ಕರ್ನಾಟಕ ಗುರುಪಂಥ : ಒಂದು ಮಹತ್ವದ ಸಂಶೋಧನಾ ಕೃತಿ

ಕರ್ನಾಟಕ ದಾರ್ಶನಿಕ‌ ಪಂಥಗಳನ್ನು ಕುರಿತ ರಹಮತ್ ತರಿಕೆರೆಯವರ ನಾಲ್ಕನೆಯ ಪುಸ್ತಕ “ಕರ್ನಾಟಕ ಗುರುಪಂಥ” ಅಚ್ಚಿನಿಂದ ಈಗ ಹೊರಬಂದಿದೆ. ಹಂಪಿ ವಿವಿ ಪ್ರಸಾರಾಂಗ ಈ ಕೃತಿಯನ್ನು ಪ್ರಕಟಿಸಿದ್ದು, ಈ ಕೃತಿಯ ಅರಿಕೆಯ ಭಾಗವನ್ನು ಇಲ್ಲಿ ಕೊಡಲಾಗಿದೆ.

ಕರ್ನಾಟಕದ ಜನಬದುಕಿನಲ್ಲಿ ಬೇರು ತಳೆದಿರುವ ವಿವಿಧ ದಾರ್ಶನಿಕ ಪಂಥಗಳ ಮೇಲೆ ಹುಡುಕಾಟ ಮಾಡುವ ಇರಾದೆಯ ಫಲವಾಗಿ, ಈತನಕ ಸೂಫಿ ನಾಥ ಶಾಕ್ತ ಕುರಿತ ಕೃತಿಗಳು ಹೊರಬಂದವು. ಈ ಸರಣಿಯಲ್ಲಿದು ನಾಲ್ಕನೆಯದು. ಬರುವ ದಿನಗಳಲ್ಲಿ `ಕರ್ನಾಟಕ ಧಮ್ಮಪಂಥ’ವನ್ನು ತರುವ ಉದ್ದೇಶವಿದೆ. ಮೇಲ್ಕಾಣಿಸಿದ ಐದೂ ದಾರ್ಶನಿಕ ಪಂಥಗಳು ಸಮುದಾಯಗಳ ಚಿಂತನೆ ಮತ್ತು ಬದುಕಿನ ಕ್ರಮಗಳನ್ನು ಪ್ರಭಾವಿಸಿವೆ; ಅವರ ಬಾಳಹೊಲದಲ್ಲಿ ಬೀಜಗಳಾಗಿ ಬಿತ್ತನೆಗೊಂಡು ಹೊಸ ಮರಗಳಾಗಿ ರೂಪುಪಡೆದಿವೆ. ಈ ಪಂಥಗಳಲ್ಲಿರುವ ದರ್ಶನವೆಂಬ ಹಂದರಕ್ಕೆ ಭಾಷೆ ಸಾಹಿತ್ಯ ಸಂಗೀತ ರಂಗಭೂಮಿ ಆಚರಣೆಗಳು ಬಳ್ಳಿಯಂತೆ ಸುತ್ತಿಕೊಂಡಿವೆ. ಈ ದೃಷ್ಟಿಯಿಂದ ಈ ದಾರ್ಶನಿಕ ಪಂಥಗಳು ಹಲವು ಬಣ್ಣದ ನೂಲಿನಿಂದ ನೇದ ವಸ್ತ್ರಗಳು.

ಗುರು-ಶಿಷ್ಯ ಪರಂಪರೆಯುಳ್ಳ, ತನ್ನೊಳಗೆ ಹಲವಾರು ಮಾರ್ಗಗಳನ್ನೂ ದಾರ್ಶನಿಕ ಪ್ರಸ್ಥಾನಗಳನ್ನೂ ಒಳಗೊಂಡಿರುವ ಒಂದು ವಿಶಾಲ ಪರಿಕಲ್ಪನೆಯಾಗಿ ಗುರುಪಂಥ'ವನ್ನು ಇಲ್ಲಿ ಪರಿಗ್ರಹಿಸಲಾಗಿದೆ. ತಾತ್ವಿಕವಾಗಿ ಶರಣ ನಾಥ ಸೂಫಿಗಳು ಗುರುಪಂಥಗಳೇ. ಆದರೆ ಅವನ್ನು ಹೊರತುಪಡಿಸಿಗುರುಪಂಥ’ದ ಪರಿಕಲ್ಪನೆಯನ್ನು ಇಲ್ಲಿ ಕಟ್ಟಿಕೊಳ್ಳಲಾಗಿದೆ. ಈ ಪರಿಕಲ್ಪನೆಯೊಳಗೆ, ಕಳೆದ ನಾಲ್ಕು ಶತಮಾನದ ಹರಹಿನಲ್ಲಿ ಕಾಣಿಸಿಕೊಳ್ಳುವ ಮುನ್ನೂರಕ್ಕೂ ಮಿಕ್ಕ ಯೋಗಿಗಳೂ ತತ್ವಪದಕಾರರೂ ಬರುತ್ತಾರೆ; ಅದ್ವೈತ ಅದ್ವಯ ಮುಂತಾದ ದಾರ್ಶನಿಕ ಪ್ರಸ್ಥಾನಗಳೂ, ಆರೂಢ ಅವಧೂತ ಅಚಲದಂತಹ ಮಾರ್ಗಗಳೂ ಹಾಗೂ ಇಂಚಗೇರಿ ಗುಡಿಕಲ್ ಸಿದ್ಧಾರೂಢ ಮುಂತಾದ ಪರಂಪರೆಗಳೂ ಬರುತ್ತವೆ. ಹೀಗಾಗಿ `ಗುರುಪಂಥ’ವೆಂಬ ಪರಿಕಲ್ಪನೆಯು ಮೇಲ್ನೋಟಕ್ಕೆ ಏಕರೂಪಿಯಾಗಿ ತೋರಿದರೂ, ವಾಸ್ತವದಲ್ಲಿ ಅದೊಂದು ಬಹುರೂಪಿ ಜಗತ್ತು.

ಕರ್ನಾಟಕ ಸಂಸ್ಕೃತಿಯು ಸೃಷ್ಟಿಸಿರುವ ವರ್ಣರಂಜಿತ ಅಧ್ಯಾಯಗಳಂತಿರುವ ಮೇಲ್ಕಾಣಿಸಿದ ದಾರ್ಶನಿಕ ಪಂಥಗಳನ್ನು, ಬೇರೆಬೇರೆ ಜ್ಞಾನಶಾಸ್ತ್ರದವರು ತಮ್ಮ ವಿಧಾನಗಳಲ್ಲಿ ಅನುಸಂಧಾನಿಸುವ ಅಗತ್ಯವಿದೆ. ಈ ಅನುಸಂಧಾನದಲ್ಲಿ ಸೃಷ್ಟಿಯಾಗುವ ತಿಳುವಳಿಕೆಯು, ಕರ್ನಾಟಕದ ದರ್ಶನ ಭಾಷೆ ಸಾಹಿತ್ಯ ಜಾತಿ ಧರ್ಮ ಕಸುಬು ಪ್ರಭುತ್ವ ಹಾಗೂ ಸಂಗೀತಾದಿ ಕಲೆಗಳನ್ನು, ಸಮುದಾಯ ಪ್ರಜ್ಞೆಯ ನೆಲೆಯಲ್ಲಿ ಅರಿಯಲು ನೆರವಾಗಬಹುದು. ಇದಕ್ಕಾಗಿ ಈ ಪಂಥಗಳನ್ನು ಪ್ರಶ್ನಾತೀತವೆಂದು ಸ್ವೀಕರಿಸುವುದಾಗಲೀ, ವೈಚಾರಿಕ ಬಿರುಸಿನಲ್ಲಿ ಬದಿಗೆ ತಳ್ಳುವುದಾಗಲೀ ಅಗತ್ಯವಿಲ್ಲ. ಬದಲಿಗೆ, ಆಸ್ಥೆ ಮತ್ತು ವಿಮರ್ಶಾತ್ಮಕ ಎಚ್ಚರದಿಂದ ತಡಕುವ, ತಿಳಿವ, ಮರು ವ್ಯಾಖ್ಯಾನಿಸುವ ಹಾದಿಗಳನ್ನು ಸೋಸಬೇಕಿದೆ. ಯಾವುದೇ ದಾರ್ಶನಿಕ ಪಂಥಗಳು ಕೈಚಾಚಿದರೆ ಸಲೀಸಾಗಿ ವರ್ತಮಾನಕ್ಕೆ ಒದಗುವ ಶಸ್ತ್ರಾಗಾರಗಳಲ್ಲ. ಭೂಗರ್ಭದ ಅದಿರಿನಂತಿರುವ ಅವನ್ನು ಹೊರತೆಗೆದು, ಕರಗಿಸಿ, ಕಸರು ತೆಗೆದು ಲೋಹಗೊಳಿಸಿ, ಹತ್ಯಾರ ಮಾಡಿಕೊಳ್ಳಬಹುದು; ಈ ಪ್ರಕ್ರಿಯೆಯಲ್ಲಿ ಪಡೆವ ಅನುಭವ-ಅರಿವು- ಕುಶಲತೆಗಳನ್ನು, ಆಧುನಿಕ ಜ್ಞಾನಶಾಸ್ತ್ರಗಳಲ್ಲೂ ಚಳುವಳಿಗಳಲ್ಲೂ ಕಲೆಗಳಲ್ಲೂ ಹೊಸನೆತ್ತರಾಗಿ ಹರಿಸಬಹುದು. ಪರಂಪರೆಯ ಜತೆ ಜೀವಂತ ಸಂಬಂಧ ಏರ್ಪಡಿಸಿಕೊಳ್ಳುವ ಒಂದು ಕ್ರಮವಿದು.

ಈ ಆಶಯವನ್ನು ಇಟ್ಟುಕೊಂಡು ಕರ್ನಾಟಕ ಗುರುಪಂಥವನ್ನು ಅರ್ಥ ಮಾಡಿಕೊಳ್ಳಲು ಹಲವಾರು ವರ್ಷ ನಾಡನ್ನು ಅಲೆದಾಡಿದೆ; ಜನರನ್ನು ಮುಖಾಬಿಲೆ ಮಾಡಿದೆ; ತತ್ವಪದಗಳ ಹಾಡಿಕೆಯಿಂದ ಇಂಪಾದ ಹಾಗೂ ಸತ್ಸಂಗಗಳಿಂದ ಜಿಜ್ಞಾಸಾ ಭರಿತವಾಗಿದ್ದ ರಾತ್ರಿಗಳನ್ನು ಕಳೆದೆ. ಜನರೊಟ್ಟಿಗೆ ನಡೆಸಿದ ಈ ಮಾತುಕತೆ, ಆಲಿಸಿದ ಹಾಡು ಹಾಗೂ ಕಂಡ ಆಚರಣೆಗಳನ್ನು ಇಟ್ಟುಕೊಂಡು ಮಾಡಿದ ಚಿಂತನೆ ಈ ಕೃತಿಯಲ್ಲಿದೆ. ಇದು, ದಾರ್ಶನಿಕ ಪಂಥಗಳಲ್ಲಿ ಸಾಮಾನ್ಯ ಆಸಕ್ತಿಯುಳ್ಳವರೂ ಓದುವಂತೆ ಆಗಬೇಕೆಂದು ಸರಳವಾಗಿ ಕಟ್ಟಿರುವ ಸಾಂಸ್ಕೃತಿಕ ಕಥನ. ಇದರ ಉದ್ದೇಶ ಆಳವಾದ ತತ್ವಶಾಸ್ತ್ರೀಯ ಜಿಜ್ಞಾಸೆಯಲ್ಲ. ಬದಲಿಗೆ ಗುರುಪಂಥವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಜನ ಸೃಷ್ಟಿಸಿರುವ ವಿವಿಧ ಮುಖಗಳ ಸಾಂಸ್ಕೃತಿಕ ವಿಶ್ಲೇಷಣೆ ಮತ್ತು ವ್ಯಾಖ್ಯಾನ.

ಗುರುಪಂಥದ ಭಾಷೆ ಕಾವ್ಯ ಹಾಡು ನಂಬಿಕೆ ಆಚರಣೆಗಳು, ಕೇವಲ ಕಲಾಭಿವ್ಯಕ್ತಿಯ ವಿಧಾನಗಳಲ್ಲ. ಜ್ಞಾನಾನುಸಂಧಾನದ ಜಾಡುಗಳೂ ಹೌದು. ಸಂಘರ್ಷಗಳು ಜೀವಂತವಾಗಿರುವ ಸಮಾಜದಲ್ಲಿ ಅಧ್ಯಯನಕ್ಕೆಂದು ತುಡುಕುವ ಯಾವುದೇ ವಸ್ತುವಿನೊಳಗೆ, ಭಾಷೆ ಸಾಹಿತ್ಯ ಸಮಾಜ ರಾಜಕಾರಣ ಸಂಗೀತ ರಂಗಭೂಮಿಗಳಿಗೆ ಸಂಬಂಧಿಸಿದ ಆಯಾಮಗಳು ಹಾಸುಹೊಕ್ಕಾಗಿರುತ್ತವೆ. ಈ ಬಹು ಆಯಾಮಗಳನ್ನು ಹಲವು ಜ್ಞಾನಶಿಸ್ತುಗಳ ಮೂಲಕ ಪ್ರವೇಶಿಸಿಯೇ ಗ್ರಹಿಸಬೇಕು. ಆಗ ಸಮಾಜವನ್ನು ಹೆಚ್ಚು ಅರ್ಥಪೂರ್ಣವಾಗಿ ಗ್ರಹಿಸಲು ಸಾಧ್ಯ. ತಿಳಿವನ್ನು ಕಟ್ಟಿಕೊಳ್ಳುವ ಈ ಹಾದಿಯನ್ನು ಸ್ಥೂಲವಾಗಿ ಸಾಂಸ್ಕೃತಿಕ ಅಧ್ಯಯನ ವಿಧಾನ ಎನ್ನಬಹುದು. ಈ ವಿಧಾನದ ಮೂಲಕ ಗುರುಪಂಥದೊಳಗಿನ ವಿವಿಧ ಘಟಕಗಳನ್ನೂ, ಅವಕ್ಕಿರುವ ಪರಸ್ಪರ ನಂಟನ್ನೂ ಇಲ್ಲಿ ಪರಿಶೀಲಿಸಲು ಯತ್ನಿಸಿದೆ. ಸಾಧಕ ವಿಶಿಷ್ಟ ಅನುಭವವನ್ನು ಸಾಂಕೇತಿಕ ಭಾಷೆಯಲ್ಲಿ ಅಭಿವ್ಯಕ್ತಿಸುವ ಪದ್ಧತಿಯಿರುವ ಎಲ್ಲ ಪಂಥಗಳಲ್ಲಿ, ಕೆಲವು ಸಂಗತಿಗಳು ಒಗಟಿನಂತಿರುತ್ತವೆ. ಅವು ಪೂರಾ ಅರ್ಥವಾಗದೆ ಉಳಿಯುತ್ತವೆ. ಅವನ್ನು ಸಾಧಕರಲ್ಲದವರು ಅರ್ಥೈಸುವಾಗ ಸಂಭವಿಸುವ ಪರಿಮಿತಿಗಳು ಈ ಕೃತಿಯಲ್ಲಿರುವ ಸಾಧ್ಯತೆಗಳಿವೆ. ಹೀಗಾಗಿ ಮುಂದಿನ ತಿದ್ದುಪಡಿಗೆ ಬೇಕಾಗಿ ಪ್ರತಿಕ್ರಿಯಿಸಬೇಕು ಎಂದು ಕೋರುತ್ತೇನೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.