ಸರ್ವವ್ಯಾಪಿಯಾದ ‘ಏಕ’ ತಾನಾಗಿಹನು…

ನಾವೂ ಆ ಹಕ್ಕಿಯಂತೆ ದೇಹಭಾವನೆಯಲ್ಲಿ ಕರ್ಮಫಲವುಣ್ಣುತ್ತಾ ಕುಳಿತಿದ್ದೇವೆ. ಪರಮಾತ್ಮನ ದರ್ಶನವಾದಾಗ ನಮ್ಮ ನಿಜ ಸ್ವರೂಪದ ಅರಿವಾಗಿ, ಹಣ್ಣನ್ನು ಬಿಟ್ಟು, ಆ ಮತ್ತೊಂದು ಹಕ್ಕಿಯಂತೆ ಎಲ್ಲವನ್ನೂ ಸಾಕ್ಷಿಯಾಗಿ ನೋಡಲು ಆರಂಭಿಸುತ್ತೇವೆ… ~ ಸಾ.ಹಿರಣ್ಮಯಿ

ಆತ್ಮಾ ಸಾಕ್ಷೀ ವಿಭುಃ ಪೂರ್ಣ ಏಕೋ ಮುಕ್ತಶ್ಚಿದಕ್ರಿಯಃ |
ಅಸಂಗೋ ನಿಸ್ಪೃಹಃ ಶಾಂತೋ ಭ್ರಮಾತ್ ಸಂಸಾರವಾನಿವ || 12 ||
ಅರ್ಥ : ಆತ್ಮನು ಸಾಕ್ಷಿ, ವಿಭು , ಪೂರ್ಣ, ಏಕ, ಮುಕ್ತ, ಅಕ್ರಿಯ, ಅಸಂಗ, ನಿಸ್ಪೃಹ, ಶಾಂತ. ಭ್ರಮೆಯಿಂದ ಅವನು ಸಂಸಾರಿಯಂತೆ ಕಾಣುತ್ತಿದ್ದಾನೆ.

ಈ ಆತ್ಮದ ಸ್ವರೂಪ ಎಂಥದ್ದು? ಅದು ಸಾಕ್ಷಿ ಮಾತ್ರವಾಗಿರುವಂಥದ್ದು. ಅದು ಯಾವುದರಲ್ಲೂ ತೊಡಗುವುದಿಲ್ಲ. ಮುಂಡಕ ಉಪನಿಷತ್ತಿನ ಶ್ಲೋಕವೊಂದು ಇದನ್ನು ಬಹಳ ಸೊಗಸಾಗಿ ವಿವರಿಸುತ್ತದೆ. “ದ್ವಾ ಸುಪರ್ಣಾ ಸಯುಜಾ ಸಖಾಯ” ಎಂದು ಆರಂಭವಾಗುವ ಈ ಶ್ಲೋಕ, ಜೀವಾತ್ಮ – ಪರಮಾತ್ಮರ ಸ್ವರೂಪವನ್ನು ತಿಳಿಸುತ್ತದೆ.

ಅದರಂತೆ; ಗೆಳೆಯರಾದ ಎರಡು ಹಕ್ಕಿಗಳು ಒಂದೇ ಮರದ (ಪಿಪ್ಪಲ ವೃಕ್ಷ) ಮೇಲೆ ಕುಳಿತಿವೆ. ಅವುಗಳಲ್ಲೊಂದು ಹಕ್ಕಿ ಹಣ್ಣುಗಳನ್ನು ತಿನ್ನುವುದರಲ್ಲಿ ಮುಳುಗಿಹೋಗಿದೆ. ಮತ್ತೊಂದು ಸುಮ್ಮನೆ ನೋಡುತ್ತಾ ಕುಳಿತಿದೆ. ಹಣ್ಣು ತಿನ್ನುವ ಹಕ್ಕಿ ತಿನ್ನುವ ಧಾವಂತದ ನಡುವೆಯೇ ಒಮ್ಮೆ ಕತ್ತೆತ್ತಿ ಗೆಳೆಯ ಹಕ್ಕಿಯನ್ನು ನೋಡುತ್ತದೆ. ಆಗ ಅದಕ್ಕೆ ತಾನು ಎಂತಹ ಹಣ್ಣುಗಳನ್ನು ತಿನ್ನುತ್ತಿದ್ದೇನೆ, ಸುಮ್ಮನೆ ಕುಳಿತ ಹಕ್ಕಿಯ ವಿಶೇಷತೆ ಏನಿದೆ ಎಂಬ ಸ್ಮರಣೆ ಉಂಟಾಗುತ್ತದೆ. ಈ ಸ್ಮರಣೆ ಅಥವಾ ಅರಿವಿನೊಂದಿಗೆ ಅದು ಹಣ್ಣು ತಿನ್ನುವುದನ್ನು ಬಿಟ್ಟು, ತಾನೂ ಗೆಳೆಯ ಹಕ್ಕಿಯಂತೆ ಸಾಕ್ಷೀಭಾವ ತಾಳುತ್ತದೆ.

ನಾವೂ ಆ ಹಕ್ಕಿಯಂತೆ ದೇಹಭಾವನೆಯಲ್ಲಿ ಕರ್ಮಫಲವುಣ್ಣುತ್ತಾ ಕುಳಿತಿದ್ದೇವೆ. ಪರಮಾತ್ಮನ ದರ್ಶನವಾದಾಗ ನಮ್ಮ ನಿಜ ಸ್ವರೂಪದ ಅರಿವಾಗಿ, ಹಣ್ಣನ್ನು ಬಿಟ್ಟು, ಆ ಮತ್ತೊಂದು ಹಕ್ಕಿಯಂತೆ ಎಲ್ಲವನ್ನೂ ಸಾಕ್ಷಿಯಾಗಿ ನೋಡಲು ಆರಂಭಿಸುತ್ತೇವೆ.

ಅಷ್ಟಾವಕ್ರ ಹೇಳುತ್ತಿದ್ದಾನೆ, ಹೀಗೆ ಸಾಕ್ಷಿಮಾತ್ರವಾಗಿ ಕುಳಿತು ನೋಡುವ ಆತ್ಮನು “ವಿಭು, ಪೂರ್ಣ, ಏಕ, ಮುಕ್ತ, ಅಕ್ರಿಯ, ಅಸಂಗ, ನಿಸ್ಪೃಹ ಮತ್ತು ಶಾಂತ” ಎಂದು. “ಈ ಆತ್ಮನು ಯಾವ ತಡೆಗಳೂ ಇಲ್ಲವಾಗಿ ಒಡೆಯನಂತಿರುತ್ತಾನೆ. ಪರಿಪೂರ್ಣನಾಗಿದ್ದಾನೆ. ಎಲ್ಲದರಲ್ಲೂ ನೆಲೆಸಿರುವ, ಸರ್ವವ್ಯಾಪಿಯಾದ ‘ಏಕ’ ತಾನಾಗಿದ್ದಾನೆ. ಬಂಧನಗಳಿಲ್ಲದವನೂ ಕ್ರಿಯಾಕರ್ಮರಹಿತನೂ, ಯಾವ ಸಾಂಗತ್ಯದ ಕಟ್ಟಿಗೆ ಬೀಳದವನೂ, ನಿಸ್ಪೃಹನೂ ಆಗಿದ್ದಾನೆ. ಮತ್ತು (ಈ ಎಲ್ಲ ಕಾರಣದಿಂದ) ಆತ್ಮನು ಶಾಂತನೂ ಆಗಿದ್ದಾನೆ. ಆದರೆ, ನಾನು ದೇಹ, ನಾನು ಕರ್ತೃ ಎಂಬ ಭ್ರಮೆಯಲ್ಲಿ ಆತ್ಮನು ಸಂಸಾರಿಯಂತೆ, ಸಂಸಾರ ಬಂಧನದಲ್ಲಿರುವಂತೆ ತೋರುತ್ತಿದ್ದಾನೆ” ಎನ್ನುವುದು ಅಷ್ಟಾವಕ್ರನ ವಿವರಣೆ.

ಮುಂದುವರೆಯುವುದು….

2 Comments

Leave a Reply