ಓಶೋ ಹೇಳಿದ ಸುಂದರ ಯುವತಿಯ ಕಥೆ

ಯುವಕ ಆಶ್ಚರ್ಯದಿಂದ ಹಿಂತಿರುಗಿ ನೋಡಿದ, ಮನೆ, ಉದ್ಯಾನವನ, ನದಿ ಎಲ್ಲ ಮಾಯವಾಗಿದ್ದವು. ರತ್ನ ಖಚಿತ ಚಪ್ಪಲಿಗಳೂ ಕಾಣೆಯಾಗಿದ್ದವು. ಅವನ ಸುತ್ತ ಖಾಲಿ ಆವರಿಸಿಕೊಂಡಿತ್ತು… | ಓಶೋ ಹೇಳಿದ ಕಥೆ, ಚಿದಂಬರ ನರೇಂದ್ರ ಅನುವಾದದಲ್ಲಿ

ಚೈನಾದ ಒಂದು ಪ್ರಾಂತ್ಯದಲ್ಲಿ ಅಚಾನಕ್ ಆಗಿ ಒಬ್ಬ ಸುಂದರ ಹರೆಯದ ಹುಡುಗಿ ಪ್ರತ್ಯಕ್ಷಳಾದಳು. ಸುತ್ತಮುತ್ತಲಿನ ಜನ ಅವಳನ್ನ ಯಾವತ್ತೂ ನೋಡಿರಲಿಲ್ಲ. ಅವಳ ಸೌಂದರ್ಯದ ಪ್ರಭೆ ಎಷ್ಟಿತ್ತೆಂದರೆ ಇಡೀ ಊರಿನ ಜನ ಅವಳನ್ನು ನೋಡಲು ಹಾಜರಾದರು. ಸುಮಾರು 300 ಯುವಕರು ಅವಳನ್ನು ಮದುವೆಯಾಗುವ ಬಯಕೆ ವ್ಯಕ್ತಪಡಿಸಿದರು.

“ ನಾನು ಒಬ್ಬನನ್ನು ಮಾತ್ರ ಮದುವೆಯಾಗಬಹುದು. ನಿಮಗೆ 24 ಗಂಟೆ ಸಮಯಾವಕಾಶ ಕೊಡುತ್ತೇನೆ, ಯಾರು ಬುದ್ಧನ ಲೋಟಸ್ ಸೂತ್ರವನ್ನ ಬಾಯಿಪಾಠ ಮಾಡಬಲ್ಲರೋ ನಾನು ಅವರನ್ನ ಮದುವೆಯಾಗುತ್ತೇನೆ “ ಯುವತಿ ತನ್ನ ನಿರ್ಧಾರವನ್ನು ತಿಳಿಸಿದಳು. ಇಡೀ 24 ಗಂಟೆ ಯುವಕರು ಬುದ್ಧನ ಲೋಟಸ್ ಸೂತ್ರ ಬಾಯಿಪಾಠ ಮಾಡುವ ಪ್ರಯತ್ನ ಮಾಡಿದರು.

ಮರುದಿನ ಯುವತಿಯ ಎದುರು 10 ಯುವಕರು ಮಾತ್ರ ಲೋಟಸ್ ಸೂತ್ರವನ್ನು ತಪ್ಪಿಲ್ಲದೇ ಪಠಿಸಿ ಯಶಸ್ವಿಯಾದರು. “ 10 ಜನರನ್ನು ಮದುವೆಯಾಗುವುದು ಅಸಾಧ್ಯ, ಮತ್ತೆ ನಿಮಗೆ 24 ಗಂಟೆ ಸಮಯ ಕೊಡುತ್ತೇನೆ, ಯಾರು ಲೋಟಸ್ ಸೂತ್ರದ ಅರ್ಥವನ್ನು ಸರಿಯಾಗಿ ಹೇಳುವರೋ ಅವರನ್ನ ಮದುವೆಯಾಗಲು ನನ್ನ ಒಪ್ಪಿಗೆ ಇದೆ” ಯುವತಿ ಮತ್ತೆ ತನ್ನ ಪಂಥವನ್ನು ವಿಸ್ತರಿಸಿದಳು.

10 ಜನ ಯುವಕರ ತಮ್ಮ ಬಳಿ ಇದ್ದ ಗ್ರಂಥಗಳನ್ನೆಲ್ಲ ಹುಡುಕಾಡಿದರು, ತಮಗೆ ಪರಿಚಯ ಇದ್ದ ವಿದ್ವಾಂಸರ ಜೊತೆ ಚರ್ಚೆ ಮಾಡಿ ಲೋಟಸ್ ಸೂತ್ರದ ಅರ್ಥ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.

ಲೋಟಸ್ ಸೂತ್ರದ ಅರ್ಥ ತಿಳಿದುಕೊಂಡ ಮೂವರು ಯುವಕರು, ಯುವತಿಯ ಎದುರು ತಮ್ಮ ತಿಳಿವನ್ನು ಪ್ರದರ್ಶನ ಮಾಡಿದರು. ಮೂವರ ಉತ್ತರದಿಂದ ತೃಪ್ತಳಾದ ಯುವತಿ “ಮೂವರ ಉತ್ತರವೂ ಸರಿಯಾಗಿದೆ ಆದರೆ ಮೂವರನ್ನು ಹೇಗೆ ಮದುವೆಯಾಗಲಿ? ನಿಮಗೆ ಮತ್ತೆ ಒಂದು ದಿನದ ಸಮಯ ಕೊಡುತ್ತೇನೆ ಯಾರು ಲೋಟಸ್ ಸೂತ್ರದ ತಿಳಿವನ್ನು ಅನುಭವಿಸುತ್ತಾರೋ, ನಾನು ಅವರನ್ನು ಮದುವೆಯಾಗುತ್ತೇನೆ” ಎಂದು ಕರಾರು ಹಾಕಿದಳು.

ಮರುದಿನ ಒಬ್ಬ ಯುವಕ ಮಾತ್ರ ಹಾಜರಾದ. ಅವನ ವ್ಯಕ್ತಿತ್ವದಿಂದ ಲೋಟಸ್ ಸೂತ್ರದ ಘಮ ಹೊರಸೂಸುತ್ತಿತ್ತು. ಯುವತಿಗೆ ಬಹಳ ಸಂತೋಷವಾಯಿತು. ಅವಳು ಆ ಯುವಕನನ್ನು ಊರ ಹೊರಗಿನ ತನ್ನ ಭವ್ಯ ಮನೆಗೆ ಕರೆದುಕೊಂಡು ಹೋದಳು. ಅವಳ ಮನೆ ಕನಸಿನ ಲೋಕದಂತಿತ್ತು. ಮನೆಯ ಬಾಗಿಲಲ್ಲಿ ಯುವತಿಯ ತಂದೆ ತಾಯಿ ಯುವಕನನ್ನು ಸ್ವಾಗತಿಸಲು ಕಾದು ನಿಂತಿದ್ದರು. ಯುವಕ ಅವರೊಡನೆ ಮಾತನಾಡುತ್ತ ನಿಂತ, ಯುವತಿ ತನ್ನ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಳು.

ಸ್ವಲ್ಪ ಸಮಯದ ನಂತರ ಯುವತಿಯ ಅಪ್ಪ, “ನನ್ನ ಮಗಳು ನಿನಗಾಗಿ ಆ ಕೋಣೆಯೊಳಗೆ ಕಾಯುತ್ತಿದ್ದಾಳೆ, ಒಳಗೆ ಹೋಗು” ಎಂದು ಯುವಕನನ್ನು ಬಿಳ್ಕೊಟ್ಟ. ಯುವಕ ಕೋಣೆಯನ್ನು ಪ್ರವೇಶ ಮಾಡಿದ. ಕೋಣೆಯಲ್ಲಿ ಯುವತಿ ಇರಲಿಲ್ಲ, ಉದ್ಯಾನವನಕ್ಕೆ ಹೋಗುವ ಬಾಗಿಲು ತೆರೆದಿತ್ತು. ಯುವಕ ಉದ್ಯಾನವನದ ಉದ್ದಕ್ಕೂ ನಡೆದುಕೊಂಡು ಬಂದ. ಎಲ್ಲೂ ಯುವತಿಯ ಸುಳಿವು ಸಿಗಲಿಲ್ಲ. ಉದ್ಯಾನವನದ ಕೊನೆಗೆ ಸುಂದರ ನದಿಯೊಂದು ಪ್ರಶಾಂತವಾಗಿ ಹರಿಯುತ್ತಿತ್ತು. ಯುವಕ ನದಿಯ ಹತ್ತಿರ ಹೋದ, ಅಲ್ಲಿಯೂ ಯುವತಿ ಕಾಣಿಸಲಿಲ್ಲ. ನದಿಯ ದಂಡೆಯ ಮೇಲೆ ಒಂದು ಜೊತೆ ರತ್ನ ಖಚಿತ ಚಪ್ಪಲಿಗಳಿದ್ದವು. ಯುವಕ ಆಶ್ಚರ್ಯದಿಂದ ಹಿಂತಿರುಗಿ ನೋಡಿದ, ಮನೆ, ಉದ್ಯಾನವನ, ನದಿ ಎಲ್ಲ ಮಾಯವಾಗಿದ್ದವು. ರತ್ನ ಖಚಿತ ಚಪ್ಪಲಿಗಳೂ ಕಾಣೆಯಾಗಿದ್ದವು. ಅವನ ಸುತ್ತ ಖಾಲಿ ಆವರಿಸಿಕೊಂಡಿತ್ತು.

ಯುವಕ ಜೋರಾಗಿ ನಗತೊಡಗಿದ, ನನಗೆ ಮದುವೆಯಾಯಿತು ಎಂದು ಕುಣಿದು ಕುಪ್ಪಳಿಸತೊಡಗಿದ. ಯುವಕ ನಿರ್ವಾಣವನ್ನು ಸಾಧಿಸಿದ್ದ.

ಆ ಯುವತಿ ಝೆನ್ ಮಾಸ್ಟರ್ ನ ಸಂಕೇತ ಆಗಿದ್ದಳು.
ಆಕೆ ಆ ಯುವಕನನ್ನ ನಿಧಾನಕ್ಕೆ ಮುನ್ನಡೆಸಿದಳು.
ಮೊದಲು, ಲೋಟಸ್ ಸೂತ್ರದ ಪಠಣ,
ನಂತರ ಲೋಟಸ್ ಸೂತ್ರದ ಮನನ,
ಆಮೇಲೆ ಕಮಲ ಸೂತ್ರವನ್ನು ಬದುಕುವುದು
ಈ ಮೂರರಲ್ಲಿ ಯಶಸ್ವಿಯಾದ ನಂತರ ಆ ಯುವಕನನ್ನು ಶೂನ್ಯದೊಳಗೆ ಪ್ರವೇಶ ಮಾಡಿಸಿದಳು.

Leave a Reply