ವ್ಯಕ್ತಿಯಲ್ಲಿ ವಿಶ್ವವೂ ವಿಶ್ವದಲ್ಲಿ ವ್ಯಕ್ತಿಯೂ ಇರುವುದು ಹೇಗೆ? ಒಂದೋ ಇದು ಅದರಲ್ಲಿರಬೇಕು, ಅಥವಾ ಅದು ಇದರಲ್ಲಿರಬೇಕು. ಎಡೂ ಒಂದರೊಳಗೊಂದು ಇರಲು ಹಾಗೆ ಸಾಧ್ಯ? ~ ಸಾ.ಹಿರಣ್ಮಯಿ
ತ್ವಯಾ ವ್ಯಾಪ್ತಮಿದಂ ವಿಶ್ವಂ ತ್ವಯಿ ಪ್ರೋತಂ ಯಥಾರ್ಥತಃ |
ಶುದ್ಧಬುದ್ಧಸ್ವರೂಪಸ್ತ್ವಂ ಮಾ ಗಮಃ ಕ್ಷುದ್ರ ಚಿತ್ತತಾಮ್ || 1.16 ||
ಅರ್ಥ : ನೀನು ವಿಶ್ವವನ್ನೆಲ್ಲ ವ್ಯಾಪಿಸಿರುವೆ. ಈ ವಿಶ್ವ ನಿನ್ನಲ್ಲಿಯೇ ಇರುವುದು. ನೀನು ಶುದ್ಧ ಬುದ್ಧ ಸ್ವರೂಪಿಯಾಗಿರುವೆ. (ಇಂತಹಾ ನೀನು) ಕ್ಷುದ್ರಚಿತ್ತದವನಾಗಬೇಡ.
ತಾತ್ಪರ್ಯ : “ಅರಿವೂ ಅರಿಯುವವನೂ ಒಂದೇ ಆಗಿರುವ ಆತ್ಮ ನೀನಾಗಿರುವಾಗ, ನಿನಗೆ ಸಮಾಧಿ ಕೂಡಾ ಒಂದು ಬಂಧನವೇ ಆಗಿಬಿಡುತ್ತದೆ” ಎಂದು ಅಷ್ಟಾವಕ್ರ ಹೇಳಿದ್ದನ್ನು ಹಿಂದಿನ ಶ್ಲೋಕದಲ್ಲಿ ನೋಡಿದ್ದೀರಿ.
ಸಮಾಧಿ ಹೇಗೆ ಬಂಧನವಾಗುತ್ತದೆ? ಅದು ಕರ್ತಾ ಭಾವ ಮೂಡಿಸುವುದರಿಂದ, ‘ನಾನು’ ಎಂಬ ಗುರುತು ಹೊಂದಿ ಕರ್ಮಚಕ್ರದಲ್ಲಿ ಬಂಧಿಸುತ್ತದೆ.
ಈ ಶ್ಲೋಕದಲ್ಲಿ ‘ನಾನು’ ಎಂಬ ಗುರುತು ಕ್ಷುದ್ರವಾದುದು ಎಂದು ಅರ್ಥ ಮಾಡಿಸಲು ಅಷ್ಟಾವಕ್ರ ಪ್ರಯತ್ನಿಸುತಿದ್ದಾನೆ.
ಶುದ್ಧಾತ್ಮವಾದ ನೀನು ವಿಶ್ವವ್ಯಾಪಿಯಾಗಿರುವೆ. ನೀನು ಯಾವುದೋ ಒಂದು ದೇಹದ ಬಂಧನದಲ್ಲಿ ಇಲ್ಲ. ಯಾವುದೋ ನಿರ್ದಿಷ್ಟ ಗುರುತಿಗೆ ಸೀಮಿತವಲ್ಲ. ನೀನು ವಿಶ್ವವನ್ನೇ ವ್ಯಾಪಿಸಿರುವೆ ಮಾತ್ರವಲ್ಲ, ಇಡೀ ವಿಶ್ವವೇ ನಿನ್ನಲ್ಲಿದೆ – ಎಂದು ಅಷ್ಟಾವಕ್ರ ವಿವರಿಸುತ್ತಿದ್ದಾನೆ.
ವ್ಯಕ್ತಿಯಲ್ಲಿ ವಿಶ್ವವೂ ವಿಶ್ವದಲ್ಲಿ ವ್ಯಕ್ತಿಯೂ ಇರುವುದು ಹೇಗೆ? ಒಂದೋ ಇದು ಅದರಲ್ಲಿರಬೇಕು, ಅಥವಾ ಅದು ಇದರಲ್ಲಿರಬೇಕು. ಎಡೂ ಒಂದರೊಳಗೊಂದು ಇರಲು ಹಾಗೆ ಸಾಧ್ಯ?
ಸಾಧ್ಯವಿದೆ. ಉದಾಹರಣೆಗೆ ಬೀಜ ಮತ್ತು ವೃಕ್ಷ. ಬೀಜದಲ್ಲಿ ಒಂದಲ್ಲ, ಸಾವಿರಾರು ವೃಕ್ಷಗಳಿವೆ. ಅವೆಲ್ಲವೂ ಬೀಜದೊಳಗಣ ಜೀವಕೋಶಸ್ವರೂಪದಲ್ಲಿವೆ. ಹಾಗೆಯೇ ವೃಕ್ಷ ಹೂ – ಹಣ್ಣುಗಳಲ್ಲಿ ಬೀಜಗಳನ್ನು ಹೊತ್ತಿದೆ. ಬೀಜದಲ್ಲಿ ವೃಕ್ಷಸಾರವೇ ಇದೆ. ವೃಕ್ಷದ ಸಾರವೇ ಬೀಜವಾಗಿದೆ!
ಆದ್ದರಿಂದ, ವಿಶ್ವವೇ ನೀನೂ ನೀನೇ ವಿಶ್ವವೂ ಆಗಿರುವೆ ಅನ್ನುತ್ತಿದ್ದಾನೆ ಅಷ್ಟಾವಕ್ರ.
ನೀನು ಯಾವ ಗುರುತುಗಳಿಂದಲೂ ನಾಮ – ರೂಪ – ಚಹರೆಗಳಿಂದಲೂ ಕಲುಷಿತವಾಗಿಲ್ಲದ ಶುದ್ಧಾತ್ಮ. ಸ್ವಯಂಬೋಧೆಯಾಗಿರುವ ನೀನು ಬುದ್ಧನೂ ಹೌದು. ನೀನು ಅರಿಯಬೇಕಾದ್ದು ಪ್ರತ್ಯೇಕವಾಗಿ ಯಾವುದೂ ಇಲ್ಲ. ನೀನು ಸ್ವತಃ ಅರಿವು. ನೀನೇ ಸ್ವಯಂ ಬುದ್ಧ.
ಹೀಗೆ ಅಗಾಧನೂ ಶುದ್ಧನೂ ಬುದ್ಧನೂ ಆದ ನೀನು, “ನಾನು ಈ ದೇಹ, ನಾನು ಇಂಥವನು, ನಾನು ಕರ್ತಾ, ನಾನು ಸಮಾಧಿಯನ್ನು ಆಚರಿಸುವವನು” – ಇತ್ಯಾದಿ ಆಲೋಚನೆಗಳ ಮೂಲಕ ನಿನ್ನನ್ನು ನೀನು ಕುಗ್ಗಿಸಿಕೊಳ್ಳಬೇಡ. ಮಹಾತ್ಮನಾದ ನೀನು ಇಂತಹಾ ಆಲೋಚನೆಗಳ ಮೂಲಕ ಕ್ಷುದ್ರಚಿತ್ತನಾಗಬೇಡ – ಇದು ಅಷ್ಟಾವಕ್ರನ ಮಾತಿನ ವಿಸ್ತೃತಾರ್ಥ.
1 Comment