ಬುದ್ಧಿ – ಮನಸ್ಸನ್ನು ಹೊರಗಿಡಿ | Hsin Hsin Ming : ಅಧ್ಯಾಯ 7.3

ಹೆಚ್ಚು ಹೆಚ್ಚು ನೀವು ಬುದ್ಧಿ-ಮನಸ್ಸನ್ನ ನೋಡುವಿಕೆಯಿಂದ ಹೊರಗೆ ಇಡಲು ಶುರು ಮಾಡಿದಾಗ ಹೆಚ್ಚು ಹೆಚ್ಚು ಬೆಳಕು ನಿಮ್ಮನ್ನು ಪ್ರವೇಶ ಮಾಡುವುದು. ಕನಸುಗಳಿಲ್ಲದಾಗ
ಎಲ್ಲ ಬಾಗಿಲುಗಳು, ಎಲ್ಲ ಕಿಟಕಿಗಳು ತೆರೆದುಕೊಳ್ಳುವವು ಹಾಗು ಆಕಾಶ ನಿಮ್ಮನ್ನ ತಾಕುವುದು, ನೀವು ಹೆಚ್ಚು ಹೆಚ್ಚು ಸತ್ಯಕ್ಕೆ ತೆರೆದುಕೊಳ್ಳುವಿರಿ ~ ಸೊಸಾನ್; ಓಶೋ ವ್ಯಾಖ್ಯಾನ| ಭಾವಾನುವಾದ: ಚಿದಂಬರ ನರೇಂದ್ರ

All dreams must cease | ಅಧ್ಯಾಯ 7.3

ಸತ್ಯವನ್ನು ನೋಡುವ ಏಕೈಕ ವಿಧಾನವೆಂದರೆ
ನಮ್ಮ ನೋಡುವಿಕೆಯಲ್ಲಿ ಭೂತ ಮತ್ತು ಭವಿಷ್ಯಗಳು
ಇಲ್ಲದಂತೆ ನೋಡಿಕೊಳ್ಳುವುದು,
ಬುದ್ಧಿ-ಮನಸ್ಸಿನ ಸಹಾಯವನ್ನು ನಿರಾಕರಿಸುವುದು
ಏಕೆಂದರೆ ಮೈಂಡ್ ಗೆ ಕನಸು ಕಾಣುವುದು ಮಾತ್ರ ಸಾಧ್ಯ
ಈ ಸುಂದರ ಸ್ವಪ್ನಗಳನ್ನೇ
ನಿಮ್ಮ ಉತ್ಸಾಹ ನಿಜವೆಂದು ಭಾವಿಸಿ
ಸತ್ಯದ ಕಾಣುವಿಕೆಯನ್ನ ಅಸಾಧ್ಯವಾಗಿಸುತ್ತದೆ.

ಅತೀ ಉತ್ಸಾಹವೆಂದರೆ ನಶೆಯಲ್ಲಿದ್ದಂತೆ
ಮತ್ತು ಈ ನಶೆ ಕಾರಣವಾಗಿ
ನಿಮ್ಮ ಇಂದ್ರಿಯಗಳ ಹತೋಟಿ ಸಾಧ್ಯವಾಗುವುದಿಲ್ಲ.
ಆಗ ನೀವು ನೋಡುವುದೆಲ್ಲ ನಿಮ್ಮ ಮನಸಿನ ಹೇರುವಿಕೆ.
ಆದ್ದರಿಂದಲೇ ಎಷ್ಟು ಮನಸ್ಸುಗಳಿವೆಯೋ
ಅಷ್ಟು ಜಗತ್ತುಗಳಿವೆ
ಪ್ರತೀ ಮನಸ್ಸು ತನ್ನ ಜಗತ್ತಿನಲ್ಲಿ ಸ್ಥಿರವಾಗಿದೆ.
ಬೇರೆಯವರ ಮೂರ್ಖತನಕ್ಕೆ ನಗುವುದು ಸುಲಭ
ಆದರೆ ನಮ್ಮ ಮೂರ್ಖತನಗಳನ್ನು
ತಮಾಶೆ ಮಾಡುವುದು ಸಾಧ್ಯವಾಗದೇ ಹೋದರೆ
ನಾವು ತಾವೋದಿಂದ ದೂರ , ಪ್ರಕೃತಿಯಿಂದ ದೂರ
ಸತ್ಯದಿಂದ ದೂರ.
ಹಾಗಾದರೆ ಪರಿಹಾರ ?

ಚಿಕ್ಕ ಚಿಕ್ಕ ಸಂಗತಿಗಳಿಂದ ಶುರು ಮಾಡಿ
ನೋಡುವಿಕೆಯಿಂದ ಬುದ್ಧಿ-ಮನಸ್ಸುಗಳನ್ನ ಹೊರಗೆ ಇಡಿ.
ಹೂವನ್ನು ನೋಡುತ್ತಿರುವಿರಾದರೆ, ಸುಮ್ಮನೇ ನೋಡಿ
ಸುಂದರವಾಗಿದೆ, ಸುಂದರವಲ್ಲ ಎಂದೆಲ್ಲ ವ್ಯಾಖ್ಯಾನ ಮಾಡಬೇಡಿ
ಶಬ್ದಗಳನ್ನ ಬಳಸಬೇಡಿ, ಮಾತಿನಿಂದ ದೂರವಿರಿ
ಸುಮ್ಮನೇ ನೋಡಿ.
ಬುದ್ಧಿ-ಮನಸ್ಸಿಗೆ ಈಗ ಕಳವಳ ಶುರುವಾಗಿದೆ
ಅದು ಮಾತನಾಡಲು ಬಯಸುತ್ತಿದೆ
ಆದರೆ ಅವಕಾಶ ಕೊಡಬೇಡಿ.

ಮೊದ ಮೊದಲು ಕಷ್ಟ ನಿಜ
ನಿಮಗೆ ಅಷ್ಟಾಗಿ ಆಸಕ್ತಿ ಇರದ ಸಂಗತಿಗಳಿಂದ ಶುರು ಮಾಡಿ.
ನಿಮ್ಮ ಪ್ರೇಮಿಯನ್ನ ಹೀಗೆ ನೋಡುವುದು ಕಷ್ಟ
ಪ್ರೇಮಿಯ ಜೊತೆಗಿನ ನಿಮ್ಮ ಒಳಗೊಳ್ಳುವಿಕೆ ತುಂಬಾ ಹೆಚ್ಚು
ದೈಹಿಕವಾಗಿ, ಮಾನಸಿಕವಾಗಿ
ತುಂಬ ಹಚ್ಚಿಕೊಂಡಿದ್ದೀರಿ ಒಬ್ಬರಿಗೊಬ್ಬರು
ಪ್ರೇಮ, ಅಸೂಯೆ, ಸಿಟ್ಟು ನಿಮ್ಮನ್ನ ಸ್ವತಂತ್ರವಾಗಿ
ನೋಡಲು ಬಿಡುವುದಿಲ್ಲ.

ತಟಸ್ಥ ಸಂಗತಿಗಳಿಂದ ಶುರುಮಾಡಿ
ಬಂಡೆಗಲ್ಲು, ಸೂರ್ಯಾಸ್ತ, ಮರ, ಹಕ್ಕಿ, ಮೋಡ ಇತ್ಯಾದಿ
ನೀವು ದೂರ ನಿಂತು ನೋಡಲು ಸಾಧ್ಯವಿರುವಂಥ ಸಂಗತಿಗಳು.

ಆದರೆ ಜನ ತಮಗೆ ಅತ್ಯಂತ ಹತ್ತಿರದ
ಸಂಗತಿಗಳಿಂದ ಶುರು ಮಾಡಿ ವಿಫಲರಾಗುತ್ತಾರೆ.
ನಿಮ್ಮ ಹೆಂಡತಿ/ಗಂಡ ನ್ನ
ನೀವು ಪ್ರೇಮಿಸುತ್ತೀರಿ ಅಥವಾ ದ್ವೇಷಿಸುತ್ತೀರಿ
ತಟಸ್ಥ ಭಾವನೆ ಇಲ್ಲಿ ಸಾಧ್ಯವಾಗುವುದಿಲ್ಲ
ನೋಡುವಾಗ ಶಬ್ದಗಳನ್ನ ಬಳಸುವುದು
ನಮಗೆ ರೂಢಿಯಾಗಿಬಿಟ್ಟಿದೆ.

ಒಂದು ಮುಂಜಾನೆ
ಮುಲ್ಲಾ ನಸ್ರುದ್ದೀನ್ ನ ಮನೆಗೆ ಹೋಗಿದ್ದೆ.
ನಾನು ಹೋದಾಗ ಗಂಡ ಹೆಂಡತಿ ಚಹಾ ಕುಡಿಯುತ್ತಿದ್ದರು

“ ನಸ್ರುದ್ದೀನ್, ರಾತ್ರಿ ನಿದ್ದೆಯಲ್ಲಿ ನೀನು ನನ್ನ
ಬಾಯಿಗೆ ಬಂದಂತೆ ಬಯ್ಯುತ್ತಿದ್ದೀ”
ಹೆಂಡತಿ ತಕರಾರು ಮಾಡಿದಳು.

“ ನೀನು ಹೇಳುತ್ತಿರುವುದು ಸುಳ್ಳು” ಎಂದ ನಸ್ರುದ್ದೀನ್

“ ಹಾಗಾದರೆ ನೀನು ನನ್ನ ಬಯ್ಯುತ್ತಿದ್ದ ವಿಷಯ ಸುಳ್ಳಾ”
ಹೆಂಡತಿ ತಿರುಗಿ ಮಾತನಾಡಿದಳು.

“ ನಾನು ನಿದ್ದೆಯಲ್ಲಿದ್ದ ವಿಷಯ ಸುಳ್ಳು, ನಾನು ಎಚ್ಚರವಾಗಿದ್ದೆ”

ನಸ್ರುದ್ದೀನ್ ಉತ್ತರಿಸಿದ.

ನಿದ್ದೆಯಿರಲಿ, ಎಚ್ಚರವಿರಲಿ ಒಮ್ಮೆ ನೀವು ಭಾವನಾತ್ಮಕವಾಗಿ
ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದೀರೆಂದರೆ
ಮನಸ್ಸನ್ನು ಹೊರಗಿಟ್ಟು ಯಾವುದನ್ನೂ
ಮುಕ್ತವಾಗಿ ಗಮನಿಸುವುದು ಕಷ್ಟ.
ಆದ್ದರಿಂದಲೇ ನೀವು ಭಾವನಾತ್ಮಕವಾಗಿ ತಟಸ್ಥರಾಗಿರುವ
ಸಂಗತಿಗಳಿಂದ ಮೊದಲು ಮಾಡಿ.
ಒಮ್ಮೆ ನಿಮಗೆ
ಮೈಂಡ್ ನ ಹಸ್ತಕ್ಷೇಪವಿಲ್ಲದೆ
ಸಂಗತಿಗಳನ್ನು ಗಮನಿಸುವುದು ಸಾಧ್ಯ
ಅನಿಸಲು ಶುರುವಾದಾಗ
ಭಾವನಾತ್ಮಕ ಸಂಗತಿಗಳಿಗೆ ಹೊರಳಿ.

ಒಮ್ಮೆ ರೂಢಿಯಾಯಿತೆಂದರೆ,
ನಿಮ್ಮ ನೋಡುವಿಕೆ ಪಕ್ವವಾಯಿತೆಂದರೆ,
ಮುಂದೆ ಈ ಥರದ ನೋಡುವಿಕೆ ಈಜು ಕಲಿತಷ್ಟೇ ಸಹಜ.
ಮೊದಮೊದಲು ನಿಮಗೆ ಭಯವಾಗಬಹುದು,
ಮೈಂಡ್ ನ ಸಹಾಯವಿಲ್ಲದೆ ಬದುಕು ಸಾಧ್ಯ
ಎನ್ನುವ ಸಂಗತಿಯನ್ನು ನಂಬಲು ಅಸಾಧ್ಯವಾಗಬಹುದು,
ಏಕೆಂದರೆ ಮನುಷ್ಯ ಸಾವಿರಾರು ವರ್ಷಗಳಿಂದ
ಬುದ್ಧಿ-ಮನಸ್ಸಿನ ಹಂಗಿನಲ್ಲಿ ಬದುಕುತ್ತಿದ್ದಾನೆ.
ಆದರೆ ಪ್ರಯತ್ನ ಮಾಡಿ.

ಹೆಚ್ಚು ಹೆಚ್ಚು ನೀವು
ಬುದ್ಧಿ-ಮನಸ್ಸನ್ನ ನೋಡುವಿಕೆಯಿಂದ
ಹೊರಗೆ ಇಡಲು ಶುರು ಮಾಡಿದಾಗ
ಹೆಚ್ಚು ಹೆಚ್ಚು ಬೆಳಕು ನಿಮ್ಮನ್ನು ಪ್ರವೇಶ ಮಾಡುವುದು.
ಕನಸುಗಳಿಲ್ಲದಾಗ
ಎಲ್ಲ ಬಾಗಿಲುಗಳು, ಎಲ್ಲ ಕಿಟಕಿಗಳು ತೆರೆದುಕೊಳ್ಳುವವು
ಹಾಗು ಆಕಾಶ ನಿಮ್ಮನ್ನ ತಾಕುವುದು,
ನೀವು ಹೆಚ್ಚು ಹೆಚ್ಚು ಸತ್ಯಕ್ಕೆ ತೆರೆದುಕೊಳ್ಳುವಿರಿ.

ಮೈಂಡ್ ನ ಕಾರ್ಯಾಚರಣೆ ವೃತ್ತಾಕಾರವಾಗಿರುವುದರಿಂದ,
ಎಚ್ಚರವಿರುವಾಗ ನೀವು ಕನಸು ಕಾಣುತ್ತಿಲ್ಲವೆಂದರೆ
ನಿದ್ದೆಯಲ್ಲಿಯೂ ಕನಸುಗಳು ಕಡಿಮೆಯಾಗುತ್ತ ಹೋಗುವವು.
ಒಂದು ಭಾಗದಲ್ಲಿ ನೀವು ಈ ವೃತ್ತವನ್ನ ಕತ್ತರಿಸಿದಿರಾದರೆ
ಮೈಂಡ್ ನ ಇಡೀ ವ್ಯವಸ್ಥೆ ಕುಸಿದು ಬೀಳುವುದು.

“ಏಳಿ ಎಚ್ಚರವಾಗಿ”
ಎಂದು ಜೀಸಸ್, ಬುಧ್ಧ ಹೇಳುವಾಗ,
ಅವರು ಹೇಳುತ್ತಿರುವುದು
ಬುದ್ಧಿ-ಮನಸ್ಸಿನ ಕಪಿ ಮುಷ್ಟಿಯಿಂದ ಹೊರಬನ್ನಿ ಎಂದು,
ಕನಸುಗಳ ಲೋಕದಿಂದ ಹೊರಬನ್ನಿ ಎಂದು
‘ಸಧ್ಯ’ ದಲ್ಲಿ ಒಂದಾಗಿ ಎಂದು.

‘ಸಧ್ಯ’ ದಲ್ಲಿ ಕನಸುಗಳಿಲ್ಲ , ಆರೋಪಗಳಿಲ್ಲ.
‘ಸಧ್ಯ’ ದಲ್ಲಿ ನೀವು ಇಬ್ಬರು ಮಾತ್ರ, ಸತ್ಯ ಮತ್ತು ನೀವು
ಹಾಗು ಸತ್ಯ ಮತ್ತು ನಿಮ್ಮ ನಡುವೆ ಅಂತರವಿಲ್ಲ.
ಸತ್ಯ ನಿಮ್ಮೊಳಗೆ ಕರಗಿದೆ ಹಾಗು
ನೀವು ಸತ್ಯದೊಳಗೆ ಒಂದಾಗಿದ್ದೀರಿ.

ನೀವು ಬ್ರಹ್ಮವಾಗಿದ್ದೀರಿ ಮತ್ತು
ಬ್ರಹ್ಮ ನೀವಾಗಿದೆ.

(ಮುಂದುವರೆಯುತ್ತದೆ........)

Leave a Reply