ಈ ಒಳಹೊರಗಿನ ವಿಕಾರಗಳು ಯಾವುವು?

ಕೂಟಸ್ಥ ಪದಕ್ಕೆ ಹಲವು ಅರ್ಥಗಳಿವೆ. ಈ ಸಂದರ್ಭಕ್ಕೆ ‘ನಾಶವಿಲ್ಲದ’, ‘ಕೂಡಿಕೊಂಡ’ ಮತ್ತು ‘ಯಜಮಾನನಾದ’ ಎನ್ನುವ ಅರ್ಥಗಳು ಹೊಂದುತ್ತವೆ. ಆತ್ಮ ಅವಿನಾಶಿ. ಮತ್ತು ಜೀವಿಯ ನೈಜ ಯಜಮಾನ ~ ಸಾ.ಹಿರಣ್ಮಯಿ


ಕೂಟಸ್ಥಂ ಬೋಧಮದ್ವೈತಮಾತ್ಮಾನಂ ಪರಿಭಾವಯ |
ಆಭಾಸೋsಹಂಭ್ರಮಂ ಮುಕ್ತ್ವಾ ಭಾವಂ ಬಾಹ್ಯಮಥಾನ್ತರಮ್ || 13 ||

ಅರ್ಥ : ಬಾಹ್ಯ ಮತ್ತು ಅಂತರ ವಿಕಾರಗಳನ್ನು ತ್ಯಜಿಸಿ, ನೀನೊಂದು ಆಭಾಸವಾಗಿರುವ ಅಹಂಕಾರವೆಂಬುದನ್ನು ತೊರೆದು, ನೀನೇ ಕೂಟಸ್ಥ ಬೋಧಸ್ವರೂಪನಾದ ಏಕ ಎಂದು ಧ್ಯಾನಿಸು.

ಅಷ್ಟಾವಕ್ರನ ಈ ಮಾತುಗಳ ತಾತ್ಪರ್ಯವೇನು ನೋಡೋಣ. ಮುನಿ ಹೇಳುತ್ತಿದ್ದಾನೆ, ‘ಬಾಹ್ಯ ಮತ್ತು ಅಂತರ ವಿಕಾರಗಳನ್ನು ತ್ಯಜಿಸು” ಎಂದು. ಈ ಒಳ ಹೊರಗಿನ ವಿಕಾರಗಳು ಯಾವುವು? ಬಹಿರಂಗದ ವಿಕಾರಗಳೆಂದರೆ ದೇಹಕ್ಕೆ ಸಂಬಂದಿಸಿದ ಐಹಿಕ ವಾಂಛೆಗಳು, ಇಂದ್ರಿಯತೃಪ್ತಿಯೇ ಮೊದಲಾದ ಹಪಾಹಪಿ. ಹಾಗೆಯೇ ಅಂತರಂಗದ ವಿಕಾರಗಳೆಂದರೆ ಸಂಬಂಧಗಳು, ಸಂಸರ್ಗಗಳು, ವಿಯೋಗಗಳು, ಈ ದೇಹ ನಾನೇ ಎಂದು ತಿಳಿಯುವುದರಿಂದ ಉಂಟಾಗುವ ಸುಖ, ದುಃಖ, ನೋವು, ನಲಿವು – ಇತ್ಯಾದಿಗಳು. ಮೊದಲು ಇವುಗಳನ್ನು ತ್ಯಜಿಸು ಅನ್ನುತ್ತಿದ್ದಾನೆ ಅಷ್ಟಾವಕ್ರ.

ಮುಂದುವರಿದು, “ನಾನೆಂಬ ಅಹಂಕಾರದಿಂದ ಆವೃತನಾಗಿರುವ ಭ್ರಮೆಯನ್ನೂ ತೊರೆ” ಅನ್ನುತ್ತಾನೆ. ಹಿಂದಿನ ಶ್ಲೋಕಗಳಲ್ಲಿ “ನಾನೆಂಬ ಭ್ರಮೆಯಿಂದ ಆತ್ಮವು ಆವೃತವಾಗಿದೆ. ಅದನ್ನು ಅರಿತುಕೋ” ಎನ್ನುವ ಮಾತು ಬಂದಿದೆ. ಈಗ ಅಷ್ಟಾವಕ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆತ್ಮವನ್ನು ಅಹಂಕಾರ ಮುಸುಕಿದೆ ಅಂದುಕೊಳ್ಳುವುದೂ ಒಂದು ಭ್ರಮೆ ಅನ್ನುತ್ತಿದ್ದಾನೆ. ವಾಸ್ತವದಲ್ಲಿ ಹಾಗೇನೂ ಇಲ್ಲ. ಅಹಂಕಾರ ಆತ್ಮವನ್ನು ಮುಸುಕಲು ಸಾಧ್ಯವಿಲ್ಲ. ಆತ್ಮ ಸ್ವಯಂ ಪ್ರಕಾಶ. ಆತ್ಮ ಸರ್ವವ್ಯಾಪಿ. ಅದು ಶಕ್ತಿ ಮೂಲ. ಅದನ್ನು ಯಕಃಶ್ಚಿತ್ ಅಹಂಕಾರ ಮುಸುಕಲು ಸಾಧ್ಯವೆ? ಅದೊಂದು ಭ್ರಮೆ; ಅದನ್ನೂ ತೊರೆದುಬಿಡು ಎಂಬುದು ಅಷ್ಟಾವಕ್ರನ ಮಾತಿನ ಅರ್ಥ.

ಕೊನೆಯದಾಗಿ, “ನೀನೇ ಕೂಟಸ್ಥ ಬೋಧ ಸ್ವರೂಪನಾದ ಏಕ ಎಂದು ಧ್ಯಾನಿಸು” ಎಂದು ಸಲಹೆ ನೀಡಿದ್ದಾನೆ. ಏನಿದು ‘ಕೂಟಸ್ಥ’ ಅಂದರೆ? ಕೂಟಸ್ಥ ಪದಕ್ಕೆ ಹಲವು ಅರ್ಥಗಳಿವೆ. ಈ ಸಂದರ್ಭಕ್ಕೆ ‘ನಾಶವಿಲ್ಲದ’, ‘ಕೂಡಿಕೊಂಡ’ ಮತ್ತು ‘ಯಜಮಾನನಾದ’ ಎನ್ನುವ ಅರ್ಥಗಳು ಹೊಂದುತ್ತವೆ. ಆತ್ಮ ಅವಿನಾಶಿ. ಮತ್ತು ಜೀವಿಯ ನೈಜ ಯಜಮಾನ. “ನೀನು ಚಿತ್ ಸ್ವರೂಪದಲ್ಲಿ ಕೂಡಿಕೊಂಡಿರುವ ಅವಿನಾಶಿ ಆತ್ಮ; ನೀನೇ ಸ್ವತಃ ಪರಮಾತ್ಮ (ಏಕರೂಪ)ನೆಂದು ಮನನ ಮಾಡಿಕೋ (ಧ್ಯಾನಿಸು) ಎಂಬುದು ಈ ಮಾತಿನ ವಿಸ್ತೃತಾರ್ಥ.

“ಮನೋದೈಹಿಕ ವಿಕಾರಗಳನ್ನು ತೊರೆದು, ನಾನೆಂಬ ಅಹಂಕಾರ ಮುಸುಕಿದೆ ಅನ್ನುವ ಭ್ರಮೆಯನ್ನೂ ಬಿಟ್ಟು, ನಾನು ಚಿದಾಕಾಶದಲ್ಲಿ ನೆಲೆಸಿರುವ ಪರಮಾತ್ಮನೆಂಬುದನ್ನು ಮನನ ಮಾಡಿಕೋ” ಎಂದು ಅಷ್ಟಾವಕ್ರ ಈ ಶ್ಲೋಕದ ಮೂಲಕ ಬೋಧಿಸಿದ್ದಾನೆ.

ಮುಂದುವರೆಯುವುದು….

3 Comments

  1. ಬಹಳ ಉತ್ತಮ ಮಾಹಿತಿ ಬಿತ್ತುತ್ತಿರುವ ಅರಳೀಮರ ವೃಂದಕ್ಕೆ ಧನ್ಯವಾದಗಳು

Leave a Reply