ಸಂಕುಚಿತ ಆಲೋಚನೆ ಬಿಟ್ಟು ಚಿನ್ಮಾತ್ರದಲ್ಲಿ ಆಸಕ್ತನಾಗು

ನಾವು ನಾನು ಕ್ಷುದ್ರ, ನಾನು ದುರ್ಬಲ, ನಾನು ನಿರ್ಧನ ಎಂದು ಮಿತಿ ಹಾಕಿಕೊಳ್ಳುತ್ತಾ ಬೆಳವಣಿಗೆಯ ಅವಕಾಶ ಬಿಟ್ಟುಕೊಡುತ್ತೇವೆ. ಹಾಗೆ ಅನಿಸಿದಾಗೆಲ್ಲ ಅಷ್ಟಾವಕ್ರನ ಈ ಮಾತುಗಳನ್ನು ಓದಬೇಕು. ಇದು ಆತ ಜನಕನೊಬ್ಬನಿಗೆ ಹೇಳಿದ ಮಾತುಗಳಲ್ಲ. ಅವು ಪ್ರತಿಯೊಂದು ಆತ್ಮಕ್ಕೂ ಸಲ್ಲುವಂಥವು. ನಾವು ಅಲ್ಪರಲ್ಲ, ಅತಿಶಯರು ಅನ್ನುವುದು ನಮಗೆ ಮನದಟ್ಟಾದಾಗ ಮಾತ್ರ, ನಾವು ಈಗ ಏನಾಗಿದ್ದೇವೆಯೋ ಅದರಿಂದ ಹೊರಬಂದು ಏನಾದರೊಂದು ಸಾಧನೆ ಮಾಡಲು ಸಾಧ್ಯ ~ ಸಾ.ಹಿರಣ್ಮಯಿ

ನಿರಪೇಕ್ಷೋ ನಿರ್ವಿಕಾರೋ ನಿರ್ಭರಃ ಶೀತಲಾಶಯಃ |
ಅಗಾಧಬುದ್ಧಿರಕ್ಷುಬ್ಧೋ ಭವ ಚಿನ್ಮಾತ್ರವಾಸನಃ || 1.17 ||

ಅರ್ಥ : ನೀನು ನಿರಪೇಕ್ಷ, ನಿರ್ವಿಕಾರ; ನಿರ್ಭರ, ಯಾವ ಆಶೆಗಳೂ ಇಲ್ಲದವನು. ನಿನ್ನ ಬುದ್ಧಿ ಅಗಾಧವಾದುದು. ಯಾವುದರಿಂದಲೂ ನೀನು ಕ್ಷೋಭೆಗೊಳ್ಳುವವನಲ್ಲ. ನೀನು ಚಿನ್ಮಾತ್ರದಲ್ಲಿ ಆಸಕ್ತಿ ಇರಿಸು.

ತಾತ್ಪರ್ಯ: “ವಿಶ್ವವ್ಯಾಪಿಯೂ ಮಹತ್ತೂ ಆದ ನೀನು, ನಿನ್ನನ್ನು ದೇಹಕ್ಕೆ ಸೀಮಿತಗೊಳಿಸಿಕೊಂಡು ಕ್ಷುದ್ರವಾಗಿ ಏಕೆ ಆಲೋಚಿಸುತ್ತಿರುವೆ?” ಎಂದು ಕೇಳುವ ಅಷ್ಟಾವಕ್ರ, ಈ ಶ್ಲೋಕದಲ್ಲಿ ವಸ್ತುತಃ ನೀನು ಏನಾಗಿರುವೆ ಎಂದು ವಿವರಿಸುತ್ತಿದ್ದಾನೆ.
ನೀನು ಯಾವುದರ ಅಪೇಕ್ಷೆಯೂ ಇಲ್ಲದವನು. ಮನಸ್ಸು, ಬುದ್ಧಿ ಮತ್ತು ದೇಹವಿಕಾರಗಳಿಲ್ಲದ ನಿರ್ವಿಕಾರ ನೀನು.

ಇಲ್ಲಿ ಮನೋ – ಬುದ್ಧಿ – ಶರೀರ ವಿಕಾರಗಳು ಅಂದರೆ, ಕ್ರಮವಾಗಿ ಭಾವನೆಗಳ ಅತಿರೇಕ, ದುಷ್ಟತನ ಮತ್ತು ದೇಹವನ್ನು ಕೆಟ್ಟ ಕೆಲಸಕ್ಕೆ ಬಳಸುವುದು ಎಂದು ಅರ್ಥ ಬರುತ್ತದೆ. ವೈಯಕ್ತಿಕವಾಗಿ ಜನಕ ಮಹಾರಾಜ, ಮತ್ತು ವಿಶ್ವಪ್ರಜ್ಞೆಯಲ್ಲಿ ಯಾವ ಗುರುತು ಚಹರೆಗಳಿಲ್ಲದ ಆತ್ಮ ಈ ಯಾವ ವಿಕಾರವೂ ಇಲ್ಲದ ನಿರ್ವಿಕಾರ ಎಂಬುದು ಅಷ್ಟಾವಕ್ರನ ಮಾತಿನ ಅರ್ಥ.

ಮುಂದುವರಿದು ಅಷ್ಟಾವಕ್ರ ಮುನಿ ಹೇಳುತ್ತಾನೆ; ನೀನು ನಿರ್ಭರ – ಅಂದರೆ ಅಲ್ಪಕ್ಕೆ ಸಿಗದ ಅತಿಶಯನು ಎಂದು. ಅದು ಹೇಗೆ? ಹೇಗೆಂದರೆ – ನಿನ್ನ ಬುದ್ಧಿ ಅಗಾಧವಾಗಿದೆ, ಆದ್ದರಿಂದ. ಅಷ್ಟು ಮಾತ್ರವಲ್ಲ, ನೀನು ಯಾವುದರಿಂದಲೂ ಕ್ಷೋಭೆಗೊಳ್ಳುವುದಿಲ್ಲ. ಎಲ್ಲವನ್ನೂ ಸಾಕ್ಷೀಭಾವದಲ್ಲಿ ಸಮಚಿತ್ತದಿಂದ ನೋಡಬಲ್ಲ ನೀನು ವಿಚಲಿತನಾಗುವ ಪ್ರಶ್ನೆಯೇ ಇಲ್ಲ. ಆದ್ದರಿಂದ ನೀನು ಅಲ್ಪಕ್ಕೆ ಸಿಗದ ಅತಿಶಯನು.
ಮುನಿ ಹೇಳುತ್ತಾನೆ, “ಆದ್ದರಿಂದ ಹೇ ಜನಕ ಮಹಾರಾಜ! ದೇಹಭಾವದ ಸಂಕುಚಿತ, ಕ್ಷುಲ್ಲಕ ಆಲೋಚನೆಯಿಂದ ಹೊರಬಂದು ಚಿನ್ಮಾತ್ರದಲ್ಲಿ ಆಸಕ್ತನಾಗು”.

ಈ ಸಂವಾದದ ಆರಂಭದಲ್ಲೇ ಅಷ್ಟಾವಕ್ರ “ನೀನು ಚಿದ್ರೂಪಿ ಅನಂತಾತ್ಮ” ಎಂದು ಹೇಳಿಯಾಗಿದೆ. ಅದನ್ನೇ ವಿಧವಿಧವಾಗಿ ವಿವರಿಸುತ್ತಾ ಮನದಟ್ಟು ಮಾಡುತ್ತಾ, ಚಿದ್ರೂಪಿಯಾದ ನೀನು ಚಿನ್ಮಾತ್ರದಲ್ಲಿ ನೆಲೆಸು ಎಂದು ಬೋಧಿಸುತ್ತಿದ್ದಾನೆ.
ಈವರೆಗಿನ ಶ್ಲೋಕಗಳನ್ನು ಗಮನಿಸಿದರೆ, ಅಷ್ಟಾವಕ್ರ ಅದೆಷ್ಟು ಸಕಾರಾತ್ಮಕವಾಗಿ ಮಾತನಾಡುತ್ತಿದ್ದಾನೆ ಎಂದು ಅರಿವಾಗುತ್ತದೆ. ವ್ಯಕ್ತಿಯ ಅಸೀಮಬಲವನ್ನು ಮೊಗೆಮೊಗೆದು ತೋರುತ್ತಾ ಅಸಾಧ್ಯವಾದುದನ್ನೂ ಸಾಧಿಸುವ ಹುಮ್ಮಸ್ಸು ತುಂಬಿದ್ದಾನೆ ಅಷ್ಟಾವಕ್ರ ಮುನಿ.

ನಾವು ನಾನು ಕ್ಷುದ್ರ, ನಾನು ದುರ್ಬಲ, ನಾನು ನಿರ್ಧನ ಎಂದು ಮಿತಿ ಹಾಕಿಕೊಳ್ಳುತ್ತಾ ಬೆಳವಣಿಗೆಯ ಅವಕಾಶ ಬಿಟ್ಟುಕೊಡುತ್ತೇವೆ. ಹಾಗೆ ಅನಿಸಿದಾಗೆಲ್ಲ ಅಷ್ಟಾವಕ್ರನ ಈ ಮಾತುಗಳನ್ನು ಓದಬೇಕು. ಇದು ಆತ ಜನಕನೊಬ್ಬನಿಗೆ ಹೇಳಿದ ಮಾತುಗಳಲ್ಲ. ಅವು ಪ್ರತಿಯೊಂದು ಆತ್ಮಕ್ಕೂ ಸಲ್ಲುವಂಥವು. ನಾವು ಅಲ್ಪರಲ್ಲ, ಅತಿಶಯರು ಅನ್ನುವುದು ನಮಗೆ ಮನದಟ್ಟಾದಾಗ ಮಾತ್ರ, ನಾವು ಈಗ ಏನಾಗಿದ್ದೇವೆಯೋ ಅದರಿಂದ ಹೊರಬಂದು ಏನಾದರೊಂದು ಸಾಧನೆ ಮಾಡಲು ಸಾಧ್ಯ.

ಈ ಸಂವಾದದಲ್ಲಿ ಅಷ್ಟಾವಕ್ರ ಮುನಿ, ಜನಕನಿಗೆ ತನ್ನನ್ನು ತಾನು ಅರಿಯುವ ಸಾಧನೆಗೆ ಹೀಗೆ ಸಕಾರಾತ್ಮಕ ಮಾತುಗಳ ಮೂಲಕ ಬಲ ತುಂಬುವ ಕೆಲಸ ಮಾಡುತ್ತಿದ್ದಾನೆ.

(ಮೂಂದುವರಿಯುವುದು….)

1 Comment

Leave a Reply