ಅಭ್ಯಾಸವೂ ಬಂಧನಕ್ಕೆ ಸಿಲುಕಿಸುತ್ತದೆ

ಆತ್ಮ ಸ್ವಯಂಪ್ರಕಾಶ. ಅದು ಹೊರಗಿನಿಂದ ಅರಿವನ್ನು, ಜ್ಞಾನವನ್ನು ಪಡೆಯಬೇಕಾಗಿಲ್ಲ. ಹೊರಗಿನ ಬೆಳಕಿಂದ ತನ್ನನ್ನು ತಾನು ನೋಡಿಕೊಳ್ಳಬೇಕಿಲ್ಲ. ಅದು ಸ್ವತಃ ಜ್ಞಾನಿ. ಸ್ವತಃ ಬೆಳಕಿನ ಪುಂಜ. ಆತ್ಮದಿಂದ ಜ್ಞಾನವು ಹೊರಹೊಮ್ಮುತ್ತದೆ ಹೊರತು, ಹೊರಗಿನ ಜ್ಞಾನವನ್ನು ಆತ್ಮಕ್ಕೆ ತುಂಬಿಸಬೇಕಿಲ್ಲ ~ ಸಾ.ಹಿರಣ್ಮಯಿ

ನಿಸ್ಸಂಗೋ ನಿಷ್ಕ್ರಿಯೋsಸಿ ತ್ವಂ ಸ್ವಪ್ರಕಾಶೋ ನಿರಂಜನಃ |
ಅಯಮೇವ ಹಿ ತೇ ಬಂಧಃ ಸಮಾಧಿಮನುತಿಷ್ಠಸಿ || 15 ||
ಅರ್ಥ : ನೀನೇ ನಿಸ್ಸಂಗನೂ, ನಿಷ್ಕ್ರಿಯನೂ, ಸ್ವಪ್ರಕಾಶವೂ ನಿರಂಜನನೂ ಆಗಿರುವೆ. ಸಮಾಧಿಯನ್ನು ಅಭ್ಯಾಸ ಮಾಡುತ್ತಿರುವುದೇ ನಿನ್ನ ಬಂಧನವಾಗಿದೆ.

ತಾತ್ಪರ್ಯ : ಕಳೆದ ಶ್ಲೋಕಗಳಲ್ಲಿ ಅಷ್ಟಾವಕ್ರ ಮುನಿ ಆತ್ಮದ ಸ್ವರೂಪವನ್ನು ಸ್ಥೂಲವಾಗಿ ಹೇಳಿದ್ದಾನೆ. ಇಲ್ಲಿ ಅವನು ‘ನೀನು’ ಎಂದು ಸಂಬೋಧಿಸುತ್ತಿರುವುದು ದೇಹವನ್ನಲ್ಲ, ಅರಸ ಪದವಿಯಲ್ಲಿರುವ ವ್ಯಕ್ತಿಯನ್ನಲ್ಲ, ಜನಕ ಎಂಬ ಹೆಸರಿನವನನ್ನೂ ಅಲ್ಲ. ಇಲ್ಲಿ ಅವನು ಆತ್ಮವನ್ನು ಉದ್ದೇಶಿಸಿ ‘ನೀನು’ ಅನ್ನುತ್ತಿದ್ದಾನೆ.

ಆತ್ಮವು ಸಹಜವಾಗಿ ನಿಸ್ಸಂಗವಾದುದು. ಅದು ಯಾವುದರಿಂದಲೂ ಹೊರಬರಬೇಕಿಲ್ಲ. ಯಾವುದನ್ನೂ ತೊರೆಯಬೇಕಿಲ್ಲ, ತಪ್ಪಿಸಿಕೊಳ್ಳಬೇಕಾಗಿಯೂ ಇಲ್ಲ. ಅದು ನಿಷ್ಕ್ರಿಯವಾದದ್ದು. ಆತ್ಮ ತಾನೇತಾನಾಗಿ ಯಾವ ಕ್ರಿಯೆಯನ್ನೂ ನಡೆಸುವುದಿಲ್ಲ. ಅದು ತನ್ನಷ್ಟಕ್ಕೆ ತಾನು ಇರುತ್ತದೆ. ಆ ಇರುವಿಕೆ ಕೂಡಾ ಕ್ರಿಯೆ ಅಲ್ಲ. ‘ಆತ್ಮ ಇದೆ’ ಅಷ್ಟೇ. ಅದು ಉದ್ದೇಶಪೂರ್ವಕವಾಗಿ ಸ್ಥಾಪಿತವಾಗಿಲ್ಲ. ಅದರ ಇರುವಿಕೆಯೂ ಉದ್ದೇಶಪೂರ್ವಕವಲ್ಲ. ಆದ್ದರಿಂದ ಅದು ನಿಷ್ಕ್ರಿಯ.

ಹಾಗೆಯೇ ಆತ್ಮ ಸ್ವಯಂಪ್ರಕಾಶ. ಅದು ಹೊರಗಿನಿಂದ ಅರಿವನ್ನು, ಜ್ಞಾನವನ್ನು ಪಡೆಯಬೇಕಾಗಿಲ್ಲ. ಹೊರಗಿನ ಬೆಳಕಿಂದ ತನ್ನನ್ನು ತಾನು ನೋಡಿಕೊಳ್ಳಬೇಕಿಲ್ಲ. ಅದು ಸ್ವತಃ ಜ್ಞಾನಿ. ಸ್ವತಃ ಬೆಳಕಿನ ಪುಂಜ. ಆತ್ಮದಿಂದ ಜ್ಞಾನವು ಹೊರಹೊಮ್ಮುತ್ತದೆ ಹೊರತು, ಹೊರಗಿನ ಜ್ಞಾನವನ್ನು ಆತ್ಮಕ್ಕೆ ತುಂಬಿಸಬೇಕಿಲ್ಲ.
ಹಾಗೆಯೇ, ಆತ್ಮವು ಯಾವ ಸೋಂಕಿಗೂ ಒಳಗಾಗದ ನಿರಂಜನವೂ ಆಗಿದೆ. ಅದಕ್ಕೆ ಕೆಡುಕು ತಗುಲುತ್ತದೆ, ಅದು ಮಲಿನವಾಗುತ್ತದೆ ಅನ್ನುವ ಭಯವೇ ಅನವಶ್ಯಕ.

ಆದ್ದರಿಂದ, ಯಾವುದು ಯಾವ ಭಾದೆಗೂ ಒಳಗಾಗದೆ ಸ್ವತಃ ಸ್ವತಂತ್ರವೂ ಪರಿಪೂರ್ಣವೂ ಆಗಿದೆಯೋ ಅದೇ ನೀನಾಗಿರುವಾಗ, ಪುನಃ ಅದನ್ನೇ ಹೊಂದಲು ನೀನು ಸಮಾಧಿಯನ್ನು ಅಭ್ಯಾಸ ಮಾಡುತ್ತಿರುವೆ. ಈ ಅಭ್ಯಾಸ ನಿನ್ನನ್ನು ಬಂಧನಕ್ಕೆ ಸಿಲುಕಿಸುತ್ತದೆ – ಅನ್ನುತ್ತಾನೆ ಅಷ್ಟಾವಕ್ರ ಮುನಿ.

ಅದು ಹೇಗೆ? ಸಮಾಧಿಯ ಅಭ್ಯಾಸವು ಮುಕ್ತಿಪಥದಲ್ಲಿರುವವರ ಸಾಧನೆ. ಹೇಗಾದರೂ ಅದು ವ್ಯಕ್ತಿಯನ್ನು ಬಂಧಿಸುತ್ತದೆ? ಯಾವುದಕ್ಕೆ ಬಂದಿಸುತ್ತದೆ?
ಅದು ಹೀಗೆ : ಯಾವುದೇ ಅಭ್ಯಾಸವು ವ್ಯಕ್ತಿಯನ್ನು ದೇಹದ ಗುರುತಿನೊಂದಿಗೆ, ಆತ್ಮಕ್ಕಿಂತ ಬೇರೆಯಾದ ಅಸ್ತಿತ್ವದೊಂದಿಗೆ ಕಟ್ಟಿಹಾಕುತ್ತದೆ. ಸಮಾಧಿಯ ಅಭ್ಯಾಸವು ವ್ಯಕ್ತಿಯನ್ನು ‘ಕರ್ತೃ’ವನ್ನಾಗಿಸುತ್ತದೆ. ಯಾರು ಕರ್ತರೋ ಅವರು ಕರ್ಮವನ್ನು ನಡೆಸಲೇಬೇಕು ಮತ್ತು ಫಲವನ್ನೂ ಉಣ್ಣಲೇಬೇಕು. ಒಮ್ಮೆ ಈ ಕರ್ಮ-ಫಲ ಚಕ್ರಕ್ಕೆ ಸಿಲುಕಿದರೆ, ಅಂತಹಾ ವ್ಯಕ್ತಿಗೆ ಮುಕ್ತಿ ಇಲ್ಲವಾಗುತ್ತದೆ. ಭವ ಬಂಧನಕ್ಕೆ ಒಳಗಾಗಬೇಕಾಗುತ್ತದೆ. ಜನನ ಮರಣ ಚಕ್ರದಿಂದ ಬಿಡುಗಡೆಯಿಲ್ಲದೆ ಅವರು ಬಂಧಿಯಾಗಿಬಿಡುತ್ತಾರೆ. ಹೀಗೆ ಸಮಾಧಿಯ ಅಭ್ಯಾಸವೂ ವ್ಯಕ್ತಿಗೆ ಬಂಧನವೇ ಆಗಿ ಪರಿಣಮಿಸುತ್ತದೆ.
ಇದು ಅಷ್ಟಾವಕ್ರನ ಮಾತಿನ ಅರ್ಥ.

(ಮುಂದುವರಿಯುವುದು…)

3 Comments

Leave a Reply to ಅರಳಿ ಮರCancel reply