ನಮ್ಮ ಇಚ್ಛೆಗೂ ವಿರುದ್ಧವಾಗಿ ನಾವು ದುಷ್ಕೃತ್ಯ ನಡೆಸುವುದು ಹೇಗೆ? ಈ ಒತ್ತಡ ಮಣಿಸುವುದು ಹೇಗೆ?

‘ಓ ಕೃಷ್ಣ, ಮನುಷ್ಯನು ತನ್ನ ಇಚ್ಛೆಗೂ ವಿರುದ್ಧವಾಗಿ, ಯಾವುದೋ ಶಕ್ತಿಯ ಒತ್ತಡಕ್ಕೊಳಗಾದವನಂತೆ ದುಷ್ಕಾರ್ಯ ಮಾಡುತ್ತಾನಲ್ಲ ಅದು ಯಾವ ಶಕ್ತಿ?’ ಈ ಸಮಸ್ಯೆ ಪ್ರತಿಯೊಬ್ಬ ಮನುಷ್ಯನದೂ ಕೂಡ. ಇದಕ್ಕೆ ಶ್ರೀಕೃಷ್ಣ ಉತ್ತರಿಸುತ್ತಾನೆ … | ಸ್ವಾಮಿ ರಂಗನಾಥಾನಂದರ ಆದರ್ಶ ಗೃಹಸ್ಥ ಕೃತಿಯಿಂದ

ನಮ್ಮ ಪುರಾತನ ಗುರುಗಳು ಒಂದು ಸುಂದರ ವಿಚಾರ ಧಾರೆಯನ್ನು ನಮ್ಮ ಮುಂದಿರಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಆರು ಜನ ಶತ್ರುಗಳು – ಷಡ್ರಿಪುಗಳು – ಇದ್ದಾರೆ ಎಂದಿದ್ದಾರೆ ಅವರು. ಆ ಶತ್ರುಗಳು ನಮ್ಮ ಹೊರಗಡೆ ಇಲ್ಲ. ನಮ್ಮೊಳಗೇ ಇವೆ. ಅವು ಯಾವುವು?

ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ. ಇವೇ ಮನುಷ್ಯನಲ್ಲಿರುವ ಆರು ವೈರಿಗಳು : ಇದು ಮಾನವನ ಮನಸ್ಸಿನ ನಿಷ್ಕೃಷ್ಟವಾದ ವಿಶ್ಲೇಷಣೆ. ಎಲ್ಲ ತೊಂದರೆಗಳಿಗೂ ಕಾರಣ ಈ ಶತ್ರುಗಳೇ.

ಮನುಷ್ಯರ ನಡುವಿನ ಬಾಂಧವ್ಯವನ್ನು ಕೆಡಿಸುತ್ತಿರುವ ಯಾವುದೇ ಸಮಸ್ಯೆಯನ್ನು ನೋಡಿ ಅದು ಹೆಚ್ಚಿನ ವೇಳೆ, ಕಾಮ-ಕ್ರೋಧ-ಲೋಭ- ಇವುಗಳ ಪೈಕಿ ಒಂದು, ಎರಡು ಇಲ್ಲವೇ ಮೂರು ಅಂಶಗಳ ಒಕ್ಕೂಟದಿಂದ ಉಂಟಾದಂಥವು. ಇವನ್ನು ನಾವು ಅಂಕೆಯಲ್ಲಿಡಬೇಕು. ಆ ಕೆಲಸ ಮಾಡಬೇಕಾದದ್ದು ಯಾರು?

ಮನಸ್ಸು ಆ ಕೆಲಸ ಮಾಡಬೇಕು. ಮನಸ್ಸಿರುವುದೇ ಅದಕ್ಕಾಗಿ. ಆದರೆ ಮನಸ್ಸು ದುರ್ಬಲವಾಗಿದ್ದರೆ ಆ ಶತ್ರುಗಳನ್ನು ನಿಯಂತ್ರಿಸುವ ಬದಲು ಅವನ್ನೇ ಅನುಸರಿಸುತ್ತದೆ. ಆಗ ಎಲ್ಲ ಪ್ರಲೋಭನೆಗಳಿಗೂ ನಾವು ಈಡಾಗುತ್ತೇವೆ. ಅನೇಕ ಜನರ ವಿಷಯದಲ್ಲಿ ಆಗುವುದು ಇದೇ. ನರ ವಿಜ್ಞಾನವನ್ನು ಓದಿದರೆ ನಮಗೆ ತಿಳಿಯುತ್ತದೆ. ನಮ್ಮ ಮೆದುಳಿನ ವ್ಯವಸ್ಥೆ ಇರುವುದು ಇಡೀ ಜ್ಞಾನೇಂದ್ರಿಯ ಸಮೂಹವನ್ನು ನಿಯಂತ್ರಿಸಲು ಎಂದು. ಮಾನವನಿಗೆ ಇದು ಜೀವ ವಿಕಾಸದ ವಿಶೇಷ ಉಡುಗೊರೆ. ಆದರೆ ಈ ಉನ್ನತ ಮಸ್ತಿಷ್ಕವು ಇಂದ್ರಿಯ ಸಮೂಹದ ಮಡಿಯಾಳಾದರೆ ನೈತಿಕ ಮೌಲ್ಯಗಳೆಲ್ಲ ಕೊಚ್ಚಿಹೋಗುತ್ತವೆ. ಆಗ ನಾಯಿ ತನ್ನ ಬಾಲವಾಡಿಸುವ ಬದಲು ಬಾಲವೇ ನಾಯಿಯನ್ನು ಆಡಿಸತೊಡಗುತ್ತದೆ.

ಕ್ರಮೇಣ ಹೆಚ್ಚು ಹೆಚ್ಚು ಜನರಿಗೆ ಹೀಗಾಗುತ್ತ ಬರುತ್ತಿದೆ. ನಮ್ಮಲ್ಲಿ ಸಾಮಾಜಿಕ ಸಮಸ್ಯೆಗಳೂ ಸಂಕಷ್ಟಗಳೂ ಇಷ್ಟೊಂದು ವೃದ್ದಿಯಾಗುತ್ತಿರುವುದಕ್ಕೆ ಇದೇ ಕಾರಣ. ಆದ್ದರಿಂದ ಈ ಉನ್ನತ ಮಸ್ತಿಷ್ಕವೆಂಬ ನಿಯಂತ್ರಣ ವ್ಯವಸ್ಥೆ ಸ್ವತಂತ್ರವಾಗಬೇಕು ; ಇಂದ್ರಿಯ ಸಮೂಹವನ್ನು ನಿಯಂತ್ರಿಸುವಷ್ಟು ಶಕ್ತವಾಗಬೇಕು. ಆಗ ಆ ಶತ್ರುಗಳು ತಲೆಯೆತ್ತಿ ವ್ಯಕ್ತಿಯನ್ನೂ ಸಮಾಜವನ್ನೂ ಕಾಡಲು ಆಗುವುದಿಲ್ಲ. ಅವುಗಳ ಹತೋಟಿ ಮಾನವನಿಂದ ಮಾತ್ರ ಸಾಧ್ಯ.

ಗೀತೆಯ ಮೂರನೇ ಅಧ್ಯಾಯದಲ್ಲಿ ಈ ಕುರಿತಾಗಿ ಅರ್ಜುನ ಒಂದು ಪ್ರಶ್ನೆ ಕೇಳುತ್ತಾನೆ; ಅದಕ್ಕೆ ಶ್ರೀಕೃಷ್ಣ ಅತ್ಯಂತ ಅರ್ಥಗರ್ಭಿತವಾದ ಉತ್ತರ ಕೊಡುತ್ತಾನೆ. ಅರ್ಜುನನ ಪ್ರಶ್ನೆ ಇದು(3.36):

‘ಅಥ ಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ | 
ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ ||’

‘ಓ ಕೃಷ್ಣ, ಮನುಷ್ಯನು ತನ್ನ ಇಚ್ಛೆಗೂ ವಿರುದ್ಧವಾಗಿ, ಯಾವುದೋ ಶಕ್ತಿಯ ಒತ್ತಡಕ್ಕೊಳಗಾದವನಂತೆ ದುಷ್ಕಾರ್ಯ ಮಾಡುತ್ತಾನಲ್ಲ ಅದು ಯಾವ ಶಕ್ತಿ?’ ಈ ಸಮಸ್ಯೆ ಪ್ರತಿಯೊಬ್ಬ ಮನುಷ್ಯನದೂ ಕೂಡ. ಇದಕ್ಕೆ ಶ್ರೀಕೃಷ್ಣ ಉತ್ತರಿಸುತ್ತಾನೆ :

‘ಕಾಮ, ಕ್ರೋಧ – ಇವೇ ಆ ಎರಡು ದುಷ್ಟಶಕ್ತಿಗಳು. ಅವು ನಿನ್ನನ್ನು ಮಣಿಸಿ, ನಿನ್ನಿಂದ ಅಕೃತ್ಯಗಳನ್ನೆಲ್ಲ ಮಾಡಿಸುತ್ತವೆ. ನೀನು ಅವುಗಳನ್ನು ಹತೋಟಿಗೆ ತಂದುಕೊಳ್ಳಬೇಕು. ಆ ಶಕ್ತಿ ನಿನಗಿದೆ.’ ಎಲ್ಲಿಂದ ಬರುತ್ತದೆ ಆ ಶಕ್ತಿ? ಅದೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳಲ್ಲಿ ಕೃಷ್ಣ ಉತ್ತರಕೊಡುತ್ತಾನೆ : 

‘ಇಂದ್ರಿಯಾಣಿ ಪರಾಣ್ಯಾಹುಃ‘ – ಇಂದ್ರಿಯಗಳು ಅತ್ಯಂತ ಸೂಕ್ಷ್ಮಗ್ರಾಹಿಗಳು ಹಾಗೂ ಅತಿ ಉಪಯುಕ್ತವಾದವುಗಳು. ಅವುಗಳ ಮೂಲಕ ನಾವು ಸುತ್ತಲಿನ ಜಗತ್ತನ್ನು ಗ್ರಹಿಸಬಲ್ಲೆವು. ಈ ಇಂದ್ರಿಯಗಳಿಗಿಂತ ಮಿಗಿಲಾದುದು ಮನಸ್ಸು – ‘ಇಂದ್ರಿಯೇಭ್ಯಃ ಪರಂ ಮನಃ‘.  ಅನಂತರ, ‘ಮನಸಸ್ತು ಪರಾ ಬುದ್ಧಿಃ‘ – ಮನಸ್ಸಿಗಿಂತಲೂ ಮಿಗಿಲಾದದ್ದು ಬುದ್ಧಿ. ವಿವೇಚನಾ ಶಕ್ತಿ. ಇದು ಸರಿಯೋ ತಪ್ಪೋ ಈ ತಿಳಿವಳಿಕೆ ಬರುವುದು ಬುದ್ಧಿ ಮಟ್ಟದಲ್ಲಿ. ಈ ಬುದ್ಧಿಗಿಂತಲೂ ಮಿಗಿಲಾದುದು ಆತ್ಮ –  ‘ಯೋಬುದ್ಧೇಃ  ಪರತಸ್ತು ಸಃ‘ ಆದ್ದರಿಂದ, ‘ಏವಂ ಬುದ್ಧೇಃ ಪರಂ ಬುದ್ಧ್ವಾ‘ ಬುದ್ಧಿಗೂ ಮೀರಿದುದು. ಅರ್ಥಾತ್, ನಿತ್ಯಶುದ್ಧನಾದ, ನಿತ್ಯಮುಕ್ತನಾದ ನಿತ್ಯಬುದ್ಧನಾದ ಸದಾಜ್ಞಾನಿಯಾದ ಆತ್ಮನನ್ನು – ಆ ಸತ್ಯವನ್ನು ಅರಿಯಬೇಕು. ಆಗ ನಮಗೆ, ನಮ್ಮನ್ನು ಕಾಡುತ್ತಿರುವ ಕೀಳು ಕಾಮನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಆಮೇಲೆ ನಮ್ಮೊಳಗೆ ನಮಗೆ ಯಾವ ಶತ್ರುಗಳೂ ಇರುವುದಿಲ್ಲ.

‘ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ |
ಜಹಿ ಶತ್ರುಮ್ ಮಹಾಬಾಹೋ ಕಾಮರೂಪಂ ದುರಾಸದಂ ||’

‘ಬುದ್ಧಿಗಿಂತ ಮಿಗಿಲಾದುದನ್ನು ಅರಿತುಕೊಂಡು, ಉನ್ನತ ಪ್ರಕೃತಿಯಿಂದ (ಆತ್ಮನಿಂದ) ಅಧಃಪ್ರಕೃತಿಯನ್ನು ನಿಯಂತ್ರಿಸುತ್ತ ಶತ್ರುವನ್ನು ಗೆಲ್ಲು. ಓ ಮಹಾಬಾಹು, ತೃಪ್ತಿಪಡಿಸಲು ದುಸ್ಸಾಧ್ಯವಾದ ಕಾಮವೆಂಬ ಶತ್ರುವನ್ನು ಗೆಲ್ಲು.’

ಇಲ್ಲಿ  ಶ್ರೀಕೃಷ್ಣ  ‘ಶತ್ರುವನ್ನು ಗೆಲ್ಲು !’ ಎಂದು ಹೇಳುತ್ತಿರುವುದು ಕೋಟೆಯನ್ನು ವಶಪಡಿಸಿಕೊಳ್ಳುವಂತೆ ತನ್ನ ಸೇನೆಗೆ ಆಜ್ಞಾಪಿಸುವ ದಂಡನಾಯಕನ ಆದೇಶದಂತೆಯೇ ಇದೆ. ಆ ಶತ್ರುಗಳನ್ನು ಗೆಲ್ಲು ಏನು ಮಾಡಬೇಕು? ಆತ್ಮವನ್ನು, ಅಂದರೆ ಸ್ವತಃ ನಮ್ಮ ಸತ್ಯವನ್ನು ಅರಿಯಬೇಕು. 

1 Comment

  1. ಮನುಷ್ಯನ ಈ ಆಂತರಿಕ ಶತ್ರುಗಳನ್ನು ನಿವಾರಿಸಿದವ ಸನ್ಯಾಸಿ. ನಿಜವಗಾಲೂ ಈಗ ಇರುವ ಸನ್ಯಾಸಿಗಳಲ್ಲಿ ಬಹುತೇಕರು ಈ ಆಂತರಿಕ ಶತ್ರುಗಳನ್ನು ಉಳಿದವರಿಗಿಂತ ಅತೀ ಹೆಚ್ಚು ಇರುವವರೇ ಆಗಿದ್ದಾರೆ.

Leave a Reply