ಕಾಲವೆಂಬ ಭ್ರಮೆ, ಕಾಲವೆಂಬ ವಾಸ್ತವ

ವಾಸ್ತವದಲ್ಲಿ ಕಾಲ ಕಳೆಯುವುದಿಲ್ಲ. ಎರಡು ತುದಿಗಳ ನಡುವೆ (ಅಥವಾ ನೇರವಾಗಿ) ಸಾಗುವುದಕ್ಕೆ ಒಂದು ಅಂತ್ಯವಿದೆ. ಅನಂತವೇ ಆಗಿದ್ದರೂ, ಅದಕ್ಕೊಂದು ಅಂತ್ಯದ ಸಾಧ್ಯತೆ ಇದೆ. ವೃತ್ತ ಅಥವಾ ಚಕ್ರದಲ್ಲಿ ಹಾಗಲ್ಲ. ಅದು ಕೊನೆಯೇ ಇಲ್ಲದ ಸುತ್ತು. ಯಾವುದಕ್ಕೆ ಕೊನೆಯಿಲ್ಲವೋ ಅದು ಕಳೆಯುವುದು ಹೇಗೆ!? ~ ಚೇತನಾ ತೀರ್ಥಹಳ್ಳಿ


ಮತ್ತೊಂದು ವರ್ಷ ಹೊಸ್ತಿಲಲ್ಲಿದೆ. ಯಾರ ಲೆಕ್ಕಾಚಾರದ ಪ್ರಕಾರವೋ, ಯಾವ ಸಂಸ್ಕೃತಿಯ ಪ್ರಕಾರವೋ… ಒಟ್ಟು ನಾವು ನೀವೆಲ್ಲ ದಿನದಿನದ ಬದುಕಿಗೆ ಆಧರಿಸಿರುವುದು ಈ ಕ್ಯಾಲೆಂಡರನ್ನು. ಯಾರು ಒಪ್ಪಿದರೂ ಬಿಟ್ಟರೂ ವ್ಯಾವಹಾರಿಕವಾಗಿ ಕ್ಯಾಲೆಂಡರ್ ಬದಲಿಸುವ ದಿನ ಬಂದಿದೆ.
ಸೂರ್ಯನ್ನ ಆಧರಿಸಿ, ಚಂದ್ರನ್ನ ಆಧರಿಸಿ, ಆಯಾ ಪ್ರಾಂತ್ಯದ ಪುರಾಣೇತಿಹಾಸ ಪ್ರಸಿದ್ಧ ರಾಜರ ಕಾಲಮಾನ ಆಧರಿಸಿ ವರ್ಷಗಳ ಲೆಕ್ಕವಿಡೋದು ಪದ್ಧತಿ. ಆದ್ದರಿಂದ ಕಾಲವನ್ನು ಅಳೆಯಲು ‘ಇದಮಿತ್ಥಂ’ ಅನ್ನುವ ಒಂದು ಒಂದು ಮಾಪನವಾಗಲೀ ವಿಧಾನವಾಗಲೀ ಇಲ್ಲ. ಅಂದೂರೆ, ಈಗ ನಾವು ಲೆಕ್ಕ ಹಾಕುವಂತೆ ಇದು 2021ನೆ ವರ್ಷವೇ ಅಂತ ನಿಖರವಾಗಿ ಹೇಳಲು ಆಗುವುದಿಲ್ಲ! ದೇಶಕ್ಕೆ ತಕ್ಕಂತೆ (ಸ್ಥಳ/ಅವಕಾಶ – space) ಕಾಲಮಾನವೂ ಬದಲಾಗುವುದರಿಂದ ಕಾಲವನ್ನು ಅಳೆಯುವೆವು, ಕಾಲವನ್ನು ದಾಖಲಿಸುವೆವು ಎಂಬುದೆಲ್ಲ ನಮ್ಮ ಭ್ರಮೆಯಷ್ಟೆ.

ಈ ‘ಕಾಲ’ ಎಂಬುದು ಒಂದು ಹರಿವು. ಅದೇ ವೇಳೆಗೆ ಇದೊಂದು ಚಕ್ರ ಕೂಡಾ! ‘ಕಾಲಚಕ್ರ’ ಅನ್ನುತ್ತಾರಲ್ಲವೆ? ಸುಮ್ಮನೆ ಹಾಗನ್ನುತ್ತಾರೆಯೆ? ಕಾಲ ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ಮರುಕಳಿಸುತ್ತಲೇ ಇರುವುದರಿಂದ ಅದು ‘ಚಕ್ರ’ವಾಗಿದೆ. ಹಗಲುಗಳು ಆಗುತ್ತಲೇ ಇರುತ್ತವೆ, ಇರುಳುಗಳು ಕಳೆಯುತ್ತಲೇ ಇರುತ್ತವೆ; ಇವುಗಳ ಆಧಾರದ ಮೇಲೆ ಕಾಲವನ್ನು ನಿಕ್ಕಿ ಮಾಡುತ್ತೇವೆ ತಾನೆ?ಹೀಗೆ ಕಾಲ ಮರುಕಳಿಸುತ್ತಲೇ ಇದ್ದರೂ, ಚಕ್ರದಂತೆ ಕೆಳಗಿನದು ಮೇಲಾಗಿ, ಮೇಲಿನದು ಕೆಳಗಾಗಿ ತಿರುಗುತ್ತಲೇ ಇದ್ದರೂ; ಮರುಕಳಿಸುವ ಕಾಲ, ಒಮ್ಮೆ ಹರಿದುಹೋದ ಕಾಲವಲ್ಲ. ಒಮ್ಮೆ ಹಾದು ಮತ್ತೆ ಮರುಕಳಿಸುವುದು ‘ಚಕ್ರಗತಿ’ಯಷ್ಟೇ ಹೊರತು, ವಸ್ತುತಃ ಚಕ್ರವಾಗಿಯಲ್ಲ. ಏಕೆಂದರೆ, ಮೊದಲೇ ಹೇಳಿದಂತೆ ಕಾಲವೊಂದು ‘ಹರಿವು’. ಕಾಲ, ನದಿಯಂತೆ. ನದಿಯ ಕಣಕಣವೂ ಹರಿಯುತ್ತಲೇ ಇರುತ್ತದೆ. ಆದರೂ ನದಿ ಉಗಮ – ಮಿಲನಗಳ ನಡುವೆ ನಿಂತಿರುತ್ತದೆ. ಹಾಗೆಯೇ ಕಾಲವೂ ಚಕ್ರಗತಿಯಲ್ಲಿ ಅಡಕವಾಗಿದೆ.

ಒಂದು ನದಿಯಲ್ಲಿ ಎರಡು ಬಾರಿ ಕಾಲಿಡಲಾಗದು ಅಂದಿದ್ದಾನೆ ಗ್ರೀಕ್ ತತ್ತ್ವಜ್ಞಾನಿ ಹೆರಾಕ್ಲಿಟಸ್. ಹಾಗೊಮ್ಮೆ ಕಾಲಿಟ್ಟರೆ ಅದು ಅದೇ ನದಿ ಆಗಿರೋದಿಲ್ಲ, ಕಾಲಿಡುವ ನೀವು ಅದೇ ನೀವು ಆಗಿರೋದಿಲ್ಲ. ಆದ್ದರಿಂದ, ಒಂದು ನದಿಗೆ ಎರಡು ಬಾರಿ ಒಂದೇ ವ್ಯಕ್ತಿ ಕಾಲಿಡುವ ಅವಕಾಶವೇ ಇಲ್ಲ. ಏಕೆಂದರೆ ನದಿಯ ಕಣಗಳು ಸತತವಾಗಿ ಹರಿಯುತ್ತಿರುತ್ತವೆ. ಒಮ್ಮೆ ಕಾಲಿಡುವಾಗ ಇದ್ದ ಹರಿವು ಇನ್ನೊಮ್ಮೆ ಕಾಲಿಡುವಾಗ ಇರುವುದಿಲ್ಲ ಮತ್ತು ಎರಡನೇ ಬಾರಿ ಕಾಲಿಡುವಾಗ ಮೊದಲಿನ ನೀವೂ ಬದಲಾಗಿರುತ್ತೀರಿ. ನಡುವಿನ ಕೆಲವು ನಿಮಿಷ / ಸೆಕೆಂಡ್’ಗಳ ಅಂತರದಲ್ಲಿ ನಿಮ್ಮ ಜೀವಕೋಶಗಳು ಅಷ್ಟು ನಿಮಿಷ/ಕ್ಷಣಗಳಷ್ಟು ಬದಲಾಗಿರುತ್ತವೆ. ಆದ್ದರಿಂದ ನದಿಯಂತೆಯೇ ನೀವೂ ಬೇರೆಯಾಗಿರುತ್ತೀರಿ. ನೋಡಲಿಕ್ಕೆ ಮಾತ್ರ ಅದೇ ನೀವು, ಅದೇ ನದಿ. ಆದರೆ ಕಾಲಿಟ್ಟವರು ಮೊದಲಿನ ನೀವಲ್ಲ, ಇಟ್ಟ ನದಿಯೂ ಮೊದಲಿನ ನದಿಯಲ್ಲ.

ಹಾಗೇ ಕಾಲ ಕೂಡಾ. ಅದರ ಚಲನೆ ಚಕ್ರವಾದರೂ ಸುತ್ತು ಬರುವುದು ಹೊಸ ಸಾಧ್ಯತೆಯೇ ಹೊರತು ಹಳೆಯ ಮರುಕಳಿಕೆಯಲ್ಲ.
ಇಂಥಾ ಕಾಲವನ್ನು ನಾವು ಸೆಕೆಂಡಿನಿಂದ ವರ್ಷದವರೆಗೆ ಗುಡ್ಡೆ ಹಾಕಿ ಹೆಸರುಗಳನ್ನಿಟ್ಟು ಸಂಭ್ರಮಿಸುತ್ತೇವೆ. “ಕಾಲ ಕಳೆಯಿತು” ಎಂದು ಭ್ರಮಿಸುತ್ತೇವೆ.
ವಾಸ್ತವದಲ್ಲಿ ಕಾಲ ಕಳೆಯುವುದಿಲ್ಲ. ಎರಡು ತುದಿಗಳ ನಡುವೆ (ಅಥವಾ ನೇರವಾಗಿ) ಸಾಗುವುದಕ್ಕೆ ಒಂದು ಅಂತ್ಯವಿದೆ. ಅನಂತವೇ ಆಗಿದ್ದರೂ, ಅದಕ್ಕೊಂದು ಅಂತ್ಯದ ಸಾಧ್ಯತೆ ಇದೆ. ವೃತ್ತ ಅಥವಾ ಚಕ್ರದಲ್ಲಿ ಹಾಗಲ್ಲ. ಅದು ಕೊನೆಯೇ ಇಲ್ಲದ ಸುತ್ತು. ಯಾವುದಕ್ಕೆ ಕೊನೆಯಿಲ್ಲವೋ ಅದು ಕಳೆಯುವುದು ಹೇಗೆ!?

ಕಾಲದ ಹರಿವಿನಲ್ಲಿ ಕೊನೆಯಾಗುವುದು ನಾವು. ಕಳೆದುಹೋಗುವವರು ನಾವು. ಕಾಲವನ್ನು ನಾವು ನಮ್ಮ ಪಾಲಿಗೆ ಕಳೆದುಕೊಳ್ಳುತ್ತೇವೆ ಹೊರತು ಕಾಲ ಕಳೆಯುವುದಿಲ್ಲ. ಅದು ಅಲ್ಲೇ ಇರುತ್ತದೆ. ಪ್ರಳಯವಾಗಿ ಬ್ರಹ್ಮಾಂಡವೇ ನಾಶವಾದರೂ ಕಾಲ ಇರುತ್ತದೆ. ಏಕೆಂದರೆ ಕಾಲ ನಿರ್ಗುಣ – ನಿರಾಕಾರ; ನಮ್ಮ ನಮ್ಮ ಪರಿಧಿಗಳಿಗೆ ಒಗ್ಗಿಸಿಕೊಂಡಾಗ ಅದು ಸಗುಣ. ಇದು ಭಗವಂತನ ವ್ಯಾಖ್ಯಾನವೂ ಆಗಿದೆ ಅಲ್ಲವೆ? ಭಗವಂತನನ್ನು ‘ಮಹಾಕಾಲ’ನೆಂದು ವ್ಯಾಖ್ಯಾನಿಸುವುದು ಅದಕ್ಕೇ. ಪ್ರಳಯವಾದ ನಂತರ ಎಲ್ಲವೂ ಅಳಿಯುತ್ತದೆ. ಕಲ್ಪಾಂತರದಲ್ಲಿ ತ್ರಿಮೂರ್ತಿಗಳೂ ಪುನಃ ಸೃಷ್ಟಿಯಾಗುತ್ತಾರೆ ಎನ್ನಲಾಗಿದೆ. ಈ ಕಲ್ಪಾಂತರದ ನಡುವಿನ ವಿರಾಮದಲ್ಲೂ ಅಸ್ತಿತ್ವವಿರುವ ಏಕೈಕ ಸಂಗತಿ, ನಾಶವಾಗದ ಸಂಗತಿ – ಕಾಲ. ಆದ್ದರಿಂದ ಮಹಾಕಾಲವೇ ಪರಬ್ರಹ್ಮ. ಮಹಾಕಾಲದ ಅರಿವೇ ಬ್ರಹ್ಮಜ್ಞಾನ. ವಿಷ್ಣು – ಬ್ರಹ್ಮರು (ಪರಬ್ರಹ್ಮ ಎಂದರೆ ಅರಿವು. ಚತುರ್ಮುಖ ಬ್ರಹ್ಮನಿಗೆ ಇದು ಸಂಬಂಧಿಸಿಲ್ಲ) ಹುಡುಕುತ್ತಾ ಹೋಗುವುದು ಈ ‘ಮಹಾಕಾಲ’ವನ್ನೇ. ಅವರಿಬ್ಬರಿಂದಲೂ ಅದನ್ನು ಹುಡುಕುವುದು ಸಾಧ್ಯವಾಗದೆ ಹೋದಾಗ ಮಹಾಕಾಲ ಸಗುಣ – ಸಾಕಾರ ರೂಪಿಯಾಗಿ, ಶಿವನಾಗಿ ಕಾಣಿಸಿಕೊಳ್ಳುತ್ತಾನೆ.

ಭಾರತೀಯರು ಕಾಲವನ್ನು ಕುರಿತು ಸಾಕಷ್ಟು ತಲೆ ಕೆಡಿಸಿಕೊಂಡಿದ್ದರು. ಒಂದು ಕಮಲದ ಹೂವಿನ ದಳವನ್ನು ಹರಿತವಾದ ಮೊನೆಯ ಸೂಜಿಯಿಂದ ಚುಚ್ಚಿ ರಂಧ್ರ ಮಾಡಲು ಬೇಕಾಗುವ ಕಾಲವನ್ನು ‘ತ್ರುಟಿ’ ಎಂದು ಕರೆದು, ಬ್ರಹ್ಮನ ಆಯಸ್ಸಿನವರೆಗೆ (ಮಹಾಕಲ್ಪ) ಕಾಲದ ಹಲವು ಮಾಪನಗಳನ್ನು ಸಿದ್ಧಪಡಿಸಿದ್ದರು. ಇದು ನಮ್ಮ ಪುರಾಣಗಳ ಕಾಲಕಥನ.

ಹೀಗೆ ಪ್ರತಿಯೊಂದು ಪ್ರಾದೇಶಿಕ ಸಂಸ್ಕೃತಿ, ಪ್ರತಿಯೊಂದು ನಾಗರಿಕತೆಯೂ ತನ್ನದೇ ಕಾಲಮಾಪನಗಳನ್ನು ಹೊಂದಿತ್ತು. ಇತ್ತೀಚಿನ ಶತಮಾನಗಳಲ್ಲಿ, ನಮಗೆಲ್ಲ ತಿಳಿದಿರುವಂತೆ ವಿಶ್ವಾದ್ಯಂತ ಒಂದು ಸಾಮಾನ್ಯ ಕ್ಯಾಲೆಂಡರ್ ಅನ್ನು ಕಾಲಮಾಪನಕ್ಕೆ ಬಳಸುತ್ತಿದ್ದೇವೆ. ಕ್ರೈಸ್ತ ಧರ್ಮೀಯರು ಈ ಕ್ಯಾಲೆಂಡರಿಗೆ ಅನುಗುಣವಾಗಿ ಮಾತ್ರ ತಮ್ಮ ಹಬ್ಬಗಳನ್ನು ಆಚರಿಸಿದರೆ; ಹಿಂದೂ ಮತ್ತು ಮುಸ್ಲಿಮರು (ಹಾಗೂ ಬೌದ್ಧ, ಜೈನ, ಸಿಕ್ಖ್ ಇತ್ಯಾದಿ ಕೂಡಾ) ತಮ್ಮ ಹಬ್ಬ ಹರಿದಿನಗಳನ್ನು ತಮ್ಮತಮ್ಮ ಪಂಚಾಂಗದ ಪ್ರಕಾರ ಇಲ್ಲವೇ ಚಂದ್ರೋದಯ – ಚಂದ್ರ ದರ್ಶನದ ಪ್ರಕಾರ ಆಚರಿಸುವುದು ರೂಢಿ.

ಉಳಿದಂತೆ ನಾವೆಲ್ಲರೂ ನಮ್ಮ ವ್ಯಾವಹಾರಿಕ ಬದುಕಿಗೆ ಜನವರಿ ಇಂದ ಡಿಸೆಂಬರ್ ವರೆಗಿನ ಕಾಲಮಾಪನವಿರುವ ಕ್ಯಾಲೆಂಡರ್ ಅನ್ನೆ ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗ (ಮತ್ತೂ) ಒಂದು ವರ್ಷ ಕಳೆದು ಹೊಸ ವರ್ಷ ಬಂದಿದೆ. ಹೊಸ ಸಾಧ್ಯತೆಗಳ, ಹೊಸ ಅವಕಾಶಗಳ ಮತ್ತೊಂದು ಚಕ್ರ ನಮ್ಮನ್ನು ಹೊತ್ತು ಸಾಗುತ್ತಿದೆ. ಈ ಅವಕಾಶಗಳನ್ನು, ಈ ಸಾಧ್ಯತೆಗಳನ್ನು ಕಾಲದೊಂದಿಗೆ ನವೀಕರಣಗೊಂಡ ನಾವು ಹೇಗೆ ಬಳಸಿಕೊಳ್ಳುತ್ತೇವೋ ಹಾಗೆ ಫಲ ಪಡೆಯುತ್ತೇವೆ. ಆದ್ದರಿಂದ ಸಾಧ್ಯವಾದಷ್ಟೂ ವಿವೇಚನೆಯಿಂದ ಈ ವರ್ಷವನ್ನು ಸದುಪಯೋಗ ಮಾಡಿಕೊಳ್ಳೋಣ.

2021ರ ಶುರುವಾತಿಗೆ ಹಾರ್ದಿಕ ಸ್ವಾಗತ ಮತ್ತು ಎಲ್ಲರಿಗೂ ಹೃತ್ಪೂರ್ವಕ ಶುಭಾಶಯ.

Leave a Reply