ಹಿಂಸೆಯ ಮುಖ್ಯ ಕಾರಣಗಳು : ಜಿಡ್ಡು ಕಂಡ ಹಾಗೆ

ಇಂದು ಜಗತ್ತಿನಲ್ಲಿ ಮತ್ತು ನಮ್ಮ ದುರದೃಷ್ಟಕರ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನ ಗಮನಿಸಿದ ಯಾರಾದರೂ ಯಾವ ದೊಡ್ಡ ಬುದ್ಧಿವಂತಿಕೆಯ ಸಹಾಯವಿಲ್ಲದೇ, ನಮ್ಮೊಳಗಿನ ಒತ್ತಡಗಳೇ ಹಿಂಸೆಯ ಈ ಕರಾಳ ಬಹಿರಂಗ ಸ್ವರೂಪಕ್ಕೆ ಕಾರಣವಾಗಿರುವುದನ್ನ ಗುರುತಿಸಬಹುದು. ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ಹಿಂಸೆಯ ಮುಖ್ಯ ಕಾರಣ ನನ್ನ ಪ್ರಕಾರ ನಾವು ಪ್ರತಿಯೊಬ್ಬರೂ ಅಂತರಂಗದಲ್ಲಿ, ಮಾನಸಿಕವಾಗಿ ಸುರಕ್ಷತೆಯನ್ನು ಬಯಸುವುದು. ನಮ್ಮ ಪ್ರತಿಯೊಬ್ಬರಲ್ಲೂ ಮಾನಸಿಕವಾಗಿ ಸುರಕ್ಷಿತರಾಗಬೇಕೆಂಬ ಆ ಒಳಗಿನ ಒತ್ತಡ ಇನ್ನೊಂದು ಬೇಡಿಕೆಯನ್ನ, ಬಹಿರಂಗವಾಗಿಯೂ ಸುರಕ್ಷಿತರಾಗಬೇಕೆಂಬ ಬಯಕೆನ್ನ ಎತ್ತಿಕಟ್ಟುತ್ತದೆ.

ಒಳಗೊಳಗೆ ನಾವು ನೆಮ್ಮದಿಯಿಂದ, ಸುರಕ್ಷಿತರಾಗಿ ಬದುಕಬೇಕೆಂದು ಖಂಡಿತ ಬಯಸುತ್ತೇವೆ. ಈ ಕಾರಣವಾಗಿಯೇ ವಿವಾಹ, ವಿವಾಹಕ್ಕೆ ಸಂಬಂಧಿಸಿದ ಧಾರ್ಮಿಕ ರೀತಿ ರಿವಾಜುಗಳು, ಸರಕಾರಿ ಕಾನೂನುಗಳು ಎಲ್ಲವನ್ನ ಕಟ್ಟಿಕೊಂಡಿದ್ದೇವೆ ; ಈ ಮೂಲಕ ಹೆಣ್ಣಿನ ಮೇಲೆ, ಗಂಡಿನ ಮೇಲೆ ಅಧಿಕಾರ ಸ್ಥಾಪಿಸಲು, ಸಂಬಂಧಗಳಲ್ಲಿ ಸುರಕ್ಷಿತರಾಗಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಇಂಥ ಸುರಕ್ಷಿತ ಎನ್ನಬಹುದಾದ ಸಂಬಂಧ ಆಕ್ರಮಣಕ್ಕೆ ಒಳಗಾದಾಗ ನಾವು ಹಿಂಸಕರಾಗುತ್ತೇವೆ.

ಈ ಹಿಂಸೆ ನಮ್ಮ ಒಳಗಿನ ಸುರಕ್ಷತೆಯ ಭಾವನೆಗೆ ಧಕ್ಕೆಯಾದ ಬಗ್ಗೆ ನಮ್ಮ ಪ್ರತಿಕ್ರಿಯೆ. ಆದರೆ ಸಂಬಂಧಗಳಲ್ಲಿ ಸುರಕ್ಷತೆ, ಶಾಶ್ವತತೆ ಎನ್ನುವ ಸಂಗತಿಗಳಿಲ್ಲ, ನಮ್ಮ ಒಳಗಿನ ಒತ್ತಡಗಳು ಏನೇ ಇದ್ದರೂ ಅವುಗಳನ್ನ ಕಾಯಂ ಆಗಿ ಸ್ಥಾಪಿಸಿಕೊಳುವುದು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೆ ಒಂದು ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ ಹಿಂಸೆಗೆ ನಮ್ಮನ್ನ ಮೋಸ ಮಾಡುವುದು ಬಹಳ ಸುಲಭ.

ಇಂದು ಜಗತ್ತಿನಲ್ಲಿ ಹುಟ್ಟಿಕೊಳ್ಳುತ್ತಿರುವ, ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಹಿಂಸೆಗೆ ಇಂಥ ನಮ್ಮ ಒಳಗಿನ ಹಲವಾರು ಒತ್ತಡಗಳೇ ಕಾರಣ. ಇಂದು ಜಗತ್ತಿನಲ್ಲಿ ಮತ್ತು ನಮ್ಮ ದುರದೃಷ್ಟಕರ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನ ಗಮನಿಸಿದ ಯಾರಾದರೂ ಯಾವ ದೊಡ್ಡ ಬುದ್ಧಿವಂತಿಕೆಯ ಸಹಾಯವಿಲ್ಲದೇ, ನಮ್ಮೊಳಗಿನ ಒತ್ತಡಗಳೇ ಹಿಂಸೆಯ ಈ ಕರಾಳ ಬಹಿರಂಗ ಸ್ವರೂಪಕ್ಕೆ ಕಾರಣವಾಗಿರುವುದನ್ನ ಗುರುತಿಸಬಹುದು. ಹಾಗಾಗಿಯೇ ಇಂದು ನಮ್ಮ ಸುತ್ತ ನಡೆಯುತ್ತಿರುವ ಕ್ರೌರ್ಯ, ಪಕ್ಷಪಾತ, ಹಿಂಸೆ, ದಬ್ಬಾಳಿಕೆಗಳಲ್ಲಿ ನಮ್ಮ ಬಯಕೆಗಳ ವಿಳಾಸವನ್ನ ಕಂಡುಕೊಳ್ಳಬಹುದು.

Leave a Reply