತೊಂದೆಡೆ ನಮ್ಮ ಪ್ರಜ್ಞೆ ಅಥವಾ ಚೇತನ. ಈ ಎರಡನ್ನೂ ಬೆಸೆಯುವುದು ನಡುವೆ ಇರುವ ಶ್ವಾಸ. ಶ್ವಾಸ ಇರುವಷ್ಟೂ ಕಾಲ ನಮ್ಮ ದೇಹವು ಪ್ರಜ್ಞೆಯೊಡನೆ, ಚೇತನದೊಡನೆ ಬೆಸೆದುಕೊಂಡಿರುತ್ತದೆ. ಆದ್ದರಿಂದ ಶ್ವಾಸವನ್ನು ಸ್ವಸ್ಥವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ವಿಪಸ್ಸನ ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಸಾಧನ. 

ವಿಪಸ್ಸನ ಧ್ಯಾನ ಪ್ರಕ್ರಿಯೆಯ ಹಂತಗಳು ಹೀಗಿವೆ

1.ದೇಹದ ಯಾವ ಭಾಗವೂ ಬಾಧೆ ಪಡದಂತೆ ಕುಳಿತುಕೊಳ್ಳಿ. ಕಾಲುಗಳನ್ನು ಹಿಂದಕ್ಕೆ ಮಡಚಿ ವಜ್ರಾಸನದಲ್ಲಿ ಕುಳಿತರೆ       ಇನ್ನೂ ಒಳ್ಳೆಯದು.

2.ಕಣ್ಣುಗಳನ್ನು ಹಗುರವಾಗಿ ಮುಚ್ಚಿಕೊಂಡು, ಮನಸ್ಸಿನ ಓಟವನ್ನು ಕಟ್ಟಿಹಾಕಿ. ಏನೆಲ್ಲ ಆಲೋಚನೆಗಳು ಬರುತ್ತವೆಯೋ ಅವೆಲ್ಲವನ್ನೂ ತುಂಡರಿಸಿ ಹಾಕಿ. 

3.ಉಸಿರು ಒಳಹೋಗುವುದನ್ನು ಮತ್ತು ಹೊರಗೆ ಬರುವುದನ್ನು ಗಮನಿಸಲು ಆರಂಭಿಸಿ. ಮೂಗಿನ ಹೊಳ್ಳೆಗಳ ತುದಿಯಲ್ಲಿ ಉಸಿರಿನ ಸಂಚಾರದ ಹಗುರವಾದ ತಣ್ಣನೆಯ ಸ್ಪರ್ಶ ನಿಮ್ಮ ಅನುಭವಕ್ಕೆ ಬರುತ್ತದೆ. ಜೋರಾಗಿ ಉಸಿರಾಡುತ್ತಿದ್ದೀರೋ, ನಿಧಾನವಾಗಿ ಉಸಿರಾಡುತ್ತಿದ್ದೀರೋ ಗಮನಿಸಿ. ಆರಂಭದಲ್ಲಿ ಜೋರಾಗಿದ್ದರೂ ಬರಬರುತ್ತಾ ಅದು ನಿಧಾನಗತಿಗೆ ಹೊಂದಿಕೊಳ್ಳುತ್ತದೆ. ಅದನ್ನು ಗಮನಿಸಿ. 

4.ನಿಮ್ಮ ಗಮನಕ್ಕೆ ಬರದೆ ಒಮ್ಮೆಯೂ ಉಸಿರು ಒಳಹೋಗಬಾರದು, ಹೊರಗೆ ಬರಬಾರದು. ಆದ್ದರಿಂದ, ಪ್ರತಿ ಉಸಿರನ್ನೂ ಗಮನಿಸುತ್ತಿರಿ. ಮನಸ್ಸು ಅತ್ತಿತ್ತ ಕದಲಿದರೂ, ಮತ್ತೆ ಅದನ್ನು ಎಳೆತಂದು, ಉಸಿರಾಟವನ್ನು ಗಮನಿಸುವುದನ್ನು ಮುಂದುವರೆಸಿ. 

5.ಮೂಗಿನ ತುದಿಯನ್ನು ಗಮನಿಸುವುದು ಕಷ್ಟವಾದರೆ ಹೊಕ್ಕುಳ ಏರಿಳಿತವನ್ನು ಗಮನಿಸಿ. ಆರಂಭದ ಅಭ್ಯಾಸಿಗರು ಹೊಕ್ಕುಳ ಮೇಲೆ ಕೈ ಇಟ್ಟುಕೊಂಡರೂ ಒಳ್ಳೆಯದೇ. ಆದರೆ ಇದನ್ನು ಬಹಳ ಕಾಲ ಮುಂದುವರೆಸಬಾರದು.

6.ಸಾಮಾನ್ಯವಾಗಿ ವಿಪಸ್ಸನ ಧ್ಯಾನವನ್ನು ಇಪ್ಪತ್ತರಿಂದ ಮೂವತ್ತು ನಿಮಿಷಗಳ ಕಾಲ ಮಾಡಬಹುದು. ಧ್ಯಾನ ಮುಗಿಸಿದ ನಂತರ ಧಡಕ್ಕನೆ ಎದ್ದು ಕೆಲಸದಲ್ಲಿ ತೊಡಗಬೇಡಿ. ಹಿತವಾದ ಸಂಗೀತವನ್ನು ಆಲಿಸಿ. ಧ್ಯಾನದ ಶಾಂತ ಸ್ಥಿತಿಯನ್ನು ಮತ್ತಷ್ಟು ಕಾಲ ಅನುಭವಿಸಿ, ಅನಂತರ ನಿಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಿ.

ಪ್ರಯೋಜನಗಳು

1.ಲೌಕಿಕವಾಗಿ ವಿಪಸ್ಸನ ಧ್ಯಾನದ ಮಹತ್ತರ ಪ್ರಯೋಜನವೆಂದರೆ, ಮನಸ್ಸನ್ನು ಶಾಂತಗೊಳಿಸುವುದು

2.ಆನಂದ ಸ್ಥಿತಿಯನ್ನು ಪ್ರಜ್ಞಾಪೂರ್ವಕವಾಗಿ ಹೊಂದುವುದು

3.ಉಸಿರಿನ ಶುದ್ಧೀಕರಣ

4.ಮಂದಗತಿಯ ಉಸಿರಾಟವನ್ನು ರೂಢಿ ಮಾಡಿಕೊಳ್ಳುವ ಮೂಲಕ ಹೆಚ್ಚು ಪ್ರಮಾಣದಲ್ಲಿ ಪ್ರಾಣಶಕ್ತಿಯನ್ನು ದೇಹದಲ್ಲಿ ಹಿಡಿದಿಟ್ಟುಕೊಳ್ಳುವುದು

5.ಅಲೌಕಿಕ ಸ್ತರದಲ್ಲಿ ವಿಪಸ್ಸನವು ಆದ್ಯಾಚಕ್ರವನ್ನು ಜಾಗೃತಗೊಳಿಸಿ, ಆ ಮೂಲಕ ಸಹಸ್ರಾರವನ್ನು ತಲುಪುವುದು ಮತ್ತು ಮೋಕ್ಷವನ್ನು ಪಡೆಯುವುದು.

ವಿಪಸ್ಸನವನ್ನು ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಪ್ರತಿದಿನವೂ ಇದನ್ನು ಮಾಡಲು ಸಮಯ ಸಾಲದೆ ಅಥವಾ ಇನ್ನಿತರ ಕಾರಣದಿಂದ ಸಾಧ್ಯವಾಗದೆ ಇದ್ದವರು ವಾರಾಂತ್ಯಗಳಲ್ಲಿ ಇದನ್ನು ಮಾಡಬಹುದು. ಅಥವಾ 7 ದಿನಗಳ, ಹನ್ನೊಂದು ದಿನಗಳ, 21 ದಿನಗಳ ಕಾಲ ವಿಪಸ್ಸನ ನಡೆಸಿ, ಒಂದು ಬ್ರೇಕ್ ತೆಗೆದುಕೊಳ್ಳಬಹುದು; ಮತ್ತೆ ಸಾಧ್ಯವಾದಾಗ ಮುಂದುವರೆಸಬಹುದು. 

2 Comments

  1. ಓದಿದೊಡನೆ ವಿಪಸ್ಸನ ಧ್ಯಾನವು ನನ್ನ ಮಸ್ತಿಷ್ಕದಲ್ಲಿ ನೆಲೆಸಿತು. ಇದಕ್ಕೆ ಕಾರಣ ನಿಮ್ಮ ಸರಳ ಭಾಷಾ ವಿವರಣೆ. ಶ್ವಾಸವನ್ನು ಗಮನಿಸಿ ಉಸಿರಾಡುವ ಬಗ್ಗೆ ಬಹಳ ವರ್ಷಗಳ ಹಿಂದೆ ಒಂದು ಪೊಸ್ಟರ್ನಲಿ ಬುದ್ಧಿಸಮ್ ನಂತೆ ತಲೆ ಬೋಡಿಸಿಕೊಂಡು ಅವರ ಶೈಲಿಯ ಕಾವಿ ಬಟ್ಟೆ ಧರಿಸಿದ ಒಬ್ಬರು ” ನಿಮ್ಮ ಉಸಿರಾಟದ ಶ್ವಾಸವನ್ನು ಗಮನಿಸಿ ಅದೇ ಧ್ಯಾನ ” ಎಂದು ಬರೆದಿತ್ತು. ನಾ ವ್ಯಾಸ ಮುನಿಗಳು ಭಗವದ್ಗೀತೆಯಲ್ಲಿ ತಿಳಿಸಿಹ ಧ್ಯಾನವನ್ನು ಐದಾರು ವರ್ಷಗಳಿಂದ ಮಾಡುತ್ತಲಿಹೆನು. ಪೋಸ್ಟರ್ಲಿ ನೋಡಿದಂತೆ ಶ್ವಾಸವನ್ನು ಗಮನಿಸಿ ಕೂಡ ಧ್ಯಾನವನ್ನು ಮಾಡುತ್ತ ಬಂದೆ.
    ಹೇಳಬೇಕೆಂದರೆ, ಎರಡು ಧ್ಯಾನವು ಹೆಚ್ಚು ಕಮ್ಮಿ ಒಂದೇ ರೀತಿಯಲ್ಲಿ ಮೂಗಿನ ತುದಿಯನ್ನು ಗಮನಿಸುವುದು.
    ವ್ಯಾಸ ಧ್ಯಾನ ಮನಸ್ಸನ್ನು ಕೇಂದ್ರೀಕರಿಸಲು ಹೇಳುತ್ತದೆ. ವಿಪಸ್ಸನ ಧ್ಯಾನ ಶ್ವಾಸವನ್ನು ಗಮನಿಸಲು ಹೆಳುತ್ತದೆ.

    ಮನಸ್ಸನ್ನು ಕೇಂದ್ರೀಕರಿಸಲು ಒಂದೇ ವಸ್ತು, ವಿಷಯದಲ್ಲಿ ಗಮನವಿಡಬೇಕು ವ್ಯಾಸ ಧ್ಯಾನದಲ್ಲಿ. ಶ್ವಾಸವನ್ನು ಮನಸ್ಸಿನ ಮುಲಕ ಗಮನವಿಡಬೇಕು ವಿಪಸ್ಸನ ಧ್ಯಾನದಲ್ಲಿ. ಅಂದರೆ, ಎರಡೂ ಧ್ಯಾನದಲ್ಲಿ ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಲು ಸಾಧಕ ಪ್ರಯತ್ನಿಸಬೇಕು.

    ಧ್ಯಾನ ವಿದ್ಯೆಯನ್ನು ಕಲಿಸಿದ ನಿಮಗೆ 🙏 ಮತ್ತು ವಂದನೆಗಳು.

Leave a Reply