ದಾನಗಳಲ್ಲಿ ಎಷ್ಟು ವಿಧ? ದಾನ ನೀಡುವುದು ಹೇಗೆ? : ಭೀಷ್ಮ – ಯುಧಿಷ್ಠಿರ ಸಂವಾದ

“ಉತ್ತಮರು ಮಾಡುವ ದಾನವು ದಾನವೆಂದು ಕೂಡಾ ಅನಿಸುವುದಿಲ್ಲ. ಅದನ್ನು ಏನೆಂದು ಕರೆಯಬೇಕೋ ತಿಳಿಯದು. ಅಷ್ಟು ಶುದ್ಧಮನಸ್ಕರಾಗಿ ಅವರು ತಮ್ಮಲ್ಲಿದ್ದುದನ್ನು ನೀಡುತ್ತಾರೆ” ಅನ್ನುತ್ತಾನೆ ಭೀಷ್ಮ ಪಿತಾಮಹ!


ರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನು ಪಾಂಡವ ಜ್ಯೇಷ್ಠನೂ ತನ್ನ ಮೊಮ್ಮಗನೂ ಆದ ಯುಧಿಷ್ಠಿರನಿಗೆ ರಾಜಧರ್ಮವನ್ನೂ ಇನ್ನಿತರ ಕರ್ತವ್ಯಗಳನ್ನೂ ಬೋಧಿಸುತ್ತಾನೆ. ಈ ಸಂದರ್ಭದಲ್ಲಿ ಯುಧಿಷ್ಠಿರ ದಾನ ನೀಡುವ ಕುರಿತು ಎತ್ತುವ ಪ್ರಶ್ನೆಗಳಿಗೆ ಭೀಷ್ಮ ನೀಡುವ ಉತ್ತರಗಳು ಸಾರ್ವಕಾಲಿಕವೂ ಮೌಲಿಕವೂ ಆಗಿದ್ದು, ಈ ಸಂವಾದವನ್ನಿಲ್ಲಿ ನೀಡಲಾಗಿದೆ.

ಯುಧಿಷ್ಠಿರ : ಪಿತಾಮಹ! ಅನೇಕರು ದಾನಧರ್ಮಗಳನ್ನು ಮಾಡುತ್ತಾರೆ. ದಾನ ಮಾಡುವವರಲ್ಲಿ ನಾನಾ ವಿಧದ ಜನರಿರುತ್ತಾರೆ, ಆದ್ದರಿಂದ ದಾನಗಳಲ್ಲೂ ಸಹ ಹಲವು ವಿಧಗಳಿರುತ್ತವೆ. ಇದರಿಂದಾಗಿ ನಾನು ಗೊಂದಲಗೊಂಡಿದ್ದೇನೆ. ವಸ್ತುತಃ ದಾನವೆಂದರೇನು? ದಾನಗಳಲ್ಲಿ ಎಷ್ಟು ವಿಧ? ದಯವಿಟ್ಟು ವಿವರಿಸಿ.

ಭೀಷ್ಮ : ಧರ್ಮನಂದನ! ದಾನಧರ್ಮದ ಕುರಿತು ನಿನ್ನ ಸಂದೇಹ ಸೂಕ್ತವಾಗಿದೆ. ದಾನ ನೀಡುವವರು ಹಲವು ಕಾರಣಗಳಿಗಾಗಿ ಅದನ್ನು ಮಾಡುತ್ತಾರೆ. ಕೆಲವರು ಭಯದಿಂದ ತಮ್ಮ ಸೊತ್ತನ್ನು ಇತರರಿಗೆ ಕೊಡುತ್ತಾರೆ. ಕೆಲವರು ಪ್ರಲೋಭನೆಗಳಿಗೊಳಪಟ್ಟು ದಾನವನ್ನು ಮಾಡುತ್ತಾರೆ. ಇನ್ನೂ ಕೆಲವರು ಪರಪ್ರತ್ಯಯದಿಂದ ಅಂದರೆ ಯಾರೋ ಹೇಳಿದರೆಂದು ದಾನ ಮಾಡುತ್ತಾರೆ. ಈ ಮೂರು ವಿಧವಾದ ದಾನಗಳು ಎರಡನೇ ಸ್ತರದವು. ಉತ್ತಮರು ಮಾಡುವ ದಾನವು ದಾನವೆಂದು ಕೂಡಾ ಅನಿಸುವುದಿಲ್ಲ. ಅದನ್ನು ಏನೆಂದು ಕರೆಯಬೇಕೋ ತಿಳಿಯದು. ಅಷ್ಟು ಶುದ್ಧಮನಸ್ಕರಾಗಿ ಅವರು ತಮ್ಮಲ್ಲಿದ್ದುದನ್ನು ನೀಡುತ್ತಾರೆ”

ಯುಧಿಷ್ಠಿರ : ಪಿತಾಮಹ, ದಯವಿಟ್ಟು ದಾನದ ಕುರಿತ ಇನ್ನಷ್ಟು ವಿಷಯಗಳನ್ನು ವಿಶದಪಡಿಸಿ

ಭೀಷ್ಮ : ಮಗೂ, ಹಿರಿಯರು ಏನಾದರು ಹೇಳುವರೆಂದೋ ಅಥವಾ ಪ್ರಭುತ್ವವು ದಂಡಿಸುವುದೆಂಬ ಭಯದಿಂದಲೊ ತಮ್ಮ ಸಂಪತ್ತನ್ನು ದಾನ ಮಾಡುವ ವ್ಯಕ್ತಿಗಳಿರುತ್ತಾರೆ. ಇನ್ನೂ ಕೆಲವರು ನರಕಕ್ಕೆ ಹೋಗುತ್ತೇವೆನ್ನುವ ಭಯದಿಂದಲೂ ಸಹ ದಾನಧರ್ಮಾದಿ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಈ ವಿಧವಾದ ದಾನಗಳಿಂದ ಸಮಾಜಕ್ಕೆ ಉಪಕಾರವಾಗುತ್ತದೆನ್ನುವುದೇನೊ ನಿಜ, ಆದರೆ ಇದರಿಂದ ವ್ಯಕ್ತಿಗೆ ದೊರೆಯಬೇಕಾದ ಸಂಸ್ಕಾರ ಮಾತ್ರ ಸಿಗುವುದಿಲ್ಲ.
ಕೆಲವರು ಏನೋ ಒಂದು ಬಯಕೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಾನವನ್ನು ಮಾಡುತ್ತಿರುತ್ತಾರೆ, ಅಂದರೆ ಇಂದು ನಾವು ದಾನ ಮಾಡಿದರೆ ಅದರಿಂದ ನಾಳೆ ಬೇರೊಂದು ರೂಪದಲ್ಲಿ ಅದಕ್ಕೆ ತಕ್ಕ ಪ್ರತಿಫಲವು ದೊರೆಯುತ್ತದೆನ್ನುವ ಲೆಕ್ಕದಲ್ಲಿ ಅವರು ದಾನ ಮಾಡುತ್ತಿರುತ್ತಾರೆ. ಅಥವಾ ತನಗೆ ಲೋಕದಲ್ಲಿ ಎಣೆಯಿಲ್ಲದ ಕೀರ್ತಿ ಬರಬಹುದೆನ್ನುವ ಆಸೆಯಿಂದಲೂ ಕೂಡ ಅವರು ದಾನ ಮಾಡುತ್ತಿರಬಹುದು. ಅದು ಏನೇ ಇರಲಿ, ಪ್ರತಿಫಲಾಪೇಕ್ಷೆಯಿಂದ ಕೈಗೊಳ್ಳುವ ದಾನವು ಉತ್ತಮವಾದ ದಾನವೆನಿಸಿಕೊಳ್ಳದು.
ಇನ್ನೂ ಕೆಲವರಿರುತ್ತಾರೆ. ತಂದೆ-ತಾಯಿಗಳು ಹೇಳಿದರೆಂದೋ ಅಥವಾ ಆಪ್ತರೋ, ಸ್ನೇಹಿತರೋ ಸಲಹೆ ಇತ್ತರೆಂದೋ ಅವರ ಮಾತುಗಳಿಗೆ ಕಟ್ಟು ಬಿದ್ದು ದಾನಾದಿ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಇದೂ ಸಹ ಆದರ್ಶವಾದ ಸ್ಥಿತಿಯಲ್ಲ.
ಪಾಪ ಇವನು ಬಡವ, ಆದ್ದರಿಂದ ಇವನಿಗೆ ಸಹಾಯ ಮಾಡಬೇಕು. ಅವನು ಅಂಗಲಾಚಿ ಬೇಡುತ್ತಿದ್ದಾನೆ, ಅವನ ಪರಿಸ್ಥಿತಿ ದಯನೀಯವಾಗಿದೆ ಎನ್ನುವ ಭಾವನೆಯಿಂದ, ಕರುಣೆ ದಯೆಗಳಿಂದ ದಾನ ಮಾಡುವವರೂ ಸಹ ಇರುತ್ತಾರೆ. ಇದು ಒಳ್ಳೆಯದೆ, ಆದರೆ ಇದೂ ಸಹ ಉತ್ತಮವಾದ ದಾನವಲ್ಲ!

ಯುಧಿಷ್ಠಿರ : ಹಾಗಾದರೆ, ಉತ್ತಮವಾದ ದಾನ ಯಾವುದು ಪಿತಾಮಹ?

ಭೀಷ್ಮ : ಉತ್ತಮವಾದ ದಾನವನ್ನು ದಾನವೆಂದೂ ಸಹ ಹೇಳಲಾಗದು ಎಂದು ಈ ಮೊದಲೇ ಹೇಳಿದೆನಲ್ಲವೆ? ಭಯಂದಿಂದಾಗಲಿ, ಪ್ರತಿಫಲಾಪೇಕ್ಷೆಯಿಂದಾಗಲಿ, ಕನಿಕರದ ಭಾವನೆಯಿಂದಾಗಲಿ ದಾನ ಮಾಡದೆ ಸಮರ್ಪಣಾ ಭಾವದಿಂದ ಮಾಡುವುದೇ ನಿಜವಾದ ದಾನ. ಸಮರ್ಪಣೆ ಎಂದರೆ ಪುನಃ ಹಿಂತಿರುಗಿ ಕೊಡುವುದು. ಅವರದನ್ನು ಅವರಿಗೆ ಕೊಡುತ್ತಿದ್ದೇನೆ ಎನ್ನುವ ಭಾವನೆ. ನನ್ನದನ್ನು ಕೊಡುತ್ತಿದ್ದೇನಲ್ಲ ಅದು ಅವರದು ಹೇಗಾಗುತ್ತದೆಂದು ಕೇಳಬಹುದು. ಇದು ನನ್ನದಲ್ಲ, ಅವರದೇ – ‘ಇದಂ ನ ಮಮ’ ಎನ್ನುವ ದೃಷ್ಟಿ ಇರಬೇಕು. ನಿನ್ನ ವಸ್ತುವನ್ನು ನಿನಗೇ ಕೊಡುತ್ತಿದ್ದೇನೆ ಎಂದು ಭಾವಿಸಬೇಕು.
ಇಂತಹ ಭಾವನೆಯಿಂದ ನೀಡುವಾಗ ದಾನವೆನ್ನುವ ಮಾತಾದರೂ ಎಲ್ಲಿಯದು? ಅದು ದಾನವಲ್ಲ, ತ್ಯಾಗವಲ್ಲ, ದಯೆಯಲ್ಲ, ಅದು ಸಮರ್ಪಣೆ. ಭಿಕ್ಷೆ ನೀಡುವಾಗಲೂ ಸಹ ಈ ಸಮರ್ಪಣಾ ಭಾವನೆ ಇರಬೇಕು. ಹೀಗೆ ಸಮರ್ಪಣಾ ಭಾವದಿಂದ ನೀಡುವ ದಾನವೇ ಶ್ರೇಷ್ಠ ದಾನ. ಇದೇ ಉತ್ತಮವಾದ ದಾನ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.