ಎಲ್ಲಿ ವ್ಯತ್ಯಾಸ ಸಾಧ್ಯವಾಗುತ್ತದೆಯೋ ಅಲ್ಲಿ ಒಂದಲ್ಲ ಒಂದು ದಿನ ಅಂತ್ಯವಿರುತ್ತದೆ. ಯಾವುದು ದೃಢವಾಗಿ ನಿಂತಿರುತ್ತದೆಯೊ ಅದು ಎಂದಿಗೂ ಶಾಶ್ವತ ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು
ಮನಸ್ಸು ಮತ್ತು ಆತ್ಮ ಎಂದರೆ ಏನು? ಅವೆರಡೂ ಒಂದೆಯೇ? ಮನಸ್ಸಿನ ಕೆಲಸ ಏನು? ಅದರ ಶಕ್ತಿ ಎಷ್ಟು ಎಂಬ ಪ್ರಶ್ನೆಗಳಿಗೆ ಸ್ವಾಮಿ ರಾಮತೀರ್ಥರು ತಮ್ಮ ಪ್ರವಚನದಲ್ಲಿ ಹೀಗೆ ಉತ್ತರಿಸುತ್ತಾರೆ:
ಒಬ್ಬ ಮನುಷ್ಯನಿಗೆ ಒಂದು ಮಟ್ಟದವರೆಗೂ ದೇಹಶಕ್ತಿ ಇರುತ್ತದೆ, ಅದು ಕೆಲವು ಕೆಲಸಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ದೇಹ ಶಕ್ತಿಯು ಎಲ್ಲಾ ಮನುಷ್ಯರಲ್ಲೂ ಒಂದೇತರಹ ಇರುವುದಿಲ್ಲ. ಒಬ್ಬ ಮನುಷ್ಯನಿಗೆ ದೇಹ ಶಕ್ತಿ ಅತ್ಯಂತ ದೃಢವಾಗಿ ಇರುತ್ತದೆ. ಕೆಲವು ಮನುಷ್ಯರಿಗೆ ದೇಹಶಕ್ತಿ ಅತ್ಯಂತ ಕಡಿಮೆ ಇರುತ್ತದೆ, ಆದರೆ ಈ ಶಕ್ತಿಯಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಕಡಿಮೆ ಶಕ್ತಿ ಇರುವವನು ದೃಢವಾಗಬಹುದು, ದೃಢವಾಗಿ ಇರುವ ಮನುಷ್ಯನು ಬಲಹೀನನಾಗಬಹುದು, ಇವೆರೆಡೂ ಸಾಧ್ಯ. ಏಕೆಂದರೆ ಈ ಶಕ್ತಿಯು ನಾವು ಸೇವಿಸುವ ಆಹಾರ, ನಾವು ಮಾಡುವ ವ್ಯಾಯಾಮಗಳ ಮೇಲೆ ನಿಂತಿದೆ, ನಾವು ಅತ್ಯಂತ ಹೆಚ್ಚು ಸಮಯ ಬದುಕಬೇಕೆಂದರೆ ನಾವು ಚೆನ್ನಾಗಿ ಆಹಾರ ಸೇವೆ ಹಾಗು ವ್ಯಾಯಾಮವನ್ನು ಮಾಡಬೇಕು.
ಇನ್ನೊಂದು ತರಹದ ಶಕ್ತಿ ಮನುಷ್ಯನಲ್ಲಿ ಇರುತ್ತದೆ. ಅದು ಮನಶ್ಶಕ್ತಿ. ನಮ್ಮ ಮನಸ್ಸಿಗೆ ಏನು ಬೇಕಾದರು ಊಹಿಸಿಕೊಳ್ಳುವ, ಯೋಚಿಸುವ ಸಾಮರ್ಥ್ಯವಿದೆ. ನಮ್ಮ ದೇಹದ ಶಕ್ತಿಯು ಈ ಮನಸ್ಸಿನ ಶಕ್ತಿಯಿಂದಲೆ ಕೆಲಸ ಮಾಡುವುದು. ನಮ್ಮ ಮನಸ್ಸಿಗೆ ಒಂದು ಕಟ್ಟಡವನ್ನೇ ಎತ್ತುವಷ್ಟು ಶಕ್ತಿ ಇರುತ್ತದೆ, ಆದರೆ ನಮ್ಮ ದೇಹ ಅದಕ್ಕೆ ಸಹಕರಿಸುವುದಿಲ್ಲ, ಏಕೆಂದರೆ ಇದು ಪರಿಸರದ ನಿಯಮ.
ಆದರೆ ಕೆಲವರಲ್ಲಿ ಈ ಮನಸ್ಸಿನ ಶಕ್ತಿಯೇ ಇರುವುದಿಲ್ಲ, ಕೆಲವರಿಗೆ ಸ್ವಲ್ಪ ಕಡಿಮೆ ಇರುತ್ತದೆ, ಕೆಲವರಿಗೆ ಅತ್ಯಂತ ಜಾಸ್ತಿ ಇರುತ್ತದೆ. ದೇಹಶಕ್ತಿಯಲ್ಲಿ ಆಗುವಂತೆ ಈ ಶಕ್ತಿಯಲ್ಲೂ ವ್ಯತ್ಯಾಸಗಳು ಆಗಬಹುದು, ಆಗಿದ್ದು ನಮ್ಮ ಇತಿಹಾಸದಲ್ಲಿ ಇದೆ, ಬುದ್ದಿವಂತರು ದಡ್ಡರಾಗಬಹುದು, ದಡ್ಡರು ಭುದ್ದಿವಂತರಾಗುವುದಕ್ಕೆ ತೆನಾಲಿ ರಾಮಕೃಷ್ಣ ಹಾಗು ಕವಿರತ್ನ ಕಾಳಿದಾಸರಿಗಿಂತ ಒಳ್ಳೆಯ ಉದಾಹರಣೆ ನಮಗೆ ಸಿಗುವುದಿಲ್ಲ. ಹೀಗಾಗಿ ಈ ಶಕ್ತಿಗೂ ಒಂದು ಅಂತ್ಯವೆಂಬುದು ಇರುತ್ತದೆ. ಎಲ್ಲಿ ವ್ಯತ್ಯಾಸ ಸಾಧ್ಯವಾಗುತ್ತದೆಯೋ ಅಲ್ಲಿ ಒಂದಲ್ಲ ಒಂದು ದಿನ ಅಂತ್ಯವಿರುತ್ತದೆ. ಯಾವುದು ದೃಢವಾಗಿ ನಿಂತಿರುತ್ತದೆಯೊ ಅದು ಎಂದಿಗೂ ಶಾಶ್ವತ.
ಹಾಗಾದರೆ ಈ ಶಾಶ್ವತ ಯಾವುದು? ನಮ್ಮೊಳಗಿನ ಶಾಶ್ವತ ಶಕ್ತಿ ಎಂದರೆ ನಮ್ಮ ಜೀವಾಳ, ನಮ್ಮ ಆತ್ಮ. ನಮ್ಮ ಆತ್ಮದಲ್ಲಿ ಆ ರಾಮ ಎಂದಿಗೂ ನೆಲೆಸಿರುತ್ತಾನೆ, ನಾವು ಬದುಕಿರುವದಕ್ಕೆ ಕಾರಣವೇ ಆತ್ಮ.
ಒಂದು ಸಣ್ಣ ಉದಾಹರಣೆ ನೋಡಿ; ಒಮ್ಮೆ ಒಂದು ಚಿಕ್ಕ ಮಗು ತನ್ನ ಮನೆಯಲ್ಲಿ ಆಟವಾಡುತ್ತಿರುತ್ತದೆ, ಆ ಮಗುವಿನ ತಾಯಿ ತನ್ನ ಮನೆಯ ಕೆಲಸದಲ್ಲಿ ಮುಳುಗಿರುತ್ತಾಳೆ. ಆ ಮಗು ಆಟವಾಡುತ್ತಾ ಒಂದು ಕೋಣೆಗೆ ಹೋಗುತ್ತದೆ. ಅಲ್ಲಿ ಅದು ಒಂದು ಕನ್ನಡಿಯನ್ನು ಮೊದಲ ಬಾರಿಗೆ ನೋಡುತ್ತದೆ. ನಮ್ಮೆಲ್ಲರಿಗು ತಿಳಿದಂತೆ ಮಕ್ಕಳಿಗೆ ಕುತೂಹಲ ಅತ್ಯಂತ ಹೆಚ್ಚು. ಹೀಗಾಗಿ ಆ ಮಗು ಅದರ ಬಳಿ ಹೋಗಿ ನೋಡುತ್ತದೆ. ಆಗ ಅದಕ್ಕೆ ಆಶ್ಚರ್ಯವಾಗುತ್ತದೆ. ಅರೇ! ಇನ್ನೊಂದು ಮಗು, ತನ್ನಂತೆ ನಿಂತುಕೊಂಡು ನೋಡುತ್ತಿದೆ, ಮಕ್ಕಳಿಗೆ ಇನ್ನೊಂದು ಮಗುವನ್ನು ನೋಡಿದರೆ ಕೀಟಲೆ ಮಾಡಬೇಕು ಎನ್ನಿಸುತ್ತದೆ. ಆ ಮಗು ಕೂಗುತ್ತದೆ, ಕನ್ನಡಿಯಲ್ಲಿದ್ದ ಮಗುವು ಕೂಗುತ್ತದೆ, ಈ ಮಗು ಕನ್ನಡಿಯ ಹತ್ತಿರ ಹೋದಂತೆ ಅದು ಹತ್ತಿರ ಹತ್ತಿರ ಬರುತ್ತದೆ, ಕಡೆಗೆ ಈ ಮಗು ಕನ್ನಡಿಯನ್ನು ದೂಕುತ್ತದೆ ಆಗ ಕನ್ನಡಿಯು ಬಿದ್ದು ಕನ್ನಡಿ ಚೂರು ಚೂರಾಗುತ್ತದೆ. ಆಗ ಆ ಮಗುವಿಗೆ ಆಶ್ಚರ್ಯವಾಗುವುದೇನೆಂದರೆ, ಮೊದಲು ಒಂದು ಮಗು ಕಾಣುತ್ತಿತ್ತು ಆದರೆ ಈಗ ನಾಲ್ಕು ಮಗು ಕಾಣಿಸುತ್ತಿದೆ!
ಕನ್ನಡಿಯು ನಾಲ್ಕು ಚೂರಾಗಿದೆ, ಆದರೆ ಎಲ್ಲಾ ಕನ್ನಡಿಯಲ್ಲು ಕಾಣಿಸುತ್ತಿರುವುದು ಒಂದೇ ಮಗುವಿನ ರೂಪ. ಹೀಗೆ ಆತ್ಮವೂ ಅಷ್ಟೆ, ಈ ಆತ್ಮದಲ್ಲಿ ಆ ಪರಮಾತ್ಮ ನೆಲಸಿರುತ್ತಾನೆ. ಆ ಆತ್ಮದ ರೂಪವೇ ಮನಸ್ಸು, ಆ ಮನಸ್ಸಿನ ರೂಪವೇ ದೇಹ. ಈ ಎಲ್ಲಾ ಶಕ್ತಿಗೂ ಮೂಲ ಆತ್ಮ, ಎಂದರೆ ಆ ಪರಮಾತ್ಮ. ಆತ್ಮದ ಶಕ್ತಿಗೆ ಅಂತ್ಯವಿಲ್ಲ, ವ್ಯತ್ಯಾಸವಿಲ್ಲ, ಅದು ಎಂದಿಗೂ ಒಂದು ದೃಢವಾದ ಶಿಖರ. ಅದರ ಬಾಹ್ಯ ರೂಪ ಮಾತ್ರ ಬದಲಾಗುತ್ತಿರುತ್ತದೆ ಎಂದು ಸ್ವಾಮಿ ರಾಮತೀರ್ಥರು ಹೇಳುತ್ತಾರೆ.