ಅಲ್ಲಮ – ಮುಕ್ತಾಯಿಯರ ‘ವಚನ ಸಂವಾದ’

ಅಲ್ಲಮ ಪ್ರಭು ಮಕ್ತಾಯಕ್ಕನನ್ನು ಪ್ರಕಾಶಗೊಳಿಸುವ ಮೊದಲು ಲಿಂಗೈಕ್ಯನಾದ ಅಜಗಣ್ಣನಿಗೆ ಭಕ್ತಿಪೂರ್ವಕ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಅನಂತರದಲ್ಲಿ ಮುಕ್ತಾಯಕ್ಕ ಅಲ್ಲಮಪ್ರಭುಗಳನ್ನು ಕುರಿತು “ಎನ್ನ ಅಜಗಣ್ಣ ತಂದೆಯನರಿದು
ಶರಣೆಂಬಾತ ನೀನಾರು ಹೇಳಯ್ಯಾ” ಎಂದು ಕೇಳಲಾಗಿ, ಅವರಿಬ್ಬರ ಸಂವಾದ ಈ ಕೆಳಗಿನಂತೆ ಸಾಗುತ್ತದೆ.  

ಅಲ್ಲಮ ಪ್ರಭು: ಕಾಣದುದ ಕಂಡೆ ಕೇಳದುದ ಕೇಳಿದೆ
ಮುಟ್ಟಬಾರದುದನ್ನು ಮುಟ್ಟಿದೆ
ಅಸಾಧ್ಯವ ಸಾಧಿಸಿದೆ, ತಲೆಗೆಟ್ಟುದ
ತಲೆವಿಡಿದೆ, ನೆಲೆಗಟ್ಟುದನಿರ್ಧರಿಸಿದೆ
ಗುಹೇಶ್ವರಾ ನಿಮ್ಮ ಶರಣ
ಅಜಗಣ್ಣನಿಗೆ ಶರಣೆಂದು ಬದುಕಿದೆನು

ಮುಕ್ತಾಯಕ್ಕ: ಸಚ್ಚಿದಾನಂದ ಸ್ವರೂಪನಾದ
ವಾಙ್ಮನಕ್ಕಗೋಚರವಾದ
ಜ್ಞಾನಶಕ್ತಿಯನೊಳಗೊಂಡು ನಿಂದ
ಜಂಗಮವೆ ಅಂಗಪ್ರಾಣವಾದ
ಶರಣರನೊಳಕೊಂಡು ಚಿದ್ಘನದೊಳಗೆ
ಅವಿರಳೈಕ್ಯವಾದ ಎನ್ನ ಅಜಗಣ್ಣ ತಂದೆಯನರಿದು
ಶರಣೆಂಬಾತ ನೀನಾರು ಹೇಳಯ್ಯಾ

ಅಲ್ಲಮಪ್ರಭು: ಶರಣು ಶರಣಾರ್ಥಿ ಎಲೆ ತಾಯೆ
ಧರೆಯಾಕಾಶಮನೆಗಟ್ಟದಂದು
ಹರಿವ ಅನಿಲ ಅಗ್ನಿ ಜಲ
ಮೊಳೆದೋರದಂದು ಹುಟ್ಟಿದಳೆಮ್ಮವ್ವೆ
ಅದಕ್ಕೆ ಮುನ್ನವೆ ಹುಟ್ಟದೆ
ಬೆಳೆದೆನೆಮ್ಮಯ್ಯ, ಈ ಇಬ್ಬರ
ಬಸುರಲ್ಲಿ ಬಂದೆನಾನು
ಎಮ್ಮ ತಂಗಿಯರೈವರು
ಮೊರೆಗೆಟ್ಟು ಹೆಂಡಿರಾದರೆನಗೆ
ಕಾಮಬಾಣ ತಾಗದೆ ಅವರ
ಸಂಗವ ಮಾಡಿದೆನು ನಾ ನಿಮ್ಮ
ಭಾವನಲ್ಲಯ್ಯನು ನೀನೆನಗೆ ನೆಗೆವೆಣ್ಣು
ನಮ್ಮ ಗುಹೇಶ್ವರನ ಕೈವಿಡಿದು
ಪರಮ ಸುಖಿಯಾಗಿ ಕಳವಳದ
ಕಂದರವೆಯೇನು ಹೇಳಾ

ಮುಕ್ತಾಯಕ್ಕ: ಗುರುವಚನದಿಂದಲ್ಲದೆ ಲಿಂಗವನ್ನರಿಯಬಾರದು
ಗುರುವಚನದಿಂದಲ್ಲದೆ ಜಂಗಮವನರಿಯಬಾರದು
ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು
ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು

ಅಲ್ಲಮಪ್ರಭು: ಗುರುವೇ ಶಿಷ್ಯನಾದ ತನ್ನ ವಿನೋದಕ್ಕೆ
ಆ ಶಿಷ್ಯನೇ ಗುರುವಾದ ತನ್ನ ವಿನೋದಕ್ಕೆ
ಕರ್ಮವೆಂಬ ಕೌಟಿಲ್ಯವೆಡೆ ಹೊಕ್ಕ ಕಾರಣ
ಭಿನ್ನವಾಗಿದ್ದಿತೆಂದೆಡೆ ಅದು ನಿಶ್ಚಯವಹುದು

ಮುಕ್ತಾಯಕ್ಕ: ನಡೆಯ ಹಂಗಿನ್ನು ನಿಮಗೆ ಹಿಂಗದು
ನಡೆಯನೆಂತು ಪರರಿಗೆ ಹೇಳುವಿರಿ?
ಒಡಲ ಹಂಗಿನ ಸುಳುಹು ಬಿಡದು
ಎನ್ನೊಡನೆ ಮತ್ತೇತರ ಅನುಭವವಣ್ಣಾ?
ತಾನಾದಲ್ಲದೆ ಇದಿರಿಂಗೆ ಹೇಳಬಹುದೆ ?
ಅರಿವ ತೋರಬಲ್ಲಡೆ ತನ್ನನಳುಹದೆ
ಅರಿವನು ಕಾಣಾ ಎನ್ನ ಅಜಗಣ್ಣ ತಂದೆ

ಅಲ್ಲಮಪ್ರಭು: ಶರಣ ನಡೆದರೆ ನಿರ್ಗಮನಿ
ನುಡಿದರೆ ನಿಶ್ಯಬ್ದ ಗುಹೇಶ್ವರನ
ಶರಣಂಗೆ ಕುರುಹಿಲ್ಲ ಎಲೇ ಅವ್ವಾ!

ಮುಕ್ತಾಯಕ್ಕ: ಸಿಡಿಲು ಹೊಡೆದ ಬಾಯಿಗೆ
ಸೋಪಾನವೇಕೋ? ನೆರೆಯರಿದಿಹ
ಬಳಿಕ ಮತ್ತೆ ಮತಿಹುಟ್ಟಲುಂಟೇ
ಸೊಡರುಳ್ಳ ಮನೆಗೆ ಮತ್ತೆ
ತಮಂಧವೆಂಬುದೆನೋ? ತನ್ನಲ್ಲಿ ತಾನು
ತದ್ಗತವಾದ ಬಳಿಕ ಬೊಮ್ಮ ಪರಬೊಮ್ಮಾ
ನಾನೆಂಬುದಿಲ್ಲ ನೋಡಾ ಎನ್ನ ಅಜಗಣ್ಣ ತಂದೆಗೆ

ಅಲ್ಲಮಪ್ರಭು: ನುಡಿಯಿಂದ ನಡೆಗೆಟ್ಟಿತ್ತು
ನಡೆಯಿಂದ ನುಡಿಗೆಟ್ಟಿತ್ತು
ಭಾವದ ಗುಸುಟು ತಾನೆ
ನಾಚಿಮಾದುದು ನೋಡ

ಮುಕ್ತಾಯಕ್ಕ: ದೇವ ನಿಮ್ಮವರುಗಳ ಪರಿಯನು
ನೀವೆ ಬಲ್ಲಿರಿ ಹಾವಿನಡಿಯನು
ಹಾವುಗಳು ನೆನೆಯಬಲ್ಲವಲ್ಲದೆ
ನಮಗೆ ಗೋಚರವೆ!ಭಾವಿಸುವೂಡೆ ನಮಗಿನ್ನು
ಗತಿಮತಿ ಯಾವುದೆಂದೆನುತ ಅಲ್ಲಮಪ್ರಭು
ದೇವರಿಗೆ ಮುಕ್ತಾಯಿ ಬಿನ್ನವಿಸಿದಳು ಭಕ್ತಿಯಲಿ

ಅಲ್ಲಮಪ್ರಭು: ಅರಿವುಗೆಟ್ಟು ಕುರುಹಳಿದು
ಭಾವ ಭ್ರಾಂತು ನಿರ್ಭ್ರಾಂತುವಾದವರ
ಕಯ್ಯಲ್ಲಿ ಕುರುಹನರಸುವರೆ
ಹೇಳಾ? ಗುಹೇಶ್ವರನ ಶರಣರ ನಿಲುವು
ಕಾಯಗೊಂಡವರ ಕಣ್ಣಿಂಗೆ ಸಂದೇಹವಾಗಿಪ್ಪುದು

ಮುಕ್ತಾಯಕ್ಕ : ಅಹುದಹುದು ಶಿವಶರಣರ ಮಹಿಮೆ
ಆರಿಗೆ ಕಾಣಬಹುದು? ಕಬ್ಬನು ಉಂಡ
ನೀರಿನಂತೆ ಬಿಸಿಲುಂಡ ಅರಿಸಿನದಂತೆ
ಉರಿಯೊಳಡಗಿದ ಕರ್ಪೂರದಂತೆ
ಬಯಲನಪ್ಪಿದ ವಾಯುವಿನಂತೆ
ಇಪ್ಪ ನಿಲುವು ನುಡಿದು ಹೇಳಿಹೆನೆಂಬ
ಮಾತಿಂಗೆ ಅಳವಡುವುದೇ? ಅರಿವೆಡೆ
ಮತಿಯಿಲ್ಲ ನೆನೆವಡೆ ಮನವಿಲ್ಲ
ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ
ನಿಮ್ಮ ಮಹಿಮೆಗೆ ನಮೋ ನಮೋ ಎನ್ನುತ್ತಿದ್ದೆನು

ಅಲ್ಲಮಪ್ರಭು: ಮುಕ್ತಿಗೆ ಮುಖವಾಗಿ ಯುಕ್ತಿಗೆ
ಹೊರಗಾಗಿ ಅರಿವಿಂಗೆ ಅರಿವಾಗಿ
ಇಪ್ಪ ಭೇದ ಕಾಣಬಂದಿತ್ತು ನೋಡಾ!
ಅರಿವರಿತು ಮರಹು ನಷ್ಟವಾಗಿ
ಇಪ್ಪದು ನಿಮ್ಮಲ್ಲಿ ಸನ್ನಿಹಿತವಾಯಿತ್ತು
ಗುಹೇಶ್ವರನ ಶರಣ ಅಜಗಣ್ಣನ
ನಿಲುವು ಬಯಲಬೆರೆಸಿದ ಮರೀಚಿಕೆಯಂ
ತಾಯ್ತು ಬೆರಸಿ ನೋವಾ ಬೇರಿಲ್ಲದೆ

2 Comments

  1. ವಚನದೊಂದಿಗೆ ವಿವರಣೆ ಚನ್ನಾಗಿ ಮೂಡಿಬಂದಿದೆ. ಅಲ್ಲಮ ಮುಕ್ತಾಯಕ್ಕರ ಸಾನಿದ್ಯದಲ್ಲಿ ನಾವಿರುವ ಭಾವನೆ ಬಂತು

Leave a Reply