ನೀನೇನು ಯೋಚಿಸುತ್ತೀಯೋ ಹಾಗೇ ಆಗುತ್ತೀಯ

“ನಿನ್ನನ್ನು ನೀನು ಮುಕ್ತನೆಂದುಕೊಂಡರೆ ಮುಕ್ತ, ಬದ್ಧನೆಂದುಕೊಂಡರೆ ಬದ್ಧ” ಅನ್ನುತ್ತಾನೆ ಅಷ್ಟಾವಕ್ರ. ಅದು ಹೇಗೆ ಎಂದು ನೀವು ಕೇಳಬಹುದು. ದೈಹಿಕ ಬಂಧನ ಬಂಧನವಲ್ಲ, ಮನಸ್ಸಿಗೆ ಸಂಕೋಲೆ ತೊಡಿಸುವುದೇ ಬಂಧನ ಎನ್ನುವುದು ನಿಮಗೆ ಅರ್ಥವಾದರೆ ಇದೂ ಅರ್ಥವಾಗುತ್ತದೆ  ~ ಸಾ.ಹಿರಣ್ಮಯಿ

ಮುಕ್ತಾಭಿಮಾನೀ ಮುಕ್ತೋ ಹಿ ಬದ್ಧೋ ಬದ್ಧಾಭಿಮಾನ್ಯಪಿ |
ಕಿಂವದನ್ತೀಹ ಸತ್ಯೇಯಂ ಯಾ ಮತಿಸ್ಸಾ ಗತಿರ್ಭವೇತ್ || 11 ||

ಅರ್ಥ : ತಮ್ಮನ್ನು ಮುಕ್ತರೆಂದು ಭಾವಿಸುವವರು ಮುಕ್ತರಾಗಿಯೂ ಬದ್ಧರೆಂದು ಭಾವಿಸಿದವರು ಬದ್ಧರಾಗಿಯೂ ಇರುತ್ತಾರೆ. ತಾನು ಯೋಚಿಸಿದಂತೆಯೇ ಆಗುತ್ತಾರೆ ಅನ್ನುವ (ಪ್ರಾಜ್ಞರ) ನುಡಿ ಸತ್ಯ.

ಅಷ್ಟಾವ್ರಕ ಹೇಳುತ್ತಾನೆ, “ವ್ಯಕ್ತಿಯು ತಾನು ಯೋಚಿಸಿದಂತೆಯೇ ಆಗುತ್ತಾನೆ ಎಂಬ ಪ್ರಾಜ್ಞರ ನುಡಿ ಸತ್ಯ”. ಇದು ಅಷ್ಟಾವಕ್ರ ಹೊಸತಾಗಿ ಕಂಡುಕೊಂಡಿದ್ದಲ್ಲ. ಅವನಿಗಿಂತಲೂ ಮೊದಲೇ ಹಲವಾರು ಋಷಿಗಳು ಈ ಸತ್ಯವನ್ನು ಮನವರಿಕೆ ಮಾಡಿಕೊಂಡು, ಮುಂದಿನ ಪೀಳಿಗೆಗೆ ಬೋಧಿಸಿ ಹೋಗಿದ್ದಾರೆ. ಈ ಪಾರಂಪರಿಕ ಅರಿವಿನ ಅಧಿಕೃತತೆಯಿಂದ ಅಷ್ಟಾವಕ್ರ, “ನೀನೇನು ಯೋಚಿಸುತ್ತೀಯೋ ಹಾಗೇ ಆಗುತ್ತೀಯ” ಎಂದು ಜನಕನಿಗೆ ಹೇಳುತ್ತಿದ್ದಾನೆ.

“ನಿನ್ನನ್ನು ನೀನು ಮುಕ್ತನೆಂದುಕೊಂಡರೆ ಮುಕ್ತ, ಬದ್ಧನೆಂದುಕೊಂಡರೆ ಬದ್ಧ” ಅನ್ನುತ್ತಾನೆ ಅಷ್ಟಾವಕ್ರ. ಅದು ಹೇಗೆ ಎಂದು ನೀವು ಕೇಳಬಹುದು. ದೈಹಿಕ ಬಂಧನ ಬಂಧನವಲ್ಲ, ಮನಸ್ಸಿಗೆ ಸಂಕೋಲೆ ತೊಡಿಸುವುದೇ ಬಂಧನ ಎನ್ನುವುದು ನಿಮಗೆ ಅರ್ಥವಾದರೆ ಇದೂ ಅರ್ಥವಾಗುತ್ತದೆ.

ಈ ಹಿನ್ನೆಲೆಯಲ್ಲಿ ಮುಲ್ಲಾ ನಸ್ರುದ್ದೀನನ ಕತೆಯೊಂದನ್ನು ನೆನಪಿಸಿಕೊಳ್ಳಬಹುದು. ಒಮ್ಮೆ ನಸ್ರುದ್ದೀನ್ ಬಂಗಾರದ ಪಂಜರದಲ್ಲಿ ಕೂಡಿಟ್ಟ ಗಿಳಿಯನ್ನು ನೋಡುತ್ತಾನೆ. ಪಾಪ ಅನ್ನಿಸಿ ಪಂಜರದ ಬಾಗಿಲು ತೆರೆಯುತ್ತಾನೆ, ನಸ್ರುದ್ದೀನ್ “ಗಿಳಿಯೇ, ಬಾಗಿಲು ತೆರೆದಿದೆ, ನೀನೀಗ ಸ್ವತಂತ್ರ. ಹೋಗು… ಹಾರಿಹೋಗು…” ಅನ್ನುತ್ತಾನೆ. ಆದರೆ ಗಿಳಿ ಹಾರುವುದಿಲ್ಲ. ಕೊನೆಗೆ ಅವನೇ ಅದನ್ನೆತ್ತಿ ಕಿಟಕಿಯ ಅಂಚಿನ ಮೇಲೆ ಕೂರಿಸುತ್ತಾನೆ. ಕೂಡಲೇ ಗಿಳಿ ತನ್ನ ಪಂಜರದತ್ತ ಓಡಿ ಅದರೊಳಗೆ ಕುಳಿತುಕೊಳ್ಳುತ್ತದೆ. “ಇದು ನನ್ನ ಪಂಜರ…ಇದು ನನ್ನ ಪಂಜರ…” ಎಂದು ನಸ್ರುದ್ದೀನ ಕಡೆಯಿಂದ ಮುಖ ತಿರುಗಿಸುತ್ತದೆ.

ಹಾಗೇ ನಾವೂ. ನಮಗೆ ಮುಕ್ತರಾಗುವ ದಾರಿ ತೋರಿಸಿದರೂ, ಕೈ ಹಿಡಿದು ನಡೆಸಿದರೂ; ನಮಗೆ ಅದರಲ್ಲಿ ನಂಬಿಕೆಯಲ್ಲಿ. ನಮಗೆ ಮುಕ್ತರಾಗುವಲ್ಲಿ ಆಸಕ್ತಿಯೂ ಇಲ್ಲ. ಇದು ನನ್ನ ಮನೆ, ನನ್ನ ಜನ, ನನ್ನ ಧನ ಎಂದೆಲ್ಲ ಸಂಸಾರಕ್ಕೆ ಅಂಟಿಕೊಳ್ಳಲು ಹವಣಿಸುತ್ತೇವೆ.
ದೇಹದೊಡನೆ ಸಂಬಂಧವಿಟ್ಟುಕೊಂಡೂ ಆತ್ಮವು ತನ್ನನ್ನು ತಾನು ಮುಕ್ತನೆಂದು ಭಾವಿಸಿದರೆ ಅದನ್ನು ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ.

ವಾಸ್ತವದಲ್ಲಿ ಆತ್ಮವನ್ನು ಮತ್ತೊಬ್ಬರಿಂದ ಬಂಧಿಸಿಡಲು ಸಾಧ್ಯವೇ ಇಲ್ಲ. ಅದು ಸ್ವಯಂಬದ್ಧ. ಅದು ತನ್ನನ್ನು ತಾನು ಬಂಧಿ ಎಂದು ಭಾವಿಸಿದರಷ್ಟೆ ಅದು ಬಂಧಿ. ಇಲ್ಲವಾದರೆ ಇಲ್ಲ.
ಆದ್ದರಿಂದ, ಅಷ್ಟಾವಕ್ರ ಜನಕನಿಗೆ ನಿನ್ನನ್ನು ನೀನು ಬದ್ಧನೆಂದು ಭಾವಿಸಬೇಡ ಎಂದು ಹೇಳುತ್ತಿದ್ದಾನೆ.

(ಮುಂದುವರೆಯುವುದು)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

  1. […] ಜನಕ ಮಹಾರಾಜ ಅಷ್ಟಾವಕ್ರ ಮುನಿಯ ಬಳಿ “ಜ್ಞಾನ ಪಡೆಯುವುದು ಹೇಗೆ? ಮುಕ್ತಿ ಪಡೆಯುವುದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆಗೆ ಅಷ್ಟಾವಕ್ರ ಉತ್ತರ ನೀಡಲಾರಂಭಿಸುತ್ತಾನೆ. ಈ ಸಂವಾದದ ಮುಂದುವರಿದ ಭಾಗ ಇದು ~ ಸಾ.ಹಿರಣ್ಮಯಿ ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/01/17/ashta-7/ […]

    Like

Leave a Reply

This site uses Akismet to reduce spam. Learn how your comment data is processed.