ಪ್ರೀತಿ ಮನಸ್ಸಿಗೆ ಸಂಬಂಧಿಸಿದ ಸಂಗತಿ । ಜಿಡ್ಡು ಕಂಡ ಹಾಗೆ

ಪ್ರೀತಿ ಜೋಡಿಸುವಿಕೆಯೂ ಅಲ್ಲ, ಬಿಡಿಸಿಕೊಳ್ಳುವಿಕೆಯೂ ಅಲ್ಲ, ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ವ್ಯಕ್ತಿಯಿಂದ ಹೊರತಾದದ್ದೂ ಅಲ್ಲ. ಪ್ರೀತಿ, ಬುದ್ಧಿ-ಮನಸ್ಸಿಗೆ ನಿಲುಕಲಾರದ ಸ್ಥಿತಿಮೂಲ: ಜಿಡ್ಡು ಕೃಷ್ಣಮೂರ್ತಿ ; ಕನ್ನಡಕ್ಕೆ : ಚಿದಂಬರ ನರೇಂದ್ರ

ನಾವು ಅಂದುಕೊಂಡಿರುವ ನಮ್ಮ ಪ್ರೀತಿ, ಬುದ್ಧಿ-ಮನಸ್ಸಿನ (mind) ಸಂಗತಿ. ಸಾವಧಾನವಾಗಿ ನಿಮ್ಮನ್ನ, ನಿಮ್ಮ ಸುತ್ತಮುತ್ತಲಿನವರನ್ನು ಗಮನಿಸಿ, ನಾನು ಹೇಳುತ್ತಿರುವುದು ಒಂದು ಸಹಜ ಸತ್ಯ ಎನ್ನುವುದು ನಿಮಗೆ ಮನದಟ್ಟಾಗುತ್ತದೆ. ಇಲ್ಲವಾಗಿದ್ದರೆ ಇಂದು ನಮ್ಮ ಬದುಕು, ನಮ್ಮ ಮದುವೆ, ನಮ್ಮ ಇತರ ಸಂಬಂಧಗಳು ಪೂರ್ತಿಯಾಗಿ ಬೇರೆ ರೂಪದಲ್ಲಿ ನಮ್ಮನ್ನು ಎದುರುಗೊಳ್ಳುತ್ತಿದ್ದವು, ನಮ್ಮಸುತ್ತ ಒಂದು ಹೊಸ ಸಮಾಜದ ನಿರ್ಮಾಣವಾಗಿರುತ್ತಿತ್ತು.

ನಾವು ಇನ್ನೊಬ್ಬರೊಡನೆ ಜೊತೆಯಾಗಿರುವುದು ಒಂದಾಗುವಿಕೆಯ ಮೂಲಕ ಅಲ್ಲ ಬದಲಾಗಿ ಕರಾರುಗಳ ಮೂಲಕ , ಈ ಕಾಂಟ್ರ್ಯಾಕ್ಟ್ ಗಳನ್ನೇ ನಾವು ಪ್ರೀತಿ, ಮದುವೆ, ಗೆಳೆತನ ಎಂಬ ಹೆಸರಿನಿಂದ ಗುರುತಿಸುತ್ತೇವೆ. ಪ್ರೀತಿಗೆ ಜೋಡಿಸುವ, ಹೊಂದಾಣಿಕೆಯ ಗುಣವಿಲ್ಲ, ಪ್ರೀತಿ ವೈಯಕ್ತಿಕವೂ ಅಲ್ಲ ಮತ್ತು ವ್ಯಕ್ತಿಗಳಿಂದ ಹೊರತಾದದ್ದೂ ಅಲ್ಲ. ಪ್ರೀತಿ ಇರುವಿಕೆಯ ಒಂದು ಸ್ಥಿತಿ. ತನಗಿಂತ ಹಿರಿದಾದುದರ ಜೊತೆ ತನ್ನನ್ನು ಜೋಡಿಸಿಕೊಳ್ಳಲು ಬಯಸುತ್ತಿರುವ ಮನುಷ್ಯ, ಸಂಕಟ, ಗೊಂದಲಗಳನ್ನು ದೂರ ಇಡುತ್ತಿದ್ದಾನೆ ; ಆದರೆ ಮನಸ್ಸು ಇನ್ನೂ ಪ್ರತ್ಯೇಕತೆಯ ಭಾವದಿಂದ ಬಿಡಿಸಿಕೊಂಡಿಲ್ಲ , ಇದು ನಮ್ಮ ಸಂಬಂಧಗಳು ಚೂರು ಚೂರಾಗಲು ಕಾರಣ.

ಪ್ರೀತಿ ಜೋಡಿಸುವಿಕೆಯೂ ಅಲ್ಲ, ಬಿಡಿಸಿಕೊಳ್ಳುವಿಕೆಯೂ ಅಲ್ಲ, ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ವ್ಯಕ್ತಿಯಿಂದ ಹೊರತಾದದ್ದೂ ಅಲ್ಲ. ಪ್ರೀತಿ, ಬುದ್ಧಿ-ಮನಸ್ಸಿಗೆ ನಿಲುಕಲಾರದ ಸ್ಥಿತಿ; ಬುದ್ಧಿ-ಮನಸ್ಸುಗಳು ಈ ಸ್ಥಿತಿಯನ್ನು ವಿವರಿಸಬಹುದು, ಹೆಸರಿಸಬಹುದು ಆದರೆ ಪ್ರೀತಿ, ಹೆಸರಲ್ಲ, ವ್ಯಾಖ್ಯಾನವಲ್ಲ. ಯಾವಾಗ ಮನಸ್ಸು ವಿಚಾರ, ವ್ಯಾಖ್ಯಾನ, ಸಿದ್ಧಾಂತಗಳಿಂದ ಹೊರತಾಗಿ ಪ್ರಶಾಂತತೆಯಲ್ಲಿ ನೆಲೆಯಾಗಿರುತ್ತದೆಯೋ ಆಗ ಪ್ರೀತಿ ಅರ್ಥವಾಗಲು ಶುರುವಾಗುತ್ತದೆ, ಮತ್ತು ಇಂಥ ಪ್ರಶಾಂತ ಸ್ಥಿತಿಯನ್ನು ಪ್ರಯತ್ನಪೂರ್ವಕವಾಗಿ ಹೊಂದುವುದು ಸಾಧ್ಯವಿಲ್ಲ.

Leave a Reply