ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ?

ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ ಎಂದು ಜನಕ ರಾಜ ಕೇಳುವ ಪ್ರಶ್ನೆಗೆ ಅಷ್ಟಾವಕ್ರ ನೀಡುವ ಉತ್ತರ ಹೀಗಿದೆ…. ~ ಸಾ.ಹಿರಣ್ಮಯಿ


ಒಂದು ನಡು ಮಧ್ಯಾಹ್ನ ಜನಕ ಮಹಾರಾಜ ಆಸ್ಥಾನದಲ್ಲಿ ಕುಳಿತಿದ್ದ. ಹಾಗೇ ನಿದ್ರೆಯ ಜೊಂಪು ಹತ್ತಿತು. ಆ ನಿದ್ರೆಯಲ್ಲಿ ಸಣ್ಣದೊಂದು ಕನಸು. ಆ ಕನಸಿನಲ್ಲಿ ಜನಕ ಮಹಾರಾಜ ಊಟಕ್ಕಾಗಿ ಯಾರ ಬಳಿಯೋ ಯಾಚಿಸುತ್ತಿದ್ದಾನೆ. ಆದರೆ ಅವರು ಕೈಯಾಡಿಸಿ ಹೊರಟುಹೋಗುತ್ತಿದ್ದಾರೆ. ಒಂದೆಡೆ ಹಸಿವು, ಮತ್ತೊಂದೆಡೆ ನಿರಾಕರಣೆಯ ಸಂಕಟ. ಈ ನೋವು ಕಾಡುತ್ತಲೇ ಜನಕ ರಾಜನಿಗೆ ಎಚ್ಚರವಾಗಿಬಿಡುತ್ತದೆ.

ಈ ಕನಸು, ಅದರ ನೋವು ಜನಕ ರಾಜನನ್ನು ಕಾಡತೊಡಗುತ್ತದೆ. ಅದೇ ಸಮಯಕ್ಕೆ ಮಹಾ ಜ್ಞಾನಿ ಅಷ್ಟಾವಕ್ರ ಮುನಿ ಅಲ್ಲಿಗೆ ಬರುತ್ತಾನೆ. ತನ್ನ ಕನಸಿನ ಅರ್ಥ ತಿಳಿಸಲು ಈತನೇ ಸೂಕ್ತ ವ್ಯಕ್ತಿ ಎಂದು ಮನಗಂಡ ಜನಕ, ಅಷ್ಟಾವಕ್ರನ ಬಳಿ ತನ್ನ ಕನಸಿನ ಕುರಿತು ಚರ್ಚಿಸುತ್ತಾನೆ. ಆಗ ನಡೆಯುವ ಸಂವಾದವೇ ‘ಅಷ್ಟಾವಕ್ರ ಗೀತಾ’. ಇದು ಜ್ಞಾನ ಪ್ರಧಾನ ಸಂಭಾಷಣೆ. ಅದ್ವೈತ ಅನುಭವದ ಉತ್ತುಂಗ ಶಿಖರದ ದರ್ಶನ ಮಾಡಿಸುವಂಥದ್ದು. ವ್ಯಕ್ತಿಯ ಅಹಂಕಾರ ಕಳೆದು ಸತ್ಯ ದರ್ಶನ ಮಾಡಿಸುವಂಥದ್ದು.

ಜನಕ ಕೇಳುವ ಪ್ರಶ್ನೆ :
ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ ।
ವೈರಾಗ್ಯಂ ಚ ಕಥಂ ಪ್ರಾಪ್ತಂ ಏತದ್ ಬ್ರೂಹಿ ಮಮ ಪ್ರಭೋ ॥ 1.1॥
ಅರ್ಥ: ಜ್ಞಾನವನ್ನು ಪಡೆಯುವುದು ಹೇಗೆ? ಮುಕ್ತಿಯನ್ನು ಪಡೆಯುವುದು ಹೇಗೆ? ವೈರಾಗ್ಯ ಪ್ರಾಪ್ತವಾಗುವುದು ಹೇಗೆ? ದಯವಿಟ್ಟು ಇದನ್ನು ವಿವರಿಸಿ ಪ್ರಭೂ.

ತಾತ್ಪರ್ಯ : ಜನಕ ಮಹಾರಾಜ ಈ ಪ್ರಶ್ನೆಯನ್ನು ಏಕಾಏಕಿ ಕೇಳುತ್ತಿಲ್ಲ. ಇದಕ್ಕೆ ಮುಂಚಿತವಾಗಿ ಅಷ್ಟಾವಕ್ರ ಮತ್ತು ಜನಕ ಮಹಾರಾಜನ ನಡುವೆ ಸಂಭಾಷಣೆ ನಡೆದಿದೆ. ಜನಕ ತನ್ನ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಚರ್ಚೆ ಮುಂದುವರೆಸಿದ್ದಾನೆ. ಅವನಲ್ಲಿ ಜ್ಞಾನವೆಂದರೇನು, ಅದನ್ನು ಪಡೆಯುವುದು ಹೇಗೆ? ವೈರಾಗ್ಯ ಪಡೆಯುವುದು ಹೇಗೆ ಎಂಬ ಪ್ರಶ್ನೆಗಳು ಮೂಡಿವೆ. ಅವನ್ನು ಅಷ್ಟಾವಕ್ರನ ಮುಂದೆ ಇಡುತ್ತಿದ್ದಾನೆ.

ಇದಕ್ಕೆ ಉತ್ತರ ನೀಡುವ ಮುನ್ನ ಅಷ್ಟಾವಕ್ರ, ನೀನು ಮುಕ್ತಿಯನ್ನು ಬಯಸುವುದಾದರೆ :
ಮುಕ್ತಿಮಿಚ್ಛಸಿ ಚೇತಾಸ್ತ ವಿಷಯಾನ್ವಿಷವತ್ತ್ಯಜ|
ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ಭಜ||
ಎಂದು ಕಿವಿಮಾತು ಹೇಳುತ್ತಾನೆ.

ಇದರರ್ಥ: “ನಿನಗೆ ಮುಕ್ತಿ ಬೇಕಾದರೆ ಐಹಿಕ ಸುಖವನ್ನು ವಿಷದಂತೆ ತ್ಯಜಿಸಿ; ಕ್ಷಮೆ, ಕರುಣೆ, ದಯೆ, ತೃಪ್ತಿ ಮತ್ತು ಸತ್ಯಗಳನ್ನು ಪೀಯೂಷದಂತೆ (ಅಮೃತದಂತೆ) ಭಜಿಸು” ಎಂದು. ಇಲ್ಲಿ ಭಜಿಸು ಅಂದರೆ, ಮೃತ್ಯವಿನಿಂದ ರಕ್ಷಿಸುವ ಅಮೃತಕ್ಕಾಗಿ ಧೇನಿಸುವಂತೆ ಸದಾ ಈ ಗುಣಗಳನ್ನೆ ಧ್ಯಾನ ಮಾಡು, ಇವುಗಳನ್ನು ನಡೆಸು – ಎಂದು.

ಇಲ್ಲಿ ನಮಗೊಂದು ಪ್ರಶ್ನೆ ಮೂಡಬಹುದು. ಮುಕ್ತರಾಗಬೇಕು ಎಂದರೆ ಸಾಯಬೇಕು. ಪೀಯೂಷ ಅಥವಾ ಅಮೃತ ಸಾವಿಲ್ಲದಂತೆ ಮಾಡುವುದು. ಹಾಗಾದರೆ, ಅದನ್ನು ಧೇನಿಸುವಂತೆ ಕ್ಞಮಾದಿಗಳನ್ನು ಧೇನಿಸಿ ಪ್ರಯೋಜನವೇನು? ಸಾವೇ ಇಲ್ಲದೆ ಮುಕ್ತಿ ಹೇಗೆ ಸಾಧ್ಯ ಎಂದು.

ವಾಸ್ತವದಲ್ಲಿ ಮುಕ್ತರಾಗುವುದು ಎಂದರೆ ಸಾಯುವುದು ಎಂದಲ್ಲ. ದೇಹದಿಂದ ಬಿಡುಗಡೆ ಹೊಂದಿದ ಆತ್ಮ ಮತ್ತೆ ದೇಹ ಧರಿಸಿ ಬಂದು ಪುನಃ ಸಾವನ್ನು ಎದುರಿಸುವ ಅವಕಾಶವಿಲ್ಲದಂಥ ಸ್ಥಿತಿ.
ಒಮ್ಮೆ ದೇಹ ಧರಿಸಿದ ಮೇಲೆ ಯಾರಾದರೂ ಸರಿ, ಸಾಯಲೇಬೇಕು. ಆದರೆ ಕೆಲವು ಪುಣ್ಯವಂತರು ಮತ್ತೆ ಹುಟ್ಟಿ ಮತ್ತೆ ಸಾಯದಂಥ ಸಾಧನೆ ಮಾಡುತ್ತಾರೆ. ಶಾಶ್ವತವಾಗಿ ಜನನ ಮರಣ ಚಕ್ರದಿಂದ ಬಿಡುಗಡೆ ಪಡೆಯುತ್ತಾರೆ. ಈ ಬಿಡುಗಡೆಯೇ ಮುಕ್ತಿ.

ಕ್ಷಮಾದಿ ಗುಣಗಳು ಇಂಥ ಮುಕ್ತಿಯನ್ನು ಕರುಣಿಸುವ ಪೀಯೂಷದಂಥ ದಾರಿಗಳು. ಆದ್ದರಿಂದ, ಅದನ್ನು ಧೇನಿಸುವಂತೆ ಕ್ಷಮಾದಿ ಗುಣಗಳನ್ನು ಆಚರಿಸು; ಮತ್ತು ಆ ಧ್ಯಾನಕ್ಕೆ ಅಡ್ಡಿಯಾಗುವ ವಿಷಯ ಸುಖಗಳನ್ನು ‘ವಿಷವನ್ನು ತ್ಯಜಿಸುವಂತೆ ತ್ಯಜಿಸು’. ಯಾರು ಕೂಡ ವಿಷವನ್ನು ಒಂದು ಹನಿಯಾದರೂ ನನ್ನ ಬಳಿ ಇರಲಿ ಎಂದು ತೆಗೆದಿಟ್ಟುಕೊಂಡು ಮಿಕ್ಕಿದ್ದನ್ನು ಚೆಲ್ಲುವುದಿಲ್ಲ. ಅದು ವಿಷ ಎಂದು ತಿಳಿದಕೂಡಲೇ ಅದನ್ನು ಸಂಪೂರ್ಣವಾಗಿ ವರ್ಜಿಸುತ್ತಾರೆ. ಹಾಗೇ ನೀನು ವಿಷಯಸುಖಗಳನ್ನು ತ್ಯಜಿಸು – ಅನ್ನುತ್ತಿದ್ದಾನೆ ಅಷ್ಟಾವಕ್ರ.

ಅಷ್ಟಾವಕ್ರನ ಈ ಮಾತನ್ನು ನಾವು ವಿಶೇಷವಾಗಿ ಗಮನಿಸಬೇಕು. ಕೆಟ್ಟದ್ದನ್ನು, ನಕಾರಾತ್ಮಕವಾದುದನ್ನು ತ್ಯಜಿಸುವಾಗ ಸಂಪೂರ್ಣವಾಗಿ ತ್ಯಜಿಸಬೇಕು. ಏನಾದರೂ ಪ್ರಯೋಜನಕ್ಕೆ ಬರಬಹುದು ಎಂದು ಎಷ್ಟು ಪ್ರಮಾಣದಲ್ಲಿಯೂ ಅದನ್ನು ಉಳಿಸಿಕೊಳ್ಳಬಾರದು.

ನಾವು ಹೊಸ ವರ್ಷ ಬಂದಾಕ್ಷಣ ರೆಸಲೂಶನ್’ಗಳನ್ನು ಮಾಡುತ್ತೇವೆ. ಸಿಗರೇಟು ಬಿಡುತ್ತೇನೆ ಎಂದೋ ಸೋಶಿಯಲ್ ಮೀಡಿಯಾ ಡಿಆಕ್ಟಿವೇಟ್ ಮಾಡುತ್ತೀನಿ ಎಂದೋ ನಮಗೆ ನಾವೇ ಪ್ರಮಾಣ ಮಾಡಿಕೊಳ್ಳುತ್ತೇವೆ. ಆದರೂ ‘ದಿನಕ್ಕೆ ಒಂದು ಸೇದುತ್ತೇನೆ’ ಅಂತಲೋ ‘ದಿನಕ್ಕೆ ಒಂದೇ ಒಂದು ಸಲ ಫೇಸ್ ಬುಕ್ ನೋಡುತ್ತೇನೆ’ ಅಂತಲೋ ನಿಮ್ಮನ್ನು ನೀವು ಯಾಮಾರಿಸಿಕೊಳ್ಳಲಾಗದು. ಈ ರಿಯಾಯಿತಿಯನ್ನು ನಿಮಗೆ ನೀವು ಕೊಟ್ಟುಕೊಂಡರೆ, ಖಂಡಿತ ನಿಮ್ಮ ಉದ್ದೇಶ ಈಡೇರುವುದಿಲ್ಲ. ಯಾವುದನ್ನಾದರೂ ಪಡೆಯುವಾಗ ಸಂಪೂರ್ಣ ಪಡೆಯಲಾಗುತ್ತದೋ ಇಲ್ಲವೋ… ಬಿಡುವಾಗ ಮಾತ್ರ ಸಂಪೂರ್ಣವಾಗಿ ಬಿಡಬೇಕು. ಅದು ಬದ್ಧತೆ. ಆ ಬದ್ಧತೆ ಸಾಧ್ಯವಾದರೆ, ಕ್ಷಮಾದಿ ಚರ್ಯೆಗಳನ್ನು ನಡೆಸುವುದು ಸರಾಗ.
ಆದ್ದರಿಂದ ಕೆಡುಕನ್ನು ‘ವಿಷದಂತೆ ತ್ಯಜಿಸಿ’, ಒಳಿತನ್ನು ‘ಪೀಯೂಷದಂತೆ ಭಜಿಸಬೇಕು’ ಇದು ಅಷ್ಟಾವಕ್ರನ ಮಾತಿನ ಸರಳ ಅರ್ಥ.

2 thoughts on “ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ?

Leave a Reply