ಪ್ರೇಮ ಒಂದು ಉತ್ಕಟ ಭಾವ : ಜಿಡ್ಡು ಕಂಡ ಹಾಗೆ

ಉತ್ಕಟರಾಗದ ಹೊರತು, ಇವಕ್ಕೆಲ್ಲ ಸಂವೇದನಾಶೀಲರಾಗಿ ಸ್ಪಂದಿಸುವುದು ಹೇಗೆ ಸಾಧ್ಯ? : ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಮ್ಮೊಳಗೆ ಉತ್ಕಟ ಭಾವ ಇಲ್ಲದಿದ್ದರೆ ನೀವು ಸಂವೇದನಾಶೀಲರಾಗುವುದು ಸಾಧ್ಯವೇ ಇಲ್ಲ. ಈ ‘ಉತ್ಕಟ’ ಎನ್ನುವ ಶಬ್ದದ ಬಗ್ಗೆ ಗಾಬರಿಯಾಗಬೇಡಿ. ಬಹುತೇಕ ಎಲ್ಲ ಧಾರ್ಮಿಕ ಗ್ರಂಥಗಳು, ಗುರುಗಳು, ಸ್ವಾಮಿಗಳು, ನಾಯಕರು ಹೇಳುವುದೇ “ಉತ್ಕಟತೆಯಿಂದ ದೂರವಿರಿ” ಎಂದು. ಆದರೆ ನಿಮ್ಮೊಳಗೆ ಉತ್ಕಟ ಭಾವ ಇಲ್ಲದಿದ್ದರೆ ನೀವು ಹೇಗೆ ಬದುಕಿನ ಸೌಂದರ್ಯ, ಎಲೆಗಳ ಪಿಸುಮಾತು, ಸೂರ್ಯೋದಯ, ಸೂರ್ಯಾಸ್ತ, ಒಂದು ಮುಗುಳ್ನಗು, ಒಂದು ಕರಣಾಜನಕ ಅಳು ಎಲ್ಲವನ್ನೂ ಸಂವೇದನಾಶೀಲರಾಗಿ ಗಮವಿಸುವುದು ಸಾಧ್ಯ?

ನನ್ನ ಮಾತು ಗಮನವಿಟ್ಟು ಕೇಳಿ, ಈ ಉತ್ಕಟ ಭಾವವನ್ನು ಹೊಂದುವುದು ಹೇಗೆ ಎನ್ನುವ ಪ್ರಶ್ನೆ ಮಾತ್ರ ಕೇಳಬೇಡಿ. ಒಂದು ಒಳ್ಳೆಯ ಕೆಲಸವನ್ನು ಸಾಧಿಸುವ, ಒಬ್ಬ ಅಮಾಯಕನನ್ನು ದ್ವೇಷಿಸುವ ಅಥವಾ ಇನ್ನೊಬ್ಬರ ಬಗ್ಗೆ ಅಸೂಯೆಪಡುವ ಉತ್ಕಟತೆಯ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಆದರೆ ನಾನು ಹೇಳುತ್ತಿರುವ ಉತ್ಕಟತೆ ಪೂರ್ಣವಾಗಿ ಬೇರೆ ಥರದ್ದು – ಪ್ರೇಮದ ಉತ್ಕಟತೆ. ಪ್ರೇಮ ‘ನಾನು’ ಇಲ್ಲದಿರುವ ಒಂದು ಸ್ಥಿತಿ ; ಪ್ರೇಮದ ಸ್ಥಿತಿಯಲ್ಲಿ ಖಂಡನೆಗೆ ಜಾಗವಿಲ್ಲ, ಲೈಂಗಿಕತೆಯ ತಪ್ಪು ಒಪ್ಪುಗಳ ಬಗ್ಗೆ ಅನುಮಾನಗಳಿಲ್ಲ, ಇದು ಸರಿ ಇದು ತಪ್ಪು ಎನ್ನುವ ಆಯ್ಕೆಗಳಿಲ್ಲ. ಪ್ರೇಮ ಈ ಯಾವ ವೈರುಧ್ಯಗಳೂ ಅಲ್ಲ. ಪ್ರೇಮದಲ್ಲಿ ಈ ದ್ವಂದ್ವಗಳಿಗೆ ಜಾಗವಿಲ್ಲ ಮತ್ತು ಉತ್ಕಟತೆ ಇಲ್ಲದೆ ಪ್ರೇಮವೂ ಇಲ್ಲ. ಉತ್ಕಟತೆ ಇಲ್ಲದ ಸ್ಥಿತಿ ಸಂವೇದನೆ ಮಾಯವಾಗಿರುವ ಸ್ಥಿತಿ.

ಸಂವೇದನಾಶಿಲರಾಗುವುದೆಂದರೆ ನಿಮ್ಮ ಪಕ್ಕ ಕುಳಿತಿರುವ ವ್ಯಕ್ತಿಯ ಭಾವವನ್ನು ಗುರುತಿಸುವುದು; ಸುತ್ತಮುತ್ತಲಿನ ಪರಿಸರದಲ್ಲಿನ ಸಂಕಟವನ್ನ, ಬಡತನವನ್ನ, ದಾರಿದ್ರ್ಯವನ್ನ ಗುರುತಿಸುವುದು, ನದಿಯ ಚೆಲುವನ್ನ, ಸಮುದ್ರದ ವಿಸ್ತಾರವನ್ನ, ಆಕಾಶದ ಅಗಾಧತೆಯನ್ನ ಅನುಭವಿಸುವುದು. ನೀವು ಉತ್ಕಟರಾಗದ ಹೊರತು, ಇವಕ್ಕೆಲ್ಲ ಸಂವೇದನಾಶೀಲರಾಗಿ ಸ್ಪಂದಿಸುವುದು ಹೇಗೆ ಸಾಧ್ಯ? ನಗುವನ್ನ, ಅಳುವನ್ನ ಅರ್ಥಮಾಡಿಕೊಳ್ಳುವುದಾದರೂ ಹೇಗೆ? ಪ್ರೇಮ, ಅಂಥ ಒಂದು ಉತ್ಕಟತೆಯನ್ನ ಸಾಧ್ಯಮಾಡುವ ಸ್ಥಿತಿ.

Leave a Reply