ಈ ಜಗತ್ತು ನಮ್ಮ ವ್ಯಕ್ತಿತ್ವದ ವಿಸ್ತರಣೆಯೇ ಆಗಿದೆ. ಈ ಜಗತ್ತಿನಿಂದ ದ್ವೇಷವನ್ನು ನಿರ್ಮೂಲನ ಮಾಡಲು ಬಯಸುವಿರಾದರೆ ನೀವು ಸ್ವತಃ ನಿಮ್ಮ ವ್ಯಕ್ತಿತ್ವದಿಂದ ದ್ವೇಷವನ್ನು ಇಲ್ಲದಂತೆ ಮಾಡಬೇಕು |ಜಿಡ್ಡು ಕೃಷ್ಣಮೂರ್ತಿ ; ಕನ್ನಡಕ್ಕೆ : ಚಿದಂಬರ ನರೇಂದ್ರ
ಇಂದು ದ್ವೇಷದ ಜಗತ್ತು ತನ್ನ ಸುಗ್ಗಿಯನ್ನ ಆಚರಿಸುತ್ತಿರುವುದು ನಮ್ಮ ಕಣ್ಣ ಮುಂದೆ ಇದೆ. ಈ ದ್ವೇಷದ ಜಗತ್ತು ತಂತಾನೇ ಹುಟ್ಟಿಕೊಂಡದ್ದಲ್ಲ ಇದರ ನಿರ್ಮಾಣದಲ್ಲಿ ನಮ್ಮ ಹಿರಿಯರ, ಪೂರ್ವಜರ ಕೊಡುಗೆ ಸಾಕಷ್ಟಿದೆ. ಈ ಅಜ್ಞಾನ ನಮ್ಮ ಇತಿಹಾಸದಲ್ಲಿ ಸುದೀರ್ಘವಾಗಿ ಚಾಚಿಕೊಂಡಿದೆ. ಈ ದ್ವೇಷದ ಜಗತ್ತಿನ ನಿರ್ಮಾಣದಲ್ಲಿ ಅಜ್ಞಾನ, ಐತಿಹಾಸಿಕ ದುರಂತಗಳು ಸಾಕಷ್ಟು ಕೊಡುಗೆ ನೀಡಿರುವುದು ನಿಜ ತಾನೇ? ನಾವು ನಮ್ಮ ಹಿರಿಯರೊಡನೆ ಅವರು ತಮ್ಮ ಪೂರ್ವಜರೊಡನೆ ಸಾಕಷ್ಟು ಸಹಕರಿಸಿದ್ದೇವೆ ದ್ವೇಷ, ಅಸೂಯೆ, ಭಯ ಮುಂತಾದವನ್ನು ಈ ಜಗತ್ತಿನಲ್ಲಿ ಸ್ಥಾಪಿಸುವಲ್ಲಿ. ವೈಯಕ್ತಿಕವಾಗಿ ನಾವು ದ್ವೇಷವನ್ನು ಆಚರಿಸುವುದನ್ನ, ಸಂಭ್ರಮಿಸುವುದನ್ನ ನಿಲ್ಲಿಸುವತನಕ ಈ ದ್ವೇಷಮಯ ಜಗತ್ತಿನ ಅನಾಹುತಗಳಲ್ಲಿ ಪಾಲ್ಗೊಳ್ಳುತ್ತಲೇ ಇರುತ್ತೇವೆ.
ಈ ಜಗತ್ತು ನಮ್ಮ ವ್ಯಕ್ತಿತ್ವದ ವಿಸ್ತರಣೆಯೇ ಆಗಿದೆ. ಈ ಜಗತ್ತಿನಿಂದ ದ್ವೇಷವನ್ನು ನಿರ್ಮೂಲನ ಮಾಡಲು ಬಯಸುವಿರಾದರೆ ನೀವು ಸ್ವತಃ ನಿಮ್ಮ ವ್ಯಕ್ತಿತ್ವದಿಂದ ದ್ವೇಷವನ್ನು ಇಲ್ಲದಂತೆ ಮಾಡಬೇಕು. ವ್ಯಕ್ತಿತ್ವದಿಂದ ದ್ವೇಷವನ್ನು ತೆಗೆದುಹಾಕುವುದೆಂದರೆ, ದ್ವೇಷದ ಎಲ್ಲ ಆಯಾಮಗಳಿಂದ, ಸ್ಥೂಲದಿಂದ ಸೂಕ್ಷ್ಮದವರೆಗಿನ ಎಲ್ಲ ರೂಪಗಳಿಂದ ದೂರವಾಗಬೇಕು ಇಲ್ಲವಾದರೆ ಈ ಭಯ ಮತ್ತು ಅಜ್ಞಾನಗಳ ಜಗತ್ತಿನಲ್ಲಿ ಕಷ್ಟಪಡುವುದು ಕೊನೆಯಾಗುವುದಿಲ್ಲ. ಜಗತ್ತು ನಿಮ್ಮ ವ್ಯಕ್ತಿತ್ವದ ನೂರು ಪಟ್ಟು, ಸಾವಿರ ಪಟ್ಟು ವಿಸ್ತರಣೆ ಆದ್ದರಿಂದ ನಿಮ್ಮ ಹನಿ ದ್ವೇಷವೂ ಜಗತ್ತಿನ ಪರದೆಯ ಮೇಲೆ ವಿಸ್ತಾರವಾಗಿ ಆಕಾರ ಪಡೆಯುವುದು. ವ್ಯಕ್ತಿಯ ಹೊರತಾಗಿ ಜಗತ್ತು ಇಲ್ಲ. ಒಂದು ಸಿದ್ಧಾಂತವಾಗಿ, ಒಂದು ದೇಶವಾಗಿ, ಒಂದು ಸಾಮಾಜಿಕ ಸಂಸ್ಥೆಯಾಗಿ ಜಗತ್ತನ್ನ ಕಲ್ಪಿಸಿಕೊಳ್ಳಬಹುದು ಆದರೆ ಆ ಸಿದ್ಧಾಂತವನ್ನು ನಿಭಾಯಿಸಲು, ದೇಶವನ್ನು ಮುನ್ನಡೆಸಲು, ಆ ಸಾಮಾಜಿಕ-ಧಾರ್ಮಿಕ ಸಂಸ್ಥೆಯನ್ನ ಚಲನಶೀಲಗೊಳಿಸಲು ವ್ಯಕ್ತಿಯ ಭಾಗವಹಿಸುವಿಕೆ ಅನಿವಾರ್ಯ. ಆದ್ದರಿಂದ ಅವನ ದ್ವೇಷ, ಅಸೂಯೆ, ಭಯ, ಅಜ್ಞಾನ ಮುಂತಾದವು ಜಗತ್ತಿನ ವ್ಯವಸ್ಥೆಯನ್ನ ರೂಪಿಸುತ್ತವೆ. ವ್ಯಕ್ತಿ ಬದಲಾದಾಗ ಮಾತ್ರವೇ ಜಗತ್ತಿನ ಬದಲಾವಣೆಯೂ ಸಾಧ್ಯ.
ಎಲ್ಲಿಯವರೆಗೆ ನೀವು ವಿಚಾರಹೀನರಾಗಿ, ಅಜ್ಞಾನಿಗಳಾಗಿ, ಅಸೂಯಾಪರರಾಗಿ, ಭಯಗ್ರಸ್ತರಾಗಿರುವಿರೋ ಅಲ್ಲಿಯವರೆಗೆ ಜಗತ್ತು ವ್ಯಕ್ತಿಯ ವ್ಯಕ್ತಿತ್ವದ ವಿಸ್ತರಣೆ. ಯಾವಾಗ ನೀವು ಪ್ರಾಮಾಣಿಕರೋ, ವಿಚಾರಶೀಲರೋ, ಪ್ರಜ್ಞಾವಂತರೋ ಆಗ ನೀವು ಜಗತ್ತನ್ನು ಕಾಡುತ್ತಿರುವ ನೋವು, ಸಂಕಟಗಳಿಂದ ಬಿಡಿಸಿಕೊಳ್ಳುವಿರಿ ಅಷ್ಟೇ ಅಲ್ಲ ಈ ತಿಳುವಳಿಕೆಯಲ್ಲಿ ಪೂರ್ಣ ಅರಳುವಿಕೆ ಮತ್ತು ಸಮಗ್ರತೆಯನ್ನು ಅನುಭವಿಸುವಿರಿ.
ಬಹಳ ಉತ್ತಮ ಮಾಹಿತಿ ಬಿತ್ತುತ್ತಿರುವ ಅರಳೀಮರ ವೃಂದಕ್ಕೆ ಧನ್ಯವಾದಗಳು