ದೇಹವೇ ನಾನೆಂಬ ಮೌಢ್ಯವನ್ನು ತೊಡೆದು ಹಾಕು

ಲೌಕಿಕದಲ್ಲಾದರೂ ಸರಿ, ಆಧ್ಯಾತ್ಮಿಕವಾಗಿಯಾದರೂ ಸರಿ… ಅಭಿಮಾನವೇ ನಮ್ಮ ಗುರುತಾಗಬಾರದು. ನಮ್ಮ ದೇಹ ನಮ್ಮ ಗುರುತಾಗಬಾರದು. ನಮ್ಮ ಹುದ್ದೆ ನಮ್ಮ ಗುರುತಾಗಬಾರದು ~ ಸಾ.ಹಿರಣ್ಮಯಿ

ದೇಹಾಭಿಮಾನಪಾಶೇನ ಚಿರಂ ಬದ್ಧೋsಪುತ್ರಕ |
ಬೋಧೋsಹಂ ಜ್ಞಾನಖಡ್ಗೇನ ತಂ ನಿಕೃತ್ಯಸುಖೀ ಭವ || 14 ||
ಅರ್ಥ : ಪುತ್ರನೆ, ದೇಹಾಭಿಮಾನಪಾಶದಿಂದ ನೀನು ಹಲವು ಕಾಲದಿಂದ ಬದ್ಧನಾಗಿರುವೆ. “ನಾನೇ ಬೋಧೆ” ಎಂಬ ಜ್ಞಾನ ಖಡ್ಗದಿಂದ ಬಂಧವನ್ನು ತುಂಡರಿಸಿ ಸುಖಿಯಾಗಿರು.

ಎಷ್ಟು ವಿಧದಲ್ಲಿ ಹೇಳಿದರೂ ಮೂಲ ವಿಷಯ ಇಷ್ಟೇ. ದೇಹಬೋಧೆಯ ಕಾರಣದಿಂದ ನೀನು ಮಿಥ್ಯಾಹಂಕಾರ ಹೊಂದಿರುವೆ. ದೇಹವೇ ನೀನೆಂದು ತಿಳಿದಿರುವೆ. ಅದನ್ನು ತೊರೆದು ಸುಖಿಯಾಗಿರು.

ಅಷ್ಟಾವಕ್ರ ಹೇಳುತ್ತಿದ್ದಾನೆ, “ಜ್ಞಾನ ಖಡ್ಗದಿಂದ ದೇಹವೇ ನಾನೆಂಬ ಮೌಢ್ಯವನ್ನು ತೊಡೆದು ಹಾಕು” ಎಂದು. ದೇಹಾಭಿಮಾನವು ಸಾಮಾನ್ಯರಿಗೆ ತುಂಡರಿಸಲು ಸಾಧ್ಯವಾಗದ ಬಂಧನ. ಈ ಬಂಧನವನ್ನು ಕಡಿಯಲು ಸಾಮಾನ್ಯ ಶಸ್ತ್ರ ಸಾಕಾಗುವುದಿಲ್ಲ. ಅದಕ್ಕೆ ಪ್ರಖರವಾದ ಜ್ಞಾನ ಖಡ್ಗವೇ ಬೇಕು. ಎಂತಹ ಜ್ಞಾನ? ನಾನು ದೇಹವಲ್ಲ, ನಾನು ಚಿದಾನಂದ ಸ್ವರೂಪಿ ಎಂಬ ಜ್ಞಾನ. ನಾನು ಬದ್ಧನಲ್ಲ ಎಂಬ ಬೋಧೆ. ಈ ಬೋಧೆ ನಮ್ಮನ್ನು ಬಂಧಮುಕ್ತಗೊಳಿಸುತ್ತದೆ. ಜನನ – ಮರಣ ಭಯದಿಂದಲೂ ಪುನರಾವರ್ತಿತ ಜನ್ಮಚಕ್ರದಿಂದಲೂ ಪಾರುಮಾಡುತ್ತದೆ. ಆದ್ದರಿಂದ, ಅಂತಹಾ ಬೋಧೆಯನ್ನು ಬೆಳೆಸಿಕೊಂಡು ಸುಖಿಯಾಗಿರು ಅನ್ನುತ್ತಿದ್ದಾನೆ ಅಷ್ಟಾವಕ್ರ.

ದೈನಂದಿನ ಲೌಕಿಕದಲ್ಲೂ ನಾವು ಇದೇ ತಪ್ಪು ಮಾಡುತ್ತೇವೆ. ಯಾವುದೋ ಒಂದು ಸಂಬಂಧವನ್ನು, ಹುದ್ದೆಯನ್ನು, ಸ್ಥಾನವನ್ನು ನಮ್ಮ ಸಂಪೂರ್ಣ ಅಸ್ತಿತ್ವವೆಂದೇ ಭಾವಿಸಿಬಿಡುತ್ತೇವೆ. ಅದಕ್ಕೆ ನಾವೇ ನಮ್ಮನ್ನು ಕಟ್ಟಿಹಾಕಿಕೊಳ್ಳುತ್ತೇವೆ, ಹಾಗೆ ಒಂದು ಸಂಬಂಧ, ಒಂದು ಹುದ್ದೆಯೇ ನಮ್ಮ ಅಸ್ತಿತ್ವವಾಗಿಬಿಟ್ಟರೆ ನಾವು ಮತ್ತೇನೋ ಆಗಬಹುದಾದ ಸಾಧ್ಯತೆಯೇ ಇಲ್ಲವಾಗುತ್ತದೆ. ಅಂತಹಾ ಅವಕಾಶಕ್ಕೆ ನಾವೇ ಬಾಗಿಲು ಜಡಿದುಬಿಟ್ಟಿರುತ್ತೇವೆ. ಇದರಿಂದ ನಮಗೆ ಒದಗಬಹುದಾಗಿದ್ದ ಯಶಸ್ಸು ನಮ್ಮನ್ನು ತಲುಪುವುದೇ ಇಲ್ಲ.

ಆದ್ದರಿಂದ, ಲೌಕಿಕದಲ್ಲಾದರೂ ಸರಿ, ಆಧ್ಯಾತ್ಮಿಕವಾಗಿಯಾದರೂ ಸರಿ… ಅಭಿಮಾನವೇ ನಮ್ಮ ಗುರುತಾಗಬಾರದು. ನಮ್ಮ ದೇಹ ನಮ್ಮ ಗುರುತಾಗಬಾರದು. ನಮ್ಮ ಹುದ್ದೆ ನಮ್ಮ ಗುರುತಾಗಬಾರದು. ನಾವು ಈ ದೇಹ, ಹೆಸರು, ಹುದ್ದೆ ಮಾತ್ರವಲ್ಲದೆ ಹೆಚ್ಚಿನದೇನೋ ಆಗಿದ್ದೇವೆ ಅನ್ನುವುದನ್ನು ಸ್ಮರಿಸಿಕೊಂಡು, ಆ ನಮ್ಮ ನೈಜ ಅಸ್ತಿತ್ವ ಯಾವುದು ಎಂಬುದನ್ನು ಕಂಡುಕೊಳ್ಳಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

5 Responses

  1. ಉದಯಕುಮಾರ್ ಹಬ್ಬು's avatar ಉದಯಕುಮಾರ್ ಹಬ್ಬು

    ನಿಮ್ಮ ಬ್ಲೊಗ್ ಅರಳಿಮರ ಒಂದು‌ ಅರಿವಿನ ವಿಶ್ವಕೋಶ.‌ ಓದಿ ಬೆರಗಾದೆ. ತಿಳಿಯಲು ಸಮಯ ಇಲ್ಲದೆ ನನ್ನಲ್ಲಿ ನಾನಿರುವೆ. ಬೆಳಕಿನ ತರಂಗಗಳು ಬದುಕಿನ ಬಿತ್ತುಗಳು.‌ಧನ್ಯವಾದ

    Like

This site uses Akismet to reduce spam. Learn how your comment data is processed.