ನೀನು ಭೋಕ್ತಾರನಲ್ಲ, ದ್ರಷ್ಟಾರ…

ಎಲ್ಲಿಯವರೆಗೆ ನಾವು ದ್ರಷ್ಟಾ ಆಗಿರುತ್ತೇವೆಯೋ, ನೋಡುವವರೇ ನಾವಾಗಿರುತ್ತೇವೆಯೋ, ಅಲ್ಲಿಯವರೆಗೆ ನಾವು ಸ್ವತಂತ್ರರು. ನೋಡುವವರು ಮತ್ತೊಬ್ಬರಿದ್ದಾರೆ ಎಂದು ಭಾವಿಸಿದ ಕ್ಷಣದಲ್ಲೆ ನಿಮ್ಮನ್ನು ಬಂಧನ ಆವರಿಸಿಬಿಡುತ್ತದೆ  ~ ಸಾ.ಹಿರಣ್ಮಯಿ

ಏಕೋ ದ್ರಷ್ಟಾಸಿ ಸರ್ವಸ್ಯ ಮುಕ್ತಪ್ರಾಯೋSಸಿ ಸರ್ವದಾ |
ಅಯಮೇವ ಹಿ ತೇ ಬಂಧೋ ದ್ರಷ್ಟಾರಂ ಪಶ್ಯಸೀತರಮ್ || 7 ||
ಅರ್ಥ : ಸರ್ವಸ್ವವನ್ನೂ ನೋಡುತ್ತಿರುವ ಏಕವೇ ನೀನು. ನಿಜವಾಗಿಯೂ ನೀನು ಸದಾ ಮುಕ್ತನೇ. ಬೇರೊಬ್ಬ ದ್ರಷ್ಟಾರನಿದ್ದಾನೆ ಎಂದು ಭಾವಿಸುವುದೇ ನಿನ್ನ ಬಂಧನ.

ಅಷ್ಟಾವಕ್ರ ಜನಕನಿಗೆ ನೀನು ಭೋಕ್ತಾರನಲ್ಲ, ದ್ರಷ್ಟಾರ ಎಂದು ಮನದಟ್ಟು ಮಾಡುತ್ತಿದ್ದಾನೆ. “ನೀನು ಎಲ್ಲ ಬಗೆಯ ಕರ್ಮಾಕರ್ಮಗಳಿಂದ, ಧರ್ಮಾಧರ್ಮಗಳಿಂದ ಮುಕ್ತನಾಗಿರುವೆ. ಆದ್ದರಿಂದ ಯಾವ ದೇಹವನ್ನು ನೀನು ಆಶ್ರಯಿಸಿದ್ದೀಯೋ ಅದು ಅನುಭವಿಸುವ ಯಾವುದೂ ನಿನ್ನ ಅನುಭವವಲ್ಲ. ನೀನು ಕೇವಲ ಅದನ್ನು ನೋಡುತ್ತಿರುವೆ. ಮತ್ತು ನೀನಿಬ್ಬನೇ ನೋಡುತ್ತಿರುವೆ. ಆದ್ದರಿಂದ, ‘ನೋಡುವುದಕ್ಕೆ ಬೇರೊಬ್ಬರಿದ್ದಾರೆ’ ಎಂದು ನೀನು ಭಾವಿಸಿದೆಯಾದರೆ, ಅದೇ ನಿನಗೆ ಬಂಧನವಾಗಿಬಿಡುತ್ತದೆ” ಅನ್ನುತ್ತಿದ್ದಾನೆ ಅಷ್ಟಾವಕ್ರ.

ಎಲ್ಲಿಯವರೆಗೆ ನಾವು ದ್ರಷ್ಟಾ ಆಗಿರುತ್ತೇವೆಯೋ, ನೋಡುವವರೇ ನಾವಾಗಿರುತ್ತೇವೆಯೋ, ಅಲ್ಲಿಯವರೆಗೆ ನಾವು ಸ್ವತಂತ್ರರು. ನೋಡುವವರು ಮತ್ತೊಬ್ಬರಿದ್ದಾರೆ ಎಂದು ಭಾವಿಸಿದ ಕ್ಷಣದಲ್ಲೆ ನಿಮ್ಮನ್ನು ಬಂಧನ ಆವರಿಸಿಬಿಡುತ್ತದೆ. ವಾಸ್ತವದಲ್ಲಿ ಇರುವುದು ನೀವೊಬ್ಬರೇ. ಸರ್ವಸ್ವತಂತ್ರರಾದ ನೀವು. ದೇಹದ ಅನುಭೋಗಗಳನ್ನು ನೋಡುತ್ತಿರುವವರೂ ನೀವೇ. ಆದರೆ ನೀವು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ನೀವು ನಿಮ್ಮನ್ನು ಭೋಕ್ತೃವಾಗಿ ಭಾವಿಸಿದ್ದೀರಿ. ಕರ್ಮಫಲವನ್ನು ಅನುಭವಿಸುವ ಸ್ಥಾನದಲ್ಲಿ ನೀವಿದ್ದೀರೆಂದೂ, ನಿಮ್ಮನ್ನು ಗಮನಿಸಲು ಭಗವಂತನಿದ್ದಾನೆಂದೂ ಭಾವಿಸುತ್ತೀರಿ. ಆಗ ನೀವು ನಿಮ್ಮ ಅನುಭವಕ್ಕೆ ಮತ್ತಷ್ಟು ಅಂಟಿಕೊಳ್ಳುವಿರಿ. ನಿಮ್ಮ ವರ್ತನೆ ಕೃತಕವಾಗುವುದು. ನಿಮ್ಮನ್ನು ಬೇರೊಬ್ಬರು ಗಮನಿಸುತ್ತಿದ್ದಾರೆ ಅನಿಸಿದ ಕ್ಷಣವೇ ನಿಮ್ಮ ಸಹಜತೆಗೆ ಬೇಲಿ ಕಟ್ಟಿಕೊಳ್ಳುವಿರಿ.

ವಾಸ್ತವ ಹಾಗಿಲ್ಲ. ವಾಸ್ತವದಲ್ಲಿ ನೋಡುವ ಸ್ಥಾನದಲ್ಲಿರುವುದು ನೀವೇ. ಕರ್ಮಫಲ ಉಣ್ಣುತ್ತಿರುವುದು ನೀವು ಆಶ್ರಯಿಸಿರುವ ದೇಹ. ಆ ದೇಹ ನಿಮ್ಮದಲ್ಲ. ಬಾಡಿಗೆಮನೆಯಂತೆ ಕೆಲ ಕಾಲ ಇದ್ದುಹೋಗಲು ಪಂಚಭೂತಗಳಿಂದ ಕಡ ಪಡೆದ ಆವಾಸ. ಆದ್ದರಿಂದ, ಆ ಮನೆಯಲ್ಲಿ ಏನೆಲ್ಲ ನಡೆಯುತ್ತಿದೆಯೋ ಅದನ್ನು ಸಾಕ್ಷಿಯಾಗಿ ನೋಡಿ. ಅದರಲ್ಲಿ ತೊಡಗಿಕೊಳ್ಳಲು ಹೋಗಬೇಡಿ. ಅದು ನಿಮ್ಮದು, ಅಲ್ಲಿರುವುದು ಸ್ವತಃ ನೀವು; ನಿಮ್ಮನ್ನು ಗಮನಿಸಲು ಮತ್ತೊಬ್ಬರಿದ್ದಾರೆ ಅನ್ನುವ ಆಲೋಚನೆ ನಿಮ್ಮನ್ನು ದೇಹದೊಡನೆ ಕಟ್ಟಿಹಾಕುತ್ತದೆ. ಅನಂತರ ದೇಹದ ಎಲ್ಲ ಸುಖದುಃಖಗಳಿಗೆ ನೀವು ಬಾಧ್ಯರಾಗುತ್ತಾಹೋಗುತ್ತೀರಿ.
ಇದು ಅಷ್ಟಾವಕ್ರನ ಚಿಂತನೆ.

(ಮುಂದುವರಿಯುವುದು….)

1 Comment

Leave a Reply