ಅಕ್ಕ, ಲಲ್ಲಾ, ರಾಬಿಯಾ… 3 ಪದ್ಯಗಳು

ಹೆಣ್ತನ ಸಹಜವಾಗಿ ಅಧ್ಯಾತ್ಮ ಪ್ರವೃತ್ತಿಯನ್ನು ಹೊಂದಿರುವಂಥದ್ದು. ಹೆಣ್ತನ ಅಂದರೆ ಹೆಣ್ಣಿನ ದೇಹವಲ್ಲ, ಹೆಣ್ಣಿನ ಭಾವ. ಆದ್ದರಿಂದಲೇ ಗಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರೆ ಆತ ಹೆಣ್ತನವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಹೆಣ್ಣು ಹೆಚ್ಚು ಕಷ್ಟವಿಲ್ಲದೆ ಸಹಜವಾಗಿ ತನ್ನ ಅಂತರಂಗವನ್ನು ಕಂಡುಕೊಂಡು ಸಾಧಕಿಯಾಗುತ್ತಾಳೆ. ಮಹಿಳಾ ದಿನದ ಪ್ರಯುಕ್ತ ಇಲ್ಲಿ ಮೂವರು ಅಧ್ಯಾತ್ಮ ಸಾಧಕಿಯರ ಚಿಕ್ಕ ರಚನೆಗಳನ್ನು ನೀಡಲಾಗಿದೆ…

ಅಕ್ಕಮಹಾದೇವಿ

ಅಯ್ಯಾ, ಸರ್ವಮೂಲಹಂಕಾರವಿಡಿದು
ಕುಲಭ್ರಮೆ ಲಭ್ರಮೆ ಜಾತಿಭ್ರಮೆ,
ನಾಮ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ…

ತರ್ಕಭ್ರಮೆ ರಾಜ್ಯಭ್ರಮೆ, ಧನ ಧಾನ್ಯ ಪುತ್ರ ಮಿತ್ರಭ್ರಮೆ,
ಐಶ್ವರ್ಯ ತ್ಯಾಗ ಭೋಗ ಯೋಗಭ್ರಮೆ,
ಕಾಯ ಕರಣ ವಿಷಯಭ್ರಮೆ,
ವಾಯು ಮನ ಭಾವ ಜೀವ ಮೋಹಭ್ರಮೆ…

ನಾಹಂ ಕೋಹಂ ಸೋಹಂ ಮಾಯಾಭ್ರಮೆ ಮೊದಲಾದ
ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು
ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ
ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ
ನಾಚಿನಿಮ್ಮಡಿಗಭಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ.

ಲಲ್ಲೇಶ್ವರಿ/ ಲಲ್ಲಾ ಆರಿಫಾ | ಕನ್ನಡಕ್ಕೆ: ಅಲಾವಿಕಾ

ಆತ್ಮ ಕ್ಷಯಿಸಿದರೂ
ಚಂದ್ರಮನಂತೆ
ಹೊಸತಾಗಿ ಮರಳುವುದು ಮತ್ತೆ;
ಅಳಿದಷ್ಟೂ ಅಲೆಗಳನು
ಸೃಜಿಸುತಲೇ ಇರುವಂತೆ
ಸಾಗರದ ನಿತ್ಯ ಪಾತ್ರೆ

ನನ್ನ ಚಿತ್ತದ ಭಿತ್ತಿ
ನನ್ನ ದೇಹದ ಚಿತ್ರ
ಬಿಡಿಸುವೆನು ನಾನೇ; ಲಲ್ಲಾ!
ಅಳಿಸಿ ಕ್ಷಣಕ್ಷಣವೂ
ಹೊಸತಾಗಿ ಮೂಡುವೆನು
ಇದಕೆ ಕೊನೆ ಇಲ್ಲ.

“ಆತ್ಮದಲೆ ನೆಲೆಸು”
ಎಂದಿರಲು ಗುರುವಾಣಿ,
ಬಿಸುಟೆ ಬಟ್ಟೆಯ ಬಂಧ; ಲಲ್ಲಾ!
ಬದುಕೀಗ ನಿತ್ಯ
ಸಂಭ್ರಮದ ನೃತ್ಯ!

ರಾಬಿಯಾ | ಕನ್ನಡಕ್ಕೆ: ಅಲಾವಿಕಾ

ಏಕಾಂತದಲಿ ಶಾಂತಿಯಿದೆ ನನಗೆ, ಸೋದರರೇ!
ಪ್ರಿಯತಮನ ಚಿರಸಂಗಾತವಿದೆ;
ಬೇರೇನೂ ಇಲ್ಲವೆನಗೆ ಅವನೊಲವ ಬದಲು.

ಮರ್ತ್ಯಲೋಕದಲಿ ಅವನೊಲವ ಸತ್ವಪರೀಕ್ಷೆ;
ಅವನ ಸೌಂದರ್ಯ ಧ್ಯಾನವೇ ನನಗೆ ಮಿಹ್ರಾಬ್…
ಅವನೆಡೆಗೆ ಚಲಿಸುವುದೆ ನನ್ನ ಕಿಬ್ಲಾಹ್!

“ಜೀವ ತೊರೆದು ಹೋದರೆ ನಾನು ತೃಪ್ತಳಾಗುವ ಮೊದಲೇ!?”
ಅಯ್ಯೋ! ಪೀಡಿಸುತಿದೆ ಎದೆಯ ಯಾತನೆ,
ಬರಬಾರದೇ ಭವವೈದ್ಯ, ಬಯಕೆಯುಣ್ಣುತ್ತ ಜೀವ ಹಿಡಿದಿದೆ ಹೃದಯ
ಮದ್ದಾಗುವುದು ಅವನ ಮಿಲನ, ಆನಂದದಲಿ ಆತ್ಮದಾಹ ಶಮನ!

ಅವನೆನ್ನ ಜೀವ ಸ್ರೋತ, ಅವನಲ್ಲೆ ನನ್ನ ಭಾವಪರವಶ
ಜಗದೆಲ್ಲ ಜಡಚೇತನವ ತೊರೆದು ಹೊರಟಿರುವೆ,
ಅವನ ಕೂಡಿ ಕೊನೆಯಾಗುವುದೆ ಚರಮ ಗುರಿ ನನಗೆ.

Leave a Reply