ತಿಳಿವು ಪಡೆದ ಮೇಲೆ ಪರಿಕರದ ಹಂಗೇಕೆ? : ದಿನದ ಸುಭಾಷಿತ

ಪರಿಕರಗಳೇ ಜ್ಞಾನವಲ್ಲ. ಅವನ್ನು ಬಳಸಿ, ಜ್ಞಾನವನ್ನು ಹೊಂದಿದ ಮೇಲೂ ಪರಿಕರಗಳಿಗೆ ಜೋತುಬೀಳಬಾರದು. ಅದನ್ನು ಬಿಟ್ಟು ಮುನ್ನಡೆಯಬೇಕು.


ಗ್ರಂಥಾನಭ್ಯಸ್ಯ ಮೇಧಾವೀ ಜ್ಞಾನವಿಜ್ಞಾನತತ್ಪರಃ
ಪಲಾಲಮಿವ ಧಾನ್ಯಾರ್ಥೀ ತ್ಯಜೇತ್ಸರ್ವಮಶೇಷತಃ || ಸುಭಾಷಿತ ||
“ಗ್ರಂಥಗಳನ್ನು ಓದಿ ಜ್ಞಾನಿಯಾಗುವ ಅಭ್ಯಾಸಿಯು, ಅಧ್ಯಯನದ ನಂತರ ಅವುಗಳ ಹಂಗಿನಿಂದ ಹೊರಗೆ ಬರಬೇಕು.
ಧಾನ್ಯವನ್ನು ಪಡೆಯಲಿಚ್ಛಿಸುವವನು ಉಳಿದೆಲ್ಲವನ್ನೂ ತೂರಿ, ಕಾಳುಗಳನ್ನು ಮಾತ್ರ ಇಟ್ಟುಕೊಳ್ಳುವಂತೆ, ಜ್ಞಾನವನ್ನು ಮಾತ್ರ ತನ್ನಲ್ಲಿ ಇರಿಸಿಕೊಳ್ಳಬೇಕು” ಎನ್ನುತ್ತದೆ ಒಂದು ಸುಭಾಷಿತ.
ನಾವು ಸಾಮಾನ್ಯವಾಗಿ ಪರಿಕರಗಳ ಮೇಲೆ ಮೋಹ ಬೆಳೆಸಿಕೊಂಡುಬಿಡುತ್ತೇವೆ. ಬೋಧೆಗಿಂತ ಬೋಧಕರ ಮೇಲೆ, ಅರಿವಿಗಿಂತ ಗುರುವಿನೆಡೆಗೆ, ಚಂದಿರನಿಗಿಂತ ಅವನನ್ನು ತೋರುತ್ತಿರುವ ಬೆರಳಿನೆಡೆಗೆ ಹೆಚ್ಚು ಆಕರ್ಷಿತರಾಗುತ್ತೇವೆ. ಅದರಿಂದ ನಾವು ಸ್ವತಂತ್ರವಾಗಿ ಆಲೋಚಿಸುವ ಅವಕಾಶವನ್ನು ಕೈಯಾರೆ ಕಳೆದುಕೊಳ್ಳುತ್ತೇವೆ.
ಆದ್ದರಿಂದಲೇ ಶ್ರೀ ರಾಮಕೃಷ್ಣ ಪರಮಹಂಸರು ಒಂದೆಡೆ ಹೇಳುತ್ತಾರೆ; “ಅಜ್ಞಾನವೆಂಬ ಮುಳ್ಳನ್ನು ಜ್ಞಾನವೆಂಬ ಮುಳ್ಳಿನಿಂದ ತೆಗೆಯಿರಿ. ಅನಂತರ ಎರಡೂ ಮುಳ್ಳನ್ನು ಬಿಸಾಡಿಬಿಡಿ” ಎಂದು. ಜ್ಞಾನವೆಂಬ ಮುಳ್ಳಿ ನಮ್ಮಲ್ಲಿ ಮಿಥ್ಯಾಹಂಕಾರವನ್ನು ಪೋಷಿಸುವ ಸಾಧ್ಯತೆ ಇರುವುದರಿಂದ ಪರಮಹಂಸರು ಈ ಎಚ್ಚರಿಕೆ ನೀಡಿದ್ದಾರೆ.
ಆದ್ದರಿಂದ, ತಿಳಿವನ್ನು ಪಡೆಯೋಣ. ತಿರುಳನ್ನು ಗ್ರಹಿಸೋಣ. ಬಾಕಿ ವಿಷಯಗಳತ್ತ ಗಮನ ಹರಿಸಿ ಶಕ್ತಿಸಂಚಯ ಕರಗಿಸಿಕೊಳ್ಳುವುದು ಬೇಡ ಅನ್ನೋದು ಈ ಸುಭಾಷಿತದ ವಿವೇಕ.

Leave a Reply